ರಕ್ಷಣಾ ಸಾಮರ್ಥ್ಯ ಹೆಚ್ಚಿಸಲಿದೆ ಎಸ್‌–400 ಟ್ರಯಂಪ್

7

ರಕ್ಷಣಾ ಸಾಮರ್ಥ್ಯ ಹೆಚ್ಚಿಸಲಿದೆ ಎಸ್‌–400 ಟ್ರಯಂಪ್

Published:
Updated:
ರಕ್ಷಣಾ ಸಾಮರ್ಥ್ಯ ಹೆಚ್ಚಿಸಲಿದೆ ಎಸ್‌–400 ಟ್ರಯಂಪ್

ನವದೆಹಲಿ: ರಷ್ಯಾ ನಿರ್ಮಿತ ಎಸ್‌–400 ಟ್ರಯಂಪ್ ಕ್ಷಿಪಣಿ ವ್ಯವಸ್ಥೆಯನ್ನು ₹ 40,000 ಕೋಟಿಗೆ ಖರೀದಿಸಲು ಭಾರತವು ಒಪ್ಪಿಗೆ ಸೂಚಿಸಿದೆ.

ಈ ಕ್ಷಿಪಣಿ ವ್ಯವಸ್ಥೆಯ ಖರೀದಿಗೆ ಸಂಬಂಧಿಸಿದಂತೆ ಎರಡು ವರ್ಷಗಳಿಂದ ಮಾತುಕತೆ ನಡೆಯುತ್ತಿದ್ದರೂ, ಖರೀದಿ ಒಪ್ಪಂದದ ಮೊತ್ತ ನಿರ್ಣಯವಾಗಿರಲಿಲ್ಲ. ಆದರೆ ಈಗ ಒಪ್ಪಂದದ ಮೊತ್ತದಲ್ಲಿ ಎರಡೂ ದೇಶಗಳು ಸಹಮತಕ್ಕೆ ಬಂದಿವೆ. ಕ್ಷಿಪಣಿ ವ್ಯವಸ್ಥೆಯನ್ನು ಭಾರತಕ್ಕೆ ತಲುಪಿಸುವುದು, ಅವುಗಳ ನಿರ್ವಹಣೆ ಮತ್ತಿತರ ವಿವರಗಳನ್ನು ಒಳಗೊಂಡ ಒಪ್ಪಂದದ ಪೂರ್ಣಪಾಠ. ಮುಂದಿನ ಒಂದೆರಡು ತಿಂಗಳಲ್ಲಿ ಅಂತಿಮಗೊಳ್ಳುವ ಸಾಧ್ಯತೆ ಇದೆ ಭಾರತೀಯ ಸೇನೆಯ ಉನ್ನತ ಮೂಲಗಳು ಮಾಹಿತಿ ನೀಡಿವೆ.

ಅಮೆರಿಕ ಆಕ್ಷೇಪ

ರಷ್ಯಾದಿಂದ ಭಾರತವು ಈ ಕ್ಷಿಪಣಿ ವ್ಯವಸ್ಥೆಯನ್ನು ಖರೀದಿಸುತ್ತಿರುವುದಕ್ಕೆ ಅಮೆರಿಕವು ಬಹಿರಂಗವಾಗಿಯೇ ಆಕ್ಷೇಪ ವ್ಯಕ್ತಪಡಿಸಿದೆ. 2016ರಲ್ಲಿ ಅಮೆರಿಕದ ಅಧ್ಯಕ್ಷರ ಚುನಾವಣೆಯಲ್ಲಿ ರಷ್ಯಾ ಹಸ್ತಕ್ಷೇಪ ನಡೆಸಿದೆ ಎಂದು ಆರೋಪಿಸಿ ಅಮೆರಿಕವು ರಷ್ಯಾ ಮೇಲೆ ಕೆಲವು ನಿರ್ಬಂಧಗಳನ್ನು ಹೇರಿದೆ. ರಷ್ಯಾದಿಂದ ಸೇನಾ ಸಾಮಗ್ರಿಗಳು ಮತ್ತು ಶಸ್ತ್ರಾಸ್ತ್ರಗಳನ್ನು ಖರೀದಿಸುವ ದೇಶದ ಮೇಲೂ ಅಮೆರಿಕ ನಿರ್ಬಂಧ ಹೇರಲು ಅವಕಾಶವಿದೆ.

ಅಮೆರಿಕದಿಂದ ಭಾರತವು ಕದನ ಡ್ರೋನ್‌ಗಳನ್ನು ಖರೀದಿಸುವ ಸಂಬಂಧ ಮಾತುಕತೆ ನಡೆಯುತ್ತಿದೆ. ಭಾರತವು ರಷ್ಯಾದಿಂದ ಎಸ್‌–400 ಕ್ಷಿಪಣಿ ಖರೀದಿಸಿದರೆ, ಅದಕ್ಕೆ ಡ್ರೋನ್‌ಗಳನ್ನು ಮಾರಾಟ ಮಾಡಲು ನಿರಾಕರಿಸಬಹುದು ಎಂದು ಅಮೆರಿಕದ ರಾಜತಾಂತ್ರಿಕ ಅಧಿಕಾರಿ ಎಚ್ಚರಿಕೆ ನೀಡಿದ್ದಾರೆ.

ಹೀಗಾಗಿ ಅಮೆರಿಕದ ನಿರ್ಬಂಧಕ್ಕೆ ಗುರಿಯಾಗದೇ, ಕ್ಷಿಪಣಿ ವ್ಯಾಪಾರ ನಡೆಸುವುದು ಹೇಗೆ ಎಂಬುದರ ಬಗ್ಗೆ ಭಾರತ ಮತ್ತು ರಷ್ಯಾದ ರಾಜತಾಂತ್ರಿಕ ಅಧಿಕಾರಿಗಳು ಚರ್ಚೆ ನಡೆಸುತ್ತಿದ್ದಾರೆ.

ಪ್ರಚಂಡ ಶಕ್ತಿಯ ಟ್ರಯಂಪ್

ಎದುರಾಳಿ ದೇಶಗಳ ಸೇನೆಯು ಆಕಾಶದ ಮೂಲಕ ಯಾವುದೇ ಸ್ವರೂಪದ ದಾಳಿ ನಡೆಸಿದರೂ, ಅದನ್ನು ವಿಫಲಗೊಳಿಸವ ಸಾಮರ್ಥ್ಯ ಎಸ್‌–400 ಟ್ರಯಂಪ್ ಕ್ಷಿಪಣಿ ವ್ಯವಸ್ಥೆಗಿದೆ.

ಯಾವುದೆಲ್ಲಾ ಗುರಿ...

ಯುದ್ಧವಿಮಾನ

ಯುದ್ಧವಿಮಾನದಿಂದ ಹಾಕಲಾದ ಬಾಂಬ್, ಕ್ಷಿಪಣಿಗಳನ್ನೂ ಹೊಡೆದುರುಳಿಸುವ ಸಾಮರ್ಥ್ಯವಿದೆ

ಡ್ರೋನ್‌

ಸರ್ವೇಕ್ಷಣಾ ಡ್ರೋನ್‌ಗಳು, ಬಾಂಬರ್ ಡ್ರೋನ್‌ಗಳನ್ನು ಪತ್ತೆ ಮಾಡಿ ಹೊಡೆದುರುಳಿಸುತ್ತದೆ

ಕ್ಷಿಪಣಿ

ನೆಲದಿಂದ ನೆಲಕ್ಕೆ, ನೆಲದಿಂದ ಆಗಸಕ್ಕೆ, ಆಗಸದಿಂದ ನೆಲಕ್ಕೆ, ಸಾಗರದಿಂದ ಆಗಸಕ್ಕೆ, ಸಾಗರದಿಂದ ನೆಲಕ್ಕೆ ಹಾರಿಸಲಾಗುವ ಕ್ಷಿಪಣಿಗಳನ್ನು ಹೊಡೆದುರುಳಿಸುತ್ತದೆ

* ಈ ಕ್ಷಿಪಣಿಯ ಉಡಾವಣಾ ವಾಹನಗಳನ್ನು ಪಾಕಿಸ್ತಾನ ಮತ್ತು ಚೀನಾದ ಗಡಿಗಳ ಸಮೀಪ ನಿಯೋಜಿಸುವ ಸಾಧ್ಯತೆ ಇದೆ ಎಂದು ಸೇನಾ ಮೂಲಗಳು ಹೇಳಿವೆ

ಕಾರ್ಯಾಚರಣೆ ವಿಧಾನ

* ಶತ್ರು ದೇಶಗಳ ವಿಮಾನ/ಕ್ಷಿಪಣಿಗಳಿಂದ ದಾಳಿ ಯತ್ನ

* ರೇಡಾರ್ ವ್ಯವಸ್ಥೆ

ಎರಡು ರೀತಿಯ ರೇಡಾರ್‌ಗಳನ್ನು ಹೊಂದಿದೆ. ನೆಲದಿಂದ ತೀರಾ ಎತ್ತರದಲ್ಲಿ ಬರುತ್ತಿರುವ ಬಾಂಬ್/ಕ್ಷಿಪಣಿ/ವಿಮಾನಗಳನ್ನು ಪತ್ತೆ ಮಾಡಲು ಒಂದು ರೇಡಾರ್. ನೆಲದಿಂದ ಕಡಿಮೆ ಎತ್ತರದಲ್ಲಿ ಬರುತ್ತಿರುವ ಗುರಿಗಳನ್ನು ಪತ್ತೆ ಮಾಡಲು ಮತ್ತೊಂದು ರೇಡಾರ್ ದಾಳಿ ಉದ್ದೇಶದಿಂದ ಬರುತ್ತಿರುವ ಯಾವುದೇ ವಸ್ತುಗಳನ್ನು ಪತ್ತೆ ಮಾಡಿ, ನಿಯಂತ್ರಣ ಕೊಠಡಿಗೆ ಸಂದೇಶ ರವಾನೆ ಮಾಡುತ್ತವೆ.

* 100 ಗುರಿಗಳ ಮೇಲೆ ಏಕಕಾಲದಲ್ಲಿ ನಿಗಾ ಇರಿಸುವ ಸಾಮರ್ಥ್ಯ ಹೊಂದಿವೆ

* ನಿಯಂತ್ರಣ ಕೊಠಡಿ

ರೇಡಾರ್‌ಗಳಿಂದ ಪಡೆದ ಸಂದೇಶವನ್ನು ಪರಿಶೀಲಿಸಿ, ಪ್ರತಿದಾಳಿಯನ್ನು ನಿಗದಿ ಮಾಡುತ್ತದೆ. ದಾಳಿಗೆ ಕ್ಷಿಪಣಿ ಉಡಾವಣಾ ವಾಹನಗಳನ್ನು ನಿಯೋಜನೆ ಮಾಡುತ್ತದೆ. ಪ್ರತಿದಾಳಿಗೆ ಸೇನೆಯಿಂದ ಅನುಮತಿ ದೊರೆತ ತಕ್ಷಣ, ಅದನ್ನು ಉಡಾವಣಾ ಕೇಂದ್ರಗಳಿಗೆ ರವಾನಿಸುತ್ತದೆ

* ಲಾಂಛರ್‌

ನಿಯಂತ್ರಣ ಕೊಠಡಿಯಿಂದ ಬಂದ ಸೂಚನೆಯಂತೆ ಪ್ರತಿ ದಾಳಿ ನಡೆಸುತ್ತವೆ. (ದಾಳಿ ವ್ಯಾಪ್ತಿ 40 ಕಿ.ಮೀ.ನಿಂದ 400 ಕಿ.ಮೀ.)

* ನೆಲದಿಂದ 10 ಮೀಟರ್‌ನಷ್ಟು ಎತ್ತರದಿಂದ 30 ಕಿ.ಮೀ. ಎತ್ತರದ ನಡುವೆ ದಾಳಿ ನಡೆಸುವ ಸಾಮರ್ಥ್ಯ ಹೊಂದಿದೆ

* ಎಸ್‌–400 ಟ್ರಯಂಪ್‌ನ ಒಂದು ವ್ಯವಸ್ಥೆ ಹೊಂದಿರುವ ಕ್ಷಿಪಣಿಗಳ ಸಂಖ್ಯೆ 384

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry