ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್‌ಗೆ ಆಗ್ರಹ

7

ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್‌ಗೆ ಆಗ್ರಹ

Published:
Updated:

ಇಂಡಿ: ಎಲ್ಲಾ ವರ್ಗದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಬೇಕು ಎಂದು ಆಗ್ರಹಿಸಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸೋಮವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಮಾಡಿದರು.

ಬಸವೇಶ್ವರ ವೃತ್ತದಲ್ಲಿ ಕೆಲಕಾಲ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದರು. ತಹಶೀಲ್ದಾರ್ ಡಿ.ಎಂ.ಪಾಣಿ ಮತ್ತು ಕೆ.ಎಸ್.ಆರ್.ಟಿ.ಸಿ ಡಿಪೊ ಮ್ಯಾನೇಜರ್ ಬಿ.ಎಸ್.ಗಜಾಕೋಶ ಅವರಿಗೆ ಮನವಿ ಸಲ್ಲಿಸಿದರು.

‘ಖಾಸಗಿ ಕಾಲೇಜುಗಳ ಡೊನೇಶನ್ ಹಾವಳಿಯಿಂದ ಶಿಕ್ಷಣವು ಮಾರಾಟದ ವಸ್ತುವಾಗಿದೆ. ಇದರಿಂದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಸರ್ಕಾರ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್‌ ನೀಡಿ ಸ್ಪಲ್ಪ ಮಟ್ಟಿನ ಅನುಕೂಲ ಕಲ್ಪಿಸಬೇಕು’ ಎಂದು ಎಬಿವಿಪಿ ಮುಖಂಡರು ಆಗ್ರಹಿಸಿದರು.

ಎಬಿವಿಪಿ ಮುಖಂಡರಾದ ಶಂಕರ ಹಲವಾಯಿ, ಪ್ರತೀಕ ಬೇನೂರ ಮಾತನಾಡಿ, ‘ಶಾಲೆ, ಕಾಲೇಜುಗಳು ಪ್ರಾರಂಭವಾಗಿ ವಾರ ಕಳೆದಿದೆ. ಬೋಧನೆ ಶುರುವಾಗಿದೆ. ಸರ್ಕಾರ ಮಾತ್ರ ಈವರೆಗೆ ವಿದ್ಯಾರ್ಥಿಗಳಿಗೆ ಬಸ್‌ಪಾಸ್ ನೀಡುತ್ತಿಲ್ಲ. ಸರ್ಕಾರದ ನೀತಿಯಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ’ ಎಂದರು.

‘ವಿದ್ಯಾರ್ಥಿಗಳು ಶಾಲೆ, ಕಾಲೇಜಿಗೆ ಬರುವುದು ಸಾಧ್ಯವಾಗುತ್ತಿಲ್ಲ. ಸರ್ಕಾರ ಸೂಕ್ತ ನಿರ್ಧಾರ ಕೈಕೊಂಡು ತ್ವರಿತವಾಗಿ ಬಸ್‌ಪಾಸ್ ವಿತರಿಸಬೇಕು’ ಎಂದರು.

ಕೆಲಕಾಲ ರಸ್ತೆ ತಡೆ: ಪ್ರತಿಭಟನೆಯಿಂದ ಇಂಡಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಕೆಲಕಾಲ ಸಂಚಾರಕ್ಕೆ ತಡೆಯಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಪೊಲೀಸರು ವಿದ್ಯಾರ್ಥಿಗಳ ಮನವೊಲಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಪ್ರತಿಭಟನೆ ಶಾಂತಿಯುತವಾಗಿ ಅಂತ್ಯಗೊಂಡಿತು.

ಮೇಘಾ ಮಕಣಿ, ಪೂಜಾ ಸರಸಂಬಿ, ಲಕ್ಮಿ, ಸಾವಳಗಿ, ಸುಶ್ಮೀತಾ ಪೊದ್ದಾರ, ವೈಷ್ಣವಿ ಪಾಟೀಲ, ಐಶ್ವರ್ಯ ಹೂಗಾರ, ಶಂಕರ ಹಲವಾಯಿ, ಪ್ರತೀಕ ಬೇನೂರ, ವಿಶಾಲ ಮಾಜನಶೆಟ್ಟಿ, ಬೀರು ಗುಗದಡ್ಡಿ, ವಿಜಯ ಪಾರ್ಶಿ, ಶಂಬು ಗಿರಣಿವಡ್ಡರ, ಶರ್ರೀಶೈಲ ಬೋಡಿ, ಶ್ರೀಧರ ಕ್ಷತ್ರಿ, ನಾಗೇಶ ಶಿಂಧೆ, ಶಾಂತು ಪಾಸೋಡಿ, ಶುಭಾ ಗಿರಣಿವಡ್ಡರ, ವಿಶಾಲ ಶೆಟ್ಟಿ, ಸಚಿನ್ ಗಿರಣಿವಡ್ಡರ, ಅಮೀರ ಕಂಬಾರ, ಗಂಗಲಿಂಗ ಗೊಡಕೆ, ಮಂಜುನಾಥ ಹಂಜಗಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry