ಸವಲತ್ತು ಮಾಲೀಕರ ಪರ: ವಸಂತ ಆಚಾರಿ

7
ಜಿಲ್ಲೆಯ ವಿವಿಧೆಡೆ ಪರಿಷ್ಕೃತ ಕೂಲಿ ಆಗ್ರಹಿಸಿ ಬೀಡಿ ಕಾರ್ಮಿಕರ ಪ್ರತಿಭಟನೆ

ಸವಲತ್ತು ಮಾಲೀಕರ ಪರ: ವಸಂತ ಆಚಾರಿ

Published:
Updated:
ಸವಲತ್ತು ಮಾಲೀಕರ ಪರ: ವಸಂತ ಆಚಾರಿ

ಬೆಳ್ತಂಗಡಿ: ‘ಜಿಲ್ಲೆಯ ಜೀವನಾಧಾರವಾಗಿರುವ ಬೀಡಿ ಕೈಗಾರಿಕೆಯನ್ನು ಕೇಂದ್ರ ಸರ್ಕಾರ ನಿರ್ನಾಮ ಮಾಡಲು ಪ್ರಯತ್ನಿಸುತ್ತಿದೆ. ಕಾರ್ಮಿಕ ವರ್ಗದ ಸವಲತ್ತುಗಳನ್ನು ಮಾಲೀಕರ ಪರವಾಗಿ ಬದಲಾವಣೆ ಮಾಡುವ ಮೂಲಕ ಕಾರ್ಮಿಕ ವಿರೋಧಿಯಾಗಿ ವರ್ತಿಸುತ್ತಿದೆ’ ಎಂದು ಸಿಐಟಿಯು ಉಪಾಧ್ಯಕ್ಷ ವಸಂತ ಆಚಾರಿ ಆರೋಪಿಸಿದರು.

ಸಿಐಟಿಯು ನೇತೃತ್ವದಲ್ಲಿ ಬೀಡಿ ಕಾರ್ಮಿಕರ ಕನಿಷ್ಠ ಕೂಲಿ, ತುಟ್ಟಿ ಭತ್ಯೆ ತಕ್ಷಣ ನೀಡಲು ಒತ್ತಾಯಿಸಿ ಶನಿವಾರ  ಬೆಳ್ತಂಗಡಿ ಮಿನಿ ವಿಧಾನಸೌಧದ ಎದುರು ನಡೆದ ಪ್ರತಿಭಟನೆಯಲ್ಲಿ  ಅವರು ಮಾತನಾಡಿದರು.

‘ಬೀಡಿ ಕಾರ್ಮಿಕರಿಗೆ 2015ರಿಂದ ತುಟ್ಟಿಭತ್ಯೆ ನೀಡದೆ ವಂಚನೆ ಮಾಡಲಾಗಿದೆ. ಈ ಹಿಂದಿನ ರಾಜ್ಯ ಕಾರ್ಮಿಕ ಸಚಿವರು ಮಾಲೀಕರ ಗುಲಾಮರಂತೆ ವರ್ತಿಸಿ , ಕಾರ್ಮಿಕರಿಗೆ ವಂಚಿಸಿದರು.  ಸಿಐಟಿಯುನ ನಿರಂತರ ಹೋರಾಟದಿಂದಾಗಿ ಹಲವಾರು ಸವಲತ್ತುಗಳನ್ನು ಪಡೆಯುವಂತಾಗಿದೆ. ಪ್ರದೇಶದ ಶಾಸಕರುಗಳು, ಇಬ್ಬರು ಸಂಸದರು ತಮ್ಮ ಕ್ಷೇತ್ರದ ಬೀಡಿ ಕಾರ್ಮಿಕರ ಸಮಸ್ಯೆಗಳ ಬಗ್ಗೆ ದೇ ಕಾಳಜಿ ವಹಿಸುತ್ತಿಲ್ಲ.  15 ದಿನಗಳ ಒಳಗಾಗಿ ಕನಿಷ್ಠ ಕೂಲಿ , ತುಟ್ಟಿಭತ್ಯೆ ನೀಡದಿದ್ದರೆ ಬೀಡಿ ಕಂಪನಿಗಳ ಎದುರು ಅನಿರ್ದಿಷ್ಟಾವಧಿ ಮುಷ್ಕರ ನಡೆಸ

ಬೇಕಾದೀತು’ ಎಂದು ಎಚ್ಚರಿಸಿದರು.

ಸಿಐಟಿಯು ತಾಲ್ಲೂಕು ಅಧ್ಯಕ್ಷ ಶಿವಕುಮಾರ್ ಎಸ್ ಎಂ ಮಾತನಾಡಿ ‘ಬೆಲೆ ಏರಿಕೆ ವಿಪರೀತ ಹೆಚ್ಚಳಗೊಂಡರೂ ಬೀಡಿ ಕಾರ್ಮಿಕರ ತುಟ್ಟಿಭತ್ಯೆ ಮಾತ್ರ ಮೂರು ವರ್ಷಗಳಿಂದ ನೀಡಲಾಗಿಲ್ಲ’ ಎಂದರು.

ತಾಲ್ಲೂಕು ಕಾರ್ಯದರ್ಶಿ ವಸಂತ ನಡ ಮಾತನಾಡಿ ‘ ಬೀಡಿ ಕಾರ್ಮಿಕರ ಕನಿಷ್ಠ ಕೂಲಿ , ತುಟ್ಟಿಭತ್ಯೆ ನೀಡದಿದ್ದರೆ  ಇದೇ 25ರಂದು ಮಿನಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುತ್ತದೆ’ ಎಂದರು.

ಪ್ರತಿಭಟನೆಯ ನೇತೃತ್ವವನ್ನು ವೇಣೂರು ವಲಯ ಬೀಡಿ ಕೆಲಸಗಾರರ ಸಂಘದ ಕಾರ್ಯದರ್ಶಿ ರೋಹಿಣಿ ಪೆರಾಡಿ, ಕೋಶಾಧಿಕಾರಿ ಜಯಂತಿ ನೆಲ್ಲಿಂಗೇರಿ,ಪದ್ಮನಾಭ ಗರ್ಡಾಡಿ,ಸಿಐಟಿಯು ಮುಖಂಡ ಶೇಖರ್ ಎಲ್, ಸುಕನ್ಯಾ ಎಚ್, ಪದ್ಮಾವತಿ, ಸುಧಾ ಕೆ ರಾವ್, ಅನಿಲ್ ಎಂ ವಹಿಸಿದ್ದರು.  ತಹಶೀಲ್ದಾರ್‌ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ನೀಡಲಾಯಿತು.

ಮೂಡುಬಿದಿರೆಯಲ್ಲಿ ಪ್ರತಿಭಟನೆ

ಮೂಡುಬಿದಿರೆ: ‘ಪರಿಷ್ಕೃತ ಕನಿಷ್ಠ ಕೂಲಿ,  ತುಟ್ಟಿ ಭತ್ತೆ ಇತ್ಯಾದಿಯನ್ನು 2018ರ ಏಪ್ರಿಲ್ 1ರಿಂದ ಅನ್ವಯವಾಗುವಂತೆ ಮಂಜೂರು ಮಾಡಬೇಕೆಂದು ಆಗ್ರಹಿಸಿ’ ಸಿಐಟಿಯು ವತಿಯಿಂದ ಶನಿವಾರ ಇಲ್ಲಿನ ಸೌತ್ ಕೆನರಾ ಹೋಮ್ ಇಂಡಸ್ಟ್ರಿಸ್ ಎದುರು ಬೀಡಿ ಕಾರ್ಮಿಕರು ಪ್ರತಿಭಟನೆ ನಡೆಸಿದರು.

‘ಭತ್ಯೆ ಮತ್ತು ಪರಿಷ್ಕೃತ ವೇತನವನ್ನು ತಕ್ಷಣ ಮಂಜೂರು ಮಾಡಬೇಕು’ ಎಂದು ಸಿಐಟಿಯು ಮೂಡುಬಿದಿರೆ ವಲಯಾಧ್ಯಕ್ಷರಾದ ರಮಣಿ ಹೇಳಿದರು.  ಜಿಲ್ಲಾ ಬೀಡಿ ಫೆಡರೇಶನ್ ಉಪಾಧ್ಯಕ್ಷ ಸದಾಶಿವ ದಾಸ್, ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಯಾದವ ಶೆಟ್ಟಿ, ಮೂಡುಬಿದಿರೆ ವಲಯ ಕಟ್ಟಡ ಕಾರ್ಮಿಕ ಸಂಘದ ಕಾರ್ಯದರ್ಶಿ ಶಂಕರ್, ಸಿಐಟಿಯು ಮುಖಂಡರಾದ ರಾಧ, ಗಿರಿಜಾ, ಲಕ್ಷ್ಮೀ, ಬೇಬಿ ಇದ್ದರು.  ಪ್ರತಿಭಟನಾ ಜಾಥಾ ನಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry