ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾರಣ ಮತ್ತು ವೈಚಾರಿಕತೆ

Last Updated 3 ಜೂನ್ 2018, 19:30 IST
ಅಕ್ಷರ ಗಾತ್ರ

ಕರ್ನಾಟಕದ ರಾಜಕೀಯ ವಿದ್ಯಮಾನ ಈಗಷ್ಟೇ ಒಂದು ನೆಲೆಕಂಡಿದೆ. ಜನರಿಂದ, ಜನರಿಗಾಗಿ, ಜನರಿಗೋಸ್ಕರ ನಡೆಯುವ ಕ್ರಿಯೆಯಾಗಿ ಇದು ಕಂಡರೂ, ಜನರ ಯಾವ ಬಗೆಯ ಪ್ರಾತಿನಿಧ್ಯವನ್ನು ಹಾಗೂ ಆಶೋತ್ತರಗಳನ್ನು ಈ ಚುನಾವಣೆಯ ಫಲಿತಾಂಶದಲ್ಲಿ ನಾವು ನೋಡಲು ಸಾಧ್ಯ? ಪ್ರಜಾಪ್ರಭುತ್ವದ ಸನ್ನಿವೇಶದಲ್ಲಿ ‘ಜನರು’ ಎನ್ನುವ ಪದ ನೆಪಕ್ಕಾಗಿ ಮಾತ್ರ ಬಳಕೆಯಾಗುತ್ತಾ ಬಂದಿದೆ. ಚುನಾವಣೆಯ ಪರಿಣಾಮ ಯಾವತ್ತಿಗೂ ಜನರ ಪರವಾಗಿ ಇರುವುದಿಲ್ಲ ಎನ್ನುವುದನ್ನು ಭಾರತದ ಹಲವು ಚುನಾವಣೆಗಳು ಈಗಾಗಲೇ ಸಾಬೀತುಪಡಿಸಿವೆ.

‘ಜನಪರ’ ಅನ್ನುವ ಪದವೇ ಇವತ್ತು ಅಪಹಾಸ್ಯಕ್ಕೆ ಒಳಗಾಗಿದೆ. ಹೌದು, ಜನಪರ ಎಂದರೇನು? ಯಾರ ಪರವಾಗಿರುವ ನಿಲುವುಗಳಿಗೆ ಜನಪರ ಎಂದು ಕರೆಯಬೇಕು? ಯಾವ ಜಾತಿ, ಧರ್ಮದ ಸಮೂಹಗಳಿಗೆ ಇಲ್ಲಿ ಪ್ರಾತಿನಿಧ್ಯವನ್ನು ನೀಡಬೇಕು? ಹಾಗೇ ಯಾವುದೇ ಜಾತಿ, ಧರ್ಮ, ಪ್ರದೇಶದ ಸಮೂಹಗಳಿಗೆ ಮಾನ್ಯತೆ ಕೊಡುವುದು ಎಷ್ಟು ಸರಿ? ಸಮಾನತೆ, ಸಾಮಾಜಿಕ ನ್ಯಾಯ ಎಂದರೇನು? ಈ ಎಲ್ಲ ಪ್ರಶ್ನೆಗಳು ನಿರ್ವಾತದಲ್ಲಿ ಹುಟ್ಟಲಿಲ್ಲ. ಇವುಗಳ ಹಿಂದೆ ರಾಜಕೀಯ ಪ್ರೇರಣೆಗಳಿವೆ ಮತ್ತು ಸಾಮಾಜಿಕ ಹಿತಾಸಕ್ತಿಗಳು ಕೆಲಸ ಮಾಡುತ್ತಿವೆ. ಹಾಗಾಗಿ ಹಿಂದುಳಿದ, ದಲಿತ ಮತ್ತು ಅಲ್ಪಸಂಖ್ಯಾತರ ಅಸ್ತಿತ್ವ, ಅಸ್ಮಿತೆ ಹಾಗೂ ರಾಜಕೀಯ ಪ್ರತಿನಿಧೀಕರಣದ ಚರ್ಚೆಗಳು ಮುನ್ನೆಲೆಗೆ ಬಂದಾಗಲೆಲ್ಲ ಈ ‘ಜನಪರ’ ಎನ್ನುವ ಕಲ್ಪನೆಯನ್ನು ಅಪಹಾಸ್ಯಕ್ಕೆ ಈಡುಮಾಡಲಾಗುತ್ತದೆ. ಮುಖ್ಯವಾಗಿ ಸಾಮಾಜಿಕ ಏಳ್ಗೆ ಎನ್ನುವುದು ನೆಲೆಗೊಂಡಿರುವುದೇ ಆಯಾ ಸಮಾಜದ ಎಲ್ಲ ಸಮೂಹಗಳ ಏಳ್ಗೆಗೆ ಪೂರಕವಾದ ರಾಜಕೀಯ, ಸಾಮಾಜಿಕ ನಿಲುವುಗಳಲ್ಲಿ. ಸಹಬಾಳ್ವೆಯ ವಿನ್ಯಾಸಗಳು ಎಲ್ಲಿವರೆಗೆ ನಿರ್ಮಾಣಗೊಳ್ಳುವುದಿಲ್ಲವೋ ಅಲ್ಲಿಯವರೆಗೆ ಈ ಜನಪರ ಎಂಬ ಮಾತು ಒಂದು ಹುಸಿಮಂತ್ರವಾಗಿ ಹಾಗೂ ಅಪಹಾಸ್ಯದ ಕ್ಲೀಷೆಯಾಗಿ ಕೇಳಿಸುತ್ತದೆ.

ಸಾಮಾಜಿಕ, ರಾಜಕೀಯ ಸಹಬಾಳ್ವೆ ಭಾರತದಲ್ಲಿ ಇವತ್ತಿಗೂ ದೂರದ ಬೆಟ್ಟವೇ ಸರಿ. ಇಂತಹದೊಂದು ಸಹಬಾಳ್ವೆಯ ಮಂತ್ರವನ್ನು ರಾಜಕೀಯ ಸರಿತನಕ್ಕೆ ಹೊಂದಿಸಿಕೊಂಡು ಬಳಸುತ್ತೇವೆಯೇ ಹೊರತು ಅದನ್ನು ಯಾವತ್ತಿಗೂ ಸಾಂಸ್ಕೃತಿಕ ಸರಿತನದ ಆಯಾಮವನ್ನಾಗಿ ರೂಪಿಸಿಕೊಂಡಿಲ್ಲ. ಇದು ಮುಖ್ಯವಾಗಿ ವೈಚಾರಿಕತೆಗೆ ಸಂಬಂಧಿಸಿದ ನೆಲೆಯಾಗಿದೆ. ತತ್ವ ಮತ್ತು ಆಚರಣೆ ಎರಡನ್ನೂ ಒಳಗೊಂಡ ಸಾಮಾಜಿಕ ವಿವೇಕವೊಂದನ್ನು ‘ವೈಚಾರಿಕತೆ’ ಎಂದು ಕರೆಯುತ್ತೇವೆ. ಅಂಬೇಡ್ಕರ್, ಗಾಂಧಿ, ಲೋಹಿಯಾ ಮೊದಲಾದ ಚಿಂತಕರು ಇಂತಹವೈಚಾರಿಕ ಪ್ರಜ್ಞೆಯನ್ನು ನೆಲೆಗೊಳಿಸುವ ಇರಾದೆಯನ್ನು ಹೊಂದಿದ್ದರು. ಬಹುತ್ವದ ನಿರ್ವಹಣೆ, ಸಹಿಷ್ಣುತೆಯ ಮನೋಭಾವ ವಿಕಾಸಗೊಳ್ಳಲು ಇಂತಹ ವಿನ್ಯಾಸಗಳು ನೆರವಾಗುತ್ತವೆ. ಈ ಬಗೆಯ ವೈಚಾರಿಕ ವಾತಾವರಣದಿಂದ ಕೂಡಿದ ಸಾಮಾಜಿಕ ಇಲ್ಲವೇ ರಾಜಕೀಯ ಸನ್ನಿವೇಶದಲ್ಲಿ ಅಭಿವೃದ್ಧಿಯ ಕಲ್ಪನೆ, ಸಾಮಾಜಿಕ ಒಳಗೊಳ್ಳುವಿಕೆ ಹಾಗೂ ರಾಜಕೀಯ ಪ್ರಜ್ಞೆಯ ನೆಲೆಗಳು ಅತ್ಯಂತ ಭಿನ್ನವಾಗಿ ಕಾಣುತ್ತವೆ. ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಮೂಹಗಳ ಸಬಲೀಕರಣದ ನೀತಿಗಳು ರಾಜಕೀಯ ಗುರಿಗಳು ಮಾತ್ರವಾಗದೇ ಸಾಮಾಜಿಕ ನ್ಯಾಯದ ನಿಲುವುಗಳೂ ಆಗುತ್ತವೆ. ಆಚರಣೆಯ ವೈಚಾರಿಕತೆಯ ಪಾತ್ರವೂ ಸಾಮಾಜಿಕ ನ್ಯಾಯವನ್ನು ಬಲಪಡಿಸುವುದಕ್ಕೆ ಮೂಲತತ್ವವಾಗುತ್ತದೆ.

ರಾಜಕೀಯ ವಸಾಹತುಶಾಹಿಯಿಂದ ನಮ್ಮ ಸಮೂಹಗಳು ಇವತ್ತಿಗೂ ವಿಮೋಚನೆಯನ್ನು ಹೊಂದಲಿಲ್ಲ. ಒಡೆದು ಆಳುವ ನೀತಿ, ಧಾರ್ಮಿಕ ಕಲಹ, ಜಾತಿಗಳಮೇಲಾಟದಂತಹ ಆಚರಣೆಗಳ ಮೂಲ ಬೇರುಗಳಿರುವುದೇ ವೈದಿಕಶಾಹಿ ಮತ್ತು ವಸಾಹತುಶಾಹಿ ಮನೋಧರ್ಮಗಳಲ್ಲಿ. ಹಿಂದೂ- ಮುಸ್ಲಿಂ, ಮೇಲ್ಜಾತಿ- ಕೆಳಜಾತಿ, ಬಹುಸಂಖ್ಯಾತರು- ಅಲ್ಪಸಂಖ್ಯಾತರು ಎನ್ನುವ ವೈರುಧ್ಯಗಳು ದಿನದಿಂದ ದಿನಕ್ಕೆ ಬಲಗೊಳ್ಳಲು ಕಾರಣವೇ ವಸಾಹತು ಮತ್ತು ವೈದಿಕಶಾಹಿ ನಿಲುವುಗಳು. ಆಯಾ ರಾಜ್ಯದ ಮೇಲ್ಜಾತಿ ಇಲ್ಲವೇ ಪ್ರಬಲ ಜಾತಿಗಳೆಂದು ಗುರುತಿಸಿಕೊಂಡಿರುವ ಎಲ್ಲ ಜಾತಿಗಳು ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ರಾಜಕೀಯ ಪ್ರಾತಿನಿಧ್ಯ ಮತ್ತು ಸಾಮಾಜಿಕ ಏಳ್ಗೆಯನ್ನು ಹತ್ತಿಕ್ಕುವ ಹುನ್ನಾರವನ್ನು ಮಾಡುತ್ತವೆ. ಕರ್ನಾಟಕದಲ್ಲಿ ಬ್ರಾಹ್ಮಣ, ಲಿಂಗಾಯತ ಹಾಗೂ ಒಕ್ಕಲಿಗರಂತಹ ಜಾತಿಗಳು ತಮ್ಮ ಅಧಿಕಾರ ಕೇಂದ್ರಗಳನ್ನು ಬಲಪಡಿಸಿಕೊಳ್ಳಲು ಹಾಗೂ ರಾಜಕೀಯ ಪ್ರಾಬಲ್ಯವನ್ನು ಕಾಪಾಡಿಕೊಳ್ಳಲು ಯಾವುದೇ ಬಗೆಯ ಅಪವಿತ್ರ ಮೈತ್ರಿಯನ್ನು ಮಾಡಿಕೊಳ್ಳಲು ಹೇಸುವುದಿಲ್ಲ ಎಂಬುದನ್ನು ಈಗಾಗಲೇ ಸಾಕಷ್ಟು ಸಲ ನೋಡಿದ್ದೇವೆ.

ರಾಜಕೀಯ ಬಿಕ್ಕಟ್ಟುಗಳು ಎದುರಾದಾಗ ಮಾತ್ರ ಅಸಂಘಟಿತ ಸಮೂಹಗಳಿಗೆ ರಾಜಕೀಯ ಪ್ರಾತಿನಿಧ್ಯ ಕೊಡುವ ಬಗೆಗಳನ್ನು ಕೂಡ ತಮ್ಮ ಇಚ್ಛೆಗೆ ಪೂರಕವಾಗಿ ಬಳಸಿಕೊಳ್ಳುತ್ತವೆ. ಈ ಮೂಲಕ ನಮ್ಮ ರಾಜಕೀಯ ಪಕ್ಷಗಳು ತಮ್ಮ ಬದ್ಧತೆಯನ್ನು ತೋರಿಸುತ್ತವೆ. ಇದು ಅಪವಿತ್ರವಷ್ಟೆ ಅಲ್ಲ, ಅನೈತಿಕವಾದದ್ದು ಸಹ ಅನ್ನುವ ಯಾವುದೇ ಅಪರಾಧಿ ಭಾವನೆ ಇವುಗಳಿಗಿರುವುದಿಲ್ಲ. ಕರ್ನಾಟಕದ 2018ರ ಚುನಾವಣೆಯಲ್ಲಿ ಈ ಮಾತನ್ನು ಸಾಬೀತುಪಡಿಸುವುದಕ್ಕೆ ಬೇಕಾದ ಎಲ್ಲ ಪುರಾವೆಗಳು ಸಿಗುತ್ತವೆ.

‘ಜನಪರ ಸರ್ಕಾರ’ವೆಂದರೆ ಮೇಲ್ಜಾತಿಗಳ ಪ್ರಾಬಲ್ಯ, ಮೇಲ್ವರ್ಗಗಳ ಬೆಳವಣಿಗೆ ಮಾತ್ರ. ದಲಿತ, ಹಿಂದುಳಿದ, ಅಲ್ಪಸಂಖ್ಯಾತ... ಒಟ್ಟಾರೆ ಅಸಂಘಟಿತ ಸಮೂಹಗಳ ಬೆಳವಣಿಗೆಯನ್ನು ಕುರಿತು ಯೋಚಿಸುವ ಬಗೆಯನ್ನು ಜನವಿರೋಧಿ ಮತ್ತು ಮೇಲ್ವರ್ಗಗಳ ವಿರೋಧಿ ಎಂದೂ ಬಿಂಬಿಸಲಾಗುತ್ತದೆ. ಅಸಮಾನತೆಯಿಂದ ಕೂಡಿದ ದೇಶದಲ್ಲಿ ಪ್ರಭುತ್ವಗಳ ಕಾಳಜಿ ಏನಾಗಿರಬೇಕು? ಯಾರನ್ನು ಈ ಪ್ರಭುತ್ವಗಳು ಪ್ರತಿನಿಧಿಸಬೇಕು? ಯಾರ ಏಳ್ಗೆಗಾಗಿ ತಮ್ಮ ನೀತಿಗಳನ್ನು ಮತ್ತು ಯೋಜನೆಗಳನ್ನು ರೂಪಿಸಬೇಕು ಎಂಬುದನ್ನು ಕುರಿತು ಯೋಚಿಸುವವರನ್ನು ಎಡಪಂಥೀಯ ಎಂದು ಗುರುತಿಸಲಾಗುತ್ತದೆ. ಎಡಪಂಥೀಯರನ್ನು ಜನವಿರೋಧಿ ಮತ್ತು ದೇಶದ್ರೋಹಿಗಳೆಂದೂ ತಮ್ಮ ಸ್ವಾರ್ಥಕ್ಕೆ ಜಾತಿ- ಧರ್ಮಗಳನ್ನು ರಾಜಕೀಯ ಗಾಳಗಳನ್ನಾಗಿ ಬಳಸಿಕೊಳ್ಳುವವರನ್ನು ದೇಶಪ್ರೇಮಿಗಳೆಂದೂ ಕೊಂಡಾಡಲಾಗುತ್ತದೆ. ಸಾಮಾಜಿಕ ವಿವೇಕ ರೂಪುಗೊಂಡರೆ ಮಾತ್ರ ಪ್ರಜಾಸತ್ತಾತ್ಮಕ ರಾಜಕಾರಣವನ್ನು ಮಾಡಲು ಸಾಧ್ಯ. ಅಂದರೆ ತತ್ವ ಮತ್ತು ಆಚರಣೆಯನ್ನು ಮೇಳೈಸಿಕೊಂಡ ವೈಚಾರಿಕತೆ ನಮ್ಮ ರಾಜನೀತಿ ಮತ್ತು ರಾಜಕೀಯ ತತ್ವವಾಗಬೇಕು. ಸಮಸಮಾಜದ ಕಲ್ಪನೆ, ಜಾತಿ- ಧರ್ಮಗಳ ಗಡಿಯನ್ನು ಮೀರಿದ ಸಾಮಾಜಿಕ ಒಳಗೊಳ್ಳುವಿಕೆ ನಮ್ಮ ಬದುಕಿನ ದಾರಿಯಾದರೆ ಮಾತ್ರ ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರು ಸಾಮಾಜಿಕ-ರಾಜಕೀಯ ವಿದ್ಯಮಾನಗಳ ಹಕ್ಕುದಾರರಾಗುತ್ತಾರೆ. ಇಲ್ಲವಾದರೆ ಮೀಸಲಾತಿಯ ಕರುಣೆಯ ದೀನರಾಗಿಯೇ ಇವರು ಉಳಿಯಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT