ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ಚೀನಾ ತೈಪೆ ಬ್ಯಾಡ್ಮಿಂಟನ್‌ ಟೂರ್ನಿ: ಸಿಂಧು, ಸೈನಾ, ಶ್ರೀಕಾಂತ್‌ ಅಲಭ್ಯ

ಪ್ರಶಸ್ತಿಯ ಕನಸಲ್ಲಿ ಜಯರಾಮ್‌, ಸೌರಭ್‌
Last Updated 1 ಅಕ್ಟೋಬರ್ 2018, 17:22 IST
ಅಕ್ಷರ ಗಾತ್ರ

ತೈಪೆ ಸಿಟಿ: ಭಾರತದ ಅಜಯ್‌ ಜಯರಾಮ್‌ ಮತ್ತು ಸೌರಭ್‌ ವರ್ಮಾ ಅವರು ಮಂಗಳವಾರದಿಂದ ನಡೆಯುವ ಚೀನಾ ತೈಪೆ ವಿಶ್ವ ಟೂರ್‌ ಸೂಪರ್‌ 300 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ.

ಮುಂಬರುವ ಡೆನ್ಮಾರ್ಕ್‌ (ಅ.16–21) ಮತ್ತು ಫ್ರೆಂಚ್‌ ಓಪನ್‌ (ಅ.23–28) ಟೂರ್ನಿಗಳಿಗೆ ಸಿದ್ಧತೆ ಕೈಗೊಳ್ಳುವ ಉದ್ದೇಶದಿಂದ ಪಿ.ವಿ.ಸಿಂಧು, ಸೈನಾ ನೆಹ್ವಾಲ್‌ ಮತ್ತು ಕಿದಂಬಿ ಶ್ರೀಕಾಂತ್‌ ಅವರು ತೈಪೆ ಟೂರ್ನಿಯಲ್ಲಿ ಭಾಗವಹಿಸುತ್ತಿಲ್ಲ.

ಗಾಯದಿಂದ ಚೇತರಿಸಿಕೊಂಡ ಬಳಿಕ ಜಯರಾಮ್‌ ಅವರು ವಿಯೆಟ್ನಾಂ ಓಪನ್‌ ಮತ್ತು ವೈಟ್‌ ನೈಟ್ಸ್‌ ಟೂರ್ನಿಗಳಲ್ಲಿ ಫೈನಲ್‌ ಪ್ರವೇಶಿಸಿದ್ದರು. ಉತ್ತಮ ಲಯದಲ್ಲಿರುವ ಇವರು ತೈಪೆ ಟೂರ್ನಿಯಲ್ಲಿ ಶುಭಾರಂಭ ಮಾಡುವ ವಿಶ್ವಾಸ ಹೊಂದಿದ್ದಾರೆ. ಪುರುಷರ ಸಿಂಗಲ್ಸ್‌ ವಿಭಾಗದ ಆರಂಭಿಕ ಸುತ್ತಿನಲ್ಲಿ ಜಯರಾಮ್‌ಗೆ ಜಪಾನ್‌ನ ಹಾಶಿರೋ ಶಿಮೊನೊ ಸವಾಲು ಎದುರಾಗಲಿದೆ.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 65ನೇ ಸ್ಥಾನದಲ್ಲಿರುವ ಸೌರಭ್‌, ಮೊದಲ ಸುತ್ತಿನಲ್ಲಿ ಚೀನಾ ತೈಪೆಯ ಲೀ ಚಿಯಾ ಹಾವೊ ವಿರುದ್ಧ ಸೆಣಸಲಿದ್ದಾರೆ.

ಸೌರಭ್‌ ಅವರು ಜುಲೈನಲ್ಲಿ ನಡೆದಿದ್ದ ರಷ್ಯಾ ಓಪನ್‌ನಲ್ಲಿ ಪ್ರಶಸ್ತಿ ಜಯಿಸಿದ್ದರು. ಆದರೆ ನಂತರ ನಡೆದ ಕೆಲ ಟೂರ್ನಿಗಳಲ್ಲಿ ಉತ್ತಮ ಸಾಮರ್ಥ್ಯ ತೋರಲು ವಿಫಲರಾಗಿದ್ದರು.

ರಾಹುಲ್‌ ಯಾದವ್‌ ಚಿತ್ತಬೋಯಿನಾ ಅವರೂ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದಾರೆ. ಲಾಗೋಸ್‌ ಮತ್ತು ಮಾರಿಷಸ್‌ನಲ್ಲಿ ನಡೆದಿದ್ದ ಅಂತರರಾಷ್ಟ್ರೀಯ ಚಾಲೆಂಜ್‌ ಟೂರ್ನಿಗಳಲ್ಲಿ ಚಾಂಪಿಯನ್‌ ಆಗಿದ್ದ ರಾಹುಲ್‌, ಆರಂಭಿಕ ಸುತ್ತಿನಲ್ಲಿ ತೈವಾನ್‌ನ ಲು ಚಿಯಾ ಹುಂಗ್‌ ವಿರುದ್ಧ ಹೋರಾಡಲಿದ್ದಾರೆ.

ಕರ್ನಾಟಕದ ಅಭಿಷೇಕ್‌ ಎಲಿಗಾರ್‌ಗೆ ಮೊದಲ ಸುತ್ತಿನಲ್ಲೇ ಕಠಿಣ ಪೈಪೋಟಿ ಎದುರಾಗಲಿದೆ. ಅಭಿಷೇಕ್‌, ಐದನೇ ಶ್ರೇಯಾಂಕದ ಆಟಗಾರ ಜಾನ್‌ ಓ ಜೋರ್ಗೆನ್ಸನ್‌ ವಿರುದ್ಧ ಆಡಲಿದ್ದಾರೆ.

ಮಹಿಳೆಯರ ಸಿಂಗಲ್ಸ್‌ನಲ್ಲಿ ಸಾಯಿ ಉತ್ತೇಜಿತಾ ರಾವ್‌ ಚುಕ್ಕಾ ಮತ್ತು ಶ್ರೀಕೃಷ್ಣ ಪ್ರಿಯ ಕುದರವಳ್ಳಿ ಅವರು ಭಾರತದ ಭರವಸೆಯಾಗಿದ್ದಾರೆ.

ಮೊದಲ ಸುತ್ತಿನಲ್ಲಿ ಚುಕ್ಕಾ, ಚೀನಾ ತೈಪೆಯ ಯಿಂಗ್‌ ಲೀ ವಿರುದ್ಧ ಆಡಲಿದ್ದಾರೆ. ಶ್ರೀಕೃಷ್ಣ ಪ್ರಿಯ, ಲಿನ್‌ ಯಿಂಗ್‌ ಚುನ್‌ ಅವರ ಸವಾಲಿಗೆ ಎದೆಯೊಡ್ಡಲಿದ್ದಾರೆ.

ಮುಗ್ದಾ ಆಗ್ರೇಯಾ ಆರಂಭಿಕ ಸುತ್ತಿನಲ್ಲಿ ಏಳನೇ ಶ್ರೇಯಾಂಕದ ಆಟಗಾರ್ತಿ ಸೋನಿಯಾ ಚೆಹ್‌ ವಿರುದ್ಧ ಸೆಣಸುವರು.

ಪುರುಷರ ಡಬಲ್ಸ್‌ನಲ್ಲಿ ತರುಣ್‌ ಕೋನ ಮತ್ತು ಮಲೇಷ್ಯಾದ ಲಿಮ್‌ ಖಿಮ್‌ ವಾಹ್‌ ಜೋಡಿ ಮಲೇಷ್ಯಾದ ಒಂಗ್‌ ಯೀವ್ ಸಿನ್‌ ಮತ್ತು ಟಿಯೊ ಈ ಯಿ ವಿರುದ್ಧ ಆಡಲಿದೆ.

ಮಹಿಳೆಯರ ಡಬಲ್ಸ್‌ ಮತ್ತು ಮಿಶ್ರ ಡಬಲ್ಸ್‌ ವಿಭಾಗಗಳಲ್ಲಿ ಭಾರತದ ಸ್ಪರ್ಧಿಗಳು ಭಾಗವಹಿಸುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT