ಕೊನೆಗೂ ದಕ್ಕಿತು ‘ಕನ್ನಡ ಭಾರತಿ’ಗೆ ಸ್ವಂತ ಕಟ್ಟಡ

7
ಮೂರು ದಶಕಗಳ ನಂತರ ಈಡೇರಿದ ಬೇಡಿಕೆ lಭಾಷಾ ಸಂವಹನಕ್ಕೆ ಅನುಕೂಲ

ಕೊನೆಗೂ ದಕ್ಕಿತು ‘ಕನ್ನಡ ಭಾರತಿ’ಗೆ ಸ್ವಂತ ಕಟ್ಟಡ

Published:
Updated:
ಕೊನೆಗೂ ದಕ್ಕಿತು ‘ಕನ್ನಡ ಭಾರತಿ’ಗೆ ಸ್ವಂತ ಕಟ್ಟಡ

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ ಪ್ರಥಮ ಅಧ್ಯಯನ ವಿಭಾಗ ಎನಿಸಿಕೊಂಡರೂ ಮೂರು ದಶಕಗಳಿಂದ ಸ್ವಂತ ಕಟ್ಟಡವಿಲ್ಲದೇ ಕಾರ್ಯ ನಿರ್ವಹಿಸುತ್ತಿದ್ದ ಕನ್ನಡ ಭಾರತಿ ವಿಭಾಗಕ್ಕೆ ಕೊನೆಗೂ ಸ್ವಂತ ಕಟ್ಟಡದ ಭಾಗ್ಯ ಸಿಕ್ಕಿದೆ.

ಕುವೆಂಪು ವಿಶ್ವವಿದ್ಯಾಲಯದ ಇತಿಹಾಸದಲ್ಲಿ ಕನ್ನಡ ವಿಭಾಗವು ಅತ್ಯಂತ ಹಳೆಯ ವಿಭಾಗವಾಗಿದೆ. ಈ ವಿಭಾಗವು ವಿಶ್ವವಿದ್ಯಾಲಯ ಆರಂಭಕ್ಕೂ ಮುನ್ನವೇ 1973 ರಿಂದ ಹತ್ತಿರದ ಬಿ.ಆರ್‌.ಪ್ರಾಜೆಕ್ಟ್‌ನಲ್ಲಿ ಮೈಸೂರು ವಿಶ್ವವಿದ್ಯಾಲಯದ ಕನ್ನಡ ಸ್ನಾತಕೋತ್ತರ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಅನಂತರ 1987ರಲ್ಲಿ ಕುವೆಂಪು ವಿಶ್ವವಿದ್ಯಾಲಯ ಆರಂಭವಾದ ನಂತರ ಕನ್ನಡ ಭಾರತಿ ಹೆಸರಿನಲ್ಲಿ ಕಾರ್ಯ ನಿರ್ವಹಿಸತೊಡಗಿತು. ಅಂದಿನಿಂದಲೂ ಕನ್ನಡ ವಿಭಾಗಕ್ಕೆ ಸ್ವಂತ ಕಟ್ಟಡವಿಲ್ಲ ಎನ್ನುವ ಕೊರಗು ಉಳಿದಿತ್ತು.

ಆರಂಭದ ದಿನಗಳಲ್ಲಿ ಕನ್ನಡ ಭಾರತಿ ವಿಭಾಗವು ಈಗಿನ ಇತಿಹಾಸ ಮ್ಯೂಸಿಯಂ ಇರುವ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಅನಂತರ ಅಲ್ಲಿಂದ ಆಡಳಿತ ವಿಭಾಗ ಕಟ್ಟಡಕ್ಕೆ 2006ರಲ್ಲಿ ಸ್ಥಳಾಂತರಿಸಲಾಯಿತು. ಇದೀಗ ವಿಶ್ವವಿದ್ಯಾಲಯದ ಆವರಣದಲ್ಲಿಯೇ ಕನ್ನಡ ವಿಭಾಗಕ್ಕೆ ‘ನುಡಿಲೋಕ’ ಎನ್ನುವ ಸ್ವಂತ ಕಟ್ಟಡ ನಿರ್ಮಿಸುವ ಮೂಲಕ ಮೂರು ದಶಕದ ಬೇಡಿಕೆ ಯನ್ನು ವಿಶ್ವವಿದ್ಯಾಲಯ ಈಡೇರಿಸಿದೆ

ವಿಶಾಲ ಕಟ್ಟಡ: ಕೇವಲ ಮೂರು ದಿನಗಳ ಹಿಂದೆಯಷ್ಟೇ ಕನ್ನಡ ಭಾರತಿ ವಿಭಾಗವನ್ನು ನೂತನ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. 2018ರ ಮಾರ್ಚ್ 22 ರಂದು ಕುಲಪತಿ ಪ್ರೊ.ಜೋಗನ್‌ ಶಂಕರ್ ಅವರಿಂದ ಉದ್ಘಾಟನೆಗೊಂಡ ಈ ಕಟ್ಟಡವು ಅತ್ಯಂತ ವಿಶಾಲವಾಗಿದೆ. ಪ್ರಾಧ್ಯಾಪಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿ ಕೊಠಡಿಗಳು ವಿಶಾಲವಾಗಿವೆ. ಅಲ್ಲದೇ ವಿದ್ಯಾರ್ಥಿನಿಯರಿಗೆಂದೇ ಪ್ರತ್ಯೇಕ ವಿಶ್ರಾಂತಿ ಕೊಠಡಿ ತೆರೆಯಲಾಗಿದೆ. ವಿದ್ಯಾರ್ಥಿಗಳಿಗೆ, ಪ್ರಾಧ್ಯಾಪಕರಿಗೆ ಹಾಗೂ ಸಿಬ್ಬಂದಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಲಾಗಿದೆ. ಜತೆಗೆ ಕುಡಿಯುವ ನೀರು, ಸುಸಜ್ಜಿತ ಸಭಾಂಗಣ, ಗ್ರಂಥಾಲಯ, ಗಾಳಿ, ಸೂರ್ಯನ ಬೆಳಕು ಬೀಳುವಂತಹ ವ್ಯವಸ್ಥೆ ಮಾಡಲಾಗಿದೆ.

ಸಂಶೋಧನಾರ್ಥಿಗಳಿಗೆ ಕೊಠಡಿ: ಇಡೀ ವಿಶ್ವವಿದ್ಯಾಲಯದಲ್ಲಿ ಹೆಚ್ಚಿನ ಸಂಶೋಧನೆಗಳು ನಡೆದಿರುವುದು ಕನ್ನಡ ವಿಭಾಗದಲ್ಲಿ. ಆದರೆ ಸಂಶೋಧನಾರ್ಥಿಗಳಿಗೆ ಸ್ವಂತ ಕೊಠಡಿ ಇಲ್ಲದೇ ಅವರ ಸಂಶೋಧನೆಗೆ ಸಾಕಷ್ಟು ಹಿನ್ನಡೆಯಾಗುತ್ತಿತ್ತು. ಸಂಶೋಧನಾರ್ಥಿಗಳಿಗೆ ಕೊಠಡಿ ಸಮಸ್ಯೆ ಉಂಟಾಗಿ ಇತಿಹಾಸ ವಿಭಾಗದಲ್ಲಿ ಕೊಠಡಿಯೊಂದನ್ನು ನೀಡಲಾಗಿತ್ತು. ಆದರೆ ಇದೀಗ ‘ನುಡಿಲೋಕ’ ಕಟ್ಟಡದಲ್ಲಿ ಸಂಶೋಧನಾರ್ಥಿಗಳಿಗಾಗಿಯೇ ಹೊಸ ಕೊಠಡಿ ನಿರ್ಮಿಸಲಾಗಿದೆ.

ಭಾಷಾ ಸಂವಹನಕ್ಕೆ ಅನುಕೂಲ: ನುಡಿಲೋಕ ಕಟ್ಟಡದಲ್ಲಿ ಕನ್ನಡ ವಿಭಾಗದ ಜತೆಗೆ ಇಂಗ್ಲಿಷ್‌ ವಿಭಾಗಕ್ಕೂ ಅವಕಾಶ ಕಲ್ಪಿಸಲಾಗಿದೆ. ಒಂದೇ ಕಟ್ಟಡದಲ್ಲಿ ಭಾಷೆ ಮತ್ತು ಸಾಹಿತ್ಯ ವಿಭಾಗಕ್ಕೆ ಅನುಕೂಲ ಕಲ್ಪಿಸಿರುವುದು ವಿದ್ಯಾರ್ಥಿಗಳಿಗೆ ಮತ್ತು ಪ್ರಾಧ್ಯಾಪಕರಿಗೆ ಸಹಜವಾಗಿ ಅನುಕೂಲವಾಗಲಿದೆ. ಭಾಷಾ ಸಂವಹನಕ್ಕೂ ಅನುಕೂಲವಾಗುತ್ತದೆ. ಒಬ್ಬರಿಗೊಬ್ಬರು ವಿಚಾರ ವಿನಿಯಮ ಮಾಡಿಕೊಳ್ಳಲು ಹಾಗೂ ಕನ್ನಡ ಸಾಹಿತ್ಯದ ಜತೆಗೆ ಇಂಗ್ಲಿಷ್‌ ಸಾಹಿತ್ಯ ಅರ್ಥ ಮಾಡಿಕೊಳ್ಳಲು ಅನುಕೂಲವಾಗಲಿದೆ. ಅಲ್ಲದೇ ಎರಡು ವಿಭಾಗಗಳು ಒಟ್ಟಾಗಿ ವಿಚಾರ ಸಂಕಿರಣ ಹಾಗೂ ಇತರೆ ಕಾರ್ಯಕ್ರಮಗಳನ್ನು ಮಾಡುವುದರಿಂದ ವಿದ್ಯಾರ್ಥಿಗಳ ಜ್ಞಾನವನ್ನು ಹೆಚ್ಚಿಸಲಿಕ್ಕೂ ಸಹಾಯವಾಗುತ್ತದೆ ಎಂದು ಅಧ್ಯಾಪಕರೊಬ್ಬರು ತಿಳಿಸುತ್ತಾರೆ.

ಗೊಂದಲ ದೂರ: ‘ಈ ಹಿಂದೆ ಕನ್ನಡ ಭಾರತಿ ವಿಭಾಗವು ಆಡಳಿತ ವಿಭಾಗದ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದರಿಂದ ದೊಡ್ಡ ಮಟ್ಟದ ಕಾರ್ಯಕ್ರಮಗಳು ನಡೆಸಿದರೆ ತೊಂದರೆಯಾಗುತ್ತಿತ್ತು. ಅಲ್ಲದೇ ಕೊಠಡಿಗಳ ಕೊರತೆ ಇದ್ದುದ್ದರಿಂದ ಐಚ್ಛಿಕ ವಿಷಯಗಳ ತರಗತಿಗಳಿಗೆ ಸಮಸ್ಯೆಯಾಗುತ್ತಿತ್ತು. ಇದೀಗ ಪ್ರತ್ಯೇಕ ಕಟ್ಟಡ ಹಾಗೂ ಹೆಚ್ಚಿನ ಕೊಠಡಿಗಳು ಇರುವುದರಿಂದ ಸಾಕಷ್ಟು ಅನುಕೂಲವಾಗಲಿದೆ’ ಎಂದು ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

**

ಸಾಹಿತ್ಯದ ವಿದ್ಯಾರ್ಥಿಗಳಿಗೆ ಸ್ವಂತ ಕಟ್ಟಡ ಇಲ್ಲದೇ ಅಧ್ಯಯನ ಮತ್ತು ಸಂಶೋಧನೆಗೆ ಸಾಕಷ್ಟು ಸಮಸ್ಯೆಯಾಗುತ್ತಿತ್ತು. ಇದನ್ನರಿತು ಪ್ರತ್ಯೇಕವಾಗಿ ಕಟ್ಟಡ ನಿರ್ಮಿಸಲಾಗಿದೆ

- ಪ್ರೊ.ಜೋಗನ್‌ ಶಂಕರ್,  ಕುಲಪತಿ, ಕುವೆಂಪು ವಿಶ್ವವಿದ್ಯಾಲಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry