ಬದುಕನ್ನು ಬದುಕಬೇಕು!

7

ಬದುಕನ್ನು ಬದುಕಬೇಕು!

Published:
Updated:
ಬದುಕನ್ನು ಬದುಕಬೇಕು!

ಇದು ನಮ್ಮ ಬದುಕು. ಇದನ್ನು ನಾವು ಬದುಕಬೇಕು. ನಮ್ಮ ಬದುಕನ್ನು ಬೇರೆಯವರ ಬದುಕಿನಂತೆ ಬದುಕಬಾರದು. ಇಡೀ ಬದುಕನ್ನು ಬೇರೆಯವರನ್ನು ಓಲೈಸಲು ಬದುಕುವುದು ಅಸಹಜ. ಅಸಹನೀಯ. ಅಸಾಧ್ಯ ಕೂಡ.

ರೈಲಿನ ಪ್ರಯಾಣ ಇದ್ದಂತೆ ಜೀವನ. ಇಲ್ಲಿ ಬದುಕಿರುವವರು ಎಲ್ಲರೂ ತಮ್ಮ ಗಮ್ಯದತ್ತ ಹೊರಟಿದ್ದಾರೆ. ನಾವು ನಮ್ಮ ಬದುಕಿನ ಗಮ್ಯಕ್ಕೆ ಹೊರಟಿದ್ದೇವೆ. ನಮ್ಮ ನಿಲ್ದಾಣ ಬಂದಾಗ ನಾವು ಇಳಿಯುತ್ತೇವೆ. ಇದು ನಿತ್ಯವೂ ಮುಂದುವರೆಯುತ್ತಿರುವ ಪ್ರಯಾಣ. ನಮ್ಮ ಜೊತೆಗಿರುವವರು ಮತ್ತು ನಮಗಿಂತಲೂ ಮೊದಲು ರೈಲಿನಲ್ಲಿದ್ದವರು, ಅವರವರ ನಿಲ್ದಾಣದಲ್ಲಿ ಇಳಿಯುತ್ತಾರೆ. ಅವರೂ ವಿದಾಯ ಹೇಳುತ್ತಾರೆ. ಮತ್ತೆ ಹೊಸಬರು ಒಳ ಬರುತ್ತಾರೆ. ನಮ್ಮ ಪ್ರಯಾಣ ಮುಂದುವರೆಯುತ್ತದೆ. ಬದುಕು ಇರುವುದೇ ಹೀಗೆ. ಅದನ್ನು ಬದಲಾಯಿಸಲಿಕ್ಕೆ ಆಗುವುದಿಲ್ಲ.

ವಿಚಿತ್ರವೆಂದರೆ ಕೆಲವರು ಬದುಕನ್ನು ಬದಲಾಯಿಸಲಿಕ್ಕೆ ಪ್ರಯತ್ನಿಸಿದರು. ನಮ್ಮ ಪುರಾಣಗಳಲ್ಲಿ ಕೆಲವರು ಅಮರತ್ವವನ್ನು ಪಡೆದುಕೊಂಡರಂತೆ! ಅವರಿಗೆ ಕೂಡ ಕಾಲಾಂತರದಲ್ಲಿ ಬದುಕುವುದು ಬೋರಾಯಿತಂತೆ. ಇಚ್ಛಾಮರಣಿಗಳೂ ಮರಣವನ್ನು ಆಹ್ವಾನಿಸಿ ಅನುಭವಿಸಿದರು. ನಿತ್ಯಸಂತೋಷಿಯೂ, ಧರ್ಮಪರಾಯಣನೂ ಆಗಿದ್ದ ಧರ್ಮರಾಯನು ಮಾತ್ರ ದೇಹದೊಟ್ಟಿಗೆ ಸ್ವರ್ಗಕ್ಕೆ ಹೋದನಂತೆ. ಕೆಲವರು ಬದುಕಿರುವಷ್ಟು ಕಾಲ ಭೂಮಿಯಲ್ಲೇ ಸ್ವರ್ಗವನ್ನು ನಿರ್ಮಿಸಿ ಕೊಂಡು ಬದುಕಲಿಕ್ಕೆ ಪ್ರಯತ್ನಿಸಿದರಂತೆ. ಹಾಗಾಗಿ ಬದುಕನ್ನು ಬದಲಾಯಿಸಲಿಕ್ಕೆ ಪ್ರಯತ್ನಿಸುವುದರಲ್ಲಿ ಯಾರೂ ಗೆಲ್ಲಲಿಲ್ಲ. ನಿಸರ್ಗದ ನಿಯಮವನ್ನು ಒಪ್ಪಿಕೊಂಡವರು ಬದುಕನ್ನು ಬಂದಂತೆಯೇ ಬದುಕಿದವರು. ಬದುಕಿರುವ ತನಕ ಇತರರಿಗೆ ಸಂತೋಷವನ್ನು ಕೊಡುತ್ತ, ಸುಖವನ್ನು ಅನುಭವಿಸುತ್ತ ಬದುಕಬೇಕು ಅಂತ ತಿಳಿಸಿದರು. ಅದನ್ನು ತಿಳಿದುಕೊಂಡವರು ಸುಖಿಸಿದರು. ತಿಳಿದುಕೊಳ್ಳಲಿಕ್ಕೆ ಆಗದವರು ನೋವನ್ನು ಬದುಕಿದರು. ಬೋರಾಗದಂತೆ ಬದುಕಿದವರಿಗೆ ಬದುಕು ಬಹಳ ಸಣ್ಣದಾಯಿತು. ಬೋರು ಬೋರೂಂತ ಬದುಕಿದವರಿಗೆ ಬದುಕು ಬಹಳ ದೊಡ್ಡದಾಯಿತು!

ಬದುಕು ಅಂದರೆ ಒಂದು ಉತ್ಸವ. ಒಂದು ಹಬ್ಬ. ಒಂದು ಹೊಸ ಅವಕಾಶ. ಹೊಸ ಬೆಳಗು. ಹೊಸ ಹಾಡು. ಪ್ರತಿದಿನವೂ ಅದನ್ನು ಹೊಸತಾಗಿ ಸಂಭ್ರಮಿಸಬೆಕು. ‘ನಿದ್ದೆಗೊಮ್ಮೆ ನಿತ್ಯಮರಣ, ಎದ್ದ ಸಲ ನವೀನ ಜನನ’ – ಎಂದು ವರಕವಿ ಬೇಂದ್ರೆ ಹೇಳಿದ್ದಾರೆ. ಪ್ರತಿದಿನದ ಸೂರ್ಯೋದಯವೂ ಹೊಸತಾಗಿ ಬದುಕಲಿಕ್ಕೆ ನಮಗೆ ಇರುವ ಹೊಸ ಅವಕಾಶ. ಅದನ್ನು ಪ್ರೀತಿಯಿಂದ ಬರಮಾಡಿಕೊಳ್ಳಬೇಕು. ಏನೇ ಆಗಲಿ ಇವತ್ತು ಸಂತೋಷದಿಂದ ಇರುತ್ತೇನೆ ಎಂದು ನಿರ್ಧರಿಸಬೇಕು. ನಮ್ಮ ಸಂತೋಷವು ಬೇರೊಬ್ಬರನ್ನಾಗಲೀ, ಬೇರೊಂದು ವಸ್ತುವನ್ನಾಗಲೀ ಅವಲಂಬಿಸಿ ಇರಬಾರದು. ಈ ಬದುಕಿನಲ್ಲಿ ನಾವು ಅಂದರೆ ನಾನು ಮಾತ್ರ. ನಮ್ಮಷ್ಟಕ್ಕೆ ನಾವು ಸಂತೋಷವಾಗಿರಬೇಕು.

ಕಾರಣವಿಲ್ಲದೇ ಸಂತೋಷವಾಗಿರುವುದನ್ನು ನಾವು ಚಿಕ್ಕ ಮಕ್ಕಳಿಂದ ಕಲಿತುಕೊಳ್ಳಬಹುದು. ತನ್ನಷ್ಟಕ್ಕೆ ತಾನು ಸಂತೋಷವಾಗಿ ಇರುಬಲ್ಲವನು ಮಾತ್ರ ನಿಜಕ್ಕೂ ಸಂತೋಷದಿಂದ ಇರಬಲ್ಲ. ನಾವು ದೊಡ್ಡವರಾಗಿದ್ದೇವೆ ಎನ್ನುವ ಅರಿವು ನಮ್ಮನ್ನು ಮಕ್ಕಳಂತೆ ಇರಲಿಕ್ಕೆ ಕೊಡುವುದಿಲ್ಲ. ಮಗು ಬೆಳೆದು ದೊಡ್ಡದಾಗುತ್ತಿರುವಂತೆಯೇ ಸಂತೋಷದಿಂದ ಇರುವ ತನ್ನ ಸಹಜ ಸಾಮರ್ಥ್ಯವನ್ನು ಅದುಮಿಟ್ಟುಕೊಳ್ಳಲಿಕ್ಕೆ ರೂಢಿಮಾಡಿಕೊಳ್ಳುತ್ತದೆ. ತಾನು ಜಾಣ ಅಂತಲೋ, ತಾನು ದೊಡ್ಡವನು ಅಂತಲೋ, ತಾನು ಜವಾಬ್ದಾರಿಯ ವ್ಯಕ್ತಿ ಅಂತಲೋ ಅಂದುಕೊಂಡು ತನ್ನನ್ನು ತಾನು ಘನಗಂಭೀರವಾಗಿ ತೋರ್ಪಡಿಸಿಕೊಳ್ಳಲಿಕ್ಕೆ ರೂಢಿಮಾಡಿಕೊಳ್ಳುತ್ತಾನೆ. ಆದರೆ ಅದು ಸರಿಯಲ್ಲ. ಬೆಳವಣಿಗೆಯ ಜೊತೆಗಿನ ಜವಾಬ್ದಾರಿಯ ಜೊತೆಗೇ ಜೀವನದ ಮಾಧುರ್ಯವನ್ನು ಸಹ ಅನುಭವಿಸುವ ಗುಣವನ್ನು ಇಟ್ಟುಕೊಳ್ಳಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry