‘ತಾರತಮ್ಯ ತೋರಿದರೆ ಅನುಭವವೇ ಅಸ್ತ್ರ ’

7

‘ತಾರತಮ್ಯ ತೋರಿದರೆ ಅನುಭವವೇ ಅಸ್ತ್ರ ’

Published:
Updated:

ಬೆಂಗಳೂರು: ‘ರಾಜ್ಯದ ಸೀನಿಯರ್ ಮೋಸ್ಟ್ ಎಂಎಲ್‌ಎಗಳಲ್ಲಿ ನಾನೂ ಒಬ್ಬ. ಇಡೀ ಬದುಕನ್ನು ಒಳ್ಳೆಯ ರಾಜಕಾರಣಕ್ಕೇ ಮೀಸಲಿಟ್ಟವನು ನಾನು. ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ, ಪಕ್ಷಭೇದ ಮರೆತು ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ. ಸಮ್ಮಿಶ್ರ ಸರ್ಕಾರ ತಾರತಮ್ಯ ತೋರಿದರೆ, ಅನುಭವದ ಅಸ್ತ್ರ ಪ್ರಯೋಗಿಸುವುದೂ ನನಗೆ ಗೊತ್ತು...’

ಐದನೇ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಬಿಜೆಪಿಯ ವಿ.ಸೋಮಣ್ಣ ಅವರ ಎಚ್ಚರಿಕೆಯ ಮಾತುಗಳಿವು. ‘ಹುಚ್ಚನ ಮದ್ವೇಲಿ, ಉಂಡೋನೇ ಜಾಣ ಎನ್ನುವಂತೆ ಹಿಂದಿನ ಕಾಂಗ್ರೆಸ್ ಸರ್ಕಾರ ವಿವಿಧ ಯೋಜನೆಗಳ ಹೆಸರಿನಲ್ಲಿ ಹಗಲು ದರೋಡೆ ಮಾಡಿದೆ.  ಅಭಿವೃದ್ಧಿಯ ಜತೆ ಜತೆಗೇ, ಅಕ್ರಮಗಳಿಗೂ ಕಡಿವಾಣ ಹಾಕಬೇಕಾದ ಸವಾಲು ನನ್ನ ಮುಂದಿದೆ’ ಎನ್ನುತ್ತಾರೆ ಅವರು. ತಮ್ಮ ಮುಂದಿನ ಕೆಲಸಗಳ ಬಗ್ಗೆ ಸೋಮಣ್ಣ ‘ಪ್ರಜಾವಾಣಿ’ ಜತೆ ಮಾತನಾಡಿದ್ದಾರೆ.

* ಸದ್ಯದ ರಾಜಕೀಯ ಪರಿಸ್ಥಿತಿ ನೋಡಿದರೆ, ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆ ಸಾಧ್ಯ ಎನಿಸುತ್ತದೆಯೇ?

ರಾಜಧಾನಿಯಲ್ಲಿ ಗಿಡ–ಮರ, ಕೆರೆ–ಕಟ್ಟೆಗಳನ್ನು ಈಗಾಗಲೇ ತಿಂದು ತೇಗಿದ್ದಾರೆ. ಸಮೀಕ್ಷೆ ನಡೆಸಿದರೂ, ಹಿಂದೆ ಇದ್ದ ಜಾಗಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿ ಇದೆ. ಈಗಲೂ ಎಲ್ಲ 28 ಶಾಸಕರು, 198 ಕಾರ್ಪೊರೇಟರ್‌ಗಳು ಒಟ್ಟಿಗೇ ಕುಳಿತು ಸಮಾಲೋಚನೆ ನಡೆಸಿದರೆ ಏನೂ ಬೇಕಾದರೂ ಮಾಡಬಹುದು. ಸಮ್ಮಿಶ್ರ ಸರ್ಕಾರವಿರುವಾಗ ಅದು ಸಾಧ್ಯವಾಗುತ್ತದೋ, ಇಲ್ಲವೋ ಗೊತ್ತಿಲ್ಲ. ಆದರೆ, ನಗರದ ರಕ್ಷಣೆಗಾಗಿ ನಾನಂತೂ ಪ್ರಾಮಾಣಿಕವಾಗಿ ದುಡಿಯುತ್ತೇನೆ.

* ಕ್ಷೇತ್ರದ ಅಭಿವೃದ್ಧಿಗೆ ಏನು ಮಾಡುತ್ತೀರಿ?

ನಾನು 1983ರಲ್ಲೇ ಕಾರ್ಪೊರೇಟರ್ ‌ಆಗಿದ್ದವನು. ನಗರದ ಯಾವ ಮೂಲೆಯಲ್ಲಿ ಯಾವ ಸಮಸ್ಯೆ ಇದೆ ಹಾಗೂ ಅದಕ್ಕೆ ಪರಿಹಾರವೇನು ಎಂಬುದು ನನಗೆ ಗೊತ್ತು. ಹೀಗಾಗಿ, ನನ್ನ ಒಂದು ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದು ಕಷ್ಟವಾಗುವುದಿಲ್ಲ. ಕ್ಷೇತ್ರದಲ್ಲಿ ಜನರ ದುಡ್ಡು ಪೋಲಾಗುತ್ತಿದೆ. ಒಂದು ಪಾರ್ಕ್‌ಗೆ ನಾಲ್ಕು ಎಇಇಗಳನ್ನು ನೇಮಿಸಲಾಗಿದೆ. ಅಭಿವೃದ್ಧಿ ಮಾಡದಿದ್ದರೂ, ರಾಶಿ ರಾಶಿ ಬಿಲ್‌ಗಳನ್ನು ಸರ್ಕಾರಕ್ಕೆ ಸಲ್ಲಿಸುತ್ತಿರುವ ‘ಕಳ್ಳರ ಸಂತೆ’ ನಿರ್ಮಾಣವಾಗಿದೆ. ಇಂಥ ಅಕ್ರಮಗಳಿಗೆ ಕಡಿವಾಣ ಹಾಕಬೇಕಿದೆ.‌

* ಸಚಿವರಾಗಿದ್ದ ಸಂದರ್ಭದಲ್ಲಿ ನೀವೇನು ಮಾಡಿದಿರಿ?

ಬೆಂಗಳೂರಿನ ಮೊದಲ ಮೇಲ್ಸೇತುವೆ (ಶಿರ್ಸಿ ವೃತ್ತ) ಶುರು ಮಾಡಿದ್ದು ನಾನೇ. ರೈಲ್ವೆ ಅಂಡರ್‌ಪಾಸ್‌ ಮಾಡುವ ಕಲ್ಪನೆಯೂ ನನ್ನದೇ (1994–95ರಲ್ಲಿ). 2–3 ದಶಕಗಳ ಹಿಂದೆಯೇ ಹಲವಾರು ಯೋಜನೆಗಳನ್ನು ತಂದಿದ್ದೇನೆ. ಅವತ್ತಿನ ವೇಗ ಇವತ್ತಿಲ್ಲ.

* ಬಿಜೆಪಿಗೆ ಅಧಿಕಾರ ಸಿಗದಿದ್ದಕ್ಕೆ ಹತಾಶೆ ಆಗಿದೆಯೇ?

ಬೇಸರ ಏನಿಲ್ಲ. ರಾಜಕಾರಣದಲ್ಲಿ ಇದೆಲ್ಲ ‘ಪಾರ್ಟ್‌ ಆಫ್‌ ದಿ ಗೇಮ್’ ಅಷ್ಟೆ. ನಾನು ಎಂಎಲ್‌ಎ ಆಗಬೇಕಿತ್ತು. ಆಗಿದ್ದೇನೆ. ಸಾವಿರಾರು ಕೋಟಿ ಆಸ್ತಿ ಇರೋರು ಮಾತ್ರ ಶಾಸಕರಾಗ್ತಾರೆ ಎಂಬ ಭಾವನೆ ಇತ್ತು. ಕೆಲಸ ಕಾರ್ಯಗಳಿಂದಲೂ ಜನ ಅಭ್ಯರ್ಥಿಯನ್ನು ಗುರುತಿಸುತ್ತಾರೆ ಎಂಬುದಕ್ಕೆ ಸೋಮಣ್ಣನ ಗೆಲುವು ಒಂದು ಮೈಲಿಗಲ್ಲು.

* ಜನ ಏಕೆ ನಿಮ್ಮನ್ನು ಗೆಲ್ಲಿಸಿದ್ದಾರೆ?

ಶಾಸಕ ಸ್ಥಾನ ಕಳೆದುಕೊಂಡಾಗಲೂ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಆಗಲೂ ಬೆಳಿಗ್ಗೆಯಿಂದ ರಾತ್ರಿವರೆಗೆ ಜನರ ಸಮಸ್ಯೆಗಳನ್ನು ಆಲಿಸಿದ್ದೇನೆ. ನನ್ನ ನಡವಳಿಕೆ ನೋಡಿ ಜನ ಮತ ಹಾಕಿದ್ದಾರೆ. ಹಣ–ಹೆಂಡದ ಆಮಿಷಕ್ಕೆ ಒಳಗಾಗದೆ, ಜಾತ್ಯತೀತವಾಗಿ ಹಾಗೂ ಪಕ್ಷಾತೀತವಾಗಿ ನನ್ನನ್ನು ಗುರುತಿಸಿದ್ದಾರೆ.

* ಹಾಗಾದರೆ, ಹಿಂದಿನ ಎರಡು ಚುನಾವಣೆಗಳಲ್ಲಿ ಮತದಾರರು ಸೋಮಣ್ಣನನ್ನು ತಿರಸ್ಕರಿಸಿದ್ದೇಕೆ?

ಜನ ನನ್ನನ್ನು ಎಂದೂ ತಿರಸ್ಕರಿಸಿಲ್ಲ. ಕೆಲವೊಮ್ಮೆ ಜಾತಿ–ದುಡ್ಡು ಹೆಚ್ಚು ಕೆಲಸ ಮಾಡಿಬಿಡುತ್ತವೆ. ಕಳೆದ ಎರಡು ಚುನಾವಣೆಗಳಲ್ಲಿ ಆಗಿದ್ದೂ ಅದೇ. ಆದರೆ, ‘ಬರೀ ಉತ್ಸವ ಮೂರ್ತಿ ತರ ನಿಲ್ಲುವ ಶಾಸಕ ನಮಗೆ ಬೇಡ. ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದ ಸೋಮಣ್ಣನಿಗೆ ಮತ ಹಾಕೋಣ’‍ ಎಂಬ ನಿರ್ಧಾರಕ್ಕೆ ಬಂದು ಈ ಬಾರಿ ಮತದಾರರು ನನ್ನನ್ನು ಗೆಲ್ಲಿಸಿದ್ದಾರೆ.

* ಹಿಂದಿನ ಶಾಸಕ ಪ್ರಿಯಾಕೃಷ್ಣ ಅವರು ಕ್ಷೇತ್ರದ ಅಭಿವೃದ್ಧಿ ಮಾಡಿದ್ದಾರಾ?

ಕ್ಷೇತ್ರದಲ್ಲಿ ಎಲ್ಲ ಕೆಲಸಗಳೂ ಅರ್ಧಕ್ಕೇ ನಿಂತಿವೆ. ಅವರು ಬಿಡುಗಡೆ ಮಾಡಿಸಿಕೊಂಡ ನೂರಾರು ಕೋಟಿ ಅನುದಾನ ಎಲ್ಲಿ ಹೋಯಿತು ಎಂಬುದನ್ನೇ ನಾನೂ ಹುಡುಕುತ್ತಿದ್ದೇನೆ.

* ಸಮ್ಮಿಶ್ರ ಸರ್ಕಾರದಲ್ಲಿ ಬಿಜೆಪಿ ಶಾಸಕರಿಗೆ ನಿರೀಕ್ಷಿತ ಅನುದಾನ ಸಿಗುವ ವಿಶ್ವಾಸವಿದೆಯೇ?

ಯಾವ ಸರ್ಕಾರ ಇದ್ದರೂ ಗೋವಿಂದರಾಜನಗರ ಕ್ಷೇತ್ರದ ಅಭಿವೃದ್ಧಿಗೆ ತೊಡಕಾಗುವುದಿಲ್ಲ. ಅನುದಾನ ಕೊಟ್ಟರೆ ಪಡೆಯುತ್ತೇನೆ. ಕೊಡದೆ ಇದ್ರೆ, ಅನುಭವ ಬಳಸಿಕೊಂಡು ಹಣ ತರಿಸಿಕೊಳ್ಳುತ್ತೇನೆ. ದುಡ್ಡು ತರೋದು ದೊಡ್ಡದಲ್ಲ. ಅದನ್ನು ಸಾಮಾನ್ಯ ಜನರಿಗೆ ತಲುಪಿಸಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry