‘ವಿಕ್ಟೋರಿಯಾ’ದಲ್ಲಿ ಭರ್ಜರಿ ಮೀನು ಬೇಟೆ

7
ಡಂಬಳ ಗ್ರಾಮದಲ್ಲೀಗ ಮೀನು ಶಿಕಾರಿಯ ಸುಗ್ಗಿ; ಖರೀದಿಗೆ ಮುಗಿಬಿದ್ದ ಗ್ರಾಹಕರು

‘ವಿಕ್ಟೋರಿಯಾ’ದಲ್ಲಿ ಭರ್ಜರಿ ಮೀನು ಬೇಟೆ

Published:
Updated:
‘ವಿಕ್ಟೋರಿಯಾ’ದಲ್ಲಿ ಭರ್ಜರಿ ಮೀನು ಬೇಟೆ

ಡಂಬಳ: ಮೀನು ಬೇಕೇ ಮೀನು, ತಾಜಾಕರೆ ಮೀನು...! ಹಾಗಾದರೆ ಬನ್ನಿ ಡಂಬಳದ ವಿಕ್ಟೋರಿಯಾ ಕೆರೆ ದಂಡೆಗೆ. ಮುಂಗಾರು ಮಳೆ ಆರಂಭವಾದ ಬೆನ್ನಲ್ಲೇ ಇಲ್ಲಿನ ಕೆರೆಯಲ್ಲಿ ಮೀನು ಶಿಕಾರಿ ಜೋರಾಗಿ ನಡೆಯುತ್ತಿದೆ.

ಕಳೆದ ವರ್ಷ ಜೂನ್‌ ತಿಂಗಳಲ್ಲಿ ಈ ಕೆರೆಗೆ ಬಿಡಲಾಗಿದ್ದ 12 ಲಕ್ಷ ಮೀನು ಮರಿಗಳು ಈ ದೊಡ್ಡದಾಗಿದ್ದು, ಪ್ರತಿ ಮೀನು ಸರಾಸರಿ 2ರಿಂದ 3 ಕೆ.ಜಿ ತೂಗುತ್ತಿದೆ. ಗುತ್ತಿಗೆದಾರರು, ಸ್ಥಳೀಯ ಮೀನುಗಾರರ ನೆರವಿನಿಂದ ಇವುಗಳನ್ನು ಹಿಡಿದು ದಡದಲ್ಲೇ ಮಾರಾಟ ಮಾಡುತ್ತಿದ್ದಾರೆ.

ಕಾಟ್ಲಾ, ಕನ್ನಡಿ, ಮೀರುಗಲ್‌, ರೇವು ಸೇರಿ ವಿವಿಧ ತಳಿಯ ಕೆರೆಯ ಮೀನಿನ ರುಚಿ ಸವಿಯಲು ಬಯಸುವವರು, ಮನೆ

ಯಲ್ಲಿ ಮಸಾಲೆ ಅರೆದಿಟ್ಟು, ವಿಕ್ಟೋರಿಯಾ ಕೆರೆಯ ದಂಡೆಗೆ ಬಂದರೆ ಸಾಕು. ಆದರೆ, ಮೀನಿಗಾಗಿ ಕೆಲವು ಗಂಟೆಗಳು ಕಾಯುವುದು ಅನಿವಾರ್ಯ. ಮೀನು ಹಿಡಿಯಲು ಕೆರೆಗೆ ಇಳಿದವರು ಎಷ್ಟು ಗಂಟೆಗೆ ಮರಳುತ್ತಾರೆ ಎನ್ನುವುದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಬಂದ ಕೂಡಲೇ ತಾಜಾ ಮೀನು ಖರೀದಿಸಬಹುದು. ಸದ್ಯ ವಾರದಲ್ಲಿ ಸರಾಸರಿ ನಾಲ್ಕು ದಿನ ಕೆರೆಯಲ್ಲಿ ಮೀನು ಬೇಟೆ ನಡೆಯುತ್ತದೆ. ಈ ದಿನಗಳಲ್ಲಿ ಕೆರೆ ದಂಡೆ ಮೇಲೆ ಮತ್ಸ್ಯಪ್ರಿಯರು ಕಾಯುತ್ತಾ ನಿಲ್ಲುವ ದೃಶ್ಯ ಸಾಮಾನ್ಯ. ಮೀನು ಬೇಕಿದ್ದರೆ ಮೀನುಗಾರರ ಬಳಿ ಹಣ ನೀಡಿ ಮುಂಗಡ ಕಾಯ್ದಿರಿಸಬಹುದು.

‘ಒಮ್ಮೆ ಕೆರೆಗಿಳಿದರೆ 80ರಿಂದ 130 ಕೆ.ಜಿಯಷ್ಟು ಮೀನು ಸಿಗುತ್ತದೆ. ಇಲ್ಲಿಗೆ ಸಮೀಪದ ಡೋಣಿ, ಡೋಣಿತಾಂಡ, ಗದಗ, ಮಹಾಲಿಂಗಪುರ, ಮುಂಡರಗಿ, ಮೇವುಂಡಿ, ದಿಂಡೂರ ಮುಂತಾದ ಗ್ರಾಮಗಳಿಂದ ಗ್ರಾಹಕರು ಬರುತ್ತಾರೆ. ಸ್ಥಳೀಯರು ಚೌಕಾಸಿ ಮಾಡಿ ಖರೀದಿಸುತ್ತಾರೆ. ನಿಗದಿತ ದರ ಇಲ್ಲ’ ಎನ್ನುತ್ತಾರೆ ಮೀನುಗಾರ ಫಕ್ಕೀರಪ್ಪ ಬಿಸಾಟಿ.

‘ಕೆರೆಯಲ್ಲಿ ಸಂಜೆ ಬಲೆ ಹಾಕುತ್ತೇವೆ. ಬೆಳಿಗ್ಗೆ ಆರು ಗಂಟೆಗೆ ಕೆರೆಗೆ ಇಳಿದು, ಬಲೆಯಲ್ಲಿ ಸಿಲುಕಿರುವ ಮೀನುಗಳನ್ನು ಬಿಡಿಸಿಕೊಂಡು ಬರುತ್ತೇವೆ. ಕೆರೆಯಲ್ಲಿ ಮುಳ್ಳಿನ ಪೊದೆಗಳು ಬೆಳೆದಿವೆ. ಇದರ ನಡುವಿನಿಂದ ಮುನ್ನುಗ್ಗಿ ಮೀನು ಹಿಡಿಯುವುದು ಬಹಳ ಕಷ್ಟದ ಕೆಲಸ. ಗಾಳಿ ತುಂಬಿರುವ ಟ್ಯೂಬ್‌ಗಳನ್ನು ಬಳಸಿ, ನೀರಿನಲ್ಲಿ ತೇಲುತ್ತಾ ಬೆಲೆಯಿಂದ ಮೀನು ಬಿಡಿಸಿಕೊಳ್ಳುತ್ತೇವೆ’ ಎಂದು ಮೀನು ಶಿಕಾರಿಯ ಕಷ್ಟಗಳನ್ನು ಫಕ್ಕೀರಪ್ಪ ಆನಿ, ಮಲ್ಲಪ್ಪ ಒಂಟೇಲಬೋವಿ, ಈಶಪ್ಪ ಕರ್ಣಿ, ನಾಗಪ್ಪ ಹುಗಬೋವಿ ವಿವರಿಸಿದರು.

‘ಡಂಬಳದ ಕೆರೆ ಮೀನು ರುಚಿಯಾಗಿದೆ. ವಾರದಲ್ಲಿ ಎರಡು ದಿನ ಇಲ್ಲಿಂದ ಮೀನು ಖರೀದಿಸಿಕೊಂಡು ಹೋಗುತ್ತೇವೆ’ ಎಂದು ಮೀನು ಖರೀದಿಗೆ ಬಂದಿದ್ದ ಗದಗ ತಾಲ್ಲೂಕಿನ ಮಹಾಲಿಂಗಪುರ ಗ್ರಾಮದ ಬಸವರಾಜ ಲಮಾಣಿ, ಕೃಷ್ಣ ಲಮಾಣಿ, ಮಂಜುನಾಥ ರನ್ನವಾರ, ಜಂದಿಸಾಬ್ ತಾಂಬೋಟಿ ಹೇಳಿದರು.

**

ತುಂಗಭದ್ರಾ ನದಿ ನೀರಿನಿಂದ ವಿಕ್ಟೋರಿಯಾ ಕೆರೆ ತುಂಬಿಸಿದ್ದರ ಫಲವಾಗಿ, ಇಲ್ಲಿ ಮೀನು ಕೃಷಿ ಸಾಧ್ಯವಾಗಿದೆ. ಇದು ಸ್ಥಳೀಯರಿಗೆ ಉದ್ಯೋಗಾವಕಾಶ ಒದಗಿಸಿದೆ

ನಾಗಪ್ಪ ಹುಗಬೋವಿ, ಫಕ್ಕೀರಪ್ಪ ಬಿಸಾಟಿ ಸ್ಥಳೀಯ ಮೀನುಗಾರರು 

ಲಕ್ಷ್ಮಣ ಎಚ್. ದೊಡ್ಡಮನಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry