ಮಳೆ; ನಾಲೆಗೆ ಉರುಳಿದ ವಾಹನ

7
ಬಸವಕಲ್ಯಾಣ: ರಾಜ್ಯ ಹೆದ್ದಾರಿ ಸೇತುವೆ ಶಿಥಿಲ

ಮಳೆ; ನಾಲೆಗೆ ಉರುಳಿದ ವಾಹನ

Published:
Updated:

ಬಸವಕಲ್ಯಾಣ: ಧಾರಾಕಾರವಾಗಿ ಸುರಿದ ಮಳೆಗೆ ತಾಲ್ಲೂಕಿನ ಮಾಚನಾಳ ಮತ್ತು ಭಾಲ್ಕಿ ತಾಲ್ಲೂಕಿನ ಜಾಮಖಂಡಿ ಮಧ್ಯದ ಬೀದರ್ -ಲಾತೂರ ರಾಜ್ಯ ಹೆದ್ದಾರಿಯ ಸೇತುವೆ ಪಕ್ಕದಲ್ಲಿನ ಕಚ್ಚಾ ರಸ್ತೆ ನೀರಿನಲ್ಲಿ ಮುಳುಗಿದ್ದರಿಂದ ಶನಿವಾರ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಯಿತು.

ಈ ರಸ್ತೆಯಿಂದ ಹೋಗುತ್ತಿದ್ದ ಕ್ರೂಸರ್ ವಾಹನವೊಂದು ನಾಲೆಗೆ ಉರುಳಿ ಬಿದ್ದಿದ್ದರಿಂದ ಮೂರು ಗಂಟೆಗಳವರೆಗೆ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಮಹಾರಾಷ್ಟ್ರದ ನಿಲಂಗಾದ ಈ ವಾಹನದಲ್ಲಿ ಪ್ರಯಾಣಿಕರು ಇರಲಿಲ್ಲ. ಚಾಲಕನಿಗೂ ಗಾಯಗಳಾಗಲಿಲ್ಲ. ಇದನ್ನು ಜೆಸಿಬಿಯಿಂದ ಮೇಲಕ್ಕೆ ಎತ್ತಲಾಯಿತು.

ನಿಜಾಮ್ ಅರಸರ ಕಾಲದ ಸೇತುವೆ ಸಂಪೂರ್ಣವಾಗಿ ಕುಸಿಯುವ ಹಂತಕ್ಕೆ ತಲುಪಿದೆ. ಇದರ ಎರಡೂ ಕಡೆಯ ತಡೆ ಗೋಡೆಗಳು ನೆಲಕ್ಕುರುಳಿವೆ. ಆದ್ದರಿಂದ ಎರಡು ವರ್ಷದಿಂದ ಇಲ್ಲಿಂದ ದ್ವಿಚಕ್ರ ವಾಹನಗಳು ಬಿಟ್ಟರೆ ಬೇರೆ ವಾಹನಗಳು ಸಂಚರಿಸುತ್ತಿಲ್ಲ. ಜೀಪ್, ಕಾರು ಮತ್ತಿತರೆ ಭಾರಿ ವಾಹನಗಳಿಗಾಗಿ ಸೇತುವೆ ಪಕ್ಕದಲ್ಲಿ ಮಣ್ಣು ಹರಡಿ ಕಚ್ಚಾ ರಸ್ತೆ ನಿರ್ಮಿಸಲಾಗಿದೆ. ಆದರೆ, ಮಳೆ ಬಂದಾಗ ಕಚ್ಚಾ ರಸ್ತೆಯ ಮೇಲಿನಿಂದ ನೀರು ಹರಿದು ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತದೆ. ಮಹಾರಾಷ್ಟ್ರ ಮತ್ತು ರಾಜ್ಯದ ವಿವಿಧೆಡೆ ಸಂಚರಿಸುವ ವಾಹನಗಳು ಗಂಟೆಗಟ್ಟಲೇ ಸ್ಥಳದಲ್ಲೇ ನಿಲ್ಲುತ್ತವೆ.

`ಈ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೆ ಏರಿಸಲು ಈಚೆಗೆ ಶಂಕುಸ್ಥಾಪನೆ ಕೂಡ ನೆರವೇರಿಸಲಾಗಿದೆ. ಆದರೂ ರಸ್ತೆ ಸುಧಾರಣೆ ಕಾರ್ಯ ಆರಂಭಗೊಂಡಿಲ್ಲ. ಸೇತುವೆ ಶಿಥಿಲಗೊಂಡು ಹಲವು ತಿಂಗಳುಗಳಾದರೂ ದುರಸ್ತಿ ಮಾಡಲಾಗಿಲ್ಲ. ಇದಲ್ಲದೆ ಸೇತುವೆ ಪಕ್ಕದಲ್ಲಿ ನಾಲೆಯ ನೀರು ಹರಿದುಕೊಂಡು ಹೋಗಲು ಕೊಳವೆಗಳನ್ನು ಅಳವಡಿಸಿ ರಸ್ತೆ ನಿರ್ಮಿಸಲಾಗಿಲ್ಲ. ಬರೀ ಮಣ್ಣು ಹಾಕಿದ್ದರಿಂದ ಮಳೆ ನೀರಿನಿಂದ ಇಲ್ಲಿನ ಮಣ್ಣು ಕೊಚ್ಚಿಕೊಂಡು ಹೋಗುತ್ತಿದೆ. ಅಲ್ಲದೆ ಅದರ ಮೇಲಿನಿಂದ ನೀರು ಹರಿಯುತ್ತಿರುವ ಕಾರಣ ವಾಹನಗಳು ಸಂಚರಿಸದಂತಾಗಿದೆ' ಎಂದು ಬಸವರಾಜ ಹುಲಸೂರೆ ತಿಳಿಸಿದರು.

`ಸೇತುವೆ ಭಾಲ್ಕಿ ತಾಲ್ಲೂಕಿನ ಜಾಮಖಂಡಿ ವ್ಯಾಪ್ತಿಯಲ್ಲಿದೆ. ಆದರೂ, ಇದು ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಭಾಲ್ಕಿ ತಹಶೀಲ್ದಾರ್ ಹೇಳುತ್ತಾರೆ. ಬಸವಕಲ್ಯಾಣದ ತಹಶೀಲ್ದಾರ್ ಅವರ ಉತ್ತರವೂ ಇದಕ್ಕೆ ಭಿನ್ನವಾಗಿಲ್ಲ' ಎಂದು ಶಂಕರಪ್ಪ ಗೋಳು ತೋಡಿಕೊಂಡಿದ್ದಾರೆ.

`ಇಲ್ಲಿನ ಸೇತುವೆ ಮತ್ತು ರಸ್ತೆಯ ದುರವಸ್ಥೆಯಿಂದ ಸಂಚಾರಕ್ಕೆ ಅಡ್ಡಿಯಾಗುತ್ತದೆ. ಮಳೆ ನೀರು ಕಚ್ಚಾ ರಸ್ತೆಯ ಮೇಲಿನಿಂದ ಹರಿಯುತ್ತಿರುವ ಕಾರಣ

ಜನರು ಪರದಾಡಬೇಕಾಗುತ್ತದೆ. ಈ ವಿಷಯವನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದೆ' ಎಂದು ಎಂದು ಕಂದಾಯ ನಿರೀಕ್ಷಕ ಮುನಿಶ್ವರಸ್ವಾಮಿ ತಿಳಿಸಿದರು.

ರಸ್ತೆಯು ಬಸವಕಲ್ಯಾಣ ಮತ್ತು ಭಾಲ್ಕಿ ತಾಲ್ಲೂಕಿನ ಸರಹದ್ದಿನಲ್ಲಿ ಬರುತ್ತದೆ. ವಾಹನ ಸಂಚಾರಕ್ಕೆ ಅಡ್ಡಿ ಆಗುತ್ತಿರುವ ಬಗ್ಗೆ ವರದಿ ಸಲ್ಲಿಸಲು ಕಂದಾಯ ನಿರೀಕ್ಷಕರಿಗೆ ಸೂಚಿಸಲಾಗಿದೆ

- ಶಾಂತಗೌಡ ಪಾಟೀಲ,  ತಹಶೀಲ್ದಾರ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry