ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರ್ಬಲ ರಾಜಕಾರಣಿಗಳು

ಅಕ್ಷರ ಗಾತ್ರ

ನಮ್ಮ ಕರ್ನಾಟಕದ ಹಾಗೂ ದೇಶದ ರಾಜಕಾರಣಿಗಳು ಚುನಾವಣೆಗಳು ಹತ್ತಿರ ಬಂತೆಂದರೆ ಧಾರ್ಮಿಕ ಕೇಂದ್ರಗಳನ್ನೂ ದೇವಮಂದಿರಗಳನ್ನೂ ಇನ್ನಿಲ್ಲದ ಹಾಗೆ ಸುತ್ತುಹಾಕುವುದು ಇತ್ತೀಚೆಗೆ ಅತಿಯಾಗಿದೆ. ಮಾತ್ರವಲ್ಲ, ಹಿಂದೂ ಧರ್ಮ, ಜಾತಿ, ಉಪಜಾತಿ ಮಠದೊಡೆಯರ ಕಾಲಿಗೆ ಬೀಳುವುದು; ಚರ್ಚು, ಮಸೀದಿ, ದರ್ಗಾಗಳಿಗೆ ಹೋಗಿ ಡೊಗ್ಗು ಸಲಾಮು ಹಾಕುವುದು ಆ ಮೂಲಕ ತಾವು ಸರ್ವ ಜಾತಿ, ಉಪಜಾತಿ, ಧರ್ಮಗಳಿಗೆ ಗೌರವ ತೋರಿಸುತ್ತಿರುವ ಜಾತ್ಯತೀತರೆಂದು ಜಗಜ್ಜಾಹೀರು ಪಡಿಸುತ್ತಿರುವುದೂ ಅತಿಯಾಗಿದೆ. ಈ ಕಿಲಾಡಿ ಕೃತ್ಯಗಳ ಹಿಂದೆ ಪರಮ ಸ್ವಾರ್ಥ ಅಡಗಿದೆಯಲ್ಲದೆ ಬೇರೇನೂ ಇಲ್ಲ (ಇದೊಂದು ರೀತಿಯಲ್ಲಿ ಬಸವಣ್ಣ ಹೇಳುವ ಹಾಗೆ ‘ಹುತ್ತವ ಕಂಡಲ್ಲಿ ಹಾವಾಗಿ, ನದಿಯ ಕಂಡಲ್ಲಿ ನೀರಾಗಿ’ ಪರಿವರ್ತನೆಯಾಗುವ ನಡವಳಿಕೆಯೇ ಹೌದು).

ದೇವರು, ಧರ್ಮ, ಜಾತಿ, ಉಪಜಾತಿ ನಂಬಿಕೆಗಳು ಮತ್ತು ಆಚರಣೆಗಳನ್ನು ಅವರವರ ಆತ್ಮವಿಕಾಸಕ್ಕೆ ಅಗತ್ಯಕ್ಕೆ ತಕ್ಕಂತೆ ಬೇಕಾದರೆ ಆಚರಿಸಿಕೊಳ್ಳಲಿ. ಅವೆಲ್ಲ ಅವರವರ ಮನೆಯ ಹೊಸಿಲೊಳಗೆ ಇರಲಿ. ಆದರೆ, ಬೀದಿಗೆ ಬಂದಾಗ, ಅಂದರೆ ಸಾರ್ವಜನಿಕ ರಂಗಕ್ಕೆ ಬಂದಾಗ ವ್ಯಕ್ತಿಗತ ನಂಬಿಕೆಗಳೇ ಬೇರೆಯಾಗುತ್ತವೆ, ಸಾರ್ವಜನಿಕ ಅಪೇಕ್ಷೆಗಳೇ ಬೇರೆಯಾಗಿರುತ್ತವೆ. ಅದೂ ಅಲ್ಲದೆ, ಯಾವುದೇ ಧರ್ಮ, ದೇವರು ಮತ್ತು ಆ ಕುರಿತ ನಂಬಿಕೆಗಳು ಅವು ಅಸ್ತಿತ್ವ ಪಡೆದ ಕಾಲಕ್ಕೆ ಮತ್ತು ಪ್ರದೇಶಕ್ಕೆ ಅನುಗುಣವಾಗಿರುತ್ತವೆಯೇ ಹೊರತು, ಸಾರ್ವತ್ರಿಕವೂ ಅಲ್ಲ ಸಾರ್ವಕಾಲಿಕವೂ ಅಲ್ಲ ಎಂಬ ತಿಳಿವಳಿಕೆ ಇದ್ದರೆ ಸಾಕು. ವಾಸ್ತವವಾಗಿ, ಮಾನವಕೃತ ಯಾವ ಧರ್ಮವೂ ಎಲ್ಲ ಕಾಲಕ್ಕೂ ಇಡಿಯಾಗಿ ಅಗತ್ಯವಿರುವುದಿಲ್ಲ ಮತ್ತು ಅವುಗಳಲ್ಲಿರುವ ಮಾನವೀಯ ಅಂಶಗಳನ್ನು ಮಾತ್ರ ನಾವು ಸ್ವೀಕರಿಸಿದರೆ ಸಾಕು. ಅದೇ ಮಾನವ ಧರ್ಮ.

ಯಾವುದೇ ಧರ್ಮ ಅಥವಾ ದೇವರ ಹೆಸರಿನಲ್ಲಿ ಕಟ್ಟಿಕೊಳ್ಳುವ ಮಠಮಾನ್ಯಗಳು ಒಂದು ಬಗೆಯ ಆಧ್ಯಾತ್ಮಿಕ ಕೇಂದ್ರಗಳಾಗಿ ಕಾರ್ಯ ನಿರ್ವಹಿಸಬಹುದೇ ಹೊರತು ಸಮಾಜದ ಭೌತಿಕ ಏಳ್ಗೆಗೆ ಮಹತ್ತರವಾದ ಕೊಡುಗೆಯನ್ನೇನೂ ನೀಡಲಾರವು (ಏಳ್ಗೆ ಆಗುವುದಿದ್ದರೆ ಅವುಗಳೊಂದಿಗೆ ಸಂಬಂಧ ಹೊಂದಿರುವ ಕೆಲವು ಹಿಂಬಾಲಕರಿಗೆ ಮತ್ತು ಬಾಲಬಡುಕರಿಗೆ ಮಾತ್ರ. ‘ಧರ್ಮದ ಅಫೀಮು’ ತಿಂದವರ ಮನಸ್ಥಿತಿಯೇ ಅಲ್ಲಿ ಪ್ರಧಾನವಾಗಿ ತಾಂಡವಾಡುತ್ತದಲ್ಲದೆ ಬೇರೇನೂ ಅಲ್ಲ. ಅಪವಾದಗಳಿಲ್ಲವೆಂದಲ್ಲ).

ನೈಜವಾಗಿ, ಒಂದು ಸಮಾಜದ ಅಭಿವೃದ್ಧಿ ಆಗುವುದು ದುಡಿಮೆಯ ಮಂದಿಯಿಂದ ಮಾತ್ರ. ಅಂದರೆ ಶ್ರಮಿಕ ವರ್ಗದಿಂದ. ಯಾರು ಉತ್ಪಾದನೆಯಲ್ಲಿ ತೊಡಗಿ ಸಮಾಜದ ಅಗತ್ಯಗಳನ್ನು ಪೂರೈಸುತ್ತಾರೊ ಅವರು ಮಾತ್ರ ಸಮಾಜದ ಏಳ್ಗೆಗೆ ಅಮೂಲ್ಯ ಕಾಣಿಕೆ ಸಲ್ಲಿಸುವವರು. ಉಳಿದವರು ಪರಾವಲಂಬಿಗಳು. ಪರಿಸ್ಥಿತಿ ಹೀಗಿರುವಾಗ, ಆತ್ಮವಿಶ್ವಾಸವಿಲ್ಲದ ಅಥವಾ ಸಾಲದ ನಮ್ಮ ರಾಜಕಾರಣಿಗಳು ಧರ್ಮದ ಅಪೇಕ್ಷೆಗನುಗುಣವಾಗಿ
ಸಾಂದರ್ಭಿಕ ಫ್ಯಾನ್ಸಿ ಡ್ರೆಸ್ ವೇಷ ಧರಿಸಿಕೊಂಡು ಧರ್ಮಾಧರಿತ ಕೇಂದ್ರಗಳಿಗೆ ಹೋಗುವುದು, ಡೊಗ್ಗು ಸಲಾಮು ಹೊಡೆಯುವುದು ನಗೆಪಾಟಲು. ಭಕ್ತಿಯ ಹೆಸರಿನಲ್ಲಿ ಅಥವಾ ಜನಸಾಮಾನ್ಯರ ಭಕ್ತಿಭಾವವನ್ನು ಬಂಡವಾಳ ಮಾಡಿಕೊಂಡು ಯಾವುದೇ ಶ್ರಮವನ್ನು ಹಾಕದೆ ಅನ್ಯರ ಶ್ರಮದ ಆಧಾರದ ಮೇಲೆ ದಿಮ್‌ದಿರಕ್ನೆ ಕೂತುಣ್ಣುವ ಪರಾವಲಂಬಿ ಜೀವಿಗಳಾದ ‘ಧಾರ್ಮಿಕ’ ವ್ಯಕ್ತಿಗಳ ಪದತಲದಲ್ಲಿ ಕೂತು, ಬುದ್ಧಿಭಾವಗಳ ಜೊತೆಗೆ ಕಾಣಿಕೆಯನ್ನೂ ಕೊಟ್ಟು(?)- ಅವರ ‘ದಿವ್ಯ ಆಶೀರ್ವಾದ’ ಪಡೆಯಲು ಹಾತೊರೆಯುವ ನಮ್ಮ ರಾಜಕಾರಣಿಗಳು ಮಾನವ ಘನತೆಗೆ ಕುಂದು ಮಾಡುತ್ತಾರಲ್ಲದೆ ಬೇರೇನೂ ಅಲ್ಲ. ಆ ಮೂಲಕ ಮಾನವ ಬದುಕನ್ನು ಉಳಿಸುವ, ಬೆಳೆಸುವ ಮತ್ತು ರಾಜಕಾರಣಿಗಳಿಗೆ ನಾಯಕತ್ವವನ್ನು ನೀಡುವ ಶ್ರೀಸಾಮಾನ್ಯರನ್ನು ಕಡೆಗಣಿಸುವುದು ವಿವೇಕದ ನಡೆಯೇನಲ್ಲ.

ನಾವು ಎಷ್ಟೇ ಬೊಂಬಡ ಹೊಡೆದರೂ ಯಾವ ದೇವರೂ ಬಂದು ನಮ್ಮ ದಿನನಿತ್ಯದ ಸಮಸ್ಯೆಗಳನ್ನು ಪರಿಹರಿಸುವುದಿಲ್ಲ (ದೇವರು ಎಂಬುದೊಂದು ಮಾನವಕಲ್ಪಿತ ಅಥವಾ ಮಾನವನಿರ್ಮಿತ ನಂಬಿಕೆ, ಅಷ್ಟೆ). ಪರಂಪರಾಗತವಾದ ಯಾವ ದೇವ ಮಂದಿರಗಳೂ, ಪವಿತ್ರ ಕ್ಷೇತ್ರಗಳೂ, ಶ್ರದ್ಧಾಕೇಂದ್ರಗಳೂ ನಮ್ಮ ಯಾವ ಸಮಸ್ಯೆಯನ್ನೂ ಬಗೆಹರಿಸಲಾರವು. ಅವೆಲ್ಲ ಮಾನವ ತನ್ನ ಸಮಾಧಾನಕ್ಕೆ ಕಂಡುಕೊಂಡ ಕೃತಕ ಮತ್ತು ಕಾಲ್ಪನಿಕ ಪರಿಹಾರಗಳಷ್ಟೇ. ನೈಜವಾದವೆಂದರೆ- ಮಾನವ ಬದುಕಿಗೆ ಪೂರಕವಾಗಿರುವ ದುಡಿಮೆಯ ಮತ್ತು ಉತ್ಪಾದನೆಯ ಕ್ಷೇತ್ರಗಳೆಂದರೆ- ಹೊಲ, ಗದ್ದೆ, ತೋಟ ಮತ್ತು ಕಾರ್ಖಾನೆಗಳು ಹಾಗೂ ಆ ಬಗೆಯ ಕ್ಷೇತ್ರಗಳು ಮಾತ್ರ. ಮಾನವ ಸಮಾಜ ವಿಕಸನಗೊಳ್ಳುವುದು ಇವುಗಳಿಂದ ಮಾತ್ರ ಎಂಬ ಪ್ರಾಥಮಿಕ ತಿಳಿವಳಿಕೆ ನಮ್ಮ ರಾಜಕಾರಣಿಗಳಿಗೆ ಬಂದಾಗ ಬದುಕಿನ ದೃಷ್ಟಿನೋಟಗಳು ಬದಲಾಗುತ್ತವೆ.

ನಮ್ಮ ದೇಶದ ಅಸಂಖ್ಯ ಸಮಸ್ಯೆಗಳಾದ ಬಡತನ, ಜನಸಂಖ್ಯಾ ಬಾಹುಳ್ಯ, ಅಸ್ಪೃಶ್ಯತೆ, ಭ್ರಷ್ಟತನ, ನಿರುದ್ಯೋಗ, ಮಹಿಳೆಯರ ಮೇಲಿನ ದೌರ್ಜನ್ಯ ಈ ಮುಂತಾದವುಗಳ ನಿರ್ಮೂಲನಕ್ಕೆ ವಾಸ್ತವ ನೆಲೆಗಟ್ಟಿನಲ್ಲಿ ನಾವು ಪರಿಹಾರ ಕಂಡುಕೊಂಡಾಗ ಮಾತ್ರ ಸಮಾಜದಲ್ಲಿ ಬದಲಾವಣೆ ಕಾಣಲು ಸಾಧ್ಯ. ಇದರೊಂದಿಗೆ ಬಂಡವಾಳಶಾಹಿ ರಾಷ್ಟ್ರಗಳ ಕುಟಿಲೋಪಾಯದ ಜಾಗತೀಕರಣದ ಹಾವಳಿಗೆ ಸಿಕ್ಕಿ ನಮ್ಮ ದೇಸಿ ಉದ್ಯಮಗಳು ಮಾತ್ರವಲ್ಲ ನಮ್ಮ ಭಾಷೆ, ಸಂಸ್ಕೃತಿ ಕ್ಷೀಣಿಸುತ್ತಿರುವುದರ ಬಗ್ಗೆಯೂ ನಾವು ಜಾಗೃತರಾಗಿ ನಮ್ಮತನಗಳನ್ನು ಸಾಬೀತುಪಡಿಸಬೇಕಾದ ಅಗತ್ಯ ಮತ್ತು ಅನಿವಾರ್ಯ ಕ್ರಮ ಕೈಗೊಳ್ಳುವಲ್ಲಿ ದೃಢ ನಿರ್ಧಾರ ತಳೆಯಬೇಕಾದುದೂ ಇದೆ. ಈ ದಿಶೆಯಲ್ಲಿ ಕನ್ನಡವೇ ಮೊದಲಾದ ದೇಶೀಯ ಭಾಷೆಗಳ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧವಾಗಿರುವ ರಾಜಕೀಯ ಚಿಂತಕರು ನಮ್ಮ ಇಂದಿನ ಅಗತ್ಯವೇ ಹೌದು. ಶಾಲೆಗಳಲ್ಲಿ ಪ್ರಾಥಮಿಕ ತರಗತಿಯಿಂದಲೇ ನಮ್ಮ ಮಕ್ಕಳನ್ನು ಪರಕೀಯರನ್ನಾಗಿ ಮಾಡುವ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿರುವ ವ್ಯವಸ್ಥೆ ಬಗ್ಗೆ ಚಕಾರವನ್ನೂ ಎತ್ತದೆ ದೇಸೀಯತೆಯ ಬಗ್ಗೆ, ರಾಷ್ಟ್ರಪ್ರೇಮದ ಬಗ್ಗೆ ಮಾತನಾಡುವ ಮತ್ತು ನ್ಯಾತಾಡುವ ರಾಜಕಾರಣಿಗಳನ್ನು ಕಂಡಾಗ... ಬಡಿದುಕೊಂಡು ನಗುವ ಹಾಗಾಗುತ್ತದಲ್ಲದೆ ಬೇರೇನೂ ಅಲ್ಲ. ದೇಶದಲ್ಲಿ ನೈಜ ಭಾರತೀಯತೆ ಬೆಳಗುವುದು ನೈಜ ರಾಜಕಾರಣಿಗಳು ಉದಯಿಸಿದಾಗ ಮಾತ್ರ ಎಂಬ ಅರಿವು ನಮಗಿರಬೇಕು. ಇದನ್ನೆಲ್ಲ ಹೊರತುಪಡಿಸಿ ಕಂಡಕಂಡವರಿಗೆಲ್ಲ ದಂಡ, ಉದ್ದಂಡ, ದೀರ್ಘದಂಡ ನಮಸ್ಕಾರ ಹಾಕಿ, ತಮ್ಮ ವ್ಯಕ್ತಿತ್ವವನ್ನೇ ಇಲ್ಲಗೈಯುತ್ತಿರುವ ದುರ್ಬಲ ರಾಜಕಾರಣಿಗಳು ಈ ರಾಜ್ಯಕ್ಕೆ, ಈ ದೇಶಕ್ಕೆ ಬೇಡವೇ ಬೇಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT