ನಾಪೋಕ್ಲು–ಮೂರ್ನಾಡು ರಸ್ತೆ ಜಲಾವೃತ

7
ಎಡೆಬಿಡದೆ ಸುರಿದ ಮಳೆ: ಕೊಟ್ಟಮುಡಿ, ಬೊಳಿಬಾಣೆಗಳಲ್ಲಿ ಏರಿದ ನೀರಿನ ಮಟ್ಟ

ನಾಪೋಕ್ಲು–ಮೂರ್ನಾಡು ರಸ್ತೆ ಜಲಾವೃತ

Published:
Updated:

ನಾಪೋಕ್ಲು: ಸೋಮವಾರ ರಾತ್ರಿ ಬಿಡುವು ಕೊಟ್ಟ ಮಳೆ ನಾಪೋಕ್ಲು ವ್ಯಾಪ್ತಿಯಲ್ಲಿ ಮಂಗಳವಾರ ಬೆಳಿಗ್ಗಿ ನಿಂದಲೇ ಆರ್ಭಟಿಸಿತು. ಭಾಗಮಂಡಲ ತಲಕಾವೇರಿ ವ್ಯಾಪ್ತಿಯಲ್ಲೂ ಬಿರುಸಿನ ಮಳೆ ಸುರಿಯಿತು.

ಹೋಬಳಿ ವ್ಯಾಪ್ತಿಯ ಗ್ರಾಮಗಳಾದ ಕಕ್ಕಬ್ಬೆ, ನೆಲಜಿ, ಬಲ್ಲಮಾವಟಿ, ಪುಲಿಕೋಟು, ಅಯ್ಯಂಗೇರಿ ಗ್ರಾಮಗಳಲ್ಲಿ ಮಧ್ಯಾಹ್ನದವರೆಗೆ ಮಳೆ ಎಡೆಬಿಡದೇ ಧಾರಾಕಾರ ಸುರಿಯಿತು. ಕಾವೇರಿ ನದಿ ಹರಿಯುತ್ತಿರುವ ಕೊಟ್ಟಮುಡಿ ಹಾಗೂ ಬೊಳಿಬಾಣೆಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು ರಸ್ತೆಯ ಮೇಲೆ ಉಕ್ಕಿ ಹರಿಯುತ್ತಿದೆ.

ಸಮೀಪದ ಪಾಲೂರು ಗ್ರಾಮದಲ್ಲಿ ಹರಿಶ್ಚಂದ್ರ ದೇವಾಲಯ ಮಂಗಳವಾರ ಜಲಾವೃತವಾಗಿದೆ. ನಾಪೋಕ್ಲು - ಮೂರ್ನಾಡು ರಸ್ತೆಯ ಬೊಳಿಬಾಣೆಯಲ್ಲಿ ಕಾವೇರಿ ನದಿ ನೀರು ರಸ್ತೆಯ ಮೇಲೆ ಹರಿದು ರಸ್ತೆ ಜಲಾವೃತವಾಗಿ ಸಂಚಾರ ಸ್ಥಗಿತಗೊಂಡಿತು. ಮೂರ್ನಾಡು-ನಾಪೋಕ್ಲು ನಡುವೆ ಸಂಚರಿಸುವ ಬಸ್‌ಗಳು ಹಾಗೂ ವಾಹನಗಳು ಕುಂಬಳದಾಳು, ಹೊದವಾಡ ಮೂಲಕ ಸುತ್ತುಬಳಸಿ ಸಾಗಿದವು.

ಮಧ್ಯಾಹ್ನದವರೆಗೆ ಸುರಿದ ಮಳೆ ಮಧ್ಯಾಹ್ನದ ಬಳಿಕ ಪೂರ್ಣ ಬಿಡುವು ನೀಡಿತು. ನಾಗರಿಕರು ಮಕ್ಕಳೊಂದಿಗೆ ತೆರಳಿ ಬೊಳಿಬಾಣೆಯಲ್ಲಿ ಜಲಾವೃತಗೊಂಡ ರಸ್ತೆಯಲ್ಲಿ ಓಡಾಡಿ ಸಂಭ್ರಮಿಸಿದರು. ಮಳೆಯ ಹಿನ್ನೆಲೆ ಯಲ್ಲಿ ನಾಪೋಕ್ಲು ಹಾಗೂ ಕಕ್ಕಬ್ಬೆ ಕ್ಲಸ್ಟರಿನ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಯಿತು.

ಹೋಬಳಿ ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆ ಮುಂದುವರೆದಿದೆ. ಕಳೆದ ಐದು ದಿನಗಳಿಂದ ವಿದ್ಯುತ್ ಸಂಪರ್ಕವಿಲ್ಲದೆ ಸಾರ್ವಜನಿಕರು ಕತ್ತಲೆಯಲ್ಲಿ ಕಳೆಯು ವಂತಾಗಿದೆ. ಬಿರುಸಿನ ಮಳೆಯಿಂದಾಗಿ ಹೋಬಳಿ ವ್ಯಾಪ್ತಿಯ ಬಹುತೇಕ ಗ್ರಾಮಗಳು ಕತ್ತಲಲ್ಲಿ ಮುಳುಗಿವೆ. ಗ್ರಾಮೀಣ ಬ್ಯಾಂಕ್‌ಗಳ ಸಿಬ್ಬಂದಿಯೂ ವಿದ್ಯುತ್‌ ಕೊರತೆಯಿಂದ ತಮ್ಮ ಕೆಲಸಗಳನ್ನು ಪೂರ್ಣಗೊಳಿಸಲು ಸಾಧ್ಯವಾಗದೇ ಸಮಸ್ಯೆ ಎದುರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry