ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮಗೆಂತಹ ಸಾಹಿತಿಗಳು ಬೇಕು?

ಅಕ್ಷರ ಗಾತ್ರ

ಚುನಾವಣೆ ಮುಗಿದು ಈಗಷ್ಟೇ ಹೊಸ ಸರ್ಕಾರ ರಚನೆಯಾಗಿದೆ. ಚುನಾವಣೆಯ ಅವಧಿಯಲ್ಲಿ ನಾಡಿನ ನಾನಾ ಸಾಹಿತಿಗಳು ತಮತಮಗೆ ತೋಚಿದ ಪಕ್ಷಗಳನ್ನು ಬೆಂಬಲಿಸಿ ಪ್ರಚಾರ ಮಾಡಿದ್ದಾರೆ (ಮುಂಬರುವ ಲೋಕಸಭಾ ಚುನಾವಣೆಯಲ್ಲೂ ಅವರು ಇದನ್ನು ಮುಂದುವರಿಸಲಿದ್ದಾರೆ). ಇದು ಅವರ ನಂಬಿಕೆ, ಸಿದ್ಧಾಂತಕ್ಕೆ ಸಂಬಂಧಿಸಿದ ವಿಚಾರವಾದ ಕಾರಣ ಇದನ್ನು ಯಾರೂ ಆಕ್ಷೇಪಿಸಲಾರರು. ಆದರೆ ಚುನಾವಣೆಯ ನಂತರ ಸಾಹಿತಿಗಳ ಜವಾಬ್ದಾರಿ ಮುಗಿಯುವುದಿಲ್ಲ, ಬದಲಾಗಿ ಇಮ್ಮಡಿಸುತ್ತದೆ. ಚುನಾವಣೆ ಆದ ಮೇಲೆ ಸಾಹಿತಿಯಾದವನು ವಿರೋಧ ಪಕ್ಷದ ನೆಲೆಯಲ್ಲಿ ನಿಂತು ತಾನು ಬೆಂಬಲಿಸಿದ ಪಕ್ಷವನ್ನು ತೀಕ್ಷ್ಣ ವಿಮರ್ಶೆಗೆ ಒಳಪಡಿಸಬೇಕಾಗುತ್ತದೆ.

ಚುನಾವಣಾ ಫಲಿತಾಂಶ ಬಂದ ಮೇಲೆ ಎಲ್ಲ ಪಕ್ಷಗಳಲ್ಲೂ ಕಾಣಿಸಿಕೊಂಡ ಕುದುರೆ ವ್ಯಾಪಾರ, ರೆಸಾರ್ಟ್ ರಾಜಕಾರಣ, ಅಧಿಕಾರ ದಾಹಗಳನ್ನು ಆಯಾ ಪಕ್ಷವನ್ನು ಬೆಂಬಲಿಸಿದ ಒಬ್ಬನೇ ಒಬ್ಬ ಸಾಹಿತಿಯೂ ಖಂಡಿಸದಿರುವುದು ನಿಜಕ್ಕೂ ಬೇಸರದ ವಿಷಯ. ವಿರೋಧ ಪಕ್ಷದಲ್ಲಿ ಕುಳಿತೂ ಒಂದು ಅರ್ಥಪೂರ್ಣ ಪ್ರಜಾತಂತ್ರವನ್ನು ರಚಿಸಬಹುದು ಎಂಬ ಕಿವಿಮಾತನ್ನೂ ಕೊನೆಯಪಕ್ಷ ಯಾವ ಸಾಹಿತಿಯೂ ಹೇಳಲಿಲ್ಲ. ಒಂದು ವೇಳೆ ಸರ್ಕಾರ ಚೆನ್ನಾಗಿಯೇ ಕೆಲಸ ಮಾಡುತ್ತಿದ್ದರೂ ಅದನ್ನೆಲ್ಲ ಹೊಗಳದೆ  ಆಡಳಿತಯಂತ್ರ ಐದು ವರ್ಷಗಳ ಕಾಲ ದಾರಿ ತಪ್ಪದಂತೆ ನಿಗಾ ವಹಿಸುವುದಷ್ಟೇ ಪ್ರಜ್ಞಾವಂತ ಸಾಹಿತಿಯಾದವನ ಕರ್ತವ್ಯವಾಗಿದೆ.

ವಿಶ್ವಾಸಮತ ಯಾಚನೆಯ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ವಿಪ್ ಜಾರಿ ಮಾಡುವುದೇನೋ ಸರಿ. ಆದರೆ ಕುರಿಗಳನ್ನು ಹಿಡಿದಿಟ್ಟುಕೊಳ್ಳುವಂತೆ ಶಾಸಕರನ್ನು ರೆಸಾರ್ಟ್‌ಗಳಲ್ಲಿ ಕೂಡಿಡುವ ದಬ್ಬಾಳಿಕೆಗೆ ಯಾವ ನೈತಿಕ ಸಮರ್ಥನೆ ಇದೆ ಅಥವಾ ಯಾವ ಸಾಂವಿಧಾನಿಕ ಮಾನ್ಯತೆ ಇದೆ? ಶಾಸಕ ಸ್ಥಾನವನ್ನು ಹಣಕ್ಕೆ ಕೊಳ್ಳುವವರಿಂದ ಅಥವಾ ಹಣಕ್ಕೆ ಮಾರಿಕೊಳ್ಳುವವರಿಂದ ಇನ್ನಾವ ಉತ್ತಮ ಆಡಳಿತ ನಿರೀಕ್ಷಿಸಬಹುದು? ಇವರು ಅಧಿಕಾರ ವಹಿಸಿಕೊಳ್ಳಲು ಮೇಲಾಟ ನಡೆಸುತ್ತಿರುವುದು ಜನಪರ ಕೆಲಸಗಳನ್ನು ಮಾಡಲಲ್ಲ (ಆ ಕೆಲಸವನ್ನು ವಿರೋಧ ಪಕ್ಷದಲ್ಲಿ ಕುಳಿತೂ ಮಾಡಬಹುದು), ಈ ಭ್ರಷ್ಟ ವ್ಯವಸ್ಥೆಯ ಸಂಪೂರ್ಣ ಲಾಭವನ್ನು ದೋಚಿಕೊಳ್ಳಲು ಎಂಬ ಪ್ರಾಥಮಿಕ ತಿಳಿವಳಿಕೆಯೂ ನಮ್ಮ ಸಾಹಿತಿಗಳಿಗೆ ಇರಲಿಲ್ಲವೇ?

ಕಳೆದ ಲೋಕಸಭಾ ಚುನಾವಣೆಯಲ್ಲಿ ‘ಜಾತ್ಯತೀತ’ ಪಕ್ಷಗಳನ್ನು ಬೆಂಬಲಿಸಿ ಪ್ರಚಾರಕಾರ್ಯದಲ್ಲಿ ತೊಡಗಿದ್ದ ಸಾಹಿತಿಯೊಬ್ಬರು ವಿರಾಮದ ವೇಳೆಯಲ್ಲಿ ಸಂಗಡಿಗರೊಂದಿಗೆ ಮಾತನಾಡುತ್ತ ‘ನಮ್ಮ ಮುಖ ನೋಡಿ ಯಾರು ವೋಟು ಹಾಕುತ್ತಾರೆ?’ ಎಂದು ಹಾಸ್ಯಭರಿತ ವಿಷಾದದಿಂದ ಹೇಳಿದ್ದರು. ನಿಜ, ಇವರ ಮುಖ ನೋಡಿ ವೋಟುಗಳು ಬೀಳದಿರಬಹುದು. ಆದರೆ ಒಂದು ರಾಜಕೀಯ ಪಕ್ಷವನ್ನು ಬೆಂಬಲಿಸುವ ಮಟ್ಟಿಗಷ್ಟೇ ತಮ್ಮ ರಾಜಕೀಯ ಪ್ರಜ್ಞೆಯನ್ನು ಸೀಮಿತಗೊಳಿಸುವ ಮತ್ತು ಅಧಿಕಾರಾರೂಢ ಪಕ್ಷವನ್ನು ತೀಕ್ಷ್ಣ ವಿಮರ್ಶೆಗೆ ಒಳಪಡಿಸದಿರುವ ಸಾಹಿತಿಗಳ ಬಗ್ಗೆ ಮತದಾರ ಪೂರ್ತಿ ವಿಶ್ವಾಸ ಕಳೆದುಕೊಳ್ಳುತ್ತಾನೆ ಮತ್ತು ಸಾಹಿತಿಗಳು ಈಗಾಗಲೇ ಆ ವಿಶ್ವಾಸ ಕಳೆದುಕೊಂಡಿದ್ದಾರೆ.

ಹಿಂದೆಲ್ಲ ಕುವೆಂಪು, ಬೇಂದ್ರೆಯಂತಹ ಕವಿಗಳ ಕವನವಾಚನವನ್ನೋ ಅಥವಾ ಜಿ.ಪಿ. ರಾಜರತ್ನಂ, ಶಿವರಾಮ ಕಾರಂತ ಮುಂತಾದವರ ಉಪನ್ಯಾಸವನ್ನೋ ಏರ್ಪಡಿಸಿದರೆ ಸಭಾಂಗಣದಲ್ಲಿ ಕೇಳುಗರು ಕಿಕ್ಕಿರಿದು ತುಂಬಿರುತ್ತಿದ್ದರು. ಜನರನ್ನು ನಿಯಂತ್ರಿಸಲು ಸಂಘಟಕರಿಗೂ ಕಷ್ಟವಾಗುತ್ತಿತ್ತು. ಆದರೆ ಇಂದು ಸಾಹಿತಿಗಳ ಸಭೆಗಳು ಖಾಲಿ ಕುರ್ಚಿಗಳಿಂದ ಭಣಗುಟ್ಟುತ್ತಿರುತ್ತವೆ. ಆದರೆ ಸಾಹಿತಿಗಳು ಮಾತ್ರ ಓದುಗನ ಈ ನಿರ್ಲಕ್ಷ್ಯಕ್ಕೆ ಕಾರಣವೇನೆಂದು ಯೋಚಿಸದೆ ‘ಪ್ರಪಂಚವೇ ಸರಿಯಿಲ್ಲ’ ಎನ್ನುತ್ತಿದ್ದಾರೆ.

‘ಸೋಷಿಯಲ್ ಮೀಡಿಯಾ ಬಂದ ಮೇಲೆ ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ದೊರೆತಿರುವುದರಿಂದ ಅಸಹಿಷ್ಣುತೆ ಹೆಚ್ಚಿದೆ’ ಎಂಬಿತ್ಯಾದಿ ಭಂಡ ಸಮರ್ಥನೆ ನೀಡುತ್ತಿದ್ದಾರೆ. ಇದು ಅತ್ಯಂತ ದುರದೃಷ್ಟಕರ. ತಮ್ಮನ್ನೇ ತಾವು ವಿಮರ್ಶಿಸಿಕೊಳ್ಳದವರು ತಾವು ನಂಬಿದ ಸಿದ್ಧಾಂತವನ್ನಾಗಲೀ ಅಥವಾ ಆ ಸಿದ್ಧಾಂತವನ್ನು ಸಾಕಾರಗೊಳಿಸಬಲ್ಲ ಸರ್ಕಾರವನ್ನಾಗಲೀ ವಿಮರ್ಶಿಸಬಲ್ಲರೇ?

ತಾನು ಬೆಂಬಲಿಸುವ ರಾಜಕಾರಣಿಯಿಂದಾಗಲೀ ಅಥವಾ ತಾನು ನೆಚ್ಚಿಕೊಂಡಿರುವ ಓದುಗನಿಂದಾಗಲೀ ತನಗೆ ಮೂರು ಕಾಸಿನ ಬೆಲೆ ಸಿಗುತ್ತಿಲ್ಲ ಎಂದು ಅರಿತಿರುವ ಕೆಲವು ಸಾಹಿತಿಗಳು ಹುಸಿ ಕೀರ್ತಿಯನ್ನಾದರೂ ಸಂಪಾದಿಸಿಕೊಳ್ಳಬೇಕೆಂದು ಸರ್ಕಾರಿ ಇಲ್ಲವೇ ಖಾಸಗಿ ಪ್ರಶಸ್ತಿಯ ‘ಲಾಬಿ’ಗೆ ಇಳಿಯುವುದುಂಟು.

ಪ್ರತಿವರ್ಷ ಘೋಷಿಸುವ ನಾನಾ ಪ್ರಶಸ್ತಿಗಳಿಗಾಗಿ ಲೇಖಕರು ಅರ್ಜಿ ಹಾಕಿಕೊಳ್ಳಬೇಕು ಎಂಬ ಸರ್ಕಾರದ ನಿಯಮಾವಳಿಯೇ ಮೂರ್ಖತನದ್ದಾಗಿದೆ. ಹೀಗೆ ಅರ್ಜಿ ಹಾಕಿಕೊಂಡು ಪ್ರಶಸ್ತಿ ಪಡೆವ ಸಾಹಿತಿಗಳನ್ನು ‘ಪ್ರಶಸ್ತಿ ಪುರಸ್ಕೃತರು’ ಎನ್ನುವುದಕ್ಕಿಂತ ‘ಪ್ರಶಸ್ತಿಯ ಫಲಾನುಭವಿಗಳು’ ಎಂಬ ಪ್ರವರ್ಗಕ್ಕೆ ಸೇರಿಸುವುದು ಸೂಕ್ತವೆಂದು ತೋರುತ್ತದೆ. ಸಾಲವನ್ನೋ ಅಥವಾ ಉದ್ಯೋಗವನ್ನೋ ಬಯಸಿ ಅರ್ಜಿ ಹಾಕಿಕೊಳ್ಳುವುದು ಸರಿ. ಆದರೆ ತನಗೆ ಪ್ರಶಸ್ತಿ, ಬಿನ್ನವತ್ತಳೆ ನೀಡಿ ಎಂದು ಮಾನವಂತನಾದ ಯಾವನೂ ಮನವಿ ಸಲ್ಲಿಸುವುದಿಲ್ಲ. ಆದರೆ ಇಂದು ಸಾಹಿತಿಗಳು ಮನವಿ ಸಲ್ಲಿಸುವುದಷ್ಟೇ ಅಲ್ಲ ಯಾರನ್ನು ಹಿಡಿದು ಹೇಗೆ ತನ್ನ ಕೆಲಸ ಮಾಡಿಸಿಕೊಳ್ಳಬಹುದು ಎಂಬ ಕುಟಿಲ ಮಾರ್ಗೋಪಾಯಗಳನ್ನು ಚೆನ್ನಾಗಿ ಕರಗತ ಮಾಡಿಕೊಂಡಿದ್ದಾರೆ.

ತಮ್ಮ ಪ್ರತಿಭೆ ಮಾತ್ರದಿಂದ ಅಧಿಕಾರ ರಾಜಕಾರಣಕ್ಕಿಂತಲೂ ಮಿಗಿಲಿನ ಘನತೆ ಸಂಪಾದಿಸಿಕೊಂಡಿದ್ದ ಸಾಹಿತಿ, ಕಲಾವಿದರು ನಮ್ಮಲ್ಲುಂಟು. ಅಧಿಕಾರ ರಾಜಕಾರಣದಿಂದ ಅಂತರ ಕಾಯ್ದುಕೊಳ್ಳುವ ಮೂಲಕ ಆ ಘನತೆಯನ್ನು ಚಿರಸ್ಥಾಯಿಯಾಗಿಸಿದ ಡಿವಿಜಿ, ಕುವೆಂಪು, ಕಾರಂತ, ತೇಜಸ್ವಿ, ರಾಜ್‌ಕುಮಾರ್‌ ಮುಂತಾದ ಸಾಹಿತಿ-ಕಲಾವಿದರ ಪರಂಪರೆ ನಮ್ಮಲ್ಲುಂಟು.

ಅಧಿಕಾರ ರಾಜಕಾರಣವೇ ವ್ಯಕ್ತಿಬದುಕಿನ ಪರಮೋಚ್ಚ ಸಾಧನೆ ಎಂಬ ಭ್ರಮೆ ಇಂದು ಎಲ್ಲ ಕ್ಷೇತ್ರಗಳಲ್ಲೂ ವ್ಯಾಪಿಸಿದೆ. ಕ್ರೀಡಾಪಟುಗಳಿಂದ ಹಿಡಿದು, ಉದ್ಯಮಿಗಳು, ಕಲಾವಿದರು ಮತ್ತು ಮಠಾಧಿಪತಿಗಳವರೆಗೆ ಎಲ್ಲರೂ ತಮ್ಮ ತಮ್ಮ ಕ್ಷೇತ್ರ ಬಿಟ್ಟು ಅಧಿಕಾರ ರಾಜಕಾರಣದಲ್ಲಿ ತಮ್ಮ ಅಸ್ಮಿತೆ ಕಂಡುಕೊಳ್ಳಲು ಮುಗಿ ಬೀಳುತ್ತಿದ್ದಾರೆ. ಇಂದು ಈ ಭ್ರಮೆಯನ್ನು ಕಳಚುವ ಕೆಲಸ ಮುಖ್ಯವಾಗಿ ಸಾಹಿತಿಗಳಿಂದ ಆಗಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT