ಮಕ್ಕಳ ಸ್ವಾಗತಕ್ಕೆ ಶಾಲೆ ಸಿಂಗಾರ

7
ಕೊಠಡಿ ಸ್ವಚ್ಛಗೊಳಿಸಿದ ಶಿಕ್ಷಕರು, ವಿದ್ಯಾರ್ಥಿಗಳು; ಇದು ಪಾಠದೊಂದಿಗೆ ’ಹಬ್ಬದೂಟ’ದ ಸಂಭ್ರಮ

ಮಕ್ಕಳ ಸ್ವಾಗತಕ್ಕೆ ಶಾಲೆ ಸಿಂಗಾರ

Published:
Updated:
ಮಕ್ಕಳ ಸ್ವಾಗತಕ್ಕೆ ಶಾಲೆ ಸಿಂಗಾರ

ಚಿಕ್ಕಬಳ್ಳಾಪುರ: ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದ ಸೋಮವಾರ ಮೊದಲ ದಿನ ವಿವಿಧ ಶಾಲೆಗಳಲ್ಲಿ ಶಾಲೆಯಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ತರಗತಿಗಳನ್ನು ಸ್ವಚ್ಛಗೊಳಿಸಿ, ಆರಂಭಕ್ಕೆ ಸಿದ್ಧಗೊಳಿಸಿದರು.

ಕೆಲ ಶಾಲೆಗಳಲ್ಲಿ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ತಮ್ಮ ತರಗತಿ ಕೊಠಡಿಗಳನ್ನು ಶುಚಿಗೊಳಿಸಿ, ರಂಗೋಲಿ ಬಿಡಿಸುತ್ತಿದ್ದ ದೃಶ್ಯಗಳು ಕಂಡು ಬಂದವು.

ಬೇಸಿಗೆ ರಜೆ ಮೋಜಿನಲ್ಲಿದ್ದ ವಿದ್ಯಾರ್ಥಿಗಳು ಮೊದಲ ದಿನ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಿರಲಿಲ್ಲ. ಕಾರಣ ಇಲಾಖೆ ಮಾರ್ಗಸೂಚಿ ಅನ್ವಯ ಶಾಲೆ ಮುಖ್ಯಶಿಕ್ಷಕರು, ಶಿಕ್ಷಕರು, ಸಿಬ್ಬಂದಿ ಮಂಗಳವಾರ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಶಾಲೆಗೆ ಬರ ಮಾಡಿಕೊಳ್ಳಲು ಶಾಲಾ ಕೊಠಡಿಗಳನ್ನು ಅಲಂಕರಿಸಿ, ತಳಿರು ತೋರಣಗಳಿಂದ ಸಿಂಗರಿಸಿ, ವಿದ್ಯಾರ್ಥಿಗಳಿಗೆ ಸಿಹಿ ಊಟ ಬಡಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 1,600 ಪ್ರಾಥಮಿಕ ಸರ್ಕಾರಿ ಶಾಲೆ ಹಾಗೂ 111 ಸರ್ಕಾರಿ ಪ್ರೌಢ ಶಾಲೆ, 45 ಅನುದಾನಿತ, 122 ಖಾಸಗಿ ಶಾಲೆಗಳಲ್ಲಿ ಮಂಗಳವಾರ ವಿದ್ಯಾರ್ಥಿಗಳಿಗೆ ತರಗತಿ ಆರಂಭಗೊಳ್ಳಲಿವೆ. ಈಗಾಗಲೇ ಒಂದನೇ ತರಗತಿಗೆ ದಾಖಲಾತಿ ಆರಂಭವಾಗಿದೆ. ಜೂನ್‌ 30 ರವರೆಗೆ ಈ ಪ್ರಕ್ರಿಯೆ ನಡೆಯಲಿದೆ.

ಜಿಲ್ಲೆಯಲ್ಲಿ ಶಾಲೆಯಿಂದ ಹೊರ ಉಳಿದಿರುವ 95 ಮಕ್ಕಳನ್ನು ಶಾಲೆಗೆ ಕರೆ ತರಲು ಶಿಕ್ಷಕರು, ಎಸ್‌.ಡಿ.ಎಂ.ಸಿ ಸದಸ್ಯರು, ಶಿಕ್ಷಣ ಪ್ರೇಮಿಗಳು ಪೋಷಕರ ಮನವೊಲಿಸಿ ವಿಶೇಷ ದಾಖಲಾತಿ ಆಂದೋಲನ ನಡೆಸಲು ಮುಂದಾಗಿದ್ದಾರೆ.

ಜಿಲ್ಲೆಯ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶಾಲಾ ಆರಂಭೋತ್ಸವ ದಿನದಿಂದಲೇ ಮಕ್ಕಳಿಗೆ ಬಿಸಿಯೂಟ, ಪಠ್ಯ ಪುಸ್ತಕ ಮತ್ತು ಸಮವಸ್ತ್ರ ನೀಡಲಾಗುತ್ತಿದೆ. ಮಂಗಳವಾರ ದಿನದಂದು ಸಿಹಿ ಊಟ ನೀಡಲು ಸೂಚಿಸಲಾಗಿದ್ದು, ಈಗಾಗಲೇ ಎಲ್ಲಾ ರೀತಿಯ ಪೂರ್ವ ಸಿದ್ಧತೆ ಮಾಡಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಆರ್‌.ಶಿವಣ್ಣರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry