ನಾಲ್ಕು ವರ್ಷಗಳಲ್ಲಿ 73 ಮಂದಿ ಆತ್ಮಹತ್ಯೆ

7
ಆತ್ಮಹತ್ಯೆಗೆ ಶರಣಾದ ರೈತರ ಕುಟುಂಬಗಳಿಗೆ ವಿಶೇಷ ಸೌಲಭ್ಯ ಕಲ್ಪಿಸಲು ಸೂಚನೆ

ನಾಲ್ಕು ವರ್ಷಗಳಲ್ಲಿ 73 ಮಂದಿ ಆತ್ಮಹತ್ಯೆ

Published:
Updated:

ಬಾಗಲಕೋಟೆ: ಸಾಲಬಾಧೆಯ ಕಾರಣಕ್ಕೆ ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ 73 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ಶರಣಾದ ರೈತರ ಕುಟುಂಬಗಳಿಗೆ ವಿವಿಧ ಇಲಾಖೆಗಳ ಮೂಲಕ ವಿಶೇಷ ಸೌಲಭ್ಯಗಳ ಕಲ್ಪಿಸುವ ನಿಟ್ಟಿನಲ್ಲಿ ಶುಕ್ರವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಶಶಿಧರ ಕುರೇರಾ ಅಧ್ಯಕ್ಷತೆಯಲ್ಲಿ ಜರುಗಿದ ಜಿಲ್ಲಾ ಮಟ್ಟದ ಉಸ್ತುವಾರಿ ಸಮಿತಿ ಸಭೆಯಲ್ಲಿ ಈ ವಿವರ ಪ್ರಸ್ತಾಪಗೊಂಡಿತು.

ಜಿಲ್ಲೆಯಲ್ಲಿ ಕಳೆದ ವರ್ಷ 20 ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 16 ಪ್ರಕರಣ ಮಾತ್ರ ಸ್ವೀಕರಿಸಲಾಗಿದೆ. 2015-–16ನೇ ಸಾಲಿನಲ್ಲಿ 24, 2016–17ನೇ ಸಾಲಿನಲ್ಲಿ 30 ಪ್ರಕರಣ ಸ್ವೀಕರಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ರೈತರ ಆತ್ಮಹತ್ಯೆಗೆ ಸಂಬಂಧಿಸಿದಂತೆ ಮೂರು ಪ್ರಕರಣಗಳು ದಾಖಲಾಗಿವೆ. ಸಮಿತಿ ಸಭೆ ನಡೆಸಿ ಶೀಘ್ರ ಇತ್ಯರ್ಥಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.

ಸಭೆಯಲ್ಲಿ ಮಾತನಾಡಿದ ಶಶಿಧರ ಕುರೇರಾ, ‘ಆತ್ಮಹತ್ಯೆಗೆ ಒಳಗಾದ ರೈತರ ಕುಟುಂಬಗಳಿಗೆ ಸೌಲಭ್ಯ ನೀಡುವ ಸಲುವಾಗಿ ಜಿಲ್ಲಾ ಮಟ್ಟದ ಸಮಿತಿ ರಚಿಸಲಾಗಿದೆ. ಈ ಸಮಿತಿಯ ಕಂದಾಯ, ಶಿಕ್ಷಣ ಹಾಗೂ ಆರೋಗ್ಯ ಇಲಾಖೆಗಳ ಮೂಲಕ ಸಿಗಬಹುದಾದ ಸೌಲಭ್ಯಗಳ ಅನುಷ್ಠಾನದ ಮೇಲುಸ್ತುವಾರಿ ವಹಿಸಲಿದೆ’ ಎಂದರು.

ರೈತರ ಆತ್ಮಹತ್ಯೆಗೆ ಸಂಬಂಧಿಸಿದಂತೆ ಪ್ರಕರಣ ಇತ್ಯರ್ಥವಾದಲ್ಲಿ ತಕ್ಷಣ ಕೃಷಿ ಇಲಾಖೆಯಿಂದ ₹ 5 ಲಕ್ಷ ಪರಿಹಾರಧನ ನೀಡಲಾಗುತ್ತಿದೆ. ಇದರ ಜೊತೆಗೆ ಕಂದಾಯ ಇಲಾಖೆಯಿಂದ ಪತ್ನಿಗೆ ವಿಧವಾ ವೇತನ, ಮಕ್ಕಳಿಗೆ ಶಿಕ್ಷಣ ಇಲಾಖೆಯಿಂದ ಸ್ನಾತಕೋತ್ತರ ಪದವಿ ಹಂತದವರೆಗೆ ಉಚಿತ ಶಿಕ್ಷಣ, ಹಾಸ್ಟೆಲ್ ಸೌಲಭ್ಯ, ಆರೋಗ್ಯ ಇಲಾಖೆಯಿಂದ ಪರಿಪೂರ್ಣ ಆರೋಗ್ಯ ಸೇವೆ ಕಲ್ಪಿಸಲು ಇಂದಿರಾ ಸುರಕ್ಷಾ ಯೋಜನೆ ಕಾರ್ಡ್ ಸಹ ನೀಡಲಾಗುತ್ತಿದೆ ಎಂದರು. ಆಯಾ ಇಲಾಖೆಗಳು ಆತ್ಮಹತ್ಯೆಗೆ ಶರಣಾದ ರೈತರ ಕುಟುಂಬಗಳಿಗೆ ನೀಡುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವ ಜೊತೆಗೆ ಸೌಲಭ್ಯಗಳನ್ನು ತಲುಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಉಪವಿಭಾಗಾಧಿಕಾರಿಗಳಾದ ಎಚ್.ಜಯಾ, ಎಂ.ಮಾರುತಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ರಮೇಶಕುಮಾರ, ಉಪನಿರ್ದೇಶಕ ಕೊಂಗವಾಡ, ಆರೋಗ್ಯ ಇಲಾಖೆ ಅಧಿಕಾರಿ ಡಾ.ಎಂ.ಕೆ.ಪಟ್ಟಣಶೆಟ್ಟಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿದೇಶಕ ಎಂ.ಎಸ್.ಅಂಗಡಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry