ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂನ್ ಆರಂಭದಲ್ಲಿ ಮುಂಗಾರು ಪ್ರವೇಶ

ಕೆಲವೆಡೆ ಗರಿಗೆದರಿದ ಕೃಷಿ ಚಟುವಟಿಕೆ, ಜಮೀನು ಹದ ಸಿದ್ಧತೆಯಲ್ಲಿ ರೈತರು
Last Updated 27 ಮೇ 2018, 11:48 IST
ಅಕ್ಷರ ಗಾತ್ರ

ಬೀದರ್: ಜೂನ್ ಮೊದಲ ವಾರದಲ್ಲಿ ಮುಂಗಾರು ಜಿಲ್ಲೆಯನ್ನು ಪ್ರವೇಶಿಸಲಿದೆ. ಲಭ್ಯ ಮಾಹಿತಿಯ ಅನುಸಾರ ಈ ಬಾರಿ ಉತ್ತಮ ಮಳೆ ಇದೆ. ಜೂನ್‌ನಲ್ಲಿ ಬಿತ್ತನೆಗೆ ಅಗತ್ಯವಿರುವಷ್ಟು ಮಳೆ ಸುರಿಯಲಿದೆ. ಬಿಟ್ಟು ಬಿಟ್ಟು ಮಳೆ ಬರಲಿರುವುದರಿಂದ ಕೃಷಿ ಚಟುವಟಿಕೆಗೆ ಅನುಕೂಲವಾಗಲಿದೆ.

‘ಜೂನ್ 6 ಅಥವಾ 7 ರಂದು ಮೊದಲ ಮುಂಗಾರು ಮಳೆ ಸುರಿಯಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮಳೆಯ ಪ್ರಮಾಣ ತುಸು ಜಾಸ್ತಿಯೇ ಇದೆ. ಕಳೆದ ವರ್ಷ ಜಿಲ್ಲೆಯಲ್ಲಿ ಸರಾಸರಿ 862 ಮಿ.ಮೀ. ಮಳೆ ಸುರಿದಿದ್ದರೆ, ಈ ವರ್ಷ ಸುಮಾರು 868 ಮಿ.ಮೀ. ಬೀಳುವ ಸಾಧ್ಯತೆ ಇದೆ’ ಎಂದು ಹಳ್ಳದಕೇರಿಯ ಕೃಷಿ ಸಂಶೋಧನಾ ಕೇಂದ್ರದ ಹವಾಮಾನ ವಿಭಾಗದ ತಾಂತ್ರಿಕ ಅಧಿಕಾರಿ ಬಸವರಾಜ ಹೇಳುತ್ತಾರೆ.

ಜುಲೈ ಹಾಗೂ ಆಗಸ್ಟ್‌ನಲ್ಲಿ ಅಧಿಕ ಮಳೆ ಇದೆ. ಹೀಗಾಗಿ ಈ ಬಾರಿ ಬಂಪರ್ ಫಸಲು ಬರುವ ಸಾಧ್ಯತೆ ಇದೆ. ಒಂದು ವಾರದಿಂದ ಜಿಲ್ಲೆಯಲ್ಲಿ ವಿಪರೀತ ಧಗೆ ಇರುವುದು ಮಳೆ ಆಗಮನದ ಸಂಕೇತವಾಗಿದೆ ಎಂದು ಹೇಳುತ್ತಾರೆ ಕೃಷಿ ವಿಜ್ಞಾನಿಗಳು.

ಸಕಾಲಕ್ಕೆ ಮಳೆ ಸುರಿಯುವ ಸಾಧ್ಯತೆ ಇರುವ ಕಾರಣ ರೈತರು ಭೂಮಿಯನ್ನು ಹದ ಮಾಡಿ ಇಟ್ಟುಕೊಳ್ಳಬೇಕು. ಬಿತ್ತನೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಮಳೆ ಬಿದ್ದ ನಂತರ ಬಿತ್ತನೆ ಕೈಗೊಳ್ಳುವುದು ಸೂಕ್ತ. 20 ಮಿ.ಮೀ. ಯಷ್ಟು ಮಳೆ ಸುರಿದರೂ ಬಿತ್ತನೆ ಪ್ರಾರಂಭಿಸಬಹುದು ಎಂದು ಹೇಳುತ್ತಾರೆ.

ರೈತರ ಸಿದ್ಧತೆ: ಕೆಲವೇ ದಿನಗಳಲ್ಲಿ ಮುಂಗಾರು ಮಳೆ ಸುರಿಯುವ ಸಾಧ್ಯತೆ ಇರುವುದರಿಂದ ರೈತರು ಬಿತ್ತನೆಗಾಗಿ ಸಿದ್ಧತೆಯಲ್ಲಿ ತೊಡಗಿದ್ದಾರೆ.

ಬಿತ್ತನೆಗಾಗಿ ಉದ್ದು, ಹೆಸರು, ಸೋಯಾ ಬೀಜ ಸಂಗ್ರಹಿಸಿ ಇಟ್ಟುಕೊಳ್ಳುತ್ತಿದ್ದಾರೆ. ರಸಗೊಬ್ಬರ, ಮಣ್ಣಿನ ಫಲವತ್ತತೆ ವೃದ್ಧಿಸುವ ಪೋಷಕಾಂಶಗಳನ್ನು ಖರೀದಿ ಮಾಡುತ್ತಿದ್ದಾರೆ.

ಉದ್ದು, ಹೆಸರು ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಾಗಿವೆ. ಸಕಾಲಕ್ಕೆ ಮಳೆ ಸುರಿದರೆ ಉತ್ತಮ ಬೆಳೆ ಬರಲಿದೆ. ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಲಿದೆ ಎನ್ನುತ್ತಾರೆ ಹಳೆಂಬರದ ರೈತ ಶಿವರಾಜ.

ಸೋಯಾ ಬೇಡಿಕೆ: ‘ಜಿಲ್ಲೆಯಲ್ಲಿ ಈ ಬಾರಿ ಸೋಯಾಗೆ ಬೇಡಿಕೆ ಹೆಚ್ಚಿದೆ. ಪ್ರಸ್ತುತ 1.35 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಸೋಯಾ ಬಿತ್ತನೆಯ ಗುರಿ ಹೊಂದಲಾಗಿದೆ. ಸಕಾಲಕ್ಕೆ ಮಳೆ ಹಾಗೂ ಬಿತ್ತನೆಯಾದರೆ 2.09 ಲಕ್ಷ ಟನ್‌ ಸೋಯಾ ಉತ್ಪಾದನೆಯಾಗಲಿದೆ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಜಿಯಾವುಲ್ಲಾ ಹೇಳುತ್ತಾರೆ.

ಮುಂಗಾರಿನಲ್ಲಿ ಜಿಲ್ಲೆಯಲ್ಲಿ 3.39 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿದೆ. ರೈತ ಸಂಪರ್ಕ ಕೇಂದ್ರಗಳ ಮೂಲಕ ರೈತರಿಗೆ ಸೋಯಾ, ತೊಗರಿ, ಹೆಸರು, ಮೆಕ್ಕೆ ಜೋಳ, ಸಜ್ಜೆ ಹಾಗೂ ಸೂರ್ಯಕಾಂತಿ ಬೀಜವನ್ನು ರಿಯಾಯಿತಿ ದರದಲ್ಲಿ ವಿತರಿಸುವ ವ್ಯವಸ್ಥೆ ಮಾಡಲಾಗಿದೆ.

**
ಬೀದರ್‌ ಜಿಲ್ಲೆಯ ರೈತರಿಗೆ ಸಕಾಲದಲ್ಲಿ ಬೀಜ ಹಾಗೂ ಗೊಬ್ಬರ ಪೂರೈಕೆ ಮಾಡಿಕೊಳ್ಳಲು ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ
– ಕೆ.ಜಿಯಾವುಲ್ಲಾ,  ಕೃಷಿ ಇಲಾಖೆಯ ಜಂಟಿ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT