ಐದು ಗಣಿಗಳ ಗುತ್ತಿಗೆ ಅಮಾನತು

7

ಐದು ಗಣಿಗಳ ಗುತ್ತಿಗೆ ಅಮಾನತು

Published:
Updated:
ಐದು ಗಣಿಗಳ ಗುತ್ತಿಗೆ ಅಮಾನತು

ಬೆಂಗಳೂರು: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಸುರಕ್ಷಾ ವಲಯದೊಳಗಿನ ಐದು ಗಣಿಗಳ ಗುತ್ತಿಗೆಯನ್ನು ಗಣಿ ಹಾಗೂ ಭೂವಿಜ್ಞಾನ ಇಲಾಖೆ ಅಮಾನತುಗೊಳಿಸಿದೆ. 10 ಗಣಿಗಳ ಮಾಲೀಕರಿಗೆ ನೋಟಿಸ್‌ ನೀಡಲು ಸಿದ್ಧತೆ ನಡೆಸಿದೆ. ಈ ಮೂಲಕ, ಪರಿಸರ ‍ಪ್ರೇಮಿಗಳ ಹೋರಾಟಕ್ಕೆ ಕೊನೆಗೂ ಸ್ಪಂದಿಸಿದೆ.

‘ಉದ್ಯಾನದ ರಾಗಿಹಳ್ಳಿ ಬಳಿ ನಿಯಮಗಳನ್ನು ಗಾಳಿಗೆ ತೂರಿ ಕಲ್ಲು ಗಣಿಗಾರಿಕೆಗೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ ವನ್ಯಜೀವಿಗಳಿಗೆ ತೊಂದರೆ ಉಂಟಾಗುತ್ತಿದೆ’ ಎಂದು ‘ವೃಕ್ಷಾ ಪ್ರತಿಷ್ಠಾನ’ವು ಕೇಂದ್ರ ಪರಿಸರ ಸಚಿವ ಡಾ. ಹರ್ಷವರ್ಧನ ಅವರಿಗೆ ಇತ್ತೀಚೆಗೆ ದೂರು ಸಲ್ಲಿಸಿತ್ತು. ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿ ಚೇಂಜ್‌ ಡಾಟ್‌ ಆರ್ಗ್‌ ವೆಬ್‌ಸೈಟ್‌ನಲ್ಲಿ (www.change.org) ಅಭಿಯಾನ ನಡೆದಿತ್ತು. ‘ಗಣಿಗಾರಿಕೆಯಿಂದ ಮಾನವ–ಪ್ರಾಣಿ ಸಂಘರ್ಷ ಹೆಚ್ಚಲಿದೆ’ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಹಿರಿಯ ವಿಜ್ಞಾನಿ ಪ್ರೊ. ಟಿ.ವಿ.ರಾಮಚಂದ್ರ ಎಚ್ಚರಿಸಿದ್ದರು. ಗಣಿಗಾರಿಕೆ ವಿರುದ್ಧ ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌, ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಂ.ಎಫ್‌.ಸಲ್ಡಾನ, ‘ವೈಲ್ಡ್‌ ಲೈಫ್‌ ಫಸ್ಟ್‌’ನ ವ್ಯವಸ್ಥಾಪಕ ಟ್ರಸ್ಟಿ ಪ್ರವೀಣ್‌ ಭಾರ್ಗವ್‌ ಸೇರಿದಂತೆ ಹಲವರು ಧ್ವನಿ ಎತ್ತಿದ್ದರು.

‘ಕುಶಲ ಸ್ಟೋನ್ಸ್‌ ಕಂಪನಿಯ ಮೂರು ಗುತ್ತಿಗೆಗಳು, ಅಶೋಕ ಹಾಗೂ ಸುರೇಶ ಎಂಬವರ ಗಣಿಗಳ ಗುತ್ತಿಗೆ ಅಮಾನತುಗೊಳಿಸಲಾಗಿದೆ. ಇದನ್ನು ಪ್ರಶ್ನಿಸಿ ಗಣಿಗಳ ಮಾಲೀಕರು ಹೈಕೋರ್ಟ್‌ ಮೊರೆ ಹೋಗಿದ್ದಾರೆ. ಜತೆಗೆ, 10 ಗಣಿಗಳ ಮಾಲೀಕರಿಗೆ ನೋಟಿಸ್‌ ನೀಡಿದ್ದೇವೆ. ಅರಣ್ಯ ಹಾಗೂ ಗಣಿ ಇಲಾಖೆಯ ಸಹಯೋಗದಲ್ಲಿ ಜಂಟಿ ಸಮೀಕ್ಷೆ ನಡೆಯುತ್ತಿದೆ’ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕ ಎನ್‌.ಎಸ್‌.ಪ್ರಸನ್ನ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇಲ್ಲಿ ಕಲ್ಲು ಪುಡಿ ಮಾಡುವ ಘಟಕ ಆರಂಭಿಸಲು ಪರವಾನಗಿ ಕೋರಿ ಅರ್ಜಿ ಸಲ್ಲಿಸುವಾಗ ಮಾಲೀಕರು ಅರಣ್ಯ ಇಲಾಖೆಗೆ ತಪ್ಪು ಮಾಹಿತಿ ನೀಡಿದ್ದರು. ಈ ಪ್ರದೇಶದಲ್ಲಿ ಕಾಡು ಇಲ್ಲ ಎಂದು ಅವರು ತಿಳಿಸಿದ್ದರು. ಅಧಿಕಾರಿಗಳು ಸರಿಯಾಗಿ ಪರಿಶೀಲನೆ ನಡೆಸದೆಯೇ ಈ ಘಟಕಕ್ಕೆ ಅನುಮತಿ ನೀಡಿದ್ದರು. ಈ ಕ್ವಾರಿಯ ಸುತ್ತಲೂ ರಾಷ್ಟ್ರೀಯ ಉದ್ಯಾನ ಪ್ರದೇಶ ಆವರಿಸಿದೆ. ಇದು ಆನೆ ಕಾರಿಡಾರ್‌ನ ಪಕ್ಕದಲ್ಲೇ ಇದೆ. ಅಕ್ಷಾಂಶ– ರೇಖಾಂಶ ಆಧರಿಸಿ ಪರಿಶೀಲಿಸಿದಾಗ, ಈ ಪ್ರದೇಶವು ರಾಷ್ಟ್ರೀಯ ಉದ್ಯಾನದ ಸುರಕ್ಷತಾ ವಲಯದಲ್ಲೇ ಬರುತ್ತದೆ ಎಂಬುದು ಸ್ಪಷ್ಟವಾಯಿತು. ನಮ್ಮ ಹೋರಾಟಕ್ಕೆ ಇಲಾಖೆ ಈಗಲಾದರೂ ಸ್ಪಂದಿಸಿದೆ’ ಎಂದು ‘ವೃಕ್ಷಾ ಪ್ರತಿಷ್ಠಾನ’ದ ವಿಜಯ್‌ ನಿಶಾಂತ್‌ ತಿಳಿಸಿದರು.

‘ಈ ಪ್ರದೇಶದಲ್ಲಿ ಕಲ್ಲು ಸಾಗಿಸುವ ಸುಮಾರು 400 ಲಾರಿಗಳು ಹಗಲು ರಾತ್ರಿ ಸಂಚರಿಸುತ್ತಿವೆ. ಇದರಿಂದ ವನ್ಯಜೀವಿಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಈ ಕ್ವಾರಿಯಿಂದ ಉಂಟಾಗುವ ಮಾಲಿನ್ಯದಿಂದ ಸ್ಥಳೀಯರಿಗೂ ತೊಂದರೆಯಾಗುತ್ತಿದೆ’ ಎಂದರು.

‘ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕರಡು ಪ್ರಕಟಿಸಿತ್ತು. ಪಟ್ಟಭದ್ರ ಹಿತಾಸಕ್ತಿಗಳ ಒತ್ತಡದಿಂದಾಗಿ ರಾಜ್ಯ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಲಿಲ್ಲ. ರಾಷ್ಟ್ರೀಯ ಉದ್ಯಾನದಿಂದ 10 ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಪರಿಗಣಿಸುವಂತೆ ಸುಪ್ರೀಂ ಕೋರ್ಟ್‌ ಆದೇಶ ಮಾಡಿದೆ. ಆನೆ ಕಾರಿಡಾರ್‌ನಲ್ಲಿ ಇಂತಹ ಚಟುವಟಿಕೆಗೆ ಅವಕಾಶ ನೀಡಬಾರದು ಎಂದು ಹೈಕೋರ್ಟ್‌ ಸಹ 2011ರಲ್ಲಿ ಆದೇಶ ನೀಡಿದೆ. ಆದರೂ, ಗಣಿಗಾರಿಕೆಗೆ ಅನುವು ಮಾಡಿಕೊಡಲಾಗಿತ್ತು’ ಎಂದು ಪ್ರವೀಣ್‌ ಭಾರ್ಗವ್‌ ಬೇಸರ ವ್ಯಕ್ತಪಡಿಸಿದರು.

269 ಚದರ ಕಿ.ಮೀ ವ್ಯಾಪ್ತಿ

ರಾಷ್ಟ್ರೀಯ ಉದ್ಯಾನವನ್ನು ಸಮೃದ್ಧ ಸಸ್ಯ ಮತ್ತು ಪ್ರಾಣಿ ವೈವಿಧ್ಯವನ್ನು ಹೊಂದಿರುವ ಹಾಗೂ ಕಾವೇರಿ ನದಿಯ ಉಪನದಿಗಳ ಜಲಾನಯನ ಪ್ರದೇಶ ಎಂದು ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ 2016ರಲ್ಲಿ ಗುರುತಿಸಿದೆ. ಪರಿಸರ ಸೂಕ್ಷ್ಮ ವಲಯ ಎಂದು ಗುರುತಿಸಿಕೊಂಡ ಇಲ್ಲಿನ ಅರಣ್ಯ ಪ್ರದೇಶಗಳನ್ನು 1980ರ ಅರಣ್ಯ ಸಂರಕ್ಷಣಾ ಕಾಯ್ದೆ ಹಾಗೂ 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ರಕ್ಷಣೆ ಮಾಡಬೇಕಾಗಿದೆ.

ರಾಷ್ಟ್ರೀಯ ಉದ್ಯಾನದ ಗಡಿಯುದ್ದಕ್ಕೂ ಮೀಸಲು ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಗುರುತಿಸಲಾಗಿದೆ. ಅಧಿಸೂಚಿತ ಸಂರಕ್ಷಿತ ಪ್ರದೇಶವು 268.96 ಚದರ ಕಿ.ಮೀವರೆಗೆ ವ್ಯಾಪ್ತಿಯನ್ನು ಹೊಂದಿದೆ. ಒಟ್ಟು 77 ಗ್ರಾಮಗಳು ಇದರ ವ್ಯಾಪ್ತಿಯಲ್ಲಿವೆ. ಪರಿಸರ ಸೂಕ್ಷ್ಮ ವಲಯದ ಕೆಲವು ಪ್ರದೇಶಗಳು ಮಹಾನಗರದ ವ್ಯಾಪ್ತಿಯೊಳಗಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry