ಹೊಟ್ಟೆಗಾಗಿ ತುಸು ಸೊಟ್ಟಗಾಗಿ...

7

ಹೊಟ್ಟೆಗಾಗಿ ತುಸು ಸೊಟ್ಟಗಾಗಿ...

Published:
Updated:
ಹೊಟ್ಟೆಗಾಗಿ ತುಸು ಸೊಟ್ಟಗಾಗಿ...

ಸಿನಿಮಾ: ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ

ನಿರ್ಮಾಪಕರು: ಸುದರ್ಶನ್ ಜಿ., ರಾಮಮೂರ್ತಿ ಎಚ್‌.ಆರ್‌. ಹರೀಶ್‌ ಶೇರಿಗಾರ್

ತಾರಾಗಣ: ಅನಂತ್‌ನಾಗ್‌, ರಾಧಿಕಾ ಚೇತನ್, ಅನಿಲ್‌ ಸಂದೀಪ್‌ ಅರಸ್‌, ಸ್ಮಿತಾ ಕುಲಕರ್ಣಿ

‘ನಾನು ತಪ್ಪು ಮಾಡಿದ್ದೇನೆ ಎಂದು ಅನಿಸಿಲ್ಲ’ ಹೀಗೆನ್ನುವಾಗ ನಾಯಕಿಯ ಮುಖದ ಮೇಲೆ ಆತ್ಮವಿಶ್ವಾಸ ತುಂಬಿ ತುಳುಕುತ್ತಿದೆ. ಲಿವ್‌– ಇನ್ ಸಂಬಂಧದಿಂದ ಗರ್ಭಿಣಿಯಾಗಿರುವ ಅವಳು ಅದಕ್ಕೆ ಕಾರಣವಾಗಿರುವ ಸಂಗಾತಿಯನ್ನು ತೊರೆಯಲು ನಿರ್ಧರಿಸಿದ್ದಾಳೆ. ಅವಳನ್ನು ವಯೋವೃದ್ಧ ಶ್ಯಾಮ್‌ ಪ್ರಸಾದ್‌, ಅಚ್ಚರಿಯೋ ಮೆಚ್ಚುಗೆಯೋ ಗುರ್ತಿಸಲಾಗದ ಮುಖಭಾವದಲ್ಲಿ ಸುಮ್ಮನೇ ನೋಡುತ್ತಲೇ ಕೂತಿದ್ದಾರೆ. ಕಿಟಕಿಯಿಂದ ಹೊಸ ಬೆಳಕು– ಗಾಳಿ ಹರಿದು ಒಳಗೆ ಬರುತ್ತಿದೆ.

‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಚಿತ್ರದ ಅಂತಿಮ ಘಟ್ಟದಲ್ಲಿನ ಈ ದೃಶ್ಯದಲ್ಲಿ ‘ಶ್ರಾವ್ಯಾ’, ಹೊಸ ಪೀಳಿಗೆಯ ದಿಟ್ಟ ಹೆಣ್ಣಿನ ಅಸ್ಮಿತೆಯ ಗಟ್ಟಿ ಬಿಂಬವಾಗಿ ಕಾಣುತ್ತಾಳೆ. ಈ ಬಿಂಬ ಚಿತ್ರದ ಗುಣಾತ್ಮಕ ಅಂಶ. ಆದರೆ ಈ ಚಿತ್ರ ತನ್ನ ಉದ್ದೇಶದ ಸಮೀಪವಾದರೂ ತಲುಪಲು ಸಾಧ್ಯವಾಗಿದ್ದು ದೃಶ್ಯದಲ್ಲಿ ಮಾತ್ರ ಎನ್ನುವುದು ವಿಪರ್ಯಾಸ.

‘ಕಬಡ್ಡಿ’, ‘ಸಂತೆಯಲ್ಲಿ ನಿಂತ ಕಬೀರ’ಗಳಂಥ ಉಜ್ವಲ ಚಿತ್ರಗಳನ್ನು ಮಾಡಿದ್ದ ನರೇಂದ್ರಬಾಬು ‘ಹೊಟ್ಟೆಗಾಗಿ...’ ಸಿನಿಮಾದಲ್ಲಿ ಮೊನಚುತನ ಕಳೆದುಕೊಂಡಿದ್ದಾರೆ.

‘ಸ್ವೇಚ್ಛೆಯಲ್ಲದ ಸ್ವಾತಂತ್ರ’ವನ್ನು ನೆಚ್ಚುವ ಹೊಸ ಪೀಳಿಗೆ ಮತ್ತು ಸಾಂಪ್ರದಾಯಿಕ ಮೌಲ್ಯಗಳ ಚೌಕಟ್ಟಿನಲ್ಲಿಯೇ ಬದುಕಿದ, ಆದರೆ ಹೊಸತನಕ್ಕೂ ತೆರೆದುಕೊಳ್ಳಬಲ್ಲ ಮನಸ್ಥಿತಿಯನ್ನು ಉಳಿಸಿಕೊಂಡಿರುವ ಹಳೆಯ ಪೀಳಿಗೆಯನ್ನು ಮುಖಾಮುಖಿಯಾಗಿಸುವ ಈ ಚಿತ್ರದ ವಸ್ತುವೇನೋ ಕನ್ನಡಕ್ಕೆ ಹೊಸತೇ. ಆದರೆ ಅದನ್ನು ಸಹಜವಾಗಿ ನಿರೂಪಿಸುವಲ್ಲಿ ನಿರ್ದೇಶಕರು ಸೋತಿದ್ದಾರೆ.

ಕಾರ್ಪೋರೆಟ್‌ ಜಗತ್ತಿನ ಕೃತಕ ಪರಿಸರದಲ್ಲಿ ನಡೆಯುವ ಕಥೆ ಇದು. ಆದರೆ ಅದನ್ನು ತೋರಿಸಲು ನಿರ್ದೇಶಕರು ಆಯ್ದುಕೊಂಡಿರುವ ದಾರಿ, ಪಾತ್ರಗಳು, ಸಂಭಾಷಣೆಯೂ ಅಷ್ಟೇ ಕೃತಕವಾಗಿದೆ. ಹಾಗಾಗಿ ಅಲ್ಲಿನ ಮಾತುಗಳು, ಜೋಕುಗಳು, ಭಾವುಕ ಗಳಿಗೆಗಳು ಯಾವವೂ ಮನಸ್ಸಿಗೆ ಇಳಿಯುವುದೇ ಇಲ್ಲ. ಜಾಳು ಜಾಳಾದ ಚಿತ್ರಕಥೆ ಸಿನಿಮಾವನ್ನು ಇನ್ನಷ್ಟು ಕೆಳಕ್ಕಿಳಿಸಿದೆ.

ಒಂದು ದೃಶ್ಯದಲ್ಲಿ ನಾಯಕಿ ಒಬ್ಬನನ್ನು ಬೈಯುವ ಪರಿ ಹೀಗಿದೆ; ‘ಸೋಪ್‌ ಡಿಟರ್ಜಂಟ್‌ ಒಗೆತಕ್ಕೆ ಅತಿಹೆಚ್ಚು ಒಳಗಾಗಿರೋ ಒಳ ಉಡುಪು ಕಣೋ ಅವನು’. ಯಾವುದೋ ಇಂಗ್ಲಿಷ್‌ ಸಿನಿಮಾದ ಸಂಭಾಷಣೆಯನ್ನು ಅಕ್ಷರಶಃ ಅನುವಾದಿಸಿದಂತೆ ಕಾಣುವ ಇಂಥ ಹಲವು ಸಂಭಾಷಣೆಗಳು ಸಿನಿಮಾವನ್ನು ಸಹಜತೆಯ ಹಳಿಯ ಮೇಲೆ ಹತ್ತದ ಹಾಗೆ ಎಚ್ಚರಿಕೆಯಿಂದ ಹಳ್ಳ ಹಿಡಿಸುತ್ತವೆ.

ಅನಂತ್‌ನಾಗ್‌ ಅವರ ಪಾತ್ರವನ್ನು ಮುಖ್ಯವಾಹಿನಿಗೆ ತರುವ ಭರದಲ್ಲಿ ಉಳಿದ ಹಲವು ಪಾತ್ರಗಳು ಪೋಷಣೆಯ ಕೊರತೆಯಿಂದ ನರಳುತ್ತವೆ. ಲೀವ್‌– ಇನ್‌ ರಿಲೇಷನ್‌ನಲ್ಲಿ ಬದುಕುತ್ತಿರುವ ಶ್ರಾವ್ಯಾಳ ಬದುಕಿಗೆ ಒತ್ತು ಕೊಡುವಾಗ ಅದೇ ಸಂಬಂಧದ ಇನ್ನೊಂದು ಮುಖವಾದ ಸಂದೀಪ್‌ನ ಮನಸ್ಸಿನ ತುಮುಲಗಳು ನಿರ್ದೇಶಕರಿಗೆ ಅಷ್ಟು ಮುಖ್ಯ ಅನಿಸಿಯೇ ಇಲ್ಲ. ಆಧುನಿಕ ಮನಸ್ಥಿತಿಯ ಜನರು ಬದುಕನ್ನು, ಸಂಬಂಧಗಳನ್ನು ಹೇಗೆ ನೋಡುತ್ತಾರೆ ಎನ್ನುವುದನ್ನು ಬಹುಮುಖಿ ದೃಷ್ಟಿಕೋನದಿಂದ ತೋರಿಸುವ ಸಾಧ್ಯತೆಗೂ ಸಿನಿಮಾ ಬೆನ್ನು ಮಾಡಿದೆ.

ಅನಂತ್‌ನಾಗ್‌ ತಮ್ಮ ಮಾಗಿದ ನಟನೆಯಿಂದಲೇ ಪಾತ್ರದಲ್ಲಿನ ಹಲವು ಕೋರೆಗಳನ್ನು ಮುಚ್ಚುತ್ತಾರೆ. ಆದರೆ ಹಾಡೊಂದರಲ್ಲಿ ಅವರು ಪ್ರಯಾಸಪಟ್ಟು ಕುಣಿಯುವುದನ್ನು ನೋಡಿದರೆ ಕನಿಕರ ಹುಟ್ಟುತ್ತದೆ. ಸಂತೋಷಕೂ ಸಂತಾಪಕೂ ಕಡುಕೋಪಕೂ ರಾಧಿಕಾ ಚೇತನ್ ಅವರದು ಒಂದೇ ಬಗೆಯ ಅಭಿವ್ಯಕ್ತಿ.

ಸನ್ನಿವೇಶ ಸೃಜಿಸಬೇಕಾದ ಭಾವಕ್ಕೆ ವ್ಯತಿರಿಕ್ತವಾದ ಹಿನ್ನೆಲೆ ಸಂಗೀತ ಹಲವು ಕಡೆಗಳಲ್ಲಿ ಕಿರಿಕಿರಿ ಹುಟ್ಟಿಸುತ್ತದೆ. ಪಿ.ಕೆ. ಎಚ್‌. ದಾಸ್‌ ಅವರ ಛಾಯಾಗ್ರಹಣ ಅಚ್ಚುಕಟ್ಟಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry