3
ಕೃಷಿ ಹೊಂಡ ನಿರ್ಮಾಣಕ್ಕೆ ಹೆಚ್ಚಿದ ಒಲವು l ಹೊಂಡಗಳ ಸುರಕ್ಷತೆ ಅಭಿಯಾನಕ್ಕೆ ಒತ್ತು

ಭರ್ತಿಯಾದ ಹೊಂಡ; ಹರ್ಷಗೊಂಡ ರೈತ

Published:
Updated:
ಭರ್ತಿಯಾದ ಹೊಂಡ; ಹರ್ಷಗೊಂಡ ರೈತ

ಚಿತ್ರದುರ್ಗ: ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಗೆ ಭರ್ತಿಯಾಗಿರುವ ಕೃಷಿ ಹೊಂಡಗಳು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ್ದು, ನೀರು ಸಂಗ್ರಹಕ್ಕೆ ಕೃಷಿಕರನ್ನು ಉತ್ತೇಜಿಸುತ್ತಿವೆ. ಇದರಿಂದ ಕೃಷಿ ಹೊಂಡ ನಿರ್ಮಾಣಕ್ಕೆ ಒಲವು ತೋರುವವರ ಸಂಖ್ಯೆ ಹೆಚ್ಚಾಗುತ್ತಿದೆ.

ನಾಲ್ಕು ವರ್ಷಗಳಲ್ಲಿ ನಿರ್ಮಿಸಿದ 6,972 ಹೊಂಡಗಳಲ್ಲಿ ಬಹುತೇಕವು ಭರ್ತಿಯಾಗಿವೆ. 2018–19ನೇ ಸಾಲಿನಲ್ಲಿ 2,400 ಕೃಷಿ ಹೊಂಡ ನಿರ್ಮಿಸುವ ಗುರಿಯನ್ನು ಕೃಷಿ ಇಲಾಖೆ ಹೊಂದಿದೆ. ರೈತರ ಆಸಕ್ತಿ ಇಮ್ಮಡಿಗೊಂಡಿದ್ದು, ನಿಗದಿತ ಗುರಿಗಿಂತ ಹೆಚ್ಚು ಹೊಂಡ ಅಸ್ತಿತ್ವಕ್ಕೆ ಬರುವ ಸಾಧ್ಯತೆ ಇದೆ.

ಮಳೆಯಾಶ್ರಿತ ಪ್ರದೇಶದ ರೈತರ ಬದುಕನ್ನು ಹಸನಗೊಳಿಸಲು ಕೃಷಿ ಭಾಗ್ಯ ಯೋಜನೆಯಡಿ ಜಾರಿಗೆ ತಂದ ‘ಕೃಷಿ ಹೊಂಡ’ಕ್ಕೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಯೋಜನೆಯನ್ನು ಪರಿಪೂರ್ಣವಾಗಿ ಅನುಷ್ಠಾನಗೊಳಿಸಿದ ಜಿಲ್ಲೆಯಾಗಿಯೂ ಚಿತ್ರದುರ್ಗ ಗುರುತಿಸಿಕೊಂಡಿದೆ. ಹೊಂಡ ತೊಡಿಸಲು ಸಹಾಯಧಕ್ಕೆ ಕೋರಿ ಬರುವ ಅರ್ಜಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿವೆ.

10X10, 12X12, 15X15 ಹಾಗೂ 18X18 ಮೀಟರ್‌ ಸುತ್ತಳತೆಯ ಹೊಂಡಗಳನ್ನು ನಿರ್ಮಿಸಿಕೊಳ್ಳಲು ಕೃಷಿ ಇಲಾಖೆ ಸಹಾಯಧನ ನೀಡುತ್ತದೆ. ಎಲ್ಲ ಹೊಂಡಗಳು 3 ಮೀಟರ್‌ ಆಳ ಇರಬೇಕು. ಸಾಮಾನ್ಯ ವರ್ಗದ ರೈತರಿಗೆ ಶೇ 80 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಶೇ 90ರಷ್ಟು ಸಬ್ಸಿಡಿ ಸಿಗುತ್ತಿದೆ. ಕಾಲುವೆ ನಿರ್ಮಾಣ ಹಾಗೂ ಡೀಸೆಲ್‌ ಪಂಪ್‌ಸೆಟ್‌ ಖರೀದಿಗೂ ಸಹಾಯ

ಧನ ನೀಡಲಾಗುತ್ತಿದೆ. ಮಳೆ ಕೈಕೊಟ್ಟಾಗ ಹೊಂಡದ ನೀರು ಕೃಷಿಕರ ಕೈಹಿಡಿಯುತ್ತಿದೆ.

ರೈತ ಸಂಪರ್ಕ ಕೇಂದ್ರದಲ್ಲಿ ಅರ್ಜಿ ಸಲ್ಲಿಕೆಯಾದ ಬಳಿಕ ಪರಿಣತರು ಸ್ಥಳ ಪರಿಶೀಲನೆ ನಡೆಸುತ್ತಾರೆ. ನೀರು ಸಂಗ್ರಹಕ್ಕೆ ಯೋಗ್ಯ ಸ್ಥಳ

ವೆಂದು ಮನವರಿಕೆಯಾದ ನಂತರ ಅನುಮತಿ ಸಿಗುತ್ತದೆ. ಏಪ್ರಿಲ್‌ ತಿಂಗಳಲ್ಲಿ ಆರಂಭವಾಗುತ್ತಿದ್ದ ನಿರ್ಮಾಣ ಕಾರ್ಯ, ವಿಧಾನಸಭಾ ಚುನಾವಣೆಯ ನೀತಿ ಸಂಹಿತೆಯಿಂದಾಗಿ ವಿಳಂಬವಾಗಿದೆ. ನೂತನ ಹೊಂಡಗಳ ಕಾಮಗಾರಿ ಸೆಪ್ಟೆಂಬರ್‌ ವೇಳೆಗೆ ಮುಕ್ತಾಯಗೊಳ್ಳುವ ನಿರೀಕ್ಷೆ ಇದೆ.

‘ಮೂರು ವರ್ಷಗಳ ಹಿಂದೆ ನಿರ್ಮಿಸಿದ 10 ಮೀಟರ್‌ ಸುತ್ತಳತೆಯ ಹೊಂಡದಿಂದ ಹಲವು ರೀತಿಯ ಪ್ರಯೋಜನಗಳಾಗಿವೆ. ಹರಿದು

ಹೋಗುತ್ತಿದ್ದ ಮಳೆನೀರು ಜಮೀನಿನಲ್ಲಿ ಸಂಗ್ರಹವಾಗುತ್ತಿದೆ. ಮಳೆ ಕೈಕೊಟ್ಟಾಗ ಈ ನೀರು ಆಸರೆಯಾಗುತ್ತಿದೆ. ಒಂದೂವರೆ ತಿಂಗಳಲ್ಲಿ ಎರಡು ಬಾರಿ ಹೊಂಡದ ನೀರನ್ನು ಸಂಪೂರ್ಣ ಬಳಸಿಕೊಂಡಿದ್ದೇನೆ. ಮಳೆಗೆ ಮತ್ತೆ ತುಂಬಿಕೊಂಡಿದ್ದು, ಆಪತ್ಕಾಲದಲ್ಲಿ ಆಸರೆಯಾಗಲಿದೆ’ ಎನ್ನುತ್ತಾರೆ ಹೊಳಲ್ಕೆರೆ ತಾಲ್ಲೂಕಿನ ನಗರಘಟ್ಟ ಗ್ರಾಮದ ರೈತ ಶೇಖರಪ್ಪ.

ಕೃಷಿ ಹೊಂಡಕ್ಕೆ ಜನ ಹಾಗೂ ಜಾನುವಾರು ಬೀಳುವುದನ್ನು ತಡೆಯುವ ಉದ್ದೇಶದಿಂದ ಕೃಷಿ ಇಲಾಖೆ ಜಾರಿಗೆ ತಂದ ‘ನೆರಳು ಪರದೆ’ಗೆ ಜಿಲ್ಲೆಯ ರೈತರು ಆಸಕ್ತಿ ತೋರಿಲ್ಲ.

ಆಕಸ್ಮಿಕವಾಗಿ ಕೃಷಿ ಹೊಂಡಕ್ಕೆ ಬಿದ್ದು ಅನಾಹುತಗಳು ಸಂಭವಿಸಿದ್ದರಿಂದ 2017ರಲ್ಲಿ ಸರ್ಕಾರ ‘ನೆರಳು ಪರದೆ’ ಕಡ್ಡಾಯಗೊಳಿಸಿದೆ. ಇದಕ್ಕೆ ಕೃಷಿ ಇಲಾಖೆ ₹ 5 ಸಾವಿರ ಸಹಾಯಧನ ನೀಡುತ್ತದೆ. ಆದರೆ, ಬಹುತೇಕರು ಈ ವ್ಯವಸ್ಥೆ ಮಾಡಿಕೊಳ್ಳಲು ಮುಂದಾಗಿಲ್ಲ.

ಹೊಂಡಗಳ ಸುರಕ್ಷತೆಗೆ ಸಂಬಂಧಿಸಿದಂತೆ ರೈತರಲ್ಲಿ ಅರಿವು ಮೂಡಿಸಲು ‘ಕೃಷಿ ಅಭಿಯಾನ’ದಲ್ಲಿ ಒತ್ತು ನೀಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ನೀರಿಗೆ ಬಿದ್ದವರು ಪ್ರಾಣ ಉಳಿಸಿಕೊಳ್ಳಲು ಸಹಾಯವಾಗುವಂತೆ ಹೊಂಡದಲ್ಲಿ ಟೈರುಗಳನ್ನು ಬಿಡುವಂತೆ ಸೂಚಿಸಿದ್ದಾರೆ. ತಂತಿಬೇಲಿ ನಿರ್ಮಿಸಿಕೊಳ್ಳುವಂತೆಯೂ ಸಲಹೆ ನೀಡುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry