ಏಷ್ಯನ್‌ ಕ್ರೀಡಾಕೂಟ: ಲಿಯಾಂಡರ್‌ ಪೇಸ್‌ಗೆ ಅವಕಾಶ

7

ಏಷ್ಯನ್‌ ಕ್ರೀಡಾಕೂಟ: ಲಿಯಾಂಡರ್‌ ಪೇಸ್‌ಗೆ ಅವಕಾಶ

Published:
Updated:
ಏಷ್ಯನ್‌ ಕ್ರೀಡಾಕೂಟ: ಲಿಯಾಂಡರ್‌ ಪೇಸ್‌ಗೆ ಅವಕಾಶ

ನವದೆಹಲಿ : ಅನುಭವಿ ಆಟಗಾರ ಲಿಯಾಂಡರ್‌ ಪೇಸ್‌ ಅವರು ಏಷ್ಯನ್‌ ಕ್ರೀಡಾಕೂಟಕ್ಕೆ ಪ್ರಕಟಿಸಲಾಗಿ ರುವ ಭಾರತ ಟೆನಿಸ್‌ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ. ಸಿಂಗಲ್ಸ್‌ ವಿಭಾಗದ ಆಟಗಾರ ಯೂಕಿ ಭಾಂಬ್ರಿ ತಂಡಕ್ಕೆ ಅಲಭ್ಯರಾಗಿದ್ದಾರೆ.

ವಿಶ್ವ ರ‍್ಯಾಂಕಿಂಗ್‌ನಲ್ಲಿ 94ನೇ ಸ್ಥಾನ ಹೊಂದಿರುವ ಯೂಕಿ, ಆಗಸ್ಟ್‌ 27ರಿಂದ ನಡೆಯುವ ಅಮೆರಿಕ ಓಪನ್‌ ಗ್ರ್ಯಾನ್‌ಸ್ಲಾಮ್‌ ಟೂರ್ನಿಯಲ್ಲಿ ಭಾಗವಹಿಸಲಿದ್ದು, ಇದಕ್ಕಾಗಿ ಕಠಿಣ ತಾಲೀಮು ನಡೆಸಲು ತೀರ್ಮಾನಿಸಿದ್ದಾರೆ. ಈ ಕಾರಣದಿಂದ ಏಷ್ಯನ್‌ ಕೂಟದಲ್ಲಿ ಪಾಲ್ಗೊಳ್ಳಲು ಆಗುವುದಿಲ್ಲ ಎಂದು ಅಖಿಲ ಭಾರತ ಟೆನಿಸ್‌ ಸಂಸ್ಥೆಗೆ (ಎಐಟಿಎ) ಮನವಿ ಮಾಡಿಕೊಂಡಿದ್ದರು. ಅವರ ನಿರ್ಧಾರವನ್ನು ಎಐಟಿಎ ಬೆಂಬಲಿಸಿದೆ.

2006ರಲ್ಲಿ ದೋಹಾದಲ್ಲಿ ನಡೆದಿದ್ದ ಕೂಟದಲ್ಲಿ ಪೇಸ್‌ ಎರಡು ಚಿನ್ನದ ಪದಕಗಳನ್ನು ಗೆದ್ದಿದ್ದರು. ‍ಪುರುಷರ ಡಬಲ್ಸ್‌ ಮತ್ತು ಮಿಶ್ರ ಡಬಲ್ಸ್‌ನಲ್ಲಿ ಅವರಿಂದ ಈ ಸಾಧನೆ ಮೂಡಿಬಂದಿತ್ತು. ಡಬಲ್ಸ್‌ನಲ್ಲಿ ಮಹೇಶ್‌ ಭೂಪತಿ ಮತ್ತು ಮಿಶ್ರ ಡಬಲ್ಸ್‌ನಲ್ಲಿ ಸಾನಿಯಾ ಮಿರ್ಜಾ ಜೊತೆ ಆಡಿದ್ದರು. ನಂತರ ಅವರು ಕೂಟದಲ್ಲಿ ಭಾಗವಹಿಸಿರಲಿಲ್ಲ.

ರಾಮಕುಮಾರ್‌ ರಾಮನಾಥನ್‌, ಪ್ರಜ್ಞೇಶ್‌ ಗುಣೇಶ್ವರನ್‌ ಮತ್ತು ಸುಮಿತ್‌ ನಗಾಲ್‌ ಅವರು ತಂಡದಲ್ಲಿರುವ ಸಿಂಗಲ್ಸ್‌ ವಿಭಾಗದ ಆಟಗಾರರಾಗಿದ್ದಾರೆ. ಕರ್ನಾಟಕದ ರೋಹನ್‌ ಬೋಪಣ್ಣ, ಪೇಸ್‌ ಮತ್ತು ದಿವಿಜ್‌ ಶರಣ್‌ ಅವರು ಡಬಲ್ಸ್‌ ವಿಭಾಗದಲ್ಲಿ ಕಣಕ್ಕಿಳಿಯಲಿದ್ದಾರೆ.

ಆಟವಾಡದ ನಾಯಕ ಮಹೇಶ್‌ ಭೂಪತಿ ಅವರು ವೈಯಕ್ತಿಕ ಕಾರಣಗಳಿಂದಾಗಿ ಏಷ್ಯನ್‌ ಕೂಟದಲ್ಲಿ ಭಾಗವಹಿಸುತ್ತಿಲ್ಲ. ಹೀಗಾಗಿ ಆಟವಾಡದ ನಾಯಕನ ಜವಾಬ್ದಾರಿಯನ್ನು ಮುಖ್ಯ ಕೋಚ್‌ ಜೀಶನ್‌ ಅಲಿ ಅವರಿಗೆ ವಹಿಸಲಾಗಿದೆ. ಮಹಿಳಾ ತಂಡಕ್ಕೆ ಅಂಕಿತಾ ಭಾಂಬ್ರಿ ಅವರು ಮಾರ್ಗದರ್ಶನ ನೀಡಲಿದ್ದಾರೆ.

ಸಿಂಗಲ್ಸ್‌ ವಿಭಾಗದ ಆಟಗಾರ್ತಿ ಅಂಕಿತಾ ರೈನಾ, ಕೂಟದಲ್ಲಿ ಮಹಿಳಾ ತಂಡವನ್ನು ಮುನ್ನಡೆಸಲಿದ್ದಾರೆ. ಕರ್ಮನ್‌ಕೌರ್‌ ಥಂಡಿ, ರುತುಜಾ ಬೋಸ್ಲೆ, ಪ್ರಾಂಜಲ ಯಡ್ಲಪಳ್ಳಿ, ರಿಯಾ ಭಾಟಿಯಾ ಮತ್ತು ಪ್ರಾರ್ಥನಾ ಥೊಂಬರೆ ಅವರು ತಂಡದಲ್ಲಿದ್ದಾರೆ.

ಈ ಬಾರಿ ಪುರುಷರ ತಂಡದಲ್ಲಿ ಮೂವರು ಸಿಂಗಲ್ಸ್‌ ಆಟಗಾರರಿಗೆ ಸ್ಥಾನ ನೀಡಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಜೀಶನ್‌ ‘ರಾಮಕುಮಾರ್‌ ಮತ್ತು ಪ್ರಜ್ಞೇಶ್‌ ಉತ್ತಮ ಆಟಗಾರರು. ಇವರ ಪೈಕಿ ಯಾರಾದರೂ ಗಾಯಗೊಂಡರೆ ಅವರ ಸ್ಥಾನ ತುಂಬಲು ಮತ್ತೊಬ್ಬ ಆಟಗಾರ ಬೇಕಾಗುತ್ತದೆ. ಹೀಗಾಗಿಯೇ ಸುಮಿತ್‌ ನಗಾಲ್‌ಗೆ ಅವಕಾಶ ನೀಡಿದ್ದೇವೆ. ಸುಮಿತ್‌ ಡಬಲ್ಸ್‌ ವಿಭಾಗದಲ್ಲೂ ಆಡಬಲ್ಲರು’ ಎಂದರು.

‘ಆಟಗಾರರು ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಹೊಂದಿರುವ ಸ್ಥಾನದ ಆಧಾರದಲ್ಲಿ ಅವರಿಗೆ ತಂಡದಲ್ಲಿ ಅವಕಾಶ ಕಲ್ಪಿಸಲಾಗಿದೆ. ಪೇಸ್‌ ಅವರು ಡಬಲ್ಸ್‌ ವಿಭಾಗದ ರ‍್ಯಾಂಕಿಂಗ್‌ ನಲ್ಲಿ ವಿಷ್ಣುವರ್ಧನ್‌, ಜೀವನ್‌ ನೆಡುಂಚೆಳಿ ಯನ್‌ ಮತ್ತು ಎನ್‌.ಶ್ರೀರಾಮ್‌ ಬಾಲಾಜಿ ಅವರಿಗಿಂತಲೂ ಮೇಲಿನ ಸ್ಥಾನದಲ್ಲಿದ್ದಾರೆ. ಹೀಗಾಗಿ ಅವರನ್ನು ಆಯ್ಕೆ ಮಾಡಿ ದ್ದೇವೆ’ ಎಂದು ಆಯ್ಕೆ ಸಮಿತಿಯ ಸದಸ್ಯ ರೋಹಿತ್‌ ರಾಜ್‌ಪಾಲ್‌ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry