4

ಈಜು: ರಚನಾ ಮಿಂಚು

Published:
Updated:
ಈಜು: ರಚನಾ ಮಿಂಚು

ಕರ್ನಾಟಕದಲ್ಲಿ ಈಜು ಪ್ರತಿಭೆಗಳಿಗೆ ಕೊರತೆಯಿಲ್ಲ. ರಾಷ್ಟ್ರ ಹಾಗೂ ಅಂತರರಾಷ್ಟ್ರೀಯಮಟ್ಟದಲ್ಲಿ ಮಿಂಚಿದ ರಾಜ್ಯದ ಈಜುಪಟುಗಳಿಗೆ ಲೆಕ್ಕವಿಲ್ಲ. ಆದರೆ ಇದರಲ್ಲಿ ಬಹುಪಾಲು ಮಂದಿಯೂ ಬೆಂಗಳೂರಿನಲ್ಲಿರುವ ಈಜು ಕ್ಲಬ್‌ಗಳಿಂದ ಹೊರಹೊಮ್ಮಿದವರು.

ರಾಜ್ಯದ ಇತರ ಭಾಗಗಳಿಂದ ಈಜು ಪ್ರತಿಭೆಗಳು ಬೆಳಕಿಗೆ ಬಂದದ್ದು ಕಡಿಮೆ. ಬೆಂಗಳೂರಿನ ಸ್ಪರ್ಧಿಗಳಿಗೆ ಸೆಡ್ಡುಹೊಡೆದು ಬೆಳೆದ ಸ್ಪರ್ಧಿಗಳು ಕೆಲವರು ಮಾತ್ರ. ಅಂತಹವರಲ್ಲಿ ಮಂಗಳೂರಿನ ಮಂಗಳಾ ಈಜು ಕೇಂದ್ರದ ರಚನಾ ಎಸ್‌.ಆರ್‌. ರಾವ್‌ ಒಬ್ಬರು.

14ರ ಹರೆಯದ ರಚನಾ ಅವರು ವಿವಿಧ ಕೂಟಗಳಲ್ಲಿ ಈಗಾಗಲೇ ನೂರಕ್ಕೂ ಅಧಿಕ ಪದಕಗಳನ್ನು ಗೆದ್ದಿದ್ದಾರೆ. ಮೈಸೂರಿನಲ್ಲಿ ಭಾನುವಾರ ಕೊನೆಗೊಂಡ ರಾಜ್ಯ ಜೂನಿಯರ್‌ ಮತ್ತು ಸಬ್‌ ಜೂನಿಯರ್‌ ಚಾಂಪಿಯನ್‌ಷಿಪ್‌ನಲ್ಲಿ ರಾಷ್ಟ್ರೀಯ ದಾಖಲೆಯನ್ನೂ ತಮ್ಮ ಹೆಸರಿಗೆ ಬರೆಯಿಸಿಕೊಂಡಿದ್ದಾರೆ.

ಬಾಲಕಿಯರ 100 ಮೀ. ಬ್ರೆಸ್ಟ್‌ಸ್ಟ್ರೋಕ್‌ ಸ್ಪರ್ಧೆಯಲ್ಲಿ 1 ನಿಮಿಷ 15.95 ಸೆಕೆಂಡುಗಳಲ್ಲಿ ಗುರಿ ತಲುಪಿದ್ದಾರೆ. ನವದೆಹಲಿಯಲ್ಲಿ ಕಳೆದ ವರ್ಷ ನಡೆದಿದ್ದ ಖೇಲೊ ಇಂಡಿಯಾ ಕೂಟದಲ್ಲಿ 1:19.05 ಸೆಕೆಂಡುಗಳಲ್ಲಿ ಗುರಿ ತಲುಪಿದ್ದು ಅವರ ಇದುವರೆಗಿನ ಅತ್ಯುತ್ತಮ ಸಾಧನೆಯಾಗಿತ್ತು.

ಮಂಗಳಾ ಕ್ಲಬ್‌ನಲ್ಲಿ ಕೋಚ್‌ ಲೋಕರಾಜ್‌ ವಿಟ್ಲ ಅವರಿಂದ ತರಬೇತಿ ಪಡೆಯುತ್ತಿರುವ ರಚನಾ ಅವರು ಸ್ವಿಮ್ಮಿಂಗ್‌ ಫೆಡರೇಷನ್‌ ಆಫ್‌ ಇಂಡಿಯಾ ಕಳೆದ ವರ್ಷ ಆಯೋಜಿಸಿದ್ದ ಕೂಟದಲ್ಲಿ ಮೂರು ಚಿನ್ನ ಗೆದ್ದಿದ್ದರು. ನವದೆಹಲಿಯಲ್ಲಿ ನಡೆದಿದ್ದ ಖೇಲೊ ಇಂಡಿಯಾ ಕೂಟದಲ್ಲಿ ಚಿನ್ನ ಜಯಿಸಿದ್ದರು. ಪುಣೆಯಲ್ಲಿ ನಡೆದ ರಾಷ್ಟ್ರಮಟ್ಟದ ಕೂಟದಲ್ಲಿ ಎರಡು ಬೆಳ್ಳಿ, ಒಂದು ಕಂಚು ಹಾಗೂ ರಿಲೇ ಸ್ಪರ್ಧೆಯಲ್ಲಿ ಚಿನ್ನದ ಪದಕ ಕೊರಳಿಗೇರಿಸಿಕೊಂಡಿದ್ದರು.

ರಚನಾ ಅವರು ಇತ್ತೀಚೆಗೆ ಬೆಂಗಳೂರು ಸ್ವಿಮ್ಮಿಂಗ್‌ ರಿಸರ್ಚ್‌ ಸೆಂಟರ್‌ನಲ್ಲಿ ಕೋಚ್‌ ಜಯರಾಜನ್‌ ಅವರಿಂದ ಎರಡು ತಿಂಗಳು ತರಬೇತಿ ಪಡೆದಿದ್ದಾರೆ. ಇದು ಸಾಮರ್ಥ್ಯವನ್ನು ಹೆಚ್ಚಿಸಲು ನೆರವಾಗಿದೆ.

ಬೆಂಬಲ ಬೇಕಿದೆ

ಮಂಗಳೂರಿನ ರಾಮಕೃಷ್ಣ ಶಾಲೆಯಲ್ಲಿ 9ನೇ ತರಗತಿಯಲ್ಲಿ ಕಲಿಯುತ್ತಿರುವ ರಚನಾ ಇನ್ನಷ್ಟು ಸಾಧಿಸುವ ಹಂಬಲ ಹೊಂದಿದ್ದು, ಪ್ರಾಯೋಜಕರ ನಿರೀಕ್ಷೆಯಲ್ಲಿದ್ದಾರೆ.

ರಚನಾ ಅವರ ತಂದೆ ರಾಧಾಕೃಷ್ಣ ರಾವ್‌ ಟ್ಯಾಕ್ಸಿ ಚಾಲಕರಾಗಿದ್ದು, ತಾಯಿ ಸುಮಿತ್ರಾ ರಾವ್‌ ಅವರು ಗೃಹಿಣಿ. ಎಲ್ಲೇ ಸ್ಪರ್ಧೆಯಿದ್ದರೂ ಮಗಳ ಜತೆಗೆ ಹೆತ್ತವರು ತೆರಳುವರು. ಆದರೆ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ದೂರದ ಊರುಗಳಿಗೆ ತೆರಳುವುದು ಇವರಿಗೆ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ.

ಸೂಕ್ತ ಪ್ರಾಯೋಜಕರು ದೊರೆತರೆ ಮಗಳಿಂದ ಇನ್ನಷ್ಟು ಸಾಧನೆ ಮೂಡಿಬರಬಹುದು ಎಂಬುದು ತಂದೆಯ ಹೇಳಿಕೆ. ‘ಈಗಾಗಲೇ ಸಾಕಷ್ಟು ಪದಕ ಗೆದ್ದುಕೊಂಡಿದ್ದಿ. ಇನ್ನು ಈಜಿದ್ದು ಸಾಕು ಎಂದು ಮಗಳಲ್ಲಿ ಹಲವು ಸಲ ಹೇಳಿದ್ದೇನೆ. ಇಲ್ಲಪ್ಪಾ, ನಾನು ಇನ್ನೂ ಸಾಧಿಸಬೇಕಿದೆ ಎಂದು ಮಗಳು ಹೇಳುವಳು. ಅವಳು ಹಾಗೆ ಹೇಳುವಾಗ ಬೆಂಬಲ ನೀಡದಿರಲು ಆಗುವುದೇ?’ ಎನ್ನುತ್ತಾ ರಾಧಾಕೃಷ್ಣ ಅವರು ಗದ್ಗದಿತರಾದರು. v

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry