ಉಚಿತ ಬಸ್‌ಪಾಸ್‌ ವಿತರಣೆಗೆ ಒತ್ತಾಯ

7
ಯಲಬುರ್ಗಾ: ಎಸ್‌ಎಫ್‌ಐ ನೇತೃತ್ವದಲ್ಲಿ ಪ್ರತಿಭಟನೆ

ಉಚಿತ ಬಸ್‌ಪಾಸ್‌ ವಿತರಣೆಗೆ ಒತ್ತಾಯ

Published:
Updated:

ಯಲಬುರ್ಗಾ: ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್‍ಪಾಸ್ ವಿತರಿಸುವಂತೆ ಒತ್ತಾಯಿಸಿ ಗುರುವಾರ ಭಾರತ ವಿದ್ಯಾರ್ಥಿ ಪೆಡರೇಷನ್ (ಎಸ್‌ಎಫ್‌ಐ) ತಾಲ್ಲೂಕು ಸಮಿತಿ ನೇತೃತ್ವದಲ್ಲಿ ವಿವಿಧ ಶಾಲಾಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜ ಮೈದಾನದಿಂದ ಪ್ರತಿಭಟನಾ ಮೆರವಣಿಗೆ ಕೈಗೊಂಡ ಪ್ರತಿಭಟನಾಕಾರರು, ತಹಶೀಲ್ ಕಚೇರಿಗೆ ತೆರಳಿ ತಹಶೀಲ್ದಾರರರಿಗೆ ಮನವಿಪತ್ರ ಸಲ್ಲಿಸಿದರು.

ಎಸ್‍ಎಫ್‍ಐ ತಾಲೂಕು ಘಟಕದ ಸಂಚಾಲಕ ಎಂ.ಸಿದ್ದಪ್ಪ ಮಾತನಾಡಿ, ‘ರಾಜ್ಯದಲ್ಲಿ 1ನೇ ತರಗತಿಯಿಂದ ಉನ್ನತ ಶಿಕ್ಷಣದವರೆಗೊ ವಿದ್ಯಾಭ್ಯಾಸ ಮಾಡುತ್ತಿರುವ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್‍ಪಾಸ್ ವಿತರಿಸುವುದಾಗಿ ಹಿಂದಿನ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‍ನಲ್ಲಿ ಘೋಷಿಸಿದ್ದರು. ಆದರೆ ಅದನ್ನು ಅನುಷ್ಠಾನಕ್ಕೆ ತರುವಲ್ಲಿ ಸರ್ಕಾರ ಹಿಂಜರಿಯುತ್ತಿದೆ’ ಎಂದು ಆರೋಪಿಸಿದರು.

‘ರಾಜ್ಯದಲ್ಲಿ ಬಹುತೇಕ ಬಡ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದಿಂದ ನಗರಪ್ರದೇಶದಕ್ಕೆ ಬಂದು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಬಸ್ ಪಾಸ್‌ಗೆ ಹಣ ಕೊಡಲು ಕಷ್ಟವಾಗುತ್ತಿದೆ. ಅನೇಕ ವಿದ್ಯಾರ್ಥಿಗಳೂ ಆರ್ಥಿಕ ಸಮಸ್ಯೆಯಿಂದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಈ ಕಾರಣದಿಂದ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಅನ್ವಯವಾಗುವಂತೆ ಉಚಿತ ಬಸ್ ಪಾಸ್ ನೀಡಲು ಈಗಿನ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಆದೇಶಿಸಬೇಕು. ವಿಳಂಬ ನೀತಿ ಅನುಸರಿಸಿದರೆ, ರಾಜ್ಯದೆಲ್ಲೆಡೆ ಹೋರಾಟ ಹಮ್ಮಿಕೊಳ್ಳಲಾಗುವುದು’ ಎಂದರು.

ಎಸ್‍ಎಫ್‍ಐ ಮುಖಂಡರಾದ ತಿರುಪತಿ ನಾಯಕ, ಅಲ್ಲಾಭಕ್ಷಿ ಬನ್ನಿಕೊಪ್ಪ, ಆನಂದ ರಾಠೋಡ ಮಾತನಾಡಿದರು. ಶಾಲಾ ಕಾಲೇಜುಗಳು ಈಗಾಗಲೇ ಪ್ರಾರಂಭಗೊಂಡಿವೆ. ಆದರೆ ಬಸ್‌ಪಾಸ್ ಇರದ ಕಾರಣ ಬಸ್‌ ಮತ್ತು ಖಾಸಗಿ ವಾಹನಗಳಲ್ಲಿ ವಿದ್ಯಾರ್ಥಿಗಳು ಹಣ ಕೊಟ್ಟು ಶಾಲೆಕಾಲೇಜಿಗೆ ಹೋಗುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ’ ಎಂದರು.

ವಿದ್ಯಾರ್ಥಿಗಳಾದ ಗಂಗಮ್ಮ, ಕಲಾವತಿ, ಈರಮ್ಮ, ಹುಲಿಗೆಮ್ಮ, ಉಮಾ, ಶೋಭಾ, ವಿಜಯಲಕ್ಷ್ಮಿ, ಸವಿತಾ, ಕಸ್ತೂರಿ, ನಾಗರಾಜ, ಸಂಗಮೇಶ, ಮಂಜುನಾಥ, ಅಮರೇಶ ಅಂಗಡಿ, ವಾಸು, ಮಹಾಂತೇಶ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry