ಪ್ರತ್ಯೇಕ ಅಕಾಡೆಮಿಗಳಲ್ಲಿ ಸಿಂಧು, ಸೈನಾ ತರಬೇತಿ

7
ಒಂದೇ ಅಕಾಡೆಮಿಯಲ್ಲಿ ತರಬೇತಿ ಪಡೆದರೆ ಆಟದ ತಂತ್ರಗಳನ್ನು ಪರಸ್ಪರರು ತಿಳಿದುಕೊಳ್ಳುವ ಸಾಧ್ಯತೆ: ಪಿ. ವಿ. ರಮಣ

ಪ್ರತ್ಯೇಕ ಅಕಾಡೆಮಿಗಳಲ್ಲಿ ಸಿಂಧು, ಸೈನಾ ತರಬೇತಿ

Published:
Updated:
ಪ್ರತ್ಯೇಕ ಅಕಾಡೆಮಿಗಳಲ್ಲಿ ಸಿಂಧು, ಸೈನಾ ತರಬೇತಿ

ನವದೆಹಲಿ: ‘ಭಾರತದ ಬ್ಯಾಡ್ಮಿಂಟನ್‌ ಆಟಗಾರ್ತಿಯರಾದ ಪಿ.ವಿ. ಸಿಂಧು ಮತ್ತು ಸೈನಾ ನೆಹ್ವಾಲ್‌ ಅವರು ಪ್ರತ್ಯೇಕ ಅಕಾಡೆಮಿಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ’ ಎಂದು ಸಿಂಧು ಅವರ ತಂದೆ ಪಿ.ವಿ.ರಮಣ ತಿಳಿಸಿದ್ದಾರೆ.

ರಾಷ್ಟ್ರೀಯ ಕೋಚ್‌ ಪುಲ್ಲೇಲ ಗೋಪಿಚಂದ್‌ ಅವರು ಹೈದರಾಬಾದ್‌ನಲ್ಲಿ ಎರಡು ಅಕಾಡೆಮಿ ನಡೆಸುತ್ತಿದ್ದಾರೆ. ಈ ಪೈಕಿ ಹೊಸ ಅಕಾಡೆಮಿಯಲ್ಲಿ ಸಿಂಧು ಮತ್ತು ಸೈನಾ ಈ ಮೊದಲು ಅಭ್ಯಾಸ ನಡೆಸುತ್ತಿದ್ದರು.

ಇತ್ತೀಚೆಗೆ ಆಸ್ಟ್ರೇಲಿಯಾದ ಗೋಲ್ಡ್‌ ಕೋಸ್ಟ್‌ನಲ್ಲಿ ನಡೆದಿದ್ದ ಕಾಮನ್‌ವೆಲ್ತ್‌ ಕ್ರೀಡಾಕೂಟದ ಫೈನಲ್‌ನಲ್ಲಿ ಸೈನಾ, ಸಿಂಧು ವಿರುದ್ಧ ಗೆದ್ದು ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು. ಈ ಸೋಲಿನ ನಂತರ ಸಿಂಧು ಹಳೆಯ ಅಕಾಡೆಮಿಯಲ್ಲಿ ತರಬೇತಿ ನಡೆಸಲು ತೀರ್ಮಾನಿಸಿದ್ದಾರೆ.

‘ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಸೈನಾ ಮತ್ತು ಸಿಂಧು ಪರಸ್ಪರ ಮುಖಾಮುಖಿಯಾಗಬೇಕಾಗುತ್ತದೆ. ಒಂದೇ ಅಕಾಡೆಮಿಯಲ್ಲಿ ತರಬೇತಿ ಪಡೆಯುವುದರಿಂದ ಸಿಂಧು ಆಟದ ತಂತ್ರಗಳನ್ನು ಸೈನಾ ಅರಿತುಕೊಳ್ಳುವ ಸಾಧ್ಯತೆ ಇರುತ್ತದೆ. ಈ ಕಾರಣದಿಂದಾಗಿ ಸಿಂಧು ಅಕಾಡೆಮಿ ಬದಲಿಸಿದ್ದಾಳೆ’ ಎಂದು ರಮಣ ನುಡಿದಿದ್ದಾರೆ.

‘ಗೋಪಿಚಂದ್‌ ಅವರು ಬೆಳಿಗ್ಗೆ 7ರಿಂದ 8.30ರವರೆಗೆ ಸಿಂಧುಗೆ ತರಬೇತಿ ನೀಡುತ್ತಾರೆ. ನಂತರ ಇಂಡೊನೇಷ್ಯಾದ ಇಬ್ಬರು ಕೋಚ್‌ಗಳ ಮೇಲ್ವಿಚಾರಣೆಯಲ್ಲಿ ಸಿಂಧು ಅಭ್ಯಾಸ ನಡೆಸುತ್ತಾಳೆ’ ಎಂದಿದ್ದಾರೆ.

ಗಾಯದ ಕಾರಣ ಸಿಂಧು ಈ ಬಾರಿಯ ಉಬರ್‌ ಕಪ್‌ ಟೂರ್ನಿಯಲ್ಲಿ ಆಡಿರಲಿಲ್ಲ. ಈ ಕುರಿತು ಪ್ರತಿಕ್ರಿಯಿಸಿದ ರಮಣ, ‘ಸಿಂಧು ಈಗ ಸಂಪೂರ್ಣವಾಗಿ ಗುಣಮುಖವಾಗಿದ್ದಾಳೆ. ಈ ತಿಂಗಳು ನಡೆಯುವ ಮಲೇಷ್ಯಾ ಓಪನ್‌ ಟೂರ್ನಿಯಲ್ಲಿ ಕಣಕ್ಕಿಳಿಯುತ್ತಾಳೆ. ಇಂಡೊನೇಷ್ಯಾ ಮತ್ತು ಥಾಯ್ಲೆಂಡ್‌ ಓಪನ್‌ ಟೂರ್ನಿಗಳಲ್ಲೂ ಭಾಗವಹಿಸಲಿದ್ದಾಳೆ. ವಿಶ್ವ ಚಾಂಪಿಯನ್‌ಷಿಪ್‌ಗೆ ವಿಶೇಷ ತರಬೇತಿ ಪಡೆಯಲು ನಿರ್ಧರಿಸಿದ್ದು, ಈ ಕಾರಣದಿಂದಾಗಿ ಸಿಂಗಪುರ ಓಪನ್‌ನಿಂದ ಹಿಂದೆ ಸರಿಯಲು ತೀರ್ಮಾನಿಸಿದ್ದಾಳೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry