6
ರಾಜ್ಯದಲ್ಲಿ ಕಲಬುರ್ಗಿಯ ಪಿಡಿಎ ಕಾಲೇಜಿನಲ್ಲಿ ಮಾತ್ರ ಕೋರ್ಸ್ ಲಭ್ಯ

ಸಿರಾಮಿಕ್ ಅಂಡ್ ಸಿಮೆಂಟ್; ಅವಕಾಶಗಳ ಖನಿ

Published:
Updated:

ಕಲಬುರ್ಗಿ: ನಗರದ ಪಿಡಿಎ ಎಂಜಿನಿಯರಿಂಗ್‌ ಕಾಲೇಜಿನಲ್ಲಿರುವ ಸಿರಾಮಿಕ್ ಅಂಡ್ ಸಿಮೆಂಟ್ ಟೆಕ್ನಾಲಜಿ ಕೋರ್ಸ್‌ ಅತ್ಯಂತ ಬೇಡಿಕೆದಾಯಕ ಕೋರ್ಸ್‌ ಆಗಿದೆ. ಹೀಗಾಗಿ ಈ ಕೋರ್ಸ್‌ ಅಧ್ಯಯನಕ್ಕೆ ವಿದ್ಯಾರ್ಥಿಗಳು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ.

ಪ್ರಾರಂಭದಲ್ಲಿ 30 ಸೀಟುಗಳಿಗೆ ಪ್ರವೇಶ ಲಭ್ಯವಿತ್ತು. ಬೇಡಿಕೆ ಹೆಚ್ಚಿದ್ದ ರಿಂದ ಸೀಟುಗಳ ಸಂಖ್ಯೆಯನ್ನು 40ಕ್ಕೆ ಏರಿಸಲಾಯಿತು. 2016–17ನೇ ಸಾಲಿನಿಂದ ಪ್ರವೇಶ ಮಿತಿಯನ್ನು 60 ಸೀಟುಗಳಿಗೆ ಹೆಚ್ಚಿಸಲಾಗಿದೆ. ಈ ವಿಭಾಗದಲ್ಲಿ ಒಂಬತ್ತು ಜನ ನುರಿತ ಪ್ರಾಧ್ಯಾಪಕರು ಇದ್ದಾರೆ.

ಎರಡು ಕೋರ್ಸ್ ಲಭ್ಯ: 8 ಸೆಮಿಸ್ಟರ್‌ ಒಳಗೊಂಡ ನಾಲ್ಕು ವರ್ಷದ ಪದವಿ ಕೋರ್ಸ್ ಇದಾಗಿದೆ. ಈ ಕೋರ್ಸ್ ಮುಗಿಸಿದ ಬಳಿಕ ಮಟೀರಿಯಲ್ ಸೈನ್ಸ್ ಅಂಡ್ ಟೆಕ್ನಾಲಜಿ ವಿಷಯದಲ್ಲಿ ಎಂ.ಟೆಕ್ (ಎರಡು ವರ್ಷ) ಅಧ್ಯಯನ ಮಾಡಬಹುದಾಗಿದೆ. ಇದು ಅಂತರಶಿಸ್ತೀಯ ಸ್ನಾತಕೋತ್ತರ ಕೋರ್ಸ್ ಆಗಿದ್ದು, ಮೆಕ್ಯಾನಿಕಲ್ ಎಂಜಿನಿಯರಿಂಗ್, ಕೆಮಿಕಲ್ ಸೈನ್ಸಸ್ ಅಥವಾ ಸಿರಾಮಿಕ್ ಅಂಡ್ ಸಿಮೆಂಟ್ ಟೆಕ್ನಾಲಜಿ ಪದವೀಧರರು ಅಧ್ಯಯನ ಮಾಡಲು ಅವಕಾಶವಿದೆ.

ಪ್ರವೇಶ ಪಡೆಯುವುದು ಹೇಗೆ?: ದ್ವಿತೀಯ ಪಿಯುಸಿ ಅಥವಾ 12ನೇ ತರಗತಿ ಓದಿರಬೇಕು. ಭೌತ ವಿಜ್ಞಾನ, ರಸಾಯನವಿಜ್ಞಾನ ಮತ್ತು ಗಣಿತ (ಪಿಸಿಎಂ) ವಿಷಯಗಳನ್ನು ಕಡ್ಡಾಯವಾಗಿ ಓದಿರಬೇಕು. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಬರೆದು ಕೌನ್ಸೆಲಿಂಗ್ ಮೂಲಕ ಪ್ರವೇಶ ಪಡೆಯಬಹುದು.

‘ಸಿರಾಮಿಕ್ ಅಂಡ್ ಸಿಮೆಂಟ್ ಕೋರ್ಸ್‌ನಲ್ಲಿ ನಾಲ್ಕು ವಿಭಾಗಗಳು ಇವೆ. ಸಿಮೆಂಟ್, ಸಿರಾಮಿಕ್, ಗ್ಲಾಸ್ (ಗಾಜು) ಮತ್ತು ವೈಟ್ ವೇರ್‌ ಉತ್ಪನ್ನಗಳು. ಮೆಟ್ರೋಪಾಲಿಟಿನ್ ನಗರಗಳಲ್ಲಿರುವ ದೊಡ್ಡ ದೊಡ್ಡ ಮನೆ, ಹೋಟೆಲ್ ಮತ್ತು ಕಾರ್ಪೋರೇಟ್ ಕಚೇರಿಗಳನ್ನು ಸೌಂದರ್ಯಪ್ರಜ್ಞೆ ಇಟ್ಟುಕೊಂಡು ನಿರ್ಮಿಸಲಾಗುತ್ತಿದೆ. ಇಲ್ಲಿ ಸಿಮೆಂಟ್, ಸಿರಾಮಿಕ್, ಗಾಜು ಮತ್ತು ವೈಟ್ ವೇರ್‌ಗಳನ್ನೇ ಪ್ರಮುಖವಾಗಿ ಬಳಸಲಾಗುತ್ತದೆ. ಹೀಗಾಗಿ ಈ ಕೋರ್ಸ್‌ ಅಧ್ಯಯನ ಮಾಡಿದವರಿಗೆ ಹೇರಳ ಅವಕಾಶಗಳು ಲಭ್ಯ ಇವೆ’ ಎಂದು ವಿಭಾಗದ ಪ್ರಾಧ್ಯಾಪಕ ಡಾ. ಬಾಬುರಾವ್ ಎನ್.ಶೇರಿಕಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ದೂರವಾಣಿ, ಟಿ.ವಿ, ಮೊಬೈಲ್, ನ್ಯೂಕ್ಲಿಯರ್ ರಿಯಾಕ್ಟರ್, ಬಾಯ್ಲರ್, ಸಿ.ಡಿ (ಕಾಂಪ್ಯಾಕ್ಟ್ ಡಿಸ್ಕ್) ತಯಾರಿಕೆ ಸೇರಿದಂತೆ ಎಲೆಕ್ಟ್ರಾನಿಕ್‌ ಉಪಕರಣಗಳ ತಯಾರಿಕೆಯಲ್ಲಿ ಸಿರಾಮಿಕ್ ವಸ್ತುಗಳನ್ನೇ ಬಳಸಲಾಗುತ್ತದೆ. ಸರ್ಕಿಟ್‌ನಲ್ಲಿರುವ ಕ್ಯಾಪ್ಯಾಸಿಟರ್, ರೆಜಿಸ್ಟರ್, ಇಂಡಕ್ಟರ್‌ಗಳು ಸಿರಾಮಿಕ್‌ನಿಂದಲೇ ತಯಾರಾಗುತ್ತವೆ. ಹೀಗಾಗಿ ಈ ಕೋರ್ಸ್‌ ಓದುವವರಿಗೆ ಬಹಳಷ್ಟು ಬೇಡಿಕೆ ಇದೆ’ ಎಂದು ಅವರು ಹೇಳಿದರು.

ಮಾಹಿತಿಗೆ ಕಾಲೇಜಿನ ಪ್ರಾಂಶುಪಾಲ ಡಾ. ಎಸ್.ಎಸ್.ಆವಂತಿ, ಮೊ.94482 57587, ಪ್ರಾಧ್ಯಾಪಕ ಡಾ.ಬಾಬುರಾವ್ ಎನ್.ಶೇರಿಕಾರ, ಮೊ.98456 87758 ಸಂಪರ್ಕಿಸಬಹುದು.

ಅವಕಾಶ ಎಲ್ಲಿ?

ಎಸಿಸಿ, ವಾಸವದತ್ತಾ, ಅಲ್ಟ್ರಾಟೆಕ್ ಸಿಮೆಂಟ್ಸ್, ಎಚ್‌ ಅಂಡ್ ಆರ್ ಜಾನಸನ್, ಸೇಂಟ್ ಗೊಬೇನ್, ಬಿಎಚ್‌ಇಎಲ್, ಎಚ್‌ಎಎಲ್‌, ಎನ್‌ಎಎಲ್‌, ನಿಟ್ಕೊ, ಹಿಂದ್‌ವೇರ್, ಕೊಯ್ಲರ್, ಸಿರಾ ಟೈಲ್ಸ್‌ನಲ್ಲಿ ಸೇರಿದಂತೆ ಅನೇಕ ಕೈಗಾರಿಕೆಗಳಲ್ಲಿ ಉದ್ಯೋಗಾವಕಾಶ ಇವೆ.

ದಕ್ಷಿಣ ಭಾರತದಲ್ಲೇ ಮೊದಲು ಆರಂಭ!

ಡಾ. ಎಂ.ಡಿ.ನರಸಿಂಹನ್ ಅವರು 1982ರಲ್ಲಿ ಪಿಡಿಎ ಕಾಲೇಜಿನಲ್ಲಿ ಸಿರಾಮಿಕ್ ಅಂಡ್ ಸಿಮೆಂಟ್ ಟೆಕ್ನಾಲಜಿ ವಿಭಾಗವನ್ನು ಆರಂಭಿಸಿದ್ದು, ಇದು ದಕ್ಷಿಣ ಭಾರತದ ಮೊದಲ ಕಾಲೇಜು ಎಂಬ ಅಗ್ಗಳಿಕೆ ಹೊಂದಿದೆ. ಇಂದಿಗೂ ದೇಶದಲ್ಲಿ 6 ಕಾಲೇಜುಗಳು ಮಾತ್ರ ಇವೆ. ಕೈಗಾರಿಕೆಗಳ ಸಂಖ್ಯೆ ಹೆಚ್ಚಿದ್ದು, ಪ್ರತಿ ವರ್ಷ 250 ವಿದ್ಯಾರ್ಥಿಗಳು ಈ ಕೋರ್ಸ್‌ನಲ್ಲಿ ಉತ್ತೀರ್ಣರಾಗಿ ವೃತ್ತಿ ಪ್ರವೇಶಿಸುತ್ತಿದ್ದಾರೆ.

ಪ್ರತಿಷ್ಠಿತ ಕಂಪನಿಗಳು ನಮ್ಮ ಕಾಲೇಜಿನಲ್ಲಿ ಪ್ರತಿ ವರ್ಷ ಕ್ಯಾಂಪಸ್ ಸಂದರ್ಶನ ನಡೆಸುತ್ತವೆ. ಶೇ 80ರಷ್ಟು ವಿದ್ಯಾರ್ಥಿಗಳು ಆಯ್ಕೆಯಾಗುತ್ತಾರೆ

- ಡಾ. ಬಾಬುರಾವ್ ಎನ್.ಶೇರಿಕಾರ, 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry