ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರಗುಂದ ಗುಡ್ಡದಲ್ಲಿ ಚಿಗುರಿದ ಹಸಿರು

Last Updated 5 ಜೂನ್ 2018, 12:50 IST
ಅಕ್ಷರ ಗಾತ್ರ

ನರಗುಂದ: ಅರಣ್ಯ ಇಲಾಖೆಯು ಪಟ್ಟಣ ಹಾಗೂ ತಾಲ್ಲೂಕಿನಾದ್ಯಂತ ಸಸಿಗಳನ್ನು ನೆಟ್ಟು ಪರಿಸರ ಸಂರಕ್ಷಣೆಗೆ ಮುಂದಾಗಿದೆ. ಭಾಸ್ಕರರಾವ್‌ ಭಾವೆ ಅವರ ಸಮಾಧಿ ಇರುವ ಪಟ್ಟಣದ ಐತಿಹಾಸಿಕ ನರಗುಂದ ಗುಡ್ಡದ ಮೇಲೆ ಅರಣ್ಯೀಕರಣ ಹಾಗೂ ಉದ್ಯಾನ ನಿರ್ಮಿಸಲು ಇಲಾಖೆ ಕಳೆದೊಂದು ವರ್ಷದಿಂದ ಶ್ರಮಿಸುತ್ತಿದೆ.

ಪುರಸಭೆ ವ್ಯಾಪ್ತಿಯಲ್ಲಿರುವ ಈ ಗುಡ್ಡದಲ್ಲಿ ಕಳೆದ ಎರಡು ವರ್ಷಗಳ ಹಿಂದೆ 2 ಸಾವಿರ ಸಸಿಗಳನ್ನು ನೆಡಲಾಗಿತ್ತು.ಇದರಲ್ಲಿ ಶೇ 75ರಷ್ಟು ಸಸಿಗಳು ಬದುಕಿ ಉಳಿದಿವೆ. ಹಸಿರಿನಿಂದ ಕೂಡಿರುವ ಈ ಪ್ರದೇಶ ಆಕರ್ಷಕ ಪ್ರವಾಸಿ ತಾಣವಾಗಿ ಬದಲಾಗಿದೆ.

ಈ ಗುಡ್ಡದಲ್ಲಿ ಸೀತಾಫಲ ಗಿಡಗಳು ಸಾಕಷ್ಟಿದ್ದವು. ಇಲ್ಲಿಂದ ಬೇರೆಡೆಗೆ ಸೀತಾಫಲ ಹಣ್ಣುಗಳು ರಫ್ತಾಗುತ್ತಿದ್ದವು. ಈಗ ಆ ವೈಭವ ಇಲ್ಲದಿದ್ದರೂ ವಿವಿಧ ಜಾತಿಯ ಮರಗಳು ಬೆಳೆದು ನಿಂತಿದ್ದು, ಹಸಿರು ಪುನರ್‌ನಿರ್ಮಾಣ ಆಗಿದೆ.

ಈ ಮುಂಗಾರಿನಲ್ಲೂ ಗುಡ್ಡದಲ್ಲಿ 900 ಸಸಿಗಳನ್ನು ನೆಡುವ ಕಾರ್ಯ ನಡೆದಿದೆ. ‘ಈಗಾಗಲೇ ಗುಡ್ಡದ ಮೇಲೆ ಸಾವಿರಾರು ಸಸಿಗಳನ್ನು ನೆಟ್ಟಿದ್ದೇವೆ. ಇದೊಂದು ಸುಂದರ ಉದ್ಯಾನವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ’ ಎಂದು ಪ್ರಾದೇಶಿಕ ಅರಣ್ಯಾಧಿಕಾರಿ ಸತೀಶ ಮಲ್ಲಾಪೂರ ಹೇಳಿದರು. ‘ಹೆದ್ದಾರಿ ವಿಸ್ತರಣೆ ಸಂದರ್ಭದಲ್ಲಿ ತೆರವುಗೊಳಿಸಬೇಕಾದ 150ಕ್ಕೂ ಹೆಚ್ಚು ಮರಗಳನ್ನು ಸ್ಥಳಾಂತರಿಸಿ ನೆಡುವ ಯೋಜನೆ ಇದೆ. ಕಲಕೇರಿಯಿಂದ ಕೊಣ್ಣೂರುವರೆಗೆ 21 ಕಿ.ಮೀ ಅಂತರದಲ್ಲಿ ಒಟ್ಟು 6ಸಾವಿರ ಸಸಿಗಳನ್ನು ನೆಡುವ ಯೋಜನೆ ಹೊಂದಿದ್ದೇವೆ’ ಎಂದು ಅವರು ಹೇಳಿದರು.

ತಾಲ್ಲೂಕಿನ ಭೈರನಹಟ್ಟಿ –ಕೊಣ್ಣೂರು, ಹದಲಿ–ರಡ್ಡೇರನಾಗನೂರ, ಮದಗುಣಕಿ ರಸ್ತೆಯಲ್ಲಿ ಸುಮಾರು 5800 ಸಸ್ಯಗಳನ್ನು ನೆಡಲಾಗಿದೆ. ಹಸಿರೀಕರಣಕ್ಕೆ ₹13 ಲಕ್ಷ ವ್ಯಯಿಸಲಾಗುತ್ತಿದೆ’ ಎಂದರು.

‘ನರಗುಂದ ತಾಲ್ಲೂಕನ್ನು ಹಸಿರಿನ ತಾಣವಾಗಿ ಪರಿವರ್ತಿಸಲು ಇಲಾಖೆ ಶ್ರಮಿಸುತ್ತಿದೆ’ ಎಂದು ಅರಣ್ಯ ಅಧಿಕಾರಿ ಬಿ.ಕೆ.ಡಬಾಲಿ ಹೇಳಿದರು.

ಬಸವರಾಜ ಹಲಕುರ್ಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT