ಗುರುವಾರ , ಏಪ್ರಿಲ್ 9, 2020
19 °C

ಕಗ್ಗದ ಕಥೆ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಕನ್ನಡ ಸಾಹಿತ್ಯದಲ್ಲಿ ಡಾ. ಡಿ.ವಿ. ಗುಂಡಪ್ಪನವರ ಮೇರುಕೃತಿ ‘ಮಂಕುತಿಮ್ಮನ ಕಗ್ಗ' ಅನನ್ಯ ಗ್ರಂಥ. ಅನೇಕ ದಶಕಗಳಿಂದ ಸಹಸ್ರಾರು ಜನರಿಗೆ ಸಾಂತ್ವನವನ್ನೂ, ತೃಪ್ತಿಯನ್ನೂ, ಮಾರ್ಗದರ್ಶನವನ್ನೂ ನೀಡಿದೆ. ಮಂಕುತಿಮ್ಮನ ಕಗ್ಗದ ಚೌಪದಿಗಳಿಗೆ ಅರ್ಥವಿವರಣೆ ನೀಡುವುದು ಅಂಗೈಯಲ್ಲಿ ಆಕಾಶವನ್ನು ಹಿಡಿದಂತೆ. ಅದೊಂದು ವಿಶಾಲವಾದ ಜೀವನಧರ್ಮದ ದರ್ಶನ.

ಈ ಕಗ್ಗಕ್ಕೆ ಒಂದು ಕಥೆ ಇದೆ - ಸುಂದರವಾದ ಕಥೆ. ಮೂಡಲೂರು ಒಂದು ಹಳ್ಳಿ. ಅಲ್ಲಿ ಒಬ್ಬ ಮೇಷ್ಟ್ರು; ಸಾಧು ಮನುಷ್ಯ. ಅರ್ಧ ಕುರುಡಿಯಾದ ತಾಯಿಯೊಂದಿಗೆ ಈ ಮೇಷ್ಟ್ರು - ತಿಮ್ಮಗುರು - ತನ್ನ ತಂಗಿಯ ಮನೆಯಲ್ಲೇ ವಾಸವಾಗಿದ್ದ. ಅವನಿಗೆ ಮದುವೆಯಾಗಿಲ್ಲ. ಬಡವನೆಂದೋ ಚೆಲುವನಲ್ಲವೆಂದೋ, ಹೆಣ್ಣುಹೆತ್ತವರು ಬರಲಿಲ್ಲವೋ ಅಥವಾ ಅವನೇ ಬೇಡವೆಂದನೋ? ಅದೇನೇ ಇದ್ದರೂ ಅವನು ಸರಳ ಮನದ ತೃಪ್ತಿಯಿಂದ ಐವತ್ತು ವರ್ಷಗಳನ್ನು ಕಳೆದನು.

ಅವನ ತಂಗಿಗೆ ಒಬ್ಬ ಮಗ - ಸೋಮಿ. ಅವನೇ ತಿಮ್ಮಗುರುವಿಗೆ ಜೀವ. ಅವನೇ ಲೋಕ. ಮಾವ ಅವನನ್ನೆತ್ತಿ , ನಡೆಸಿ, ಲಾಲಿಸಿ, ಪ್ರೇಮದ ಅಂಗಿ ತೊಡಿಸಿ, ಪದ್ಯ ಕಲಿಸಿ, ಬರಹ ತಿದ್ದಿಸಿ ಸಂತೋಷಪಡುತ್ತಿದ್ದನು. ಮುಂದೆ ಓದಿಗೆಂದು ಸೋಮಿ ದೊಡ್ಡೂರಾದ ಮೈಲಾರಕ್ಕೆ ಹೊರಟು ನಿಂತಾಗ ತಿಮ್ಮಗುರುವಿನ ಧ್ವನಿಯಲ್ಲಿ ಗದ್ಗದ, ಸೋದರಳಿಯನ ಅಗಲುವ ದುಃಖ.

ಕೆಲವು ದಿನಗಳ ನಂತರ ಮಾವ ತನ್ನ ಪ್ರೀತಿಯ ಅಳಿಯ ಸೋಮಿಯನ್ನು ಕಾಣಲು ಮೈಲಾರಕ್ಕೆ ಬಂದು ಮೈದಾನದಲ್ಲಿ ಆಟವಾಡುತ್ತ, ನಾಗರಿಕತೆಯ ಹೆಮ್ಮೆಯನ್ನು ಮೆರೆಯುತ್ತಿದ್ದವನನ್ನು ಕಂಡು, ಅಳಿಯ ತುಂಬ ಬದಲಾಗಿದ್ದಾನೆ ಎಂದುಕೊಂಡ. ನಂತರ ಅವನೊಡನೆ ಹರಟೆ ಹೊಡೆಯುತ್ತ ಕೋಣೆಯಲ್ಲಿ ಕುಳಿತಾಗ ‘ಈತ ನಮ್ಮ ಸೋಮಿಯೇ’ ಎಂದುಕೊಂಡ.

ಕರ್ತವ್ಯಪ್ರಜ್ಞೆಯ ಮಾವ ಬೆಳಗಿನ ಜಾವದಲ್ಲೇ ಮರಳಿ ಹೊರಟ. ಅಳಿಯನ ಮೈದಡವಿ, ಕಣ್ಣಲ್ಲಿ ತುಂಬಿದ ನೀರು ಕಾಣದಂತೆ ಮಾಡಿ ನಡೆದ. ಒಂದು ತಿಂಗಳಿನ ನಂತರ ಸೋಮಿಯ ತಂದೆಗೆ ತಿಮ್ಮಗುರುವಿನಿಂದ ಪತ್ರ ಬಂದಿತು. ‘ಇದೇ ನನ್ನ ಕಡೆಯ ಬರಹ. ಕೆಲಸ ಸಾಕು ಎಂದು ಮೇಲಿನವರಿಗೆ ತಿಳಿಸಿ, ಎಲ್ಲ ಋಣಗಳನ್ನು ತೀರಿಸಿದ್ದೇನೆ.

ಮನದಲ್ಲಿ ತಳಮಳವೇನಿಲ್ಲ. ಸೋಮಿಯ ಮೋಹದ ಸೆಳೆತ, ಏನೋ ಋಣದ ಬಂಧನ ನನ್ನನ್ನು ಇಷ್ಟು ದಿನ ಕಟ್ಟಿ ನಿಲ್ಲಿಸಿದ್ದವು. ಈಗ ನನಗೆ ಅಂತರಾತ್ಮನ ಸೇವೆ ಮಾತ್ರ ಸಾಕು. ನಾನು ಮಂಡುಗೆರೆಯಲ್ಲಿದ್ದಾಗ ಮನೆಯ ಗೂಡಿನಲ್ಲಿ ಏನೋ ಬರೆದ ಕಡತವನ್ನು ಇಟ್ಟಿದ್ದೇನೆ. ಅದನ್ನು ಸೋಮಿಗೆ ಕೊಡಿ. ಯಾರೂ ನನ್ನನ್ನು ನೆನೆಸುವುದು ಬೇಡ. ಪ್ರೇಮ ಉಕ್ಕಿ ನನ್ನ ನೆನಪಾದಾಗ ಸೋಮಶಿವನ ಗುಡಿಯಲ್ಲಿ ದೀಪ ಹಚ್ಚಿ ನಮೋ ಎನ್ನಿರಿ. ಭಗವಂತ ಎಲ್ಲರನ್ನೂ ರಕ್ಷಿಸುತ್ತಾನೆ.’

ಸೋಮಿ ಆ ಕಡತವನ್ನು ನೋಡಿದ, ಕಣ್ಣೀರು ಉಕ್ಕಿ ಬಂದಿತು. ಕಡತದಲ್ಲಿ ಬಾಳಿಗೆ ಸಲ್ಲುವ ತತ್ತ್ವದ ರಾಶಿಯನ್ನೇ ಕಂಡ. ಅದನ್ನು ಸ್ನೇಹಿತರ ತೃಪ್ತಿಗೆಂದು ಮಂಕುತಿಮ್ಮನ ಕಂತೆಯಾಗಿ ಪ್ರಕಟಿಸಿದ.

ಇದನ್ನು ಕಥೆಯಂತಾದರೂ ಭಾವಿಸಬಹುದು, ಈ ಮಂಕುತಿಮ್ಮನ ಕಗ್ಗ ಗ್ರಂಥದ ಪೀಠಿಕೆ ಎಂದಾದರೂ ಭಾವಿಸಬಹುದು. ಇದರಲ್ಲೇ ಕಗ್ಗದ ಜೀವನದರ್ಶನವೂ ಅಡಗಿದೆ. ತಿಮ್ಮಗುರು ಸಂತೃಪ್ತ ಜೀವನವನ್ನು ಬದುಕಿ, ಬಾಳಿ, ಜೀವನಪಥದ ಮರಳು ಭೂಮಿಯಲ್ಲಿ ಹೆಜ್ಜೆಯ ಗುರುತುಗಳನ್ನು ಮೂಡಿಸಿ ಸಾಗಿದ ಪರಿ ಅನ್ಯಾದೃಶ, ಆದರ್ಶಪ್ರಾಯ.

ಕಗ್ಗದ ಎಲ್ಲ ಪದ್ಯಗಳು ಈ ಆದರ್ಶಗಳನ್ನು, ಆಶಯಗಳನ್ನು ಇಟ್ಟುಕೊಂಡೇ ಬರೆದಂತಹವುಗಳು. ಒಂದೊಂದು ಚೌಪದಿಯಲ್ಲಿ ಸಾಗರದಷ್ಟು ಆಳದ ಚಿಂತನೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)