ನಗರವೂ ಮಿನಿ ಸಿಂಗಪುರ ಆಗಬೇಕು

7
ಸಿಂಗಪುರಕ್ಕೆ ಭೇಟಿ ನೀಡಿದ್ದ ಪೌರಕಾರ್ಮಿಕರ ಆಶಯ

ನಗರವೂ ಮಿನಿ ಸಿಂಗಪುರ ಆಗಬೇಕು

Published:
Updated:
ನಗರವೂ ಮಿನಿ ಸಿಂಗಪುರ ಆಗಬೇಕು

ಚಾಮರಾಜನಗರ: ‘ನಮ್ಮ ನಗರವನ್ನು ಸಿಂಗಪುರ ಬೇಡ, ಕನಿಷ್ಠ ಪಕ್ಷ ಮಿನಿ ಸಿಂಗಪುರವನ್ನಾಗಿಯಾದರೂ ಮಾಡಲೇಬೇಕು. ಅಲ್ಲಿರುವವರೂ ಮನುಷ್ಯರೇ. ಅವರಿಂದ ಸಾಧ್ಯವಾಗುವುದಾದರೆ ನಮಗೆ ಏಕೆ ಸಾಧ್ಯವಾಗುವುದಿಲ್ಲ?’

ಚಾಮರಾಜನಗರದ ನಗರಸಭೆ ಯಲ್ಲಿ ಪೌರಕಾರ್ಮಿಕರಾಗಿ ದುಡಿಯುತ್ತಿರುವ ಸಿ.ಪಿ.ಮಾದ, ವರದರಾಜು ಮತ್ತು ತಂಗವೇಲು ಅವರು ಕೇಳುವ ಪ್ರಶ್ನೆ ಇದು. ಆದರೆ, ಅಂತಹ ನಗರವನ್ನು ಇಲ್ಲಿ ಸೃಷ್ಟಿಸಲು ‌ಕಷ್ಟ ಇದೆ ಎಂಬ ಅರಿವು ಅವರಿಗಿದೆ. ಕನಿಷ್ಠ 50 ವರ್ಷಗಳಾದರೂ ಬೇಕು ಎಂಬುದು ಅವರ ಅಭಿಮತ.

ಘನತ್ಯಾಜ್ಯ ನಿರ್ವಹಣೆಯಲ್ಲಿ ಅನುಸರಿಸಲಾಗುತ್ತಿರುವ ಆಧುನಿಕ ತಂತ್ರಜ್ಞಾನ ವ್ಯವಸ್ಥೆಗಳ ಅಧ್ಯಯನಕ್ಕಾಗಿ ಇವರು ಇತ್ತೀಚೆಗೆ ಸಿಂಗಪುರಕ್ಕೆ ಹೋಗಿ ಬಂದಿದ್ದಾರೆ. ವ್ಯವಸ್ಥಿತ ನಗರದ ಸೌಂದರ್ಯ, ಕಸ ನಿರ್ವಹಣಾ ಪದ್ಧತಿಗೆ ಮಾರು ಹೋಗಿರುವ ಇವರು ‘ಪ್ರಜಾವಾಣಿ’ಯೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು.

‘‌ಅಲ್ಲಿನ ಕಸ ನಿರ್ವಹಣೆ ‌‌ಅತ್ಯಂತ ವ್ಯವಸ್ಥಿತ. ಯಾರೊಬ್ಬರೂ ತ್ಯಾಜ್ಯವನ್ನು ಕೈಯಿಂದ ಮುಟ್ಟುವುದಿಲ್ಲ. ಎಲ್ಲವನ್ನೂ ಯಂತ್ರಗಳೇ ಮಾಡುತ್ತವೆ. ಮೊದಲಿಗೆ ಕಸವನ್ನು ಪ್ರತ್ಯೇಕಿಸಲಾಗುತ್ತದೆ. ಕಬ್ಬಿಣ, ಅಲ್ಯುಮಿನಿಯಂನಂತಹ ಲೋಹಗಳನ್ನು ರಫ್ತು ಮಾಡಲಾಗುತ್ತದೆ. ಕಾಗದ, ಪ್ಲಾಸ್ಟಿಕ್‌ನಂತಹ ಕಸವನ್ನು ದೊಡ್ಡ ದೊಡ್ಡ ಕಟ್ಟುಗಳನ್ನಾಗಿ ಮಾಡಿ ಬೇರೆ ಬೇರೆ ಉದ್ದೇಶಕ್ಕೆ ಬಳಸಲಾಗುತ್ತದೆ’ ಎಂದು ಸಿ.ಪಿ. ಮಾದ ಹೇಳಿದರು.

‘ನಾಲ್ಕು ದಿನಗಳ ಕಾಲ ಆ ನಗರದಲ್ಲಿ ಸುತ್ತಾಡಿದ್ದೇವೆ. ಎಂತಹ ನಗರ ಅದು! ಒಂದು ಕಸ ಇಲ್ಲ, ಗಲೀಜು ಇಲ್ಲ, ರಸ್ತೆಯಲ್ಲಿ ನೀರು ನಿಲ್ಲುವುದಿಲ್ಲ. ಚರಂಡಿ ಕಾಣುವುದೇ ಇಲ್ಲ. ವಾಸನೆ ಬರುವುದಿಲ್ಲ. ಸೊಳ್ಳೆ ಕಾಟವಿಲ್ಲ, ಬೀದಿ ನಾಯಿಗಳ ಹಾವಳಿ ಇಲ್ಲ.

ಬೀದಿಯಲ್ಲಿ ಹಸುಗಳು ಓಡಾಡುವುದಿಲ್ಲ. ರಸ್ತೆ ಬದಿ ತರಕಾರಿ, ಎಳನೀರು ಮಾರುವವರಿಲ್ಲ. ಅಂತಹ ನಗರವನ್ನು ಇಲ್ಲಿ ಊಹಿಸಲು ಸಾಧ್ಯವೇ ಇಲ್ಲ’ ಎಂದು ಅವರು ಒಂದೇ ಉಸಿರಿನಲ್ಲಿ ಹೇಳುತ್ತಲೇ ಹೋದರು.

ಜನರಲ್ಲಿ ಶಿಸ್ತು: ‘ಅಲ್ಲಿ ಎಲ್ಲ ಧರ್ಮದ ಜನರಿದ್ದಾರೆ. ಎಲ್ಲರಲ್ಲೂ ಶಿಸ್ತು ಇದೆ. ರಸ್ತೆಯಲ್ಲಿ ಯಾರೂ ಉಗುಳುವುದಕ್ಕೆ ಹೋಗುವುದಿಲ್ಲ. ಕಂಡ ಕಂಡಲ್ಲೆಲ್ಲ ಮೂತ್ರ ಮಾಡುವ ಜನರು ಅಲ್ಲಿಲ್ಲ. ಅದಕ್ಕೆ ಪೂರಕವಾಗಿ ಅಲ್ಲಿ ಕಠಿಣ ಕಾನೂನು ಕೂಡ ಇದೆ. ಎಲ್ಲ ಕಡೆಯೂ ಸಿ.ಸಿ.ಟಿ.ವಿ ಕ್ಯಾಮೆರಾ ಹಾಕಿದ್ದಾರೆ. ಆಡಳಿತದ ಕಣ್ಣುತಪ್ಪಿಸಿ ಜನರು ಏನೂ ಮಾಡುವಂತಿಲ್ಲ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ತಕ್ಷಣ ಪೊಲೀಸರು ಬಂದು ಅವರನ್ನು ಹಿಡಿದು ದಂಡ ವಿಧಿಸುತ್ತಾರೆ. ತಪ್ಪು ಮಾಡಿದವರು ದಂಡ ಕಟ್ಟದಿದ್ದರೆ ಎರಡು ದಿನ ಜೈಲು ಶಿಕ್ಷೆ ಅನುಭವಿಸಬೇಕು’ ಎಂದು ದನಿಗೂಡಿಸಿದರು ವರದರಾಜು.

ಅಂತಹ ನಗರವನ್ನು ನಮ್ಮಲ್ಲೂ ಸೃಷ್ಟಿಸಲು ಸಾಧ್ಯವೇ ಎಂಬ ಪ್ರಶ್ನೆಗೆ, ‘ಖಂಡಿತ ಸೃಷ್ಟಿಸಬಹುದು. ಆದರೆ, ನಮ್ಮ ಈಗಿನ ವ್ಯವಸ್ಥೆಯಲ್ಲಿ ಅದು ಸುಲಭವಲ್ಲ. ಅದಕ್ಕೆ ಎಲ್ಲರೂ ಕೈಜೋಡಿಬೇಕು’ ಎಂದು ಮೂವರೂ ಉತ್ತರಿಸಿದರು.

‘ನಮ್ಮಲ್ಲೂ ಅಂತಹ ವ್ಯವಸ್ಥೆ ಬರಬೇಕು. ನಮ್ಮ ದೇಶ ಉದ್ಧಾರವಾಗಬೇಕಾದರೆ ಇದೆಲ್ಲ ಬರಲೇಬೇಕು. ಸರ್ಕಾರ  ಕ್ರಮ ಕೈಗೊಳ್ಳಬೇಕು. ಕಠಿಣ ಕಾನೂನು ತರಬೇಕು. ಅಲ್ಲಿ ಇರುವಂತೆ ದಂಡ ವಿಧಿಸಬೇಕು. ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನೂ ಅಳವಡಿಸಬೇಕು’ ಎಂದು ಮಾದ ಪ್ರತಿಪಾದಿಸಿದರು.‌

ಅಭಿಮಾನ ಬೇಕು: ‘ಆದರೆ, ಸರ್ಕಾರದಿಂದ ಮಾತ್ರ ಇದು ಸಾಧ್ಯವಿಲ್ಲ. ಜನರೂ ಇದಕ್ಕೆ ಕೈಜೋಡಿಸಬೇಕು. ಈ ನಗರ ನನ್ನದು ಎಂಬ

ಅಭಿಮಾನ ಜನರಿಗೆ ಇರಬೇಕು. ಸಾರ್ವಜನಿಕವಾಗಿ ಉಗುಳಬಾರದು, ಎಲ್ಲೆಂದರಲ್ಲಿ ಶೌಚಕ್ಕೆ ಹೋಗಬಾರದು. ಸರ್ಕಾರದ ಆಸ್ತಿಗೆ ಹಾನಿ ಮಾಡಬಾರದು ಎಂಬ ಕನಿಷ್ಠ ಜ್ಞಾನ ನಮ್ಮಲ್ಲಿ ಬರಬೇಕು’ ಎಂಬುದು ಅವರ ಅಂಬೋಣ.

‘ಸರ್ಕಾರ ಮತ್ತು ಸಾರ್ವಜನಿಕರು ಕೈಜೋಡಿಸಿದರೆ ಯಾವುದೂ ಅಸಂಭವವಲ್ಲ’ ಎಂದು ಹೇಳುವ ಅವರು, ‘ಕನಿಷ್ಠ ನಮ್ಮ ಮುಂದಿನ ಪೀಳಿಗೆಯಾದರೂ ಸಿಂಗಪುರದಂತಹ ನಗರದಲ್ಲಿ ಬದುಕುವಂತಾಗಬೇಕು’ ಎಂಬ ಆಶಯ ವ್ಯಕ್ತಪಡಿಸಿದರು.

ಸಂವಾದ ಕಾರ್ಯಕ್ರಮ

‘ತ್ಯಾಜ್ಯ ವಿಲೇವಾರಿ ಮಾಡುವಾಗ ಅನುಸರಿಸಬೇಕಾದ ಸ್ವಚ್ಛತಾ ಕ್ರಮ ಮತ್ತು ತ್ಯಾಜ್ಯಗಳ ನಿರ್ವಹಣೆಗೆ ಬಳಸಲಾಗುತ್ತಿರುವ ಆಧುನಿಕ ತಂತ್ರಜ್ಞಾನಗಳ ಬಗ್ಗೆ ಪೌರಕಾರ್ಮಿಕರಲ್ಲಿ ಅರಿವು ಮೂಡಿಸುವುದಕ್ಕಾಗಿ ನಾಲ್ವರನ್ನು ಸಿಂಗಪುರಕ್ಕೆ ಕಳುಹಿಸಲಾಗಿತ್ತು. ಅಲ್ಲಿ ಅವರು ಪಡೆದಿರುವ ಅನುಭವಗಳನ್ನು ಇತರ ಪೌರಕಾರ್ಮಿಕರೊಂದಿಗೂ ಹಂಚಿಕೊಳ್ಳಲು ಸಂವಾದ ಕಾರ್ಯಕ್ರಮ ಏರ್ಪಡಿಸುತ್ತೇವೆ’ ಎಂದು ನಗರಸಭೆ ಪರಿಸರ ಎಂಜಿನಿಯರ್‌ ಗಿರಿಜಮ್ಮ ‘ಪ್ರಜಾವಾಣಿ’ಗೆ  ತಿಳಿಸಿದರು.

42 ಜನರ ತಂಡ

ಪೌರಾಡಳಿತ ನಿರ್ದೇಶನಾಲಯವು ರಾಜ್ಯದ ವಿವಿಧ ಭಾಗಗಳ 42 ಪೌರಕಾರ್ಮಿಕರನ್ನು ಅಧ್ಯಯನಕ್ಕಾಗಿ ಸಿಂಗಪುರಕ್ಕೆ ಕಳುಹಿಸಿತ್ತು. ಈ ತಂಡದಲ್ಲಿ ಚಾಮರಾಜನಗರದ ನಾಲ್ವರು (ಸಿ.ಪಿ.ಮಾದ, ವರದರಾಜು, ತಂಗವೇಲು ಮತ್ತು ನಟರಾಜು) ಇದ್ದರು. ಮೇ 23ರಂದು ಬೆಂಗಳೂರಿನಿಂದ ಹೊರಟಿದ್ದ ಈ ತಂಡ, ಮೇ 26ಕ್ಕೆ ವಾಪಸ್ಸಾಗಿತ್ತು. ಇವರ ಜೊತೆಗೆ ಮೂವರು ಅಧಿಕಾರಿಗಳೂ ತೆರಳಿದ್ದರು.

**

ನಮಗೆ ಪಂಚತಾರಾ ಹೋಟೆಲ್‌ನಲ್ಲಿ ವ್ಯವಸ್ಥೆ ಮಾಡಿದ್ದರು. ಎಲ್ಲವೂ ಹೊಸ ಅನುಭವ. ಅಲ್ಲಿ ಅರಿತಿದ್ದನ್ನು ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳುತ್ತೇನೆ‌

ಸಿ.ಪಿ. ಮಾದ, ಪೌರಕಾರ್ಮಿಕ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry