ಕಟ್ಟಡದಿಂದ ಬಿದ್ದು ಮಗು ಸಾವು

7

ಕಟ್ಟಡದಿಂದ ಬಿದ್ದು ಮಗು ಸಾವು

Published:
Updated:

ಮಂಗಳೂರು: ಇಲ್ಲಿನ ಶಕ್ತಿನಗರದಲ್ಲಿ ಬುಧವಾರ ಬೆಳಿಗ್ಗೆ ಬಹುಮಹಡಿ‌ ವಸತಿ ಸಮುಚ್ಛಯವೊಂದರ ಎಂಟನೇ ಮಹಡಿಯಿಂದ ಇಣುಕುವಾಗ ಕೆಳಕ್ಕೆ ಬಿದ್ದು ಐದೂವರೆ ವರ್ಷದ ಬಾಲಕಿ ಮೃತಪಟ್ಟಿದ್ದಾಳೆ.

ವಿಲ್ಸನ್ ಸೆಬಾಸ್ಟಿಯನ್ ಡಿಸೋಜ ಮತ್ತು ಅಲಿತಾ ಡಿಸೋಜ ದಂಪತಿಯ ಮಗಳು ಶಾನಿಲ್ ಸೆಬಾಸ್ಟಿಯನ್ ಡಿಸೋಜ ಮೃತ ಬಾಲಕಿ. ವಿಲ್ಸನ್ ಶಾರ್ಜಾದಲ್ಲಿ ಉದ್ಯೋದಲ್ಲಿದ್ದಾರೆ. ತಾಯಿ ಮತ್ತು ಮಗಳು ಮಂಗಳೂರಿನ ಶಕ್ತಿನಗರದ ಕ್ಲಾಸಿಕ್ ಸಫಾಯರ್ ಅಪಾರ್ಟ್‌ಮೆಂಟ್‌ನಲ್ಲಿ ಎಂಟನೇ ಮಹಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಬುಧವಾರ ಬೆಳಿಗ್ಗೆ 8.45ರ ಸುಮಾರಿಗೆ ಅಲಿತಾ ಅಗತ್ಯ ವಸ್ತುಗಳನ್ನು ತರಲು ಕೆಳಕ್ಕೆ ಬಂದಿದ್ದರು. ಆಗ ಮಲಗುವ ಕೋಣೆಯ ಬಾಲ್ಕನಿಗೆ ಬಂದ ಶಾನಿಲ್ ಅಲ್ಲಿನ ಗಾಜಿನ ಕಿಟಕಿಗಳನ್ನು ತೆರೆದು ಇಣುಕಿ ಕೆಳಕ್ಕೆ ನೋಡಲು ಯತ್ನಿಸಿದ್ದಾಳೆ.

ಆಯತಪ್ಪಿ ಕೆಳಕ್ಕೆ ಜಾರಿದ ಮಗು ಎಂಟನೇ ಮಹಡಿಯಿಂದ ಎರಡನೇ ಮಹಡಿಯಲ್ಲಿನ ವರಾಂಡದಲ್ಲಿನ ಖಾಲಿ ಜಾಗಕ್ಕೆ ಬಂದು ಬಿದ್ದಿತ್ತು ಎಂದು ಕಂಕನಾಡಿ‌ ನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಮಗುವಿನ ತಲೆ, ಎದೆ ಸೇರಿದಂತೆ ಹಲವು ಕಡೆಗಳಲ್ಲಿ ಗಂಭೀರ ಸ್ವರೂಪದ ಗಾಯಗಳಾಗಿದ್ದವು. ಚಿಕಿತ್ಸೆಗಾಗಿ ಕೆಎಂಸಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸಂಜೆ 5 ಗಂಟೆಗೆ ಮೃತಪಟ್ಟಿದೆ. ಅಪಾರ್ಟ್ ಮೆಂಟ್ ಮಾಲೀಕರು, ಬಾಡಿಗೆಗೆ ನೀಡಿದ್ದ ಮಧ್ಯವರ್ತಿ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry