ಇಲ್ಲಿಲ್ಲ ಪ್ಲಾಸ್ಟಿಕ್ ದೈತ್ಯನ ಹಾವಳಿ!

7

ಇಲ್ಲಿಲ್ಲ ಪ್ಲಾಸ್ಟಿಕ್ ದೈತ್ಯನ ಹಾವಳಿ!

Published:
Updated:
ಇಲ್ಲಿಲ್ಲ ಪ್ಲಾಸ್ಟಿಕ್ ದೈತ್ಯನ ಹಾವಳಿ!

ಆ ಬಡಾವಣೆ ಎಲ್ಲಾ ಬಡಾವಣೆ ಗಳಂತಲ್ಲ. ಬೆಳಿಗ್ಗೆ ಬೀದಿಯ ಕಸಗುಡಿಸುವ ಪೌರಕಾರ್ಮಿಕರಿಂದ ಹಿಡಿದು ಶಾಲೆಗೆ ತೆರಳುವ ಪುಟ್ಟ ಮಕ್ಕಳ ತನಕ ಎಲ್ಲರ ಮನದಲ್ಲಿ ಪರಿಸರ ಪ್ರೀತಿ ಹಚ್ಚಹಸಿರಿನಿಂತೆ ಕಂಗೊಳಿಸುತ್ತಿದೆ.

ಹೋಟೆಲ್ ತಿಂಡಿಯ ಪಾರ್ಸೆಲ್, ದೇವರ ಮುಡಿಯ ಹೂವುಗಳು, ಅಡುಗೆಯ ಮನೆಯ ತ್ಯಾಜ್ಯ, ಹಣ್ಣು–ತರಕಾರಿ ಅಂಗಡಿ, ಮಾಂಸದಂಗಡಿಯ ಪಾರ್ಸೆಲ್ ಹೀಗೆ ಎಲ್ಲೆಡೆಯೂ ಅಚ್ಚರಿಯೆನ್ನುವಷ್ಟು ಪ್ಲಾಸ್ಟಿಕ್ ಮುಕ್ತವಾಗಿದೆ ಈ ಬಡಾವಣೆ.

ಇದುವೇ ನಗರದ ಮೊದಲ ಪ್ಲಾಸ್ಟಿಕ್ ಮುಕ್ತ ಬಡಾವಣೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಎಚ್‌.ಎಸ್.ಆರ್‌. ಲೇಔಟ್‌.

2018ರ ವಿಶ್ವ ಪರಿಸರ ದಿನಾಚರಣೆಯ ಘೋಷವಾಕ್ಯವಾಗಿರುವ ‘ಪ್ಲಾಸ್ಟಿಕ್ ಮಾಲಿನ್ಯವನ್ನು ತಡೆಗಟ್ಟಿ’ ಎನ್ನುವ ಮಾತನ್ನು ಈ ಬಡಾವಣೆಯ ನಾಗರಿಕರು ಎರಡು ವರ್ಷಗಳ ಹಿಂದೆಯೇ ಸದ್ದಿಲ್ಲದೇ ಅಳವಡಿಸಿಕೊಂಡಿದ್ದಾರೆ. ಅಂದಹಾಗೆ ಈ ಮಾದರಿ ಬಡಾವಣೆಯ ಹಿಂದಿರುವಂಥದ್ದು ಎಚ್.ಎಸ್.ಆರ್. ಸಿಟಿಜನ್ಸ್ ಫೋರಂ ಎನ್ನುವ ನಾಗರಿಕರ ತಂಡ.

ದಂತವೈದ್ಯೆ ಡಾ.ಶಾಂತಿ ತುಮ್ಮುಲ ಅವರ ತಂಡ ಬಿಬಿಎಂಪಿ, ಸರ್ಕಾರ ಮತ್ತು ನಾಗರಿಕರ ಜತೆಗೂಡಿ ಎಚ್‌.ಎಸ್.ಆರ್. ಬಡಾವಣೆಯನ್ನು ಪ್ಲಾಸ್ಟಿಕ್ ಮುಕ್ತ ಬಡಾವಣೆಯನ್ನಾಗಿ ಮಾಡುವ ಸಂಕಲ್ಪ ತೊಟ್ಟಿದ್ದು 2016ರ ಜನವರಿಯಲ್ಲಿ. ಶಾಸಕ ಸತೀಶ್ ರೆಡ್ಡಿ ಅವರ ಸಹಕಾರ, ಪಾಲಿಕೆ ಅಧಿಕಾರಿಗಳ ಸಹಾಯದಿಂದಾಗಿ ಈ ಬಡಾವಣೆ ಈಗ ಪ್ಲಾಸ್ಟಿಕ್ ಮುಕ್ತವಾಗಿದೆ.

‘ಅಂಗಡಿಗಳಲ್ಲಿ ಪ್ಲಾಸ್ಟಿಕ್ ಚೀಲ ಬಳಸುತ್ತಿರುವುದು ಕಂಡು ಬಂದರೆ ಸಾಕು ಪಾಲಿಕೆಯ ಆರೋಗ್ಯ ನಿರೀಕ್ಷಕ ವಿನೋದ್ ಗೋವಿಂದಪ್ಪ ಅಲ್ಲಿ ತಕ್ಷಣವೇ ಹಾಜರಾಗಿ ಮುಲಾಜಿಲ್ಲದೇ ದಂಡ ಹಾಕುತ್ತಾರೆ. ಈ ಬಡಾವಣೆಯಲ್ಲಿರುವ ಹೋಟೆಲ್‌, ತಳ್ಳುಗಾಡಿಗಳಲ್ಲಿ ಊಟ–ತಿಂಡಿ ಕಟ್ಟಿಕೊಡಲು ಬಾಳೆ ಎಲೆ, ಅಡಿಕೆ ಪಟ್ಟೆಯ ದೊನ್ನೆ, ಪೇಪರ್ ಬಳಸುತ್ತಾರೆ. ಅಷ್ಟೇ ಅಲ್ಲ ಮಾಂಸದಂಗಡಿಗಳಲ್ಲಿ ಮಾಂಸವನ್ನು ಮುತ್ತುಗದ ಎಲೆಯೊಳಗಿಟ್ಟು ಕಾಗದ ಪೊಟ್ಟಣಗಳಲ್ಲಿ ಕಟ್ಟಿಕೊಡುತ್ತಾರೆ.  ಮಾಲ್, ಸೂಪರ್ ಮಾರ್ಕೆಟ್‌ಗಳಲ್ಲಿ ದಿನಸಿ ಮತ್ತು ಮನೆಗೆ ಅಗತ್ಯ ಸಾಮಾನು ಕೊಳ್ಳುವ ಗ್ರಾಹಕರು ತಪ್ಪದೇ ಬಟ್ಟೆಯ ಕೈಚೀಲಗಳನ್ನು ಒಯ್ಯುತ್ತಾರೆ. ಇದರಿಂದ ಪರಿಸರವೂ ಹಾನಿಗೊಳಗಾಗದು, ಮಾಲೀಕ–ಗ್ರಾಹಕರ ಜೇಬಿಗೆ ಹಿತ’ ಎನ್ನುತ್ತಾರೆ ಡಾ.ಶಾಂತಿ.

ಬಡಾವಣೆಯ 12 ದೇವಸ್ಥಾನಗಳಲ್ಲಿ ಸಂಗ್ರಹವಾಗುವ ಹೂವುಗಳನ್ನು ದೇವಸ್ಥಾನದ ಆವರಣದಲ್ಲೇ ಇರುವ ತೊಟ್ಟಿಗಳಲ್ಲಿ ಗೊಬ್ಬರ ಮಾಡಲಾಗುತ್ತದೆ. ಇಲ್ಲಿರುವ 20 ಅಪಾರ್ಟ್‌ಮೆಂಟುಗಳಲ್ಲಿ ಗೃಹಿಣಿಯರು ಹಸಿ ಮತ್ತು ಘನ ತ್ಯಾಜ್ಯವನ್ನು ಪ್ರತ್ಯೇಕವಾಗಿ ವಿಂಗಡಣೆ ಮಾಡಿ ಪಾಲಿಕೆಯ ತಳ್ಳುಗಾಡಿಗಳಿಗೆ ಕೊಡುತ್ತಾರೆ.

(ಲೋಗೊ ಎಚ್.ಎಸ್.ಆರ್.)

ಕೆಲವರು ತರಕಾರಿ ಮತ್ತಿತರರ ಹಸಿ ತ್ಯಾಜ್ಯವನ್ನು ಮನೆಯಲ್ಲೇ ಗೊಬ್ಬರ ಮಾಡಿ ಮನೆಯ ಕೈತೋಟಕ್ಕೆ ಗೊಬ್ಬರದಂತೆ ಬಳಸುತ್ತಾರೆ.  ದೂರದ ಊರುಗಳಿಗೆ ತೆರಳುವಾಗ ಮನೆಯಿಂದಲೇ ತಪ್ಪದೇ ಸ್ಟೀಲ್ ನೀರಿನ ಬಾಟಲಿಗಳನ್ನು ಒಯ್ಯುತ್ತಾರೆ. ಮಕ್ಕಳಿಗೆ ಕಟ್ಟಿಕೊಡುವ ನೀರು ಮತ್ತು ಬುತ್ತಿಯಲ್ಲೂ ಪ್ಲಾಸ್ಟಿಕ್ ಡಬ್ಬಿ, ಬಾಟಲಿಗಳು ನುಗ್ಗದಂತೆ ಗೃಹಿಣಿಯರು ಎಚ್ಚರ ವಹಿಸುತ್ತಾರೆ.

ಎಲ್ಲರೂ ಜತೆಗೂಡಿದರೆ ಮಾತ್ರ ಸ್ವಚ್ಛ ಮತ್ತು ಹಸಿರು ಸೂಸುವ ಭೂಮಿ ನಮ್ಮದಾಗಬಲ್ಲದು ಎಂಬುದು ಎಚ್‌.ಎಸ್.ಆರ್. ಬಡಾವಣೆಯ ನಾಗರಿಕರ ಒಕ್ಕೊರಲ ಅಭಿಮತ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry