ಎರಡು ಸ್ವಂತೀ ಕ್ಯಾಮೆರಾದ ಫೋನ್

7

ಎರಡು ಸ್ವಂತೀ ಕ್ಯಾಮೆರಾದ ಫೋನ್

ಯು.ಬಿ. ಪವನಜ
Published:
Updated:
ಎರಡು ಸ್ವಂತೀ ಕ್ಯಾಮೆರಾದ ಫೋನ್

ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆ ತುಂಬಿ ತುಳುಕುತ್ತಿದೆ. ಭಾರತದ ಮಾರುಕಟ್ಟೆ ಎಷ್ಟು ದೊಡ್ಡದಿದೆಯೆಂದರೆ ಇನ್ನೂ ಹಲವು ಕಂಪನಿಗಳು ಬಂದರೂ ಅದು ಸ್ವೀಕರಿಸಬಲ್ಲದು. ಅದರಲ್ಲೂ ಬಹುತೇಕ ಹೊಸಬರು ₹10-15 ಸಾವಿರದ ಒಳಗಿನ ಮಾರುಕಟ್ಟೆಯನ್ನೇ ಗಮನದಲ್ಲಿಟ್ಟುಕೊಂಡಿದ್ದಾರೆ. ಯಾಕೆಂದರೆ ಈ ಬೆಲೆಯ ಫೋನ್‌ಗಳೇ ಅತ್ಯಧಿಕ ಮಾರಾಟವಾಗುತ್ತಿರುವವು. ಈ ಮಾರುಕಟ್ಟೆಗೆ ಹೊಸದಾಗಿ ಬಂದಿರುವುದು ವಿಯೆಟ್ನಾಂ ಮೂಲದ ಕಂಪನಿ ಮೊಬಿಸ್ಟಾರ್. ಅವರ ಎಕ್ಸ್‌ಕ್ಯು ಡ್ಯುವಲ್ (Mobiistar XQ Dual) ಸ್ಮಾರ್ಟ್‌ಫೋನ್ ನಮ್ಮ ಈ ವಾರದ ಗ್ಯಾಜೆಟ್.

ಈ ಫೋನಿನ ಬೆಲೆಯ ಕಡೆ ಗಮನ ಹರಿಸಿ. ಇದು ಕಡಿಮೆ ಬೆಲೆಯ ಫೋನ್. ಈ ಬೆಲೆಗೆ ಇದು ತಕ್ಕುದಾಗಿದೆಯೇ ಎಂಬುದನ್ನು ನಾವು ವಿಮರ್ಶಿಸಬೇಕಾಗಿದೆ. ರಚನೆ ಮತ್ತು ವಿನ್ಯಾಸ ಚೆನ್ನಾಗಿದೆ. ಇಷ್ಟು ಕಡಿಮೆ ಬೆಲೆಯ ಫೋನ್ ಎಂದು ಅನ್ನಿಸುವುದಿಲ್ಲ. ಬಲಕ್ಕೆ ಆನ್/ಆಫ್ ಬಟನ್ ಮತ್ತು ಸಿಮ್ ಮತ್ತು ಮೆಮೊರಿ ಕಾರ್ಡ್ ಹಾಕುವ ಟ್ರೇ ಇವೆ. ಎಡಗಡೆ ವಾಲ್ಯೂಮ್ ಬಟನ್ ಇದೆ. ಮೇಲೆ 3.5 ಮಿ.ಮೀ. ಇಯರ್‌ಫೋನ್ ಕಿಂಡಿ ಮತ್ತು ಕೆಳಗಡೆ ಮೈಕ್ರೊ ಯುಎಸ್‌ಬಿ ಕಿಂಡಿ ಇವೆ. ಹಿಂದುಗಡೆ ಬಲ ಮೂಲೆಯಲ್ಲಿ ಪ್ರಾಥಮಿಕ ಕ್ಯಾಮೆರಾ ಮತ್ತು ಪಕ್ಕದಲ್ಲಿ ಫ್ಲಾಶ್ ಇದೆ. ಹಿಂದುಗಡೆ ಸ್ವಲ್ಪ ಮೇಲೆ ಮಧ್ಯದಲ್ಲಿ ಬೆರಳಚ್ಚು ಸ್ಕ್ಯಾನರ್ ಇದೆ. ಹಿಂಭಾಗದ ಕವಚ ಸ್ವಲ್ಪ ದೊರಗಾಗಿದೆ. ಅತಿ ನಯವಾಗಿಲ್ಲ. ಆದುದರಿಂದ ಕೈಯಿಂದ ಬೀಳುವ ಭಯವಿಲ್ಲ. ಒಟ್ಟಿನಲ್ಲಿ ರಚನೆ ಮತ್ತು ವಿನ್ಯಾಸ ತೃಪ್ತಿದಾಯಕವಾಗಿದೆ.

ಇದರ ಕೆಲಸದ ವೇಗ ಪರವಾಗಿಲ್ಲ. ಇದರ ಅಂಟುಟು ಬೆಂಚ್‌ಮಾರ್ಕ್ 57,005 ಇದೆ. ಅಂದರೆ ಇದು ವೇಗದ ಫೋನ್ ಅಲ್ಲ. ಸಾಮಾನ್ಯ ಆಟಗಳನ್ನು ಆಡುವ ಅನುಭವ ಪರವಾಗಿಲ್ಲ. ಅತಿ ಶಕ್ತಿಯನ್ನು ಬೇಡುವ ಆಟಗಳನ್ನು ಆಡಲು ಇದು ತಕ್ಕುದಲ್ಲ. ಪರದೆಯಲ್ಲಿ ಐಕಾನ್‌ಗಳನ್ನು ಸರಿಸುವಾಗ ಇದರ ವೇಗ ಕಡಿಮೆ ಎಂಬುದು ಅನುಭವಕ್ಕೆ ಬರುತ್ತದೆ. ಕೆಲವು ಕಿರುತಂತ್ರಾಂಶಗಳು ತೆರೆದುಕೊಳ್ಳಲು ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ. ಹಲವು ಕೆಲಸಗಳನ್ನು ಒಟ್ಟಿಗೆ ಮಾಡಲು ಇದು ಅಷ್ಟು ಉತ್ತಮವಲ್ಲ. ಈ ಫೋನಿನಲ್ಲಿ ಬಳಸಿರುವುದು ಸ್ವಲ್ಪ ಹಳೆಯ ಪ್ರೋಸೆಸರ್ ಎಂಬದು ಕೂಡ ಈ ಅನುಭವಕ್ಕೆ ಕಾರಣವಿರಬಹುದು.

ಪರದೆಯ ರೆಸೊಲೂಶನ್ ಉತ್ತಮವಾಗಿದೆ. ವಿಡಿಯೊ ವೀಕ್ಷಣೆಯ ಅನುಭವ ಪರವಾಗಿಲ್ಲ. ಹೈಡೆಫಿನಿಶನ್ ವಿಡಿಯೊ ಪ್ಲೇ ಆಗುತ್ತದೆ. ಆದರೆ 4k ವಿಡಿಯೊ ಪ್ಲೇ ಆಗುವುದಿಲ್ಲ. ಆಡಿಯೊ ಇಂಜಿನ್ ಒಂದು ಮಟ್ಟಿಗೆ ತೃಪ್ತಿದಾಯಕವಾಗಿದೆ. ಇಯರ್‌ಫೋನ್ ನೀಡಿಲ್ಲ. ನಿಮ್ಮಲ್ಲಿರುವ ಉತ್ತಮ ಇಯರ್‌ಫೋನ್ ಜೋಡಿಸಿದರೆ ತೃಪ್ತಿದಾಯಕವಾದ ಸಂಗೀತ ಆಲಿಸಬಹುದು. ಇದರಲ್ಲಿರುವ ಎಫ್‌ಎಂ ರೇಡಿಯೊದ ಗ್ರಾಹಕ ಶಕ್ತಿ ಚೆನ್ನಾಗಿದೆ. ಮನೆಯ ಒಳಗೆ ಕೂಡ ಬಹುತೇಕ ಕೇಂದ್ರಗಳು ಚೆನ್ನಾಗಿ ಕೇಳುತ್ತವೆ.

ಇದರ ಕ್ಯಾಮೆರಾ ಈ ಫೋನಿಗೆ ನೀಡುವ ಬೆಲೆಗೆ ಹೋಲಿಸಿದರೆ ಚೆನ್ನಾಗಿದೆ ಎಂದೇ ಹೇಳಬಹುದು. ತುಂಬ ಬೆಳಕಿದ್ದಲ್ಲಿ ಮಾತ್ರವಲ್ಲ ಕಡಿಮೆ ಬೆಳಕಿನಲ್ಲೂ ತೃಪ್ತಿದಾಯಕವಾಗಿ ಫೋಟೋ ತೆಗೆಯುತ್ತದೆ. ಆದರೆ ಕ್ಯಾಮೆರಾ ಸ್ವಲ್ಪ ಚಲನೆಯಲ್ಲಿದ್ದರೂ ಕೈ ಸ್ವಲ್ಪ ಅಲುಗಾಡಿದರೂ ಕ್ಯಾಮೆರಾ ಫೋಕಸ್ ಮಾಡಲು ಸ್ವಲ್ಪ ಒದ್ದಾಡುತ್ತದೆ. ಕ್ಯಾಮೆರಾದ ಕಿರುತಂತ್ರಾಂಶದಲ್ಲಿ ಮ್ಯಾನ್ಯುವಲ್ ಮೋಡ್ ಕೂಡ ಇದೆ. ಆದರೆ ಅದು ಪರಿಪೂರ್ಣವಾಗಿಲ್ಲ. ಅದರಲ್ಲಿ ಮ್ಯಾನ್ಯುವಲ್ ಫೋಕಸ್ ಇಲ್ಲ. ಈ ಫೋನಿನ ಹೆಚ್ಚುಗಾರಿಕೆಯಿರುವುದು ಎರಡು ಸ್ವಂತೀ ಕ್ಯಾಮರಗಳಲ್ಲಿ. ಈ ಬೆಲೆಗೆ ದೊರೆಯುವ ಫೋನಿನಲ್ಲಿ ಎರಡು ಸ್ವಂತೀ ಕ್ಯಾಮೆರಾ ಇರುವುದು ಬಹುಶಃ ಇದರಲ್ಲೇ ಇರಬೇಕು. ಸ್ವಂತೀ ತೆಗೆಯಲು ಫ್ಲಾಶ್ ಕೂಡ ಇದೆ. ಇದು 120 ಡಿಗ್ರಿಗಳಷ್ಟು ಅಗಲವಾಗಿ ಸ್ವಂತೀ ತೆಗೆಯಬಲ್ಲುದು. ನಿಮ್ಮ ಸ್ವಂತೀ ಫೋಟೋವನ್ನು ಸುಂದರಗೊಳಿಸಬಹುದು. ಗುಂಪಿನ ಸ್ವಂತೀ ತೆಗೆಯಲು ಇದು ಉತ್ತಮ.

ಇದರಲ್ಲಿ 3000 mAh ಶಕ್ತಿಯ ಬ್ಯಾಟರಿ ಇರುವುದು. ವೇಗದ ಚಾರ್ಜಿಂಗ್ ವ್ಯವಸ್ಥೆಯಿಲ್ಲ. ಬ್ಯಾಟರಿ ಸುಮಾರು ಒಂದು ದಿನ ಬಾಳಿಕೆ ಬರುತ್ತದೆ. ಚಾರ್ಜ್ ಮಾಡುವಾಗ ಫೋನ್ ಬಿಸಿಯಾಗುವುದಿಲ್ಲ.

ಕನ್ನಡದ ತೋರುವಿಕೆ ಸರಿಯಾಗಿದೆ. ಕನ್ನಡದ ಯೂಸರ್ ಇಂಟರ್‌ಫೇಸ್ ಕೂಡ ಇದೆ. ಒಟ್ಟಿನಲ್ಲಿ ಹೇಳುವುದಾದರೆ ನೀಡುವ ಹಣಕ್ಕೆ ನಿಜಕ್ಕೂ ತಕ್ಕುದಾದ ಫೋನ್ ಎಂದು ಹೇಳಬಹುದು.ವಾರದ ಆಪ್ (app): ಬಣ್ಣ ಪತ್ತೆ ಹಚ್ಚಿ

ನೀವು ಗ್ರಾಫಿಕ್ಸ್ ಕ್ಷೇತ್ರದಲ್ಲಿ ಕೆಲಸ ಮಾಡುವವರಾದರೆ ಚಿತ್ರಕ್ಕೆ ಸರಿಯಾದ ಬಣ್ಣ ಬಳಸಲು ಪಡುವ ಶ್ರಮ ಗೊತ್ತಿರಬೇಕು. ಫೋಟೋಶಾಪ್ ನಮೂನೆಯ ತಂತ್ರಾಂಶಗಳಲ್ಲಿ ಬಣ್ಣಗಳನ್ನು ಕೆಂಪು, ಹಸಿರು, ನೀಲಿ ಬಣ್ಣಗಳ ಮಿಶ್ರಣದಿಂದ ಪಡೆಯುವುದು ಒಂದು ವಿಧಾನ. ಫೋಟೋದ ಒಂದು ಭಾಗದಲ್ಲಿರುವ ಬಣ್ಣವನ್ನು ಪತ್ತೆ ಹಚ್ಚಿ ಅದನ್ನು ಇನ್ನೊಂದು ಕಡೆ ಬಳಸಲು ಫೋಟೋಶಾಪ್ ತಂತ್ರಾಂಶದಲ್ಲಿ ಸವಲತ್ತು ಇದೆ. ಆದರೆ ಒಂದು ಗಿಡದ ಎಲೆಯ, ಹೂವಿನ ಬಣ್ಣವನ್ನು ಪತ್ತೆ ಹಚ್ಚಬೇಕಿದ್ದರೆ ಏನು ಮಾಡಬೇಕು? ಅದಕ್ಕಾಗಿ ಈ ಕಿರುತಂತ್ರಾಂಶವನ್ನು ಬಳಸಬಹುದು. ಇದನ್ನು ನೀವು ಗೂಗಲ್‌ ಪ್ಲೇ ಸ್ಟೋರಿನಲ್ಲಿ Color Grab (color detection) ಎಂದು ಹುಡುಕಿ ಅಥವಾ http://bit.ly/gadgetloka331 ಜಾಲತಾಣಕ್ಕೆ ಭೇಟಿ ನೀಡಿ ಪಡೆಯಬಹುದು. ನಿಜಕ್ಕೂ ಉಪಯುಕ್ತ ತಂತ್ರಾಂಶ. ಹುಡುಗಿಯರೇ, ನೀವು ಕೊಳ್ಳುವ ಲಿಪ್‌ಸ್ಟಿಕ್ ಯಾವ ಬಣ್ಣದ್ದು ಎಂದು ಪತ್ತೆ ಹಚ್ಚಲೂ ಇದನ್ನು ಬಳಸಬಹುದು!

ಗ್ಯಾಜೆಟ್ ಪದ

Data entry = ದತ್ತಾಂಶ ನಮೂದನೆ. ದತ್ತಸಂಚಯಕ್ಕೆ (database) ಮಾಹಿತಿಯನ್ನು ಸೇರಿಸುವ ಪ್ರಕ್ರಿಯೆ. ಉದಾಹರಣೆಗೆ ಒಂದು ಶಾಲೆಯಲ್ಲಿರುವ ಎಲ್ಲ ವಿದ್ಯಾರ್ಥಿಗಳ ಮಾಹಿತಿಯನ್ನು ಸಂಗ್ರಹಿಸಿಡುವ ದತ್ತಸಂಚಯವಿದೆ ಎಂದಿಟ್ಟುಕೊಳ್ಳಿ. ಅದಕ್ಕೆ ಒಬ್ಬ ಹೊಸ ವಿದ್ಯಾರ್ಥಿಯ ಎಲ್ಲ ವಿವರಗಳನ್ನು ಸೇರಿಸುವ ಪ್ರಕ್ರಿಯೆ.

ಗ್ಯಾಜೆಟ್ ಸುದ್ದಿ: ವಿದ್ಯುತ್ ವಾಹನ ಚಾರ್ಜಿಂಗ್ ಗ್ರಿಡ್ ಪ್ರಾರಂಭ

ಬೆಂಗಳೂರು ಮೂಲದ ಏಥರ್ ಎನರ್ಜಿ ಕಂಪನಿ ವಿದ್ಯುತ್ ಸ್ಕೂಟರ್ ತಯಾರಿಸುತ್ತಿದೆ. ವಿದ್ಯುತ್ ಸ್ಕೂಟರ್ ಇರಲಿ, ಕಾರು ಇರಲಿ, ಇವುಗಳ ಒಂದು ಪ್ರಮುಖ ಸಮಸ್ಯೆ ಎಂದರೆ ಇವುಗಳನ್ನು ಚಾರ್ಜ್ ಮಾಡಲು ವಿದ್ಯುತ್ ಪಾಯಿಂಟ್ ಹುಡುಕಬೇಕಾಗುತ್ತದೆ. ‌ಈಗ ಏಥರ್ ಎನರ್ಜಿ ಏಥರ್ ಗ್ರಿಡ್ ಎಂಬ ಹೆಸರಿನಲ್ಲಿ ಅಲ್ಲಲ್ಲಿ ವಿದ್ಯುತ್ ವಾಹನಗಳನ್ನು ಚಾರ್ಜ್ ಮಾಡಲು ಪಾಯಿಂಟ್‌ಗಳನ್ನು ಸ್ಥಾಪಿಸುತ್ತಿದೆ. ಮೊದಲಿಗೆ ಬೆಂಗಳೂರಿನಲ್ಲಿ ಸುಮಾರು 40 ಸ್ಥಳಗಳಲ್ಲಿ ಇವುಗಳನ್ನು ಸ್ಥಾಪಿಸುತ್ತಿದೆ. ನಂತರ ಇಡಿಯ ದೇಶಕ್ಕೆ ವಿಸ್ತರಿಸುವುದು ಅವರ ಆಶಯ. ಈ ಪಾಯಿಂಟ್‌ಗಳನ್ನು ಮುಖ್ಯವಾಗಿ ರೆಸ್ಟೊರೆಂಟ್, ಮಾಲ್‌ನಂತಹ ಸ್ಥಳಗಳಲ್ಲಿ ಸ್ಥಾಪಿಸಲಾಗುತ್ತಿದೆ. ವಾಹನವನ್ನು ಚಾರ್ಜಿಂಗ್‌ಗೆ ಜೋಡಿಸಿ ವ್ಯಾಪಾರ ಮುಗಿಸಿ ಅಥವಾ ತಿಂಡಿ ತಿಂದು ಬರುವಾಗ ಅದು ಚಾರ್ಜ್ ಆಗಿರುತ್ತದೆ.

ಗ್ಯಾಜೆಟ್ ಸಲಹೆ

ಚಂದನ ಅವರ ಪ್ರಶ್ನೆ: ವನ್‌ಪ್ಲಸ್ 6 ಮತ್ತು ವನ್‌ಪ್ಲಸ್ 5T ಇವುಗಳಲ್ಲಿ ಯಾವುದು ಉತ್ತಮ?

ಉ: ವನ್‌ಪ್ಲಸ್ 6. ನಿಮ್ಮಲ್ಲಿ ಈಗಾಗಲೇ ವನ್‌ಪ್ಲಸ್ 5T ಇದ್ದಲ್ಲಿ ನೀವು ವನ್‌ಪ್ಲಸ್ 6 ಕೊಳ್ಳಬೇಕಾಗಿಲ್ಲ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry