ಆಕರ್ಷಕ ನೋಟದ ಉತ್ತಮ ಫೋನ್‌

7

ಆಕರ್ಷಕ ನೋಟದ ಉತ್ತಮ ಫೋನ್‌

ಯು.ಬಿ. ಪವನಜ
Published:
Updated:
ಆಕರ್ಷಕ ನೋಟದ ಉತ್ತಮ ಫೋನ್‌

ಒಪ್ಪೊ ಕಂಪನಿ ತನ್ನ ಹಲವು ಫೋನ್‌ಗಳಿಂದ ಜನರಿಗೆ ಪರಿಚಿತ. ಚೀನಾ ದೇಶದ ಈ ಕಂಪನಿ ₹30 ಸಾವಿರಕ್ಕಿಂತ ಕಡಿಮೆ ಬೆಲೆಯ ಹಲವು ಫೋನ್‌ಗಳನ್ನು ತಯಾರಿಸಿದೆ. ಹುವಾವೆಯವರು ಹೋನರ್ ಎಂಬ ಹೆಸರಿನಲ್ಲಿ ಫೋನ್ ತಯಾರಿಸಿ ಕೊನೆಗೆ ಅದನ್ನೇ ಒಂದು ಕಂಪನಿಯನ್ನಾಗಿಸಿದರು. ಈಗ ಒಪ್ಪೊದವರೂ ಅದೇ ದಾರಿಯಲ್ಲಿ ಸಾಗುತ್ತಿದ್ದಾರೆ. ಅವರು ‘ರಿಯಲ್‌ಮಿ’ ಹೆಸರಿನಲ್ಲಿ ಫೋನ್ ತಯಾರಿಸಿದ್ದಾರೆ. ಮುಂದಕ್ಕೆ ಅದು ಪ್ರತ್ಯೇಕ ಕಂಪನಿಯಾಗಲಿದೆ. ರಿಯಲ್‌ಮಿಯವರು ಅತಿ ಕಡಿಮೆ ಹಣಕ್ಕೆ ಉತ್ತಮ ಗುಣವೈಶಿಷ್ಟ್ಯಗಳ ಫೋನ್ ತಯಾರಿಸಿ ಶಿಯೋಮಿಯವ ಜೊತೆ ನೇರ ಸ್ಪರ್ಧೆಗೆ ಇಳಿದಿದ್ದಾರೆ. ಈ ಕಂಪನಿಯ ರಿಯಲ್‌ಮಿ1 (RealMe1) ನಮ್ಮ ಈ ವಾರದ ಗ್ಯಾಜೆಟ್.

ಈ ಫೋನ್ 3 + 32, 4+64 ಮತ್ತು 6+128 ಗಿಗಾಬೈಟ್ ಮಾದರಿಗಳಲ್ಲಿ ಲಭ್ಯ. ಕಪ್ಪು ವಜ್ರ ಮತ್ತು ಕಡು ಕೆಂಪು ಎಂಬ ಎರಡು ಬಣ್ಣಗಳಲ್ಲಿ ಲಭ್ಯ. ನನಗೆ ವಿಮರ್ಶೆಗೆ ಬಂದುದು 6 + 128 ಗಿಗಾಬೈಟ್‌ನ ಕಪ್ಪು ವಜ್ರ ವಿನ್ಯಾಸದ್ದು. ಇದರ ರಚನೆ ಮತ್ತು ವಿನ್ಯಾಸ ಅತ್ಯುತ್ತಮವಾಗಿದೆ. ಮೊದಲ ನೋಟಕ್ಕೆ ನೀವು ಇದಕ್ಕೆ ಮಾರುಹೋಗುತ್ತೀರಿ ಎಂಬುದರಲ್ಲಿ ಅನುಮಾನವೇ ಇಲ್ಲ. ಬಲ ಭಾಗದಲ್ಲಿ ಆನ್/ಆಫ್ ಸ್ವಿಚ್ ಮತ್ತು ಸಿಮ್ ಹಾಗೂ ಮೆಮೊರಿ ಕಾರ್ಡ್ ಹಾಕುವ ಟ್ರೇ ಇವೆ. ಇದರಲ್ಲಿ ಎರಡು ನ್ಯಾನೋ ಸಿಮ್ ಮತ್ತು ಮೆಮೊರಿ ಕಾರ್ಡ್ ಹಾಕಬಹುದು. ಎಡಭಾಗದಲ್ಲಿ ವಾಲ್ಯೂಮ್ ಸ್ವಿಚ್ ಇದೆ. ಕೆಳಭಾಗದಲ್ಲಿ ಯುಎಸ್‌ಬಿ ಕಿಂಡಿ ಮತ್ತು 3.5 ಮಿ. ಮೀ. ಇಯರ್‌ಫೋನ್ ಕಿಂಡಿಗಳಿವೆ. ಹಿಂದುಗಡೆ ಬಲಮೂಲೆಯಲ್ಲಿ ಕ್ಯಾಮೆರಾ ಮತ್ತು ಪಕ್ಕದಲ್ಲಿ ಫ್ಲಾಶ್ ಇವೆ. ಇದರ ಒಂದು ಪ್ರಮುಖ ಕೊರತೆಯೆಂದರೆ ಇದರಲ್ಲಿ ಬೆರಳಚ್ಚು ಸ್ಕ್ಯಾನರ್ ಇಲ್ಲ ಎಂಬುದು. ಹಿಂಭಾಗದ ಕವಚದಲ್ಲಿ ವಜ್ರದ ಮಾದರಿಯ ವಿನ್ಯಾಸವಿದ್ದು ನೋಡಲು ಅತಿ ಸುಂದರವಾಗಿದೆ. ಕವಚ ತುಂಬ ನಯವಾಗಿದೆ. ಕೈಯಿಂದ ಜಾರಿ ಬೀಳಬಾರದು ಎಂದಿದ್ದರೆ ಅಧಿಕ ಕವಚ ಹಾಕಿಕೊಳ್ಳಬೇಕು. ಆದರೆ ಹಾಗೆ ಮಾಡಿದರೆ ನೀವು ಇದರ ಸೌಂದರ್ಯದಿಂದ ವಂಚಿತರಾಗುತ್ತೀರಿ.

ಈ ಫೋನಿನ ಅಂಟುಟು ಬೆಂಚ್‌ಮಾರ್ಕ್ 1,40,165 ಇದೆ. ಅಂದರೆ ಇದು ವೇಗದ ಫೋನ್ ಎನ್ನಬಹುದು. ಬಳಸುವಾಗ ಇದು ವೇದ್ಯವಾಗುತ್ತದೆ. ಮೂರು ಆಯಾಮದ ಆಟಗಳನ್ನು ಕೂಡ ತೃಪ್ತಿದಾಯಕವಾಗಿ ಆಡಬಹುದು. ಹಲವು ತಂತ್ರಾಂಶಗಳನ್ನು ಏಕಕಾಲಕ್ಕೆ ತೆರೆದರೂ ಇದು ತಡೆತಡೆದು ಕೆಲಸ ಮಾಡುವುದಿಲ್ಲ.

ಇದರಲ್ಲಿರುವುದು (2160 x 1080) ರೆಸ್ಯುಲೂಷನ್‌ ಪರದೆ. ಇದು ಹೈಡೆಫಿನಿಶನ್‌ಗಿಂತ ಹೆಚ್ಚು. ಅಂತೆಯೇ ವಿಡಿಯೊ ವೀಕ್ಷಣೆಯ ಅನುಭವ ಉತ್ತಮವಾಗಿದೆ. ಹೈಡೆಫಿನಿಶನ್ ಮತ್ತು ಅಲ್ಟ್ರಾಹೈಡೆಫಿನಿಶನ್ (4k) ವಿಡಿಯೊ ವೀಕ್ಷಣೆ ಮಾಡಬಹುದು. ಈ ಫೋನಿನ ಆಡಿಯೊ ಎಂಜಿನ್ ಚೆನ್ನಾಗಿದೆ. ಹಾಗೆಂದು ತುಂಬ ಮೇಲ್ಮಟ್ಟದ್ದು ಎನ್ನುವಂತಿಲ್ಲ. ಸ್ಪೀಕರ್ ಚೆನ್ನಾಗಿದೆ. ಫೋನಿನ ಜೊತೆ ಇಯರ್‌ಫೋನ್ ನೀಡಿಲ್ಲ. ನಿಮ್ಮಲ್ಲಿ ಉತ್ತಮ ಇಯರ್‌ಫೋನ್ ಇದ್ದರೆ ಅದನ್ನು ಜೋಡಿಸಿ ಉತ್ತಮ ಸಂಗೀತ ಆಲಿಸುವ ಅನುಭವ ಪಡೆಯಬಹುದು. ಇದರಲ್ಲಿರುವ ಎಫ್‌ಎಂ ರೇಡಿಯೊದ ಗ್ರಾಹಕ ಶಕ್ತಿ ಕಡಿಮೆ ಇದೆ. ಮನೆಯೊಳಗೆ ಎಲ್ಲ ಕೇಂದ್ರಗಳು ಬರುವುದಿಲ್ಲ.

ಈ ರಿಯಲ್‌ಮಿ1 ಫೋನಿನಲ್ಲಿರುವುದು 13 ಮೆಗಾಪಿಕ್ಸೆಲ್‌ನ ಪ್ರಾಥಮಿಕ ಕ್ಯಾಮೆರಾ. ನೀಡುವ ಹಣಕ್ಕೆ ಹೋಲಿಸಿದರೆ ಕ್ಯಾಮೆರಾದ ಗುಣಮಟ್ಟ ನಿಜಕ್ಕೂ ಚೆನ್ನಾಗಿದೆ ಎನ್ನಬಹುದು. ಕ್ಯಾಮೆರಾದ ಕಿರುತಂತ್ರಾಂಶದಲ್ಲಿ ಮ್ಯಾನ್ಯುವಲ್ ಆಯ್ಕೆ ಕೂಡ ಇದೆ. ಬಹುತೇಕ ಸಂದರ್ಭಗಳಲ್ಲಿ ಉತ್ತಮ ಫೋಟೊ ತೆಗೆಯುತ್ತದೆ. ಕಡಿಮೆ ಬೆಳಕಿನಲ್ಲೂ ಒಂದು ಮಟ್ಟಿಗೆ ತೃಪ್ತಿದಾಯಕವಾಗಿ ಫೋಟೊ ತೆಗೆಯುತ್ತದೆ. ಆದರೂ ಕೆಲವು ಸಂದರ್ಭಗಳಲ್ಲಿ ಫೋಕಸ್ ಮಾಡಲು ಸ್ವಲ್ಪ ಒದ್ದಾಡುತ್ತದೆ. ಒಂದು ಮಟ್ಟಿಗೆ ಉತ್ತಮ ಕ್ಯಾಮೆರಾ ಫೋನ್‌ ಬೇಕು ಎನ್ನುವವರಿಗೆ ಇದು ಆಗಬಹುದು.

ಬ್ಯಾಟರಿಯ ಶಕ್ತಿ 3410 mAh ಎಂದರೆ ಸಾಕಷ್ಟಾಯಿತು. ಒಂದು ದಿನಕ್ಕೆ ಧಾರಾಳ ಸಾಕು. ನನಗೆ ವಿಮರ್ಶೆಗೆ ಬಂದ ಫೋನಿನ ಜೊತೆ ಚಾರ್ಜರ್ ನೀಡಿಲ್ಲ. ಆದುದರಿಂದ ಅವರದೇ ಚಾರ್ಜರ್‌ನಲ್ಲಿ ಪೂರ್ತಿ ಚಾರ್ಜ್ ಆಗಲು ಎಷ್ಟು ಸಮಯ ಬೇಕು ಎಂದು ತಿಳಿದಿಲ್ಲ. ನನ್ನಲ್ಲಿದ್ದ 1.5 A ಚಾರ್ಜರ್ ಜೋಡಿಸಿದಾಗ 2% ರಿಂದ 100% ಚಾರ್ಜ್ ಆಗಲು ಸುಮಾರು ಎರಡೂವರೆ ಗಂಟೆ ಬೇಕಾಯಿತು.

ಈ ಫೋನಿನ ಹೆಚ್ಚುಗಾರಿಕೆಯಿರುವುದು ಕಡಿಮೆ ಬೆಲೆಗೆ 6+128 ಗಿಗಾಬೈಟ್ ಮೆಮೊರಿ, ಉತ್ತಮ ವೇಗ ಮತ್ತು ಅತ್ಯುತ್ತಮ ವಿನ್ಯಾಸ. ಒಟ್ಟಿನಲ್ಲಿ ಹೇಳುವುದಾದರೆ ನೀಡುವ ಹಣಕ್ಕೆ ಅತ್ಯುತ್ತಮ ಖರೀದಿ ಎನ್ನಬಹುದು. 

ವಾರದ ಆಪ್ (app)

ಕನ್ನಡದಲ್ಲಿ ಹುಟ್ಟುಹಬ್ಬದ ಶುಭಾಶಯ

ಇಂಗ್ಲಿಷಿನಲ್ಲಿ Happy birthday ಎಂದು ಹಲವು ನಮೂನೆ, ವಿನ್ಯಾಸಗಳಲ್ಲಿ ಶುಭಾಶಯ ತಿಳಿಸಲು ಜಾಲತಾಣಗಳಿವೆ, ಕಿರುತಂತ್ರಾಂಶಗಳಿವೆ (ಆ್ಯಪ್‌). ಕನ್ನಡದಲ್ಲೂ ತಿಳಿಸಬೇಕೇ? ಈಗ ಅದಕ್ಕೂ ಕಿರುತಂತ್ರಾಂಶ ಲಭ್ಯವಿದೆ. ಇದು ಬೇಕಿದ್ದಲ್ಲಿ ನೀವು ಗೂಗಲ್‌ ಪ್ಲೇ ಸ್ಟೋರಿಗೆ ಭೇಟಿ ನೀಡಿ Kannada Birthday Photo Frames Greetings ಎಂದು ಹುಡುಕಬೇಕು ಅಥವಾ http://bit.ly/gadgetloka332 ಜಾಲತಾಣಕ್ಕೆ ಭೇಟಿ ನೀಡಬೇಕು. ಯಾರಿಗೆ ಶುಭಾಶಯ ಹೇಳಬೇಕೋ ಅವರ ಫೋಟೊವನ್ನು ಆಯ್ಕೆ ಮಾಡಿಕೊಂಡು ಅದಕ್ಕೆ ಬೇರೆ ಬೇರೆ ನಮೂನೆಯಲ್ಲಿ ಲಭ್ಯವಿರುವ ಯಾವುದಾದರೂ ಫ್ರೇಂ ಅನ್ನು ಅಳವಡಿಸಬಹುದು. ಲಭ್ಯವಿರುವ ಶುಭಾಶಯ ಸಂದೇಶ ಬಳಸಬಹುದು ಅಥವಾ ನಿಮ್ಮದೇ ಸಂದೇಶವನ್ನು ಬರೆಯಬಹುದು. ಕಿರುತಂತ್ರಾಂಶವೇನೋ ಚೆನ್ನಾಗಿದೆ. ಆದರೆ ಅತಿಯಾದ ಜಾಹೀರಾತಿನ ಕಿರಿಕಿರಿಯನ್ನು ಮಾತ್ರ ಸ್ವಲ್ಪ ಸಹಿಸಿಕೊಳ್ಳಬೇಕು.

ಗ್ಯಾಜೆಟ್ ಪದ

Data file = ದತ್ತಾಂಶ ಕಡತ

ದತ್ತಾಂಶಗಳು (data) ತುಂಬಿರುವ ಕಡತ (ಫೈಲ್). ಈ ಕಡತಗಳು ಸಾಮಾನ್ಯವಾಗಿ ಮಾನವರಿಗೆ ಓದಲು ಅಸಾಧ್ಯವಾಗಿರುತ್ತವೆ. ಅವುಗಳನ್ನು ದತ್ತಸಂಚಯ ಆನ್ವಯಿಕ ತಂತ್ರಾಂಶಗಳು (Database application) ಓದಬಲ್ಲವು ಅಥವಾ ಪ್ರೋಗ್ರಾಮ್ ಮೂಲಕ ಓದಬಹುದು ಹಾಗೂ ಬಳಕೆ ಮಾಡಬಹುದು.

ಗ್ಯಾಜೆಟ್ ಸುದ್ದಿ

ಆಹಾರ ಪಾತ್ರೆಗೂ ಸ್ಮಾರ್ಟ್‌ಟ್ಯಾಗ್

ಹಲವು ನಮೂನೆಯ ಸ್ಮಾರ್ಟ್‌ಟ್ಯಾಗ್ ಬಗ್ಗೆ ಕೇಳಿರಬಹುದು. ಈ ಅಂಕಣದಲ್ಲೂ ಅವುಗಳ ಹಲವು ಸಲ ಬರೆಯಲಾಗಿತ್ತು. ಈ ಸಲ ಹೇಳುತ್ತಿರುವುದು ಆಹಾರ ಸಂಗ್ರಹಣೆಯ ಪಾತ್ರೆಗೆ ಜೋಡಿಸುವ ಸ್ಮಾರ್ಟ್‌ಟ್ಯಾಗ್ ಬಗ್ಗೆ. ಅದು ಮಾಮೂಲಿ ಟ್ಯಾಗ್ ಅಲ್ಲ. ಅದನ್ನು ಬ್ಲೂಟೂತ್ ಮೂಲಕ ನಿಮ್ಮ ಸ್ಮಾರ್ಟ್‌ಫೋನಿಗೆ, ಅಮೆಝಾನ್ ಇಕೋಗೆ ಎಲ್ಲ ಜೋಡಿಸಬಹುದು. ಆಹಾರ ಯಾವುದು, ಅದು ಎಷ್ಟು ದಿನ ಉಳಿಯಬಲ್ಲುದು ಎಂದು ನಮೂದಿಸಿದರೆ ಆಹಾರ ಹಳತಾಗುತ್ತಿದ್ದಂತೆ ಅದು ನಿಮಗೆ ಎಚ್ಚರಿಸುತ್ತದೆ. ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾಗ ನಿಮ್ಮ ಫ್ರಿಜ್‌ನಲ್ಲಿ ಇಂತಹ ಆಹಾರ ಇದೆ, ಅದನ್ನು ಈ ದಿನ ನೀವು ತಿಂದು ಮುಗಿಸಲೇಬೇಕು ಎಂದು ಎಚ್ಚರಿಸುತ್ತದೆ. ಇದು ಇನ್ನೂ ಪ್ರಯೋಗಶಾಲೆಯಲ್ಲಿದೆ.

ಗ್ಯಾಜೆಟ್ ಸಲಹೆ

ರಾಹುಲ್ ರವಿ ಅವರ ಪ್ರಶ್ನೆ: ಆಂಡ್ರೋಯಿಡ್ ಆಟಗಳನ್ನು ಐಫೋನಿಗೆ ಡೌನ್‌ಲೋಡ್ ಮಾಡುವುದು ಹೇಗೆ?

ಉ: ಇದು ಸಾಧ್ಯವಿಲ್ಲ. ಆಪಲ್ ಸ್ಟೋರಿನಲ್ಲಿ ಅದೇ ಆಟದ ಐಫೋನ್ ಆವೃತ್ತಿ ಇದೆಯೇ ಪರಿಶೀಲಿಸಿ. ಸಾಮಾನ್ಯವಾಗಿ ಇರುತ್ತದೆ. ಇದ್ದರೆ ಅದನ್ನು ಹಾಕಿಕೊಳ್ಳಿ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry