ಹರ್ಷ ತಂದ ವರ್ಷಧಾರೆ: ಉತ್ತಮ ಫಸಲಿನ ಲೆಕ್ಕಾಚಾರದಲ್ಲಿ ರೈತ

7

ಹರ್ಷ ತಂದ ವರ್ಷಧಾರೆ: ಉತ್ತಮ ಫಸಲಿನ ಲೆಕ್ಕಾಚಾರದಲ್ಲಿ ರೈತ

Published:
Updated:
ಹರ್ಷ ತಂದ ವರ್ಷಧಾರೆ: ಉತ್ತಮ ಫಸಲಿನ ಲೆಕ್ಕಾಚಾರದಲ್ಲಿ ರೈತ

ಬೆಂಗಳೂರು: ಬೇಸಿಗೆ ಬಿಸಿಲಿಗೆ ಬೆನ್ನು ಕಾಯಿಸಿದ್ದ ರೈತರ ಎದೆಗೆ ವರ್ಷಧಾರೆ ತಂಪೆರೆದಿದೆ. ಮಳೆಗಾಗಿ ಪ್ರಾರ್ಥಿಸಿದ್ದ ಕೃಷಿಕರ ಮೊಗದಲ್ಲೀಗ ಸಂತಸ ಅರಳಿದೆ. ವಾಡಿಕೆಗಿಂತ ಒಂದು ವಾರ ಮುಂಚಿತವಾಗಿ ರಾಜ್ಯ ಪ್ರವೇಶಿಸಿರುವ ಮುಂಗಾರು ಈ ಬಾರಿ ಉತ್ತಮ ಫಸಲಿನ ಲೆಕ್ಕಾಚಾರ ಗರಿಗೆದರುವಂತೆ ಮಾಡಿದೆ.

ಬೆಂಗಳೂರು ಸೇರಿದಂತೆ ಹಲವೆಡೆ ಅಶ್ವಿನಿ ಮಳೆ ಸುರಿಯುವುದರೊಟ್ಟಿಗೆ ಏಪ್ರಿಲ್‌ ತಿಂಗಳಿನಲ್ಲೇ (ಏಪ್ರಿಲ್‌ 14) ಮುಂಗಾರು ಪೂರ್ವ ಮಳೆ ಆರಂಭವಾಗಿತ್ತು. ಅಶ್ವಿನಿ ಮಳೆಗೆ ಹೊಲ ಹದ ಮಾಡಿಕೊಳ್ಳುವ ರೈತರು, ಭರಣಿ ಬೀಳುವ ಹೊತ್ತಿಗೆ ಬಿತ್ತನೆ ಆರಂಭಿಸುತ್ತಾರೆ.

ಈ ಬಾರಿ ಈ ಎರಡು ಮಳೆ ಜೊತೆಗೆ ಮೇ ತಿಂಗಳಿನಲ್ಲಿ ಕೃತ್ತಿಕಾ ಮಳೆಯೂ ತಕ್ಕಮಟ್ಟಿಗೆ ಸುರಿದಿದೆ. ರಾಜ್ಯದ ಹಲವೆಡೆ ಮೇ 25ರಿಂದ ರೊಹಿಣಿ ಮಳೆ ಸಹ ಬಿದ್ದಿದೆ. ಜೂನ್‌ 5ರ ನಂತರ ಸುರಿಯಬೇಕಿದ್ದ ನೈರುತ್ಯ ಮುಂಗಾರು ಈಗಾಗಲೇ ಆರಂಭವಾಗುವುದರಿಂದ ಉತ್ತಮ ಫಸಲಿನ ನಿರೀಕ್ಷೆ ಜೊತೆಗೆ ಕುಡಿಯುವ ನೀರಿನ ಸಮಸ್ಯೆ ನೀಗುವ ಭರವಸೆಯೂ ಮೂಡಿದೆ.

ಮುಂಗಾರು ಪೂರ್ವ ಮಳೆ

ಬಳ್ಳಾರಿ, ವಿಜಯಪುರ, ಬಳ್ಳಾರಿ, ಬೆಳಗಾವಿ, ಶಿವಮೊಗ್ಗ, ಮಂಗಳೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಮೈಸೂರು, ಚಾಮರಾಜನಗರ, ರಾಮನಗರ, ಮಂಡ್ಯ ಸೇರಿದಂತೆ ರಾಜ್ಯದ ಬಹುತೇಕ ಕಡೆಗಳಲ್ಲಿ ಏಪ್ರಿಲ್‌–ಮೇ ತಿಂಗಳಲ್ಲಿ ಮುಂಗಾರು ಪೂರ್ವ ಮಳೆ ಉತ್ತಮವಾಗಿ ಆಗಿದೆ.

ವಾಡಿಕೆಗಿಂತ ಹೆಚ್ಚು ಮಳೆ

ಸತತ ಬರದಿಂದ ತತ್ತರಿಸಿದ್ದ ಧಾರವಾಡ ಜಿಲ್ಲೆಯಲ್ಲಿ ವರುಣನ ಆರ್ಭಟ ಜೋರಾಗಿದ್ದು, ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಮೇ 1ರಿಂದ 18ರ ವರೆಗೆ ಧಾರವಾಡ ಜಿಲ್ಲೆಯಲ್ಲಿ 41.03 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು.

ಆದರೆ, 103 ಮಿ.ಮೀ. ಮಳೆಯಾಗಿದೆ. ಅಂದರೆ, ವಾಡಿಕೆಗಿಂತ ಶೇ 148ರಷ್ಟು ಹೆಚ್ಚು ಮಳೆಯಾಗಿದೆ. ಬೆಳಗಾವಿಯಲ್ಲಿಯೂ ವಾಡಿಕೆಗಿಂತ ಹೆಚ್ಚು ಸುರಿದಿದೆ. 

ಒಟ್ಟಾರೆ ಈ ಬಾರಿ ವಾಡಿಕೆಗಿಂತ ಶೇ 39.8ರಷ್ಟು ಹೆಚ್ಚು ಬಿದ್ದಿರುವ ಮುಂಗಾರು ಪೂರ್ವ ಮಳೆ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ..

ಬಿತ್ತನೆ ಲೆಕ್ಕಾಚಾರ

ವರ್ಷದಿಂದ ವರ್ಷಕ್ಕೆ ಪ್ರತಿ ಜಿಲ್ಲೆಯಲ್ಲಿಯೂ ಬಿತ್ತನೆ ಪ್ರಮಾಣ ಕ್ಷೀಣಿಸುತ್ತಿದೆ. ಬದಲಾಗುತ್ತಿರುವ ಹವಾಗುಣ, ಮಳೆಯ ಅಭಾವದಿಂದಾಗಿ ರೈತರು ಕೃಷಿಗೆ ಬೆನ್ನು ಮಾಡುತ್ತಿದ್ದಾರೆ.

ಆದರೆ, ಈ ಬಾರಿ ಉತ್ತಮ ಮಳೆ ಆಗುತ್ತಿರುವುದರಿಂದ ಬಿತ್ತನೆ ಲೆಕ್ಕಾಚಾರವೂ ಜೋರಾಗಿದೆ.

ಕಲ್ಬುರ್ಗಿ ಜಿಲ್ಲೆಯಲ್ಲಿ ಈ ಬಾರಿ 6.32 ಲಕ್ಷ ಹೆಕ್ಟರ್‌ ಬಿತ್ತನೆ ಗುರಿ ಇದೆ. ಧಾರವಾಡ ಜಿಲ್ಲೆಯಲ್ಲಿ 2.31 ಲಕ್ಷ ಹೆಕ್ಟೆರ್‌ ಬಿತ್ತನೆ ಮಾಡುವ ಅಂದಾಜು ಮಾಡಿಕೊಳ್ಳಲಾಗಿದೆ. ರಾಯಚೂರಿನಲ್ಲಿ  67 ಸಾವಿರ ಹೆಕ್ಟೆರ್‌, ಹಾಸನದಲ್ಲಿ 2.60 ಲಕ್ಷ ಹೆಕ್ಟೆರ್‌, ಉತ್ತರ ಕನ್ನಡ ಜಿಲ್ಲೆಯಲ್ಲಿ 81 ಸಾವಿರ ಹೆಕ್ಟೆರ್‌, ಚಿತ್ರದುರ್ಗದಲ್ಲಿ 1 ಲಕ್ಷ ಹೆಕ್ಟೆರ್‌ಗೂ ಹೆಚ್ಚು ಭೂ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ.

ಹಲವು ಜಿಲ್ಲೆಗಳಲ್ಲಿ ಈಗಾಗಲೇ ಬಿತ್ತನೆ ಬೀಜ ವಿತರಣೆಗೆ ಚಾಲನೆ ದೊರೆತಿದೆ.

ವಾರ ಮೊದಲು ಬಂದ ಮುಂಗಾರು

ನೆರೆಯ ಕೇರಳಕ್ಕೆ ಮೂರು ದಿನ ಮೊದಲೇ ಮುಂಗಾರು ಪ್ರವೇಶಿಸಿರುವ ಬೆನ್ನಲ್ಲೆ ಮಂಗಳವಾರ ಮಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಮಳೆಯ ಆರ್ಭಟ ಶುರುವಾಗಿದೆ. ವಾಡಿಕೆಯಂತೆ ರಾಜ್ಯಕ್ಕೆ ಜೂನ್‌ 5 ರ ನಂತರ ಮುಂಗಾರು ಸುರಿಯಬೇಕಿತ್ತು. ಆದರೆ ಇದೀಗ ಒಂದು ವಾರ ಮೊದಲೇ ಬಂದಂತಾಗಿದೆ.

ಮಂಗಳೂರು ಮತ್ತು ಉಡುಪಿ ಜಿಲ್ಲೆಯಾದ್ಯಾಂತ ಭಾರೀ ಮಳೆ ಸುರಿಯುತ್ತಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಮಂಗಳೂರು ಮತ್ತು ಉಡುಪಿ ನಗರಗಳ ಹಲವು ಕಡೆ ಮನೆಗಳು ಮುಳುಗಡೆಯಾಗಿವೆ. ಬೆಳಗ್ಗೆಯಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು ತಗ್ಗು ಪ್ರದೇಶಗಳಲ್ಲಿ ನೀರು ತುಂಬಿದೆ. ಬಹುತೇಕ ರಸ್ತೆಗಳು ಮುಳುಗಿದ್ದು ಸಂಚಾರ ಅಸ್ತವ್ಯಸ್ತಗೊಂಡಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಉಡುಪಿ ಜಿಲ್ಲೆಯಾದ್ಯಂತ ಬಿರುಸು ಮಳೆಯಾಗುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ 2 ದಿನಗಳ ಕಾಲ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry