7

ಬಿಟ್‌ಕಾಯಿನ್ ವಹಿವಾಟು ಪ್ರಕರಣ: ಉದ್ಯಮಿ ರಾಜ್‌ ಕುಂದ್ರಾ ವಿಚಾರಣೆ

Published:
Updated:
ಬಿಟ್‌ಕಾಯಿನ್ ವಹಿವಾಟು ಪ್ರಕರಣ: ಉದ್ಯಮಿ ರಾಜ್‌ ಕುಂದ್ರಾ ವಿಚಾರಣೆ

ಮುಂಬೈ: ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಅವರನ್ನು ಬಿಟ್‌ಕಾಯಿನ್ ವಹಿವಾಟು ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ಇ.ಡಿ.) ಮಂಗಳವಾರ ವಿಚಾರಣೆ ನಡೆಸಿದೆ.

ಉದ್ಯಮಿ ಕುಂದ್ರಾ ಅವರನ್ನು ಇ.ಡಿ. ಅಧಿಕಾರಿಗಳು ಇಲ್ಲಿನ ತಮ್ಮ ಕಚೇರಿಗೆ ಕರೆಸಿಕೊಂಡಿದ್ದರು. ಪ್ರಕರಣದಲ್ಲಿ ಕುಂದ್ರಾ ಅವರ ಪಾತ್ರದ ಬಗ್ಗೆ ಅಧಿಕಾರಿಗಳು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

ಗೈನ್‌ಬಿಟ್‌ಕಾಯಿನ್ ಎಂಬ ಜಾಲತಾಣದಲ್ಲಿ ಬಿಟ್‌ಕಾಯಿನ್ ರೂಪದಲ್ಲಿ ಹಣ ಹೂಡಿಕೆ ಮಾಡಿಸಿ, ವಂಚಿಸಿದ ಪ್ರಕರಣ ಇದಾಗಿದೆ. ಈ ಸಂಬಂಧ ಗೈನ್‌ಬಿಟ್‌ಕಾಯಿನ್‌ನ ಸಂಸ್ಥಾಪಕ ಅಮಿತ್ ಭಾರದ್ವಾಜ್ ಮತ್ತು ಇನ್ನೂ ಎಂಟು ಮಂದಿಯ ವಿರುದ್ಧ ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಿತ್ತು.

ಅಮಿತ್ ಭಾರದ್ವಾಜ್ ಗೈನ್‌ಬಿಟ್‌ಕಾಯಿನ್‌ನಲ್ಲಿ ಸುಮಾರು 8,000 ಮಂದಿಯಿಂದ ಹೂಡಿಕೆ ಮಾಡಿಸಿದ್ದರು. ₹ 2,000 ಕೋಟಿಗೂ ಹೆಚ್ಚು ಹೂಡಿಕೆ ಆಗಿತ್ತು. ಆ ಹಣ ವಾಪಸ್ ಆಗದ ಕಾರಣ ಮಹಾರಾಷ್ಟ್ರದ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಇದರ ಆಧಾರದ ಮೇಲೆ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿತ್ತು.

‘ಭಾರತದಲ್ಲಿ ಬಿಟ್‌ಕಾಯಿನ್ ವಹಿವಾಟಿಗೆ ಅವಕಾಶವಿಲ್ಲ. ಅಂತಹ ವಹಿವಾಟುಗಳು ಅಕ್ರಮ. ದೇಶದಲ್ಲಿ ಅಂತಹ ವಹಿವಾಟು ನಡೆಸಲು ರಿಸರ್ವ್ ಬ್ಯಾಂಕ್ ಯಾರಿಗೂ ಅನುಮತಿ ಅಥವಾ ಪರವಾನಗಿ ನೀಡಿಲ್ಲ’ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಕಳೆದ ವರ್ಷ ಲೋಕಸಭೆಗೆ ಮಾಹಿತಿ ನೀಡಿದ್ದರು.

*

ಪ್ರಕರಣದಲ್ಲಿ ಕುಂದ್ರಾ ಅವರ ಪಾತ್ರವಿರುವ ಬಗ್ಗೆ ಸುಳಿವುಗಳು ದೊರೆತಿವೆ. ಹೀಗಾಗಿ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಕರೆಸಿಕೊಳ್ಳಲಾಗಿತ್ತು.

–ಜಾರಿ ನಿರ್ದೇಶನಾಲಯದ ಹೇಳಿಕೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry