ಪ್ರಶ್ನೋತ್ತರ

7

ಪ್ರಶ್ನೋತ್ತರ

Published:
Updated:
ಪ್ರಶ್ನೋತ್ತರ

– ಮಂಜುನಾಥ್, ಇಟ್ಟಗಿ

ನಾನು ₹ 1 ಲಕ್ಷ ನನ್ನ ಮೊಮ್ಮಗಳ ಹೆಸರಿನಲ್ಲಿ 18 ವರ್ಷಗಳ ಅವಧಿಗೆ ಹಣ ಹೂಡಲು ಮಾರ್ಗದರ್ಶನ ಮಾಡಿರಿ.

ಉತ್ತರ: ಬ್ಯಾಂಕುಗಳಲ್ಲಿ ಠೇವಣಿ ಸ್ವೀಕಾರದ ಗರಿಷ್ಠ ಅವಧಿ 10 ವರ್ಷಗಳು ಮಾತ್ರ. ನೀವು ಬಯಸುವ ಬ್ಯಾಂಕ್‌ನಲ್ಲಿ ನಿಮ್ಮ ಮೊಮ್ಮಗಳ ಹೆಸರಿನಲ್ಲಿ ₹ 1  ಲಕ್ಷವನ್ನು ಒಮ್ಮೆಲೇ ಬಡ್ಡಿಬರುವ (Reinvestment Scheme) ಠೇವಣಿಯಲ್ಲಿ ಇರಿಸಿರಿ.

10 ವರ್ಷಗಳ ನಂತರ ಬರುವ ಅಸಲು ಬಡ್ಡಿ ಮೊತ್ತ ಪುನಃ ಅದೇ ಬ್ಯಾಂಕಿನಲ್ಲಿ 8 ವರ್ಷಗಳ ಅವಧಿಗೆ ಇದೇ ಯೋಜನೆಯಲ್ಲಿ ತೊಡಗಿಸಿರಿ. ಇದೊಂದು ಬಡ್ಡಿ ಮೇಲೆ ಬಡ್ಡಿ ಬಂದು ಚಕ್ರಬಡ್ಡಿ ಠೇವಣಿಯಾಗಿದ್ದು, ಮಗು ಬೆಳೆದು 18 ವರ್ಷವಾಗುವಾಗ ಬಹುದೊಡ್ಡ ಮೊತ್ತ ಪಡೆಯಬಹುದು.

**

– ಅರವಿಂದ.ಎಂ. ಊರುಬೇಡ

SBI ನ RID ಯೋಜನೆ ಬಗ್ಗೆ ವಿವರವಾಗಿ ತಿಳಿಸಿರಿ.

ಉತ್ತರ: ಇದೊಂದು 6 ತಿಂಗಳಿಂದ 10 ವರ್ಷಗಳ ಅವಧಿ ಠೇವಣಿ. ಇಲ್ಲಿ ಬರುವ ಬಡ್ಡಿ ಪ್ರತೀ ಮೂರು ತಿಂಗಳಿಗೊಮ್ಮೆ ಅಸಲಿಗೆ ಸೇರಿಸಿ ಆ ತಾರೀಕಿನಿಂದಲೇ ಪುನಃ ಬಡ್ಡಿ ಕೊಡುತ್ತಾರೆ. ಇದೊಂದು ಚಕ್ರಬಡ್ಡಿ ಗಳಿಸುವ ಉತ್ಕೃಷ್ಟ ಠೇವಣಿ ಯೋಜನೆ.

ಅವಧಿಗೆ ಮುನ್ನವೂ ಅಸಲು ಬಡ್ಡಿ ಪಡೆಯುವ ಸೌಲತ್ತು ಇದೆ. ಈ ಯೋಜನೆಯನ್ನು ಉಳಿದ ಬ್ಯಾಂಕುಗಳು ‘ನಗದು ಸರ್ಟಿಫಿಕೇಟ್’ (Cash Certificate) ಎನ್ನುತ್ತಾರೆ. ಬೇರೆ ಬೇರೆ ಹೆಸರಿನಲ್ಲಿ ಠೇವಣಿಯನ್ನು ಕರೆಯುತ್ತಾರೆ.

**

–  ಅಯ್ಯಣ್ಣಗೌಡ.ಎಂ. ಪಾಟೀಲ್, ವಿಜಯಪುರ

ನಾನು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತೇನೆ. ತಿಂಗಳ ಸಂಬಳ ₹ 28,000. ಖರ್ಚು ₹ 10,000. ನನಗೆ SIPನ ವಿಚಾರದಲ್ಲಿ ತಿಳಿಸಿ ಕೊಡಿ.

ಉತ್ತರ: SIP (Systematic Investment plan) ಅಂದರೆ ಕ್ರಮಬದ್ಧವಾದ ಉಳಿತಾಯ ಯೋಜನೆ ಎಂದರ್ಥ. ಬಹಳಷ್ಟು ಜನರಿಗೆ ದೊಡ್ಡ ಮೊತ್ತವನ್ನು ಮ್ಯೂಚುವಲ್ ಫಂಡ್‌ಗಳಲ್ಲಿ ತೊಡಗಿಸಲು ಸಾಧ್ಯವಾಗುವುದಿಲ್ಲ. ಇಂತಹ ವರ್ಗದ ಜನರು ಒಂದು ಮೊತ್ತ ನಿರ್ಧರಿಸಿ, ಅಷ್ಟೇ ಮೊತ್ತವನ್ನು ಪ್ರತೀ ತಿಂಗಳು ಈ ಯೋಜನೆಯಲ್ಲಿ ತುಂಬುತ್ತಾ ಬರಬಹುದು.

ರಿಲಯನ್ಸ್ ನಂತಹ ಕಂಪನಿಗಳು ಅತೀ ಕನಿಷ್ಠ ಹಣದಿಂದಲೂ ಈ ಯೋಜನೆ ಪ್ರಾರಂಭಿಸುತ್ತವೆ. ಹೀಗೆ ಕ್ರೋಡೀಕರಿಸಿದ ಮೊತ್ತವನ್ನು ಕಂಪನಿಯ ಷೇರುಗಳಲ್ಲಿ ತೊಡಗಿಸಿ, ಲಾಭ ಬಂದರೆ ಹಂಚುತ್ತಾರೆ. ನಷ್ಟವಾದಲ್ಲಿ ಅಸಲಿನಲ್ಲಿ ಕಳೆಯುತ್ತಾರೆ.

₹ 10ರ ಒಂದು ಯೂನಿಟ್ ಆಗಿ ಪರಿವರ್ತಿಸಿ ಜನರಿಗೆ ಹಂಚುತ್ತಾರೆ. ಈ ಯೂನಿಟ್ಟಿನ ನಿವ್ವಳ ಬೆಲೆ (Net Asset value) ಪ್ರತೀ ದಿವಸ ಪ್ರಕಟಿಸುತ್ತಾರೆ. ಮಾರಾಟ ಮಾಡುವವರು ಅಥವಾ ಕೊಂಡುಕೊಳ್ಳುವವರು N.A.V. ಆಧಾರಿತ ದರದಲ್ಲಿ ಹಣ ಪಡೆಯಬಹುದು ಅಥವಾ ಕೊಳ್ಳಬಹುದು.

**

– ಸುನಿಲ್‌ರಾಜ್, ಬೆಂಗಳೂರು

ನಾನು ಸೆಕ್ಷನ್ 80C ಆಧಾರದ ಮೇಲೆ ಗರಿಷ್ಠ ₹ 1.50 ಲಕ್ಷ EPF, LIC, PPF, Mutual fundನಲ್ಲಿ ತೊಡಗಿಸುತ್ತಿದ್ದೇನೆ. ನಾನು NPS ನಲ್ಲಿ ಪ್ರತ್ಯೇಕವಾಗಿ ₹ 50,000 ಹೂಡಿ, ಈ ಎರಡು ಸೆಕ್ಷನ್‌ಗಳ ಲಾಭ ಅಂದರೆ ಒಟ್ಟು ₹ 2 ಲಕ್ಷ ಪಡೆಯಬಹುದೇ ತಿಳಿಸಿರಿ.  ಸೆಕ್ಷನ್ 80C ಅಡಿಯಲ್ಲಿ ಸಂಪೂರ್ಣ ₹ 1.50 ಲಕ್ಷ ತೊಡಗಿಸಿದರೆ ಪ್ರತ್ಯೇಕವಾಗಿ ಸೆಕ್ಷನ್ 80CCD (1B)  ಆಧಾರದ ಮೇಲೆ ವಿನಾಯಿತಿ ಪಡೆಯವಂತಿಲ್ಲ ಎಂದು ಓದಿದ ನೆನಪು. ಇದು ಸರಿ ಇದೆಯೇ ತಿಳಿಸಿರಿ.

ಉತ್ತರ: ಹಲವರಲ್ಲಿ ನಿಮಗೆ ಬಂದಿರುವ ಸಂಶಯವಿದೆ. ಆದರೆ ಸೆಕ್ಷನ್ 80C  ಆಧಾರದ ಮೇಲೆ ಗರಿಷ್ಠ  ₹ 1.50 ಲಕ್ಷ  ಹೂಡದೇ, ಸೆಕ್ಷನ್ 80DDB (1B) ಅಡಿಯಲ್ಲಿ ₹ 50,000 ಹೂಡಬಾರದು ಎನ್ನುವುದು ಸತ್ಯಕ್ಕೆ ದೂರವಾದ ವಿಚಾರ. I.T . Act ನಲ್ಲಿ ಈ ವಿಚಾರ ಪ್ರಸ್ತಾಪಿಸಿಲ್ಲ.

ಜೊತೆಗೆ ಆದಾಯ ತೆರಿಗೆ ಇಲಾಖೆಯಲ್ಲಿಯೂ ವಿಚಾರಿಸಿದಾಗ ಎಲ್ಲಿಯೂ ನಮೂದಿಸಿಲ್ಲ ಎಂಬುದಾಗಿ ತಿಳಿಸಿದರೂ 2018–19 (1.4.2018–31–3–2019) ವರ್ಷದಲ್ಲಿ ಈ ಎರಡೂ ಸೆಕ್ಷನ್‌ಗಳ ಗರಿಷ್ಠ ವಿನಾಯ್ತಿ (ಕ್ರಮವಾಗಿ 80C ₹ 1.50 ಲಕ್ಷ , 80DDB (1B)  ₹ 50,000, ಒಟ್ಟಿನಲ್ಲಿ ₹ 2 ಲಕ್ಷ ) ಪಡೆಯಿರಿ.

**

– ನಿರಂಜನ ಮೂರ್ತಿ, ಊರುಬೇಡ

ನಾನು ಅನುದಾನಿತ ಶಾಲಾ ಶಿಕ್ಷಕ. 2021ಕ್ಕೆ ನಿವೃತ್ತಿ. ಇಬ್ಬರು ಹೆಣ್ಣು ಮಕ್ಕಳು. ಒಬ್ಬಳ ಹೆಸರಿಗೆ ₹ 2ಲಕ್ಷ ಎಫ್.ಡಿ., ಇನ್ನೊಬ್ಬಳ ಹೆಸರಿಗೆ ₹ 1 ಲಕ್ಷ ಎಫ್.ಡಿ. ಮತ್ತು ₹ 3000 ಆರ್.ಡಿ. ಮಾಡಿದ್ದು ಹಾಗೆಯೇ ಹೆಂಡತಿ ಹೆಸರಿಗೆ, ತಿಂಗಳಿಗೆ ₹ 15,000 ಆರ್.ಡಿ. ಮಾಡಿದ್ದೇನೆ. 3 ವರ್ಷಗಳ ನಂತರ ಬರುವ ಆರ್.ಡಿ. ಮೊತ್ತಕ್ಕೆ ಬರುವ ಆದಾಯ ತೆರಿಗೆ ಬರದಂತೆ ಹೇಗೆ ಉಳಿತಾಯ ಮಾಡಬೇಕು, ದಯವಿಟ್ಟು ತಿಳಿಸಿರಿ.

ಉತ್ತರ: ನಿಮ್ಮ ಹೆಣ್ಣು ಮಕ್ಕಳು ಪ್ರಾಪ್ತ ವಯಸ್ಕರಾಗಿದ್ದರಿಂದ ಅವರ ಹೆಸರಿನಲ್ಲಿ ಇಟ್ಟಿರುವ ಠೇವಣಿ, ಅವರಿಗೆ ಬೇರೆ ಆದಾಯ ಇರದಿರುವಲ್ಲಿ ವಾರ್ಷಿಕ ₹ 2.50 ಲಕ್ಷ ಬಡ್ಡಿ ಬಂದರೂ, ತೆರಿಗೆ ಬರುವುದಿಲ್ಲ.

ನಿಮ್ಮ ಹೆಂಡತಿಗೆ 3 ವರ್ಷಗಳ ನಂತರ ₹ 15000 ಆರ್.ಡಿ.ಯಿಂದ ಬರುವ ಮೊತ್ತಕ್ಕೆ ಬರುವ ಬಡ್ಡಿ  ಆಧಾರದ ಮೇಲೆ, ಅವರು ತೆರಿಗೆಗೆ ಒಳಗಾದಲ್ಲಿ, ಗರಿಷ್ಟ ₹ 1.50 ಲಕ್ಷ ತನಕ, ಅದೇ ಬ್ಯಾಂಕಿನಲ್ಲಿ 5 ವರ್ಷಗಳ ತೆರಿಗೆ ಉಳಿಸುವ ಠೇವಣಿಯಲ್ಲಿ ಇರಿಸಿರಿ. ಇದರಿಂದ ತೆರಿಗೆ ಉಳಿಸಲು ಅನುಕೂಲ. ಜೊತೆಗೆ ಉಳಿತಾಯ ಮಾಡಿದಂತೆ ಕೂಡಾ ಆಗುತ್ತದೆ.

**

– ರೇಖಾ, ಬೆಂಗಳೂರು

ವಯಸ್ಸು 40. ವಾರ್ಷಿಕ ಸಂಬಳ ₹ 6.3 ಲಕ್ಷ ವಾರ್ಷಿಕ ₹ 42,000 ನಿವೃತ್ತಿ ಯೋಜನೆಯಲ್ಲಿ ಉಳಿಸಲು ಮಾರ್ಗದರ್ಶನ ಮಾಡಿರಿ.

ಉತ್ತರ: ಪ್ರಾಯಶಃ ನೀವು ತೆರಿಗೆ ಉಳಿಸಲು ಸೆಕ್ಷನ್ 80C ಆಧಾರದ ಮೇಲೆ ಗರಿಷ್ಟ ₹ 1.50 ಲಕ್ಷ ವಾರ್ಷಿಕವಾಗಿ ಉಳಿಸುತ್ತಿರಬಹುದು ಎಂದು ಭಾವಿಸುತ್ತೇನೆ. ಇದರ ಹೊರತಾಗಿ ನೀವು ಉಳಿಸಲು ಬಯಸುವ ₹ 42,000, ನ್ಯಾಷನಲ‌್ ಪೆನ್ಷನ್ ಸ್ಕೀಮ್‌ನಲ್ಲಿ ಸೆಕ್ಷನ್ 80 CCD  (1B) ಆಧಾರದ ಮೇಲೆ ಉಳಿಸಿರಿ.

ಇಲ್ಲಿ ತೆರಿಗೆ ಉಳಿಸಲು ಗರಿಷ್ಠ ವಾರ್ಷಿಕ ₹ 50,000 ಕಟ್ಟಬಹುದು. ಒಟ್ಟಿನಲ್ಲಿ ಸೆಕ್ಷನ್ 80C ಹಾಗೂ  80 CCD (1B) ಆಧಾರದ ಮೇಲೆ ವಾರ್ಷಿಕವಾಗಿ ಗರಿಷ್ಠ ₹ 2 ಲಕ್ಷ ಉಳಿಸಬಹುದು. ಹಾಗೂ ಒಟ್ಟು ಆದಾಯದಿಂದ ಕಳೆದು ತೆರಿಗೆ ಸಲ್ಲಿಸಬಹುದು.

**

– ಗುಲಪ್ಪ, ರಾಣೆಬೆನ್ನೂರು

ನನ್ನ ಗೆಳೆಯನಿಗೆ ಇಬ್ಬರು  ಮದುವೆಯಾಗದ ತಮ್ಮಂದಿರಿದ್ದಾರೆ. ತಂದೆ ತೀರಿಕೊಂಡಿದ್ದಾರೆ. ತಾಯಿ ಇದ್ದಾರೆ. ಇವರಿಗೆ 15 ಎಕರೆ ವ್ಯವಸಾಯದ ಜಮೀನಿದೆ. ತಂದೆ ತೀರಿಕೊಂಡ ನಂತರ ತಾಯಿ ಸಂಪೂರ್ಣ ಜಮೀನನ್ನು ಮಕ್ಕಳ ಹೆಸರಿಗೆ ವರ್ಗಾಯಿಸಿದ್ದಾರೆ. ಈ ಮೂರೂ ಜನ ತಾಯಿಯ ಮಾರ್ಗದರ್ಶನದಂತೆ ವ್ಯವಸಾಯ ಮಾಡಿ, ಬರುವ ಹಣ ತಾಯಿಯ ಉಳಿತಾಯ ಖಾತೆಗೆ ಜಮಾ ಮಾಡುತ್ತಾರೆ.

ಇದರಿಂದಾಗಿ ತಾಯಿಯ ಉಳಿತಾಯ ಖಾತೆಯಲ್ಲಿ ವಾರ್ಷಿಕ ವಹಿವಾಟು ₹ 10 ಲಕ್ಷ ದಾಟಿದೆ. ತಾಯಿಯೇ ಖಾತೆ ಜಮಾ ಖರ್ಚು ಮಾಡುತ್ತಾಳೆ. ಇದು ಆದಾಯ ತೆರಿಗೆ ಕಾನೂನಿಗೆ ವಿರುದ್ಧವಾಗಿದೆಯೇ, ಮುಂದೆ ತೊಂದರೆ ಇದೆಯೇ ತಿಳಿಸಿ.

ಉತ್ತರ: ಕೃಷಿ ಜಮೀನಿನಿಂದ ವಾರ್ಷಿಕ ಎಷ್ಟು ಹಣ ಆದಾಯವಾಗಿ ಬಂದರೂ ಇಂದಿನ ಆದಾಯ ತೆರಿಗೆ ಸೆಕ್ಷನ್ 10 (11) ಆಧಾರದ ಮೇಲೆ, ಅಂತಹ ಆದಾಯ ಸಂಪೂರ್ಣ ಆದಾಯ ತೆರಿಗೆಯಿಂದ ಮುಕ್ತವಾಗಿದೆ. ನಿಮ್ಮ ಗೆಳೆಯರು ತಾಯಿಯ ಮಾರ್ಗದರ್ಶನದಲ್ಲಿ ಕೃಷಿ ಕಾರ್ಯ ಮಾಡುತ್ತಿದ್ದು, ತಾಯಿಯ ಹೆಸರಿನಲ್ಲಿ ಹಣ ಜಮಾ ಮಾಡಿದಾಗ, ಇದಕ್ಕೊಂದು ದಾಖಲಾತಿ (Proof of Income) ಇಟ್ಟು ಕೊಳ್ಳಲಿ. ಕೃಷಿ ಆದಾಯದಿಂದ ಬಂದ ಹಣಕ್ಕೆ ತೆರಿಗೆ ಇಲ್ಲವಾದರೂ, ಈ ರೀತಿ ಬಂದಿರುವ ಆದಾಯ ಠೇವಣಿ ಮಾಡಿ ಬರುವ ಬಡ್ಡಿಗೆ ಆದಾಯ ತೆರಿಗೆ ಇರುತ್ತದೆ.

ಉಳಿತಾಯ ಖಾತೆಯಲ್ಲಿ ಲಕ್ಷಗಟ್ಟಲೆ ಹಣವಿರುವುದು ಜಾಣತನವಲ್ಲ. ಅವಧಿ ಠೇವಣಿ ಮೂರೂ ಮಕ್ಕಳ ಹಾಗೂ ತಾಯಿಯ ಹೆಸರಿನಲ್ಲಿ ಮಾಡಲು ತಿಳಿಸಿರಿ. ಇದರಿಂದ ತೆರಿಗೆ ಉಳಿಸಲು ಕೂಡಾ ಅನುಕೂಲವಾಗುತ್ತದೆ. ಕೃಷಿ ಆದಾಯ ಹೊರತುಪಡಿಸಿ, ಬರುವ ಬಡ್ಡಿ ವಾರ್ಷಿಕವಾಗಿ ₹ 2.50 ಲಕ್ಷತನಕ ಪ್ರತಿಯೋರ್ವ ವ್ಯಕ್ತಿಗೆ ತೆರಿಗೆ ಬರುವುದಿಲ್ಲ. ತಾಯಿ ಹಿರಿಯ ನಾಗರಿಕಳಾದಲ್ಲಿ (60 ವರ್ಷ ದಾಟಿದಲ್ಲಿ) ಈ ಮಿತಿ. ₹ 3 ಲಕ್ಷ. ಒಟ್ಟಿನಲ್ಲಿ ಯಾವುದೇ ಆದಾಯಕ್ಕೆ ಸರಿಯಾದ ದಾಖಲಾತಿ ಇರುವಲ್ಲಿ ತೆರಿಗೆ ಭಯವಿರುವುದಿಲ್ಲ.

**

– ಬಿ.ಎಂ. ಮಧುಗೌಡ, ವೈಟ್‌ಫೀಲ್ಡ್‌ ಸಮೀಪದ ಹಳ್ಳಿ, ಬೆಂಗಳೂರು

ನಾವು ಕೃಷಿಕರು . ಮನೆಯಲ್ಲಿ ತಂದೆ ತಾಯಿ ಹಾಗೂ ನನ್ನ ತಂಗಿ  ಇದ್ದಾರೆ. ನನ್ನ ವಯಸ್ಸು 23. ತಂಗಿ ಅಂತಿಮ ವರ್ಷದ ಪದವಿ ಮಾಡುತ್ತಿದ್ದು ಮುಂದೆ ಶಿಕ್ಷಣ ಸಾಲ ಪಡೆದು ಎಂ.ಬಿ.ಎ. ಓದಬೇಕೆಂದಿದ್ದಾಳೆ. ನಮಗೆ 11 ಬಾಡಿಗೆ ಮನೆ ಇವೆ ಹಾಗೂ ತಿಂಗಳಿಗೆ ₹ 50,000 ಬಾಡಿಗೆ ಬರುತ್ತದೆ. ಇಲ್ಲಿ ನಮ್ಮದು ದಿನಸಿ ಅಂಗಡಿ ಕೂಡಾ ಇದೆ. ದಿನಕ್ಕೆ 10–12 ಸಾವಿರ ವ್ಯಾಪಾರ ಇದೆ. ನಮ್ಮ ತಿಂಗಳ ಒಟ್ಟು ಆದಾಯ ₹ 75–80 ಸಾವಿರ. ಇದು ಸಾಲದ ಚೀಟಿಗೆ ಸರಿ ಹೋಗುತ್ತದೆ.

ಮನೆ ಜಾಗ ಆರು ಗುಂಟೆ ಮೇಲೆ ವ್ಯವಸಾಯ ಸಹಕಾರಿ ಬ್ಯಾಂಕಿನಲ್ಲಿ ₹ 2.50 ಲಕ್ಷ ಸಾಲವಿದೆ. ನಮ್ಮ ಮನೆಗೆ ಸಮೀಪದಲ್ಲಿ ಒಂದು ಎಕರೆ ಜಮೀನು ಮಾರಾಟಕ್ಕಿದೆ. ಈ ಜಮೀನಿನ ಬೆಲೆ ₹ 10–12 ಲಕ್ಷ. ಈ ಜಮೀನನ್ನು ಕೊಂಡು ಅದರಲ್ಲಿ ರೇಷ್ಮೆ ಕೃಷಿ ಮಾಡುವ ಆಸಕ್ತಿ ಇದೆ. ಎರಡು ವರ್ಷ I.T. Return ಮಾಡಿಸಿದರೆ, ಕರ್ಣಾಟಕ ಬ್ಯಾಂಕಿನಲ್ಲಿ ₹ 15 ಲಕ್ಷ ಸಾಲ ಸಿಗುತ್ತದೆ ಎಂದು ತಿಳಿಸಿದ್ದಾರೆ. ಇದರಿಂದ ಈಗಿರುವ ಸಾಲ ಹಾಗೂ ಕೃಷಿ ಜಮೀನು ಕೊಳ್ಳುವ ಮೊಬಲಗು ಎರಡೂ ಭರಿಸಬಹುದು. ದಯಮಾಡಿ ನನ್ನ ಗೊಂದಲ ಪರಿಹರಿಸಿರಿ.

ಉತ್ತರ: ನೀವು ತಿಂಗಳಿಗೆ ₹ 75–80 ಸಾವಿರ ಆದಾಯ ಹೊಂದಿ ಇದು ವರೆಗೆ ಆದಾಯ ತೆರಿಗೆ ಕೊಡದಿರುವುದು ಹಾಗೂ I.T. Return ತುಂಬದಿರುವುದು ಕಾನೂನಿಗೆ ವಿರುದ್ಧ.  ಕೃಷಿ ಆದಾಯಕ್ಕೆ ಮಾತ್ರ ತೆರಿಗೆ ವಿನಾಯ್ತಿ ಇದೆ. ವ್ಯಾಪಾರದಿಂದ ಹಾಗೂ ಬಾಡಿಗೆಯಿಂದ ಬರುವ ಆದಾಯಕ್ಕೆ ತೆರಿಗೆ ಕೊಡಬೇಕಾಗುತ್ತದೆ.

ಬಾಡಿಗೆಯಲ್ಲಿ ಶೇ 30 ಕಳೆದು ತೆರಿಗೆ ಸಲ್ಲಿಸುವ ಸೌಲತ್ತು ಇದೆ. ಇದೇ ವೇಳೆ ನೀವು ಒಟ್ಟಿಗೆ 4 ಜನ ಒಂದು ಕುಟುಂಬದಲ್ಲಿದ್ದು, ಬರುವ ತಿಂಗಳ ಆದಾಯ ₹ 75–80 ಸಾವಿರ ಚೀಟಿ ವ್ಯವಹಾರ ಹಾಗೂ ಸಾಲದ ಕಂತಿಗೆ ಮಾತ್ರ ಸರಿ ಹೋಗುತ್ತದೆ ಎಂದರೆ, ನಿಮ್ಮ ಹೂಡಿಕೆ ಕೂಡಾ ಸರಿ ಇರುವುದಿಲ್ಲ. ಚೀಟಿ ವ್ಯವಹಾರ ಹಳ್ಳಿಯಲ್ಲಿ ಕೆಲವು ನಂಬಿಕೆ ವ್ಯಕ್ತಿಗಳಿಂದ ಚೆನ್ನಾಗಿ ನಡೆಯಬಹುದು. ಆದರೆ ಚೀಟಿ ಎತ್ತಿದ ವ್ಯಕ್ತಿ ಕೈ ಎತ್ತಿದರೆ, ನಿಮ್ಮಂತಹ ಹೂಡಿಕೆದಾರರ ಪರಿಸ್ಥಿತಿ ಏನಾದೀತು.

ಇಂತಹ ಕಂಟಕ ರಹಿತವಲ್ಲದ ಹೂಡಿಕೆಯಲ್ಲಿ ಹಣ ತೊಡಗಿಸುವುದು ಎಂದಿಗೂ ಸರಿಯಲ್ಲ. ತಕ್ಷಣ ನಿಮಗೆ ತಿಳಿದ ಅಥವಾ ಊರಿಗೆ ಸಮೀಪದ ಚಾರ್ಟರ್ಡ್ ಅಕೌಂಟೆಂಟ್‌ರನ್ನು ಭೇಟಿ ಮಾಡಿ, ನಿಮ್ಮ ವ್ಯವಹಾರ ಬಾಡಿಗೆ ವಿವರಣೆ ನೀಡಿ ಜುಲೈ 31ರೊಳಗೆ  I.T. Return ತುಂಬಿರಿ.

ಆದಾಯ ತೆರಿಗೆ ಭಯದಿಂದ ದೊಡ್ಡ ವ್ಯವಹಾರ ಸುಲಭದಲ್ಲಿ ಮುಚ್ಚಿ ಇಡುವುದು ಸರಿಯಲ್ಲ. ಲೆಕ್ಕಾಚಾರ ಸರಿಪಡಿಸಿಕೊಂಡು ಕೊಡುವ ತೆರಿಗೆ ಸಲ್ಲಿಸಿ ನಿಶ್ಚಿಂತರಾಗಿರಿ. ಚೀಟಿ ವ್ಯವಹಾರ ನಿಲ್ಲಿಸಿ ನೀವು ಉಳಿಸಬಹುದಾದ ಹಣ, ನಿಮ್ಮ ಕುಟುಂಬದ ನಾಲ್ಕೂ ಜನರ ಹೆಸರಿನಲ್ಲಿ ಬ್ಯಾಂಕಿನಲ್ಲಿ ಠೇವಣಿ ಮಾಡುತ್ತಾ ಬನ್ನಿ. ನಾನು ತಿಳಿಸಿದಂತೆ ವ್ಯವಹಾರ ಸರಿಪಡಿಸಿಕೊಂಡು ನಂತರ ಬ್ಯಾಂಕ್ ಸಾಲ ಪಡೆದು ಜಮೀನು ಕೊಳ್ಳಿರಿ.

**

– ಕಿರಣ್‌ಕುಮಾರ್, ದಾವಣಗೆರೆ

ನಾನು ರಾಜ್ಯ ಸರ್ಕಾರದ ನೌಕರ. ತಿಂಗಳಿಗೆ ₹ 20,000 ಸಂಬಳ. ವೈಯಕ್ತಿಕ ಖರ್ಚು ಮತ್ತು ಮನೆ ಖರ್ಚು ಸೇರಿ ₹ 10,000 ಬೇಕಾಗುತ್ತದೆ. ₹ 10,000 ತಿಂಗಳಿಗೆ ಉಳಿಸಬಹುದು.

ಉತ್ತರ: ನೀವು ಸಂಬಳದಲ್ಲಿ ಕಡಿತದ ವಿಚಾರ ತಿಳಿಸಿಲ್ಲ. ₹ 20,000 ಎಲ್ಲಾ ಕಡಿತದ ನಂತರ ಬರುವ ಮೊತ್ತ ಎಂದು ತಿಳಿಯುತ್ತೇನೆ. ನೀವು ಇದುವರೆಗೆ ಜೀವವಿಮೆ ಮಾಡಿಸದಿರುವಲ್ಲಿ ಕನಿಷ್ಠ ₹ 2000 ತುಂಬುವ ಎಲ್.ಐ.ಸಿ.ಯವರ ಜೀವನ ಆನಂದ ಪಾಲಿಸಿ 20 ವರ್ಷಗಳ ಅವಧಿಗೆ ಮಾಡಿರಿ.

ಅದೇ ರೀತಿ ಒಂದು ಪಿ.ಪಿ.ಎಫ್. ಖಾತೆ ಪ್ರಾರಂಭಿಸಿ ಕನಿಷ್ಠ ₹ 2000 ತಿಂಗಳಿಗೆ ತುಂಬಿರಿ. ಮುಂದೆ ನಿಮ್ಮ ಸಂಬಳ ಹೆಚ್ಚಾಗಿ ಆದಾಯ ತೆರಿಗೆ ಕೊಡುವ ಸಂದರ್ಭ ಬಂದಾಗ ಈ ಎರಡೂ ಹೂಡಿಕೆಗಳು ತುಂಬಾ ಅನುಕೂಲವಾಗುತ್ತವೆ. ಉಳಿಯುವ ₹  6,000 ನೀವು ಸಂಬಳ ಪಡೆಯುವ ಬ್ಯಾಂಕಿನಲ್ಲಿ 5 ವರ್ಷಗಳ ಆರ್.ಡಿ. ಮಾಡಿರಿ.

ನಿಮ್ಮ ಸಂಬಳ ಏಪ್ರಿಲ್ ಒಂದರಿಂದಲೇ ಪರಿಷ್ಕರಣೆ (Salary Revision) ಆಗುವುದರಿಂದ ಬರುವ ಹೆಚ್ಚಿನ ಮೊತ್ತನ್ನು ಪಿ.ಪಿ.ಎಫ್. ಹಾಗೂ ಆರ್.ಡಿ. ಖಾತೆಯಲ್ಲಿ ಕ್ರಮವಾಗಿ ಹೆಚ್ಚಿಗೆ ತುಂಬಿರಿ. ಉಳಿತಾಯ ಪ್ರಾರಂಭದಿಂದಲೇ ಮಾಡುವುದರಿಂದ, ನಿಮ್ಮ ಜೀವನದ ಸಂಜೆ ಹಸನಾಗುತ್ತದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry