ರಂಗು ಕಳೆದುಕೊಂಡ ಚುನಾವಣೆ

7
ನಾಮಪತ್ರ ಸಲ್ಲಿಕೆಗೆ ಇಂದು ಕಡೆಯ ದಿನ: ಇನ್ನೂ ಆರಂಭವಾಗದ ಪ್ರಚಾರ

ರಂಗು ಕಳೆದುಕೊಂಡ ಚುನಾವಣೆ

Published:
Updated:
ರಂಗು ಕಳೆದುಕೊಂಡ ಚುನಾವಣೆ

ರಾಮನಗರ: ವಿಧಾನಸಭೆ ಚುನಾವಣೆ ಹಾಗೂ ಸಮ್ಮಿಶ್ರ ಸರ್ಕಾರ ರಚನೆಯ ಗದ್ದಲದೊಳಗೆ ವಿಧಾನ ಪರಿಷತ್‌

ಚುನಾವಣೆಯು ರಂಗು ಕಳೆದುಕೊಂಡಿದ್ದು, ಹೆಚ್ಚಿನ ಪ್ರಚಾರ ಪಡೆದಿಲ್ಲ.

ಬೆಂಗಳೂರು ಪದವೀಧರ ಕ್ಷೇತ್ರದ ಚುನಾವಣೆಯು ಜೂನ್‌ 8ರಂದು ನಿಗದಿಯಾಗಿದ್ದು, ನಾಮಪತ್ರ ಸಲ್ಲಿಕೆಗೆ ಇಂದು ಕಡೆಯ ದಿನವಾಗಿದೆ.

ಬೆಂಗಳೂರಿನ ಶಾಂತಿನಗರ ದಲ್ಲಿನ ಪ್ರಾದೇಶಿಕ ಆಯುಕ್ತರ ಕಚೇರಿ ಯಲ್ಲಿ ಈ ಪ್ರಕ್ರಿಯೆ ನಡೆದಿದೆ. ಆದಾಗ್ಯೂ ಜಿಲ್ಲೆಯಲ್ಲಿನ ಸಾಕಷ್ಟು ಪದವೀಧರ ಮತದಾರರಿಗೆ ತಮ್ಮ ಕ್ಷೇತ್ರದಲ್ಲಿನ ಅಭ್ಯರ್ಥಿಗಳು ಯಾರು ಎಂಬ ಮಾಹಿತಿಯೇ ಇಲ್ಲ. ಇನ್ನೂ ಪ್ರಚಾರ ಕಾರ್ಯ ಆರಂಭವಾಗಿಲ್ಲ.

ರಾಮನಗರ ಜಿಲ್ಲೆಯ ಜೊತೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪದವೀಧರ ಮತದಾರರು ಈ ಕ್ಷೇತ್ರಕ್ಕೆಒಳಪಡಲಿದ್ದಾರೆ.ಸುಮಾರು 45 ಸಾವಿರದಷ್ಟು ಮತದಾರರು ಇದ್ದಾರೆ.

ಜಿಲ್ಲೆಯಲ್ಲಿ ಒಟ್ಟು 8,250 ಪದವೀಧರರು ನೋಂದಾಯಿಸಿಕೊಂಡಿದ್ದು, ಈ ಚುನಾವಣೆಯಲ್ಲಿ ಮತದಾನ ಮಾಡುವ ಹಕ್ಕನ್ನು ಪಡೆದಿದ್ದಾರೆ. ಚನ್ನಪಟ್ಟಣ ತಾಲ್ಲೂಕಿನಲ್ಲಿ ಅತಿ ಹೆಚ್ಚು ಮತದಾರರು ಇದ್ದಾರೆ. ನಂತರದಲ್ಲಿ ರಾಮನಗರ ತಾಲ್ಲೂಕು ಇದೆ. ಕನಕಪುರ ಹಾಗೂ ಮಾಗಡಿ ತಾಲ್ಲೂಕುಗಳು ಕ್ರಮವಾಗಿ ನಂತರದ ಸ್ಥಾನದಲ್ಲಿವೆ.

ರಾಜ್ಯ ವಿಧಾನಸಭೆ ಚುನಾವಣೆಯ ನಂತರ ನಡೆಯುತ್ತಿರುವ ಮೊದಲ ಪರಿಷತ್ ಚುನಾವಣೆ ಇದಾಗಿದೆ. ಸದ್ಯ ರಾಜ್ಯ ರಾಜಕಾರಣದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದು, ಅದು ಪರಿಷತ್ ಚುನಾವಣೆಗೂ ಅನ್ವಯಿಸಲಿದೆಯೇ, ಇಲ್ಲವೇ ಎನ್ನುವ ಗೊಂದಲ ಇಲ್ಲಿನ ಎರಡೂ ಪಕ್ಷಗಳ ಕಾರ್ಯಕರ್ತರದ್ದು.

ಜಿಲ್ಲೆಯಿಂದ ಇಬ್ಬರು ಅಭ್ಯರ್ಥಿಗಳು: ರಾಜ್ಯದ ಮೂರು ಪ್ರಮುಖ ಪಕ್ಷಗಳು ಈ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿವೆ. ಅದರಲ್ಲಿ ಇಬ್ಬರು ರಾಮನಗರ ಜಿಲ್ಲೆಯವರು ಎನ್ನುವುದು ವಿಶೇಷ.

ಬಿಜೆಪಿ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸಿರುವ ಅ. ದೇವೇಗೌಡ ಅವರು ಮಾಗಡಿ ತಾಲ್ಲೂಕಿನ ಮಾಡಬಾಳ್ ಹೋಬಳಿಯ ಮಾನಗಲ್‌ ಗ್ರಾಮದವರು.

ಕಳೆದ ಎರಡು ಬಾರಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿಜೆಪಿಯ ರಾಮಚಂದ್ರೇಗೌಡ ಅವರ ವಿರುದ್ಧ ಪರಾಭವಗೊಂಡಿದ್ದರು.

ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾಗಿರುವ ದೇವೇಗೌಡ ಈ ಬಾರಿ ಸಹ ಜೆಡಿಎಸ್‌ನಿಂದ ಟಿಕೆಟ್ ಆಕಾಂಕ್ಷಿ ಆಗಿದ್ದರು. ಆದರೆ ಟಿಕೆಟ್ ದೊರೆಯುವ ಸಾಧ್ಯತೆ ಕ್ಷೀಣವಾಗುತ್ತಲೇ ಬಿಜೆಪಿಯತ್ತ ಮುಖ ಮಾಡಿದ್ದರು.

ಜೆಡಿಎಸ್ ಈ ಬಾರಿಯ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ನಾಗಮಂಗಲದ ಶಿವರಾಮೇಗೌಡರನ್ನು ಕಣಕ್ಕೆ ಇಳಿಸ

ಲಿದೆ ಎಂದು ಸುದ್ದಿ ಹಬ್ಬಿತ್ತು. ಈ ಕಾರಣಕ್ಕಾಗಿಯೇ ದೇವೇಗೌಡರಿಗೆ ಟಿಕೆಟ್ ನಿರಾಕರಿಸಲಾಗಿದೆ ಎನ್ನಲಾಗಿತ್ತು. ಆದರೆ ಕಡೆಯ ಕ್ಷಣದಲ್ಲಿ ಪಕ್ಷವು ಅಚ್ಚೇಗೌಡ ಶಿವಣ್ಣ ಅವರಿಗೆ ಟಿಕೆಟ್ ನೀಡಿದೆ. ಶಿವಣ್ಣ ಚನ್ನಪಟ್ಟಣ ತಾಲ್ಲೂಕಿನ ಕುಕ್ಕೂರು

ದೊಡ್ಡಿ ಗ್ರಾಮದವರು.ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರೂ ಆಗಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆಪಿ ಸಿಸಿಯ ಪದವೀಧರ ಮತ್ತು ಶಿಕ್ಷಕರ ವಿಭಾಗದ ಪ್ರಧಾನ ಕಾರ್ಯದರ್ಶಿ ರಾಮೋಜಿ ಗೌಡರು ಕಣಕ್ಕೆ ಇಳಿದಿದ್ದಾರೆ. ಬೆಂಗಳೂರಿನವರಾದ ಅವರು ರಾಜ್ಯ ಪದವೀಧರರ ವೇದಿಕೆಯ ಅಧ್ಯಕ್ಷರೂ ಆಗಿದ್ದಾರೆ. ಸಾಕಷ್ಟು ಮಂದಿ ಪಕ್ಷೇತರರಾಗಿಯೂ ನಾಮಪತ್ರ ಸಲ್ಲಿಸುವ ನಿರೀಕ್ಷೆ ಇದೆ.

ಬಾರದ ಸೂಚನೆ

ಪರಿಷತ್‌ ಚುನಾವಣೆಯ ಪ್ರಚಾರ ಕಾರ್ಯ ಆರಂಭಿಸುವಂತೆ ಪ್ರಮುಖ ಪಕ್ಷಗಳ ಸ್ಥಳೀಯ ಮುಖಂಡರಿಗೆ ಪಕ್ಷಗಳ ವರಿಷ್ಠರು ಇನ್ನೂ ಯಾವುದೇ ಸೂಚನೆ ರವಾನಿಸಿಲ್ಲ.

‘ಕಳೆದ ಚುನಾವಣೆಯಲ್ಲಿ ಈ ಹೊತ್ತಿಗೆ ಪ್ರಚಾರ ಆರಂಭವಾಗಿ ಮನೆ ಮನೆ ಸುತ್ತುತ್ತಿದ್ದೆವು. ಆದರೆ ಈ ಬಾರಿ ಹೇಗೆ ಪ್ರಚಾರ ಮಾಡಬೇಕು ಎಂಬುದನ್ನು ಇನ್ನೂ ಸೂಚಿಸಿಲ್ಲ. ಹೊಸ ಸರ್ಕಾರ ರಚನೆ ಪ್ರಕ್ರಿಯೆ ಮುಗಿದ ಬಳಿಕ ಈ ಬಗ್ಗೆ ಸಂದೇಶ ರವಾನೆ ಆಗಬಹುದು. ಏನೇ ಆದರೂ ವಿಧಾನಸಭೆ ಚುನಾವಣೆಯ ಬಿಸಿಯಲ್ಲಿ ಪರಿಷತ್ ಚುನಾವಣೆ ರಂಗು ಕರಗಿ ಹೋಗುತ್ತಿದೆ’ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಮುಖಂಡರು ಹೇಳಿದರು.

**

ಜೆಡಿಎಸ್‌ ಅಭ್ಯರ್ಥಿ ಸೋಮವಾರವಷ್ಟೇ ನಾಮಪತ್ರ ಸಲ್ಲಿಸಿದ್ದಾರೆ. ವರಿಷ್ಠರಿಂದ ಸೂಚನೆ ಬಂದ ಕೂಡಲೇ ಪಕ್ಷದ ಪ್ರಚಾರ ಆರಂಭಿಸುತ್ತೇವೆ

– ಜಿ.ಟಿ. ಕೃಷ್ಣ, ಜಿಲ್ಲಾ ಅಧ್ಯಕ್ಷ, ಜೆಡಿಎಸ್ ಪದವೀಧರರ ಘಟಕ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry