ವಾಟ್ಸನ್ ಅಬ್ಬರದ ಶತಕ: ಫೈನಲ್‌ನಲ್ಲಿ ಸನ್‌ರೈಸರ್ಸ್‌ ಮಣಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡ ಸಿಎಸ್‌ಕೆ

7
ಚೆನ್ನೈ ಮುಡಿಗೆ ಐಪಿಎಲ್‌ 2018ರ ಪ್ರಶಸ್ತಿ ಗರಿ

ವಾಟ್ಸನ್ ಅಬ್ಬರದ ಶತಕ: ಫೈನಲ್‌ನಲ್ಲಿ ಸನ್‌ರೈಸರ್ಸ್‌ ಮಣಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡ ಸಿಎಸ್‌ಕೆ

Published:
Updated:
ವಾಟ್ಸನ್ ಅಬ್ಬರದ ಶತಕ: ಫೈನಲ್‌ನಲ್ಲಿ ಸನ್‌ರೈಸರ್ಸ್‌ ಮಣಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡ ಸಿಎಸ್‌ಕೆ

ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಐಪಿಎಲ್‌ 2018ರ ಫೈನಲ್‌ ಪಂದ್ಯದಲ್ಲಿ ಶೇನ್‌ ವಾಟ್ಸನ್ ಅವರ ಭರ್ಜರಿ ಶತಕದ ನೆರವಿನಿಂದ ಚೆನ್ನೈ ಸೂಪರ್‌ ಕಿಂಗ್ಸ್ ತಂಡ ಅಮೋಘ ಜಯ ಸಾಧಿಸಿದೆ.

ಸನ್‌ರೈಸರ್ಸ್‌ ಹೈದರಾಬಾದ್‌ ತಂಡವನ್ನು 8 ವಿಕೆಟ್‌ಗಳಿಂದ ಪರಾಭವಗೊಳಿಸುವ ಮೂಲಕ ಮಹೇಂದ್ರಸಿಂಗ್ ದೋನಿ ನಾಯಕತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಮೂರನೇ ಬಾರಿಗೆ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಅಬ್ಬರಿಸಿದ ವಾಟ್ಸನ್‌: ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ಶೇನ್‌ ವಾಟ್ಸನ್ ಪಂದ್ಯದುದ್ದಕ್ಕೂ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ತಂಡವನ್ನು ನಿರಾಯಾಸವಾಗಿ ದಡ ಸೇರಿಸಿದರು. ಕೇವಲ 57 ಎಸೆತಗಳಲ್ಲಿ 117 ರನ್‌ ಗಳಿಸಿ ಔಟಾಗದೆ ಉಳಿದ ವಾಟ್ಸನ್‌ ಇನ್ನಿಂಗ್ಸ್‌ನಲ್ಲಿ 11 ಬೌಂಡರಿ ಮತ್ತು 8 ಸಿಕ್ಸರ್ ಒಳಗೊಂಡಿದ್ದವು.

ಆರಂಭಿಕ ಆಘಾತ: ಸನ್‌ರೈಸರ್ಸ್‌ ಹೈದರಾಬಾದ್‌ ನೀಡಿದ್ದ  179 ರನ್‌ ಗುರಿ ಬೆನ್ನತ್ತಿ ಕಣಕ್ಕಿಳಿದಿದ್ದ ಚೆನ್ನೈ ತಂಡಕ್ಕೆ ಮೂರನೇ ಓವರ್‌ನಲ್ಲೇ ಆರಂಭಿಕ ಆಘಾತ ಎದುರಾಯಿತು. ಆರಂಭಿಕ ಆಟಗಾರ ಫಾಫ್‌ ಡು ಪ್ಲೆಸಿ ಕೇವಲ 10 ರನ್‌ ಗಳಿಸಿ ಸಂದೀಫ್‌ ಶರ್ಮಾ ಅವರಿಗೆ ವಿಕೆಟ್‌ ಒಪ್ಪಿಸಿದರು. ಪರಿಣಾಮವಾಗಿ ತಂಡದ ಮೊತ್ತ 16 ಆಗಿದ್ದಾಗಲೇ ಮೊದಲ ವಿಕೆಟ್ ಪತನವಾದಂತಾಯಿತು.

ವಾಟ್ಸನ್‌ ಅಬ್ಬರಕ್ಕೆ ರೈನಾ ಸಾಥ್: ಫಾಫ್‌ ಡು ಪ್ಲೆಸಿ ಔಟಾದ ಬಳಿಕ ಕ್ರೀಸಿಗಿಳಿದ ಸುರೇಶ್‌ ರೈನಾ ಉತ್ತಮ ಪ್ರದರ್ಶನ ನೀಡಿ ಶೇನ್ ವಾಟ್ಸನ್‌ಗೆ ಸಾಥ್ ನೀಡಿದರು. ಇವರು 24 ಎಸೆತಗಳಲ್ಲಿ 32 ರನ್‌ (3 ಬೌಂಡರಿ, 1 ಸಿಕ್ಸರ್) ಬಾರಿಸಿ ಉತ್ತಮ ಕೊಡುಗೆ ನೀಡಿದರು.

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಟಾಸ್‌ ಗೆದ್ದು ಕ್ಷೇತ್ರರಕ್ಷಣೆ ಆಯ್ದುಕೊಂಡಿತ್ತು. ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದಿದ್ದ ಸನ್‌ರೈಸರ್ಸ್‌ ಹೈದರಾಬಾದ್‌ ಪರ ನಾಯಕ ಕೇನ್ ವಿಲಿಯಮ್ಸನ್‌ ಉತ್ತಮ ಆಟವಾಡಿ 36 ಎಸೆತಗಳಲ್ಲಿ 47 ರನ್‌ ಗಳಿಸಿದರು. ಯೂಸಫ್‌ ಪಠಾಣ್ ಕೇವಲ 25 ಎಸೆತಗಳಲ್ಲಿ 45 ರನ್ ಗಳಿಸಿ ತಂಡದ ಮೊತ್ತ ಹೆಚ್ಚಿಸಲು ನೆರವಾದರು. ಕೊನೆಯ ಓವರ್‌ಗಳಲ್ಲಿ ಕಾರ್ಲೊಸ್‌ ಬ್ರಾಥ್‌ವೇಟ್‌ ಮಿಂಚಿನ ಆಟವಾಡಿ ತಂಡದ ಮೊತ್ತ 170ರ ಗಡಿ ದಾಟಲು ನೆರವಾದರು. ಇವರು ಕೇವಲ 11 ಎಸೆತಗಳಲ್ಲಿ 21 ರನ್ ಸಿಡಿಸಿದರು. ಇದರಲ್ಲಿ ಮೂರು ಸಿಕ್ಸರ್ ಸೇರಿತ್ತು.

ಮೇ 22ರಂದು ಇದೇ ಅಂಗಳದಲ್ಲಿ ನಡೆದಿದ್ದ ಮೊದಲ ಕ್ವಾಲಿಫೈಯರ್‌ ಪೈಪೋಟಿಯಲ್ಲಿ ಉಭಯ ತಂಡಗಳು ಎದುರಾಗಿದ್ದವು. ಆಗ ದೋನಿ ಬಳಗವು  2 ವಿಕೆಟ್‌ಗಳ ರೋಚಕ ಜಯ ದಾಖಲಿಸಿ ಫೈನಲ್ ಪ್ರವೇಶಿಸಿತ್ತು. ಶುಕ್ರವಾರ ಈಡನ್‌ ಗಾರ್ಡನ್ಸ್‌ ಅಂಗಳದಲ್ಲಿ ನಡೆದಿದ್ದ ಎರಡನೇ ಕ್ವಾಲಿಫೈಯರ್‌ನಲ್ಲಿ ವಿಲಿಯಮ್ಸನ್‌ ಬಳಗ ಕೋಲ್ಕತ್ತ ನೈಟ್‌ ರೈಡರ್ಸ್‌ ವಿರುದ್ಧ 14ರನ್‌ಗಳಿಂದ ಗೆದ್ದು ಫೈನಲ್‌ ಪ್ರವೇಶಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry