ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಿನ್ನಮತ ದಮನಕ್ಕೆ ಕಾನೂನು ದುರ್ಬಳಕೆ

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಮಾನವ ಹಕ್ಕು ಉಲ್ಲಂಘನೆ ವ್ಯಾಪಕ
Last Updated 14 ಜೂನ್ 2018, 19:30 IST
ಅಕ್ಷರ ಗಾತ್ರ

ಜಿನೀವಾ: ಭಯೋತ್ಪಾದನೆ ತಡೆ ಕಾಯ್ದೆಯನ್ನು ಪಾಕಿಸ್ತಾನವು ದುರುಪಯೋಗ ಮಾಡಿಕೊಳ್ಳುತ್ತಿದೆ. ಶಾಂತಿಯುತ ಹೋರಾಟಗಾರರಿಗೆ ವಿಚಾರಣೆ ಹೆಸರಲ್ಲಿ ಕಿರುಕುಳ ನೀಡಲಾಗುತ್ತಿದೆ. ಭಿನ್ನಮತವನ್ನುದಮನ ಮಾಡುವುದಕ್ಕಾಗಿ ಈ ಕಾಯ್ದೆಯನ್ನು ಬಳಸಲಾಗುತ್ತಿದೆ ಎಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಬಗ್ಗೆ ವಿಶ್ವಸಂಸ್ಥೆ ಸಿದ್ಧಪಡಿಸಿದ ವರದಿ ಹೇಳಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂದೆ ನಡೆದಿರುವ ಮತ್ತು ಈಗ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕಾದ ಅಗತ್ಯ ಇದೆ. ಕಾಶ್ಮೀರ ಸಮಸ್ಯೆಗೆ ಕಂಡುಕೊಳ್ಳುವ ಯಾವುದೇ ಪರಿಹಾರವು ಅಲ್ಲಿನ ಹಿಂಸೆಯ ವಿಷವರ್ತುಲವನ್ನು ಕೊನೆಗೊಳಿಸಬೇಕು. ಹಿಂದಿನ ಮತ್ತು ಈಗಿನ ಮಾನವ ಹಕ್ಕುಗಳ ಉಲ್ಲಂಘನೆಗೆ ಹೊಣೆಗಾರಿಕೆ ನಿಗದಿಪಡಿಸಬೇಕು ಎಂದು ವರದಿ ಪ್ರತಿಪಾದಿಸಿದೆ.

2016ರಿಂದ 2018ರ ನಡುವೆ ಜಮ್ಮು ಮತ್ತು ಕಾಶ್ಮೀರ ಹಾಗೂ ಪಿಒಕೆ ಮತ್ತು ಗಿಲ್ಗಿಟ್‌ ಬಾಲ್ಟಿಸ್ತಾನದ ಮಾನವ ಹಕ್ಕು ಸ್ಥಿತಿಯವನ್ನು ವಿಶ್ಲೇಷಿಸಲಾಗಿದೆ ಎಂದು ವರದಿ ತಿಳಿಸಿದೆ. 1980ರ ದಶಕದ ಕೊನೆಯಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವು ಸಶಸ್ತ್ರ ಗುಂಪುಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ವರದಿ ಗುರುತಿಸಿದೆ.

ಭದ್ರತಾ ಪಡೆಗಳಿಂದ ಹಿಜ್ಬುಲ್‌ ಮುಜಾಹಿದೀನ್‌ ಉಗ್ರ ಬುರ್ಹಾನ್‌ ವಾನಿಯ ಹತ್ಯೆ ಪ್ರಕರಣವನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ವಾನಿಯ ಹತ್ಯೆಯಾದ ಸಂದರ್ಭದಲ್ಲಿ ಕಾಶ್ಮೀರದಲ್ಲಿ ಭಾರಿ ಪ್ರಮಾಣದಲ್ಲಿ ಪ್ರತಿಭಟನೆಗಳು ನಡೆದಿದ್ದವು.

ನಾಗರಿಕರ ಅಪಹರಣ, ಹತ್ಯೆ ಮತ್ತು ಲೈಂಗಿಕ ದೌರ್ಜನ್ಯದಂತಹ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಈ ಗುಂಪುಗಳು ನಡೆಸಿರುವುದಕ್ಕೆ ಸಾಕ್ಷ್ಯಗಳಿವೆ. ಈ ಗುಂಪುಗಳಿಗೆ ಯಾವುದೇ ನೆರವು ನೀಡುತ್ತಿಲ್ಲ ಎಂದು ಪಾಕಿಸ್ತಾನ ಸರ್ಕಾರ ಹೇಳುತ್ತಲೇ ಇದೆ.  ಆದರೆ, ಈ ಗುಂಪುಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಸುತ್ತಿರುವ ಕೃತ್ಯಗಳಿಗೆ ಪಾಕಿಸ್ತಾನ ಸರ್ಕಾರದ ಕುಮ್ಮಕ್ಕು ಇದೆ ಎಂಬು ತಜ್ಞರು ಹೇಳುತ್ತಾರೆ ಎಂದು ವರದಿ ತಿಳಿಸಿದೆ.

ಸಶಸ್ತ್ರ ಪಡೆಗಳ (ಜಮ್ಮು ಮತ್ತು ಕಾಶ್ಮೀರ) ವಿಶೇಷಾಧಿಕಾರ ಕಾಯ್ದೆ 1990 ಅನ್ನು ತಕ್ಷಣವೇ ರದ್ದು ಮಾಡಬೇಕು. ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದ ಭದ್ರತಾ ಪಡೆ ಸಿಬ್ಬಂದಿಯನ್ನು ನಾಗರಿಕ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಒಳಪಡಿಸಲು ಕೇಂದ್ರ ಸರ್ಕಾರದ ಪೂರ್ವಾನುಮತಿ ಅಗತ್ಯ ಎಂಬ ನಿಯಮವನ್ನೂ ತಕ್ಷಣವೇ ವಾಪಸ್‌ ಪಡೆಯಬೇಕು ಎಂದೂ ವರದಿ ಆಗ್ರಹಿಸಿದೆ.

ಪಾಕ್ ಪ್ರತಿಕ್ರಿಯೆ: ಕಾನೂನು ಸಮ್ಮತವಲ್ಲದ ಮತ್ತು ಕೆಲಸಕ್ಕೆ ಬಾರದ ಪ್ರತಿಭಟನೆಗಳನ್ನು ನಡೆಸುವ ಬದಲಿಗೆ ಭಾರತವು ಅಂತರರಾಷ್ಟ್ರೀಯ ಬದ್ಧತೆಗಳನ್ನು ಈಡೇರಿಸಬೇಕು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯದ ಅನ್ವಯ ಜಮ್ಮು ಮತ್ತು ಕಾಶ್ಮೀರದ ವಿವಾದ ಪರಿಹಾರಕ್ಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ವರದಿಗೆ ಪಾಕಿಸ್ತಾನ ಪ್ರತಿಕ್ರಿಯೆ ನೀಡಿದೆ.

**

ಭಾರತದ ನಿಲುವು

ವಿಶ್ವ ಸಂಸ್ಥೆಯ ವರದಿಯು ಭಾರತದ ಸಾರ್ವಭೌಮತೆ ಮತ್ತು ಭೌಗೋಳಿಕ ಸಮಗ್ರತೆಯ ಉಲ್ಲಂಘನೆಯಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಕಟುವಾದ ಪ್ರತಿಕ್ರಿಯೆ ನೀಡಿದೆ.

ದೃಢೀಕರಿಸದ ಮಾಹಿತಿಯನ್ನು ಆಯ್ದು ರಚಿಸಿದ ವರದಿ ಇದು ಎಂದು ಅಭಿಪ್ರಾಯಪಟ್ಟಿದೆ.

ಜಮ್ಮು ಮತ್ತು ಕಾಶ್ಮೀರ ರಾಜ್ಯ ಭಾರತದ ಅವಿಭಾಜ್ಯ ಅಂಗ. ಈ ರಾಜ್ಯದ ಭಾಗವನ್ನು ಕಾನೂನುಬಾಹಿರವಾಗಿ ಮತ್ತು ಬಲವಂತವಾಗಿ ಪಾಕಿಸ್ತಾನ ಆಕ್ರಮಿಸಿಕೊಂಡಿದೆ ಎಂದು ಭಾರತ ಹೇಳಿದೆ.

‘ಜಮ್ಮು ಮತ್ತು ಕಾಶ್ಮೀರ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಹೋಲಿಸುವುದಕ್ಕೆ ಸಾಧ್ಯ ಇಲ್ಲ. ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರ ಇದೆ. ಆದರೆ, ಪಿಒಕೆ ಮುಖ್ಯಸ್ಥರಾಗಿ ಪಾಕಿಸ್ತಾನದ ರಾಜತಾಂತ್ರಿಕರೊಬ್ಬರನ್ನು ಸ್ವೇಚ್ಛೆಯಿಂದ ನೇಮಿಸಲಾಗಿದೆ’ ಎಂದು ಭಾರತದ ಅಧಿಕಾರಿಗಳು ಹೇಳುತ್ತಿದ್ದಾರೆ.

**

ವರದಿ ಪ್ರಕಾರ ಉಲ್ಲಂಘನೆ ಏನು?

ಜಮ್ಮು ಮತ್ತು ಕಾಶ್ಮೀರ

ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರಗಾಮಿ ಗುಂಪುಗಳು ಹತ್ಯೆ, ಅಪಹರಣ, ಲೈಂಗಿಕ ದೌರ್ಜನ್ಯದಂತಹ ಕೃತ್ಯಗಳನ್ನು ಎಸಗುತ್ತಿವೆ. ಮಾನವ ಹಕ್ಕುಗಳ ಬಗ್ಗೆ ನಿರ್ಲಕ್ಷ್ಯ, ನ್ಯಾಯಾಂಗದ ರಕ್ಷಣೆ ಪಡೆಯುವ ಅವಕಾಶಗಳ ಕೊರತೆ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಣಿಸುತ್ತಿರುವ ಮುಖ್ಯ ಉಲ್ಲಂಘನೆಗಳಾಗಿವೆ.

* ಸಶಸ್ತ್ರ ಪಡೆಗಳ ವಿಷೇಶಾಧಿಕಾರ ಕಾಯ್ದೆಯು ಕಾನೂನಿನ ಸಹಜ ವ್ಯವಸ್ಥೆಗೆ ಅಡ್ಡಿಯಾಗಿದೆ. ಸಂತ್ರಸ್ತರು ನ್ಯಾಯ ಪಡೆಯಲು ತೊಡಕಾಗಿದೆ ಮತ್ತು ವಿಶ್ವಾಸಾರ್ಹತೆ ಕುಸಿದಿದೆ.

* ಭದ್ರತಾ ಪಡೆಗಳ ವಿರುದ್ಧದ ಲೈಂಗಿಕ ದೌರ್ಜನ್ಯದ ಆರೋಪಗಳನ್ನು ಯಾವುದೇ ಪ್ರಾಧಿಕಾರ ಸ್ವತಂತ್ರವಾಗಿ ತನಿಖೆ ನಡೆಸಲು ಸಾಧ್ಯವಾಗುವುದಿಲ್ಲ.

ಪಿಒಕೆ

ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಸೇರ್ಪಡೆ ಮಾಡಬೇಕು ಎಂಬ ವಿಚಾರ ಹೇಳುವುದಕ್ಕೆ ಅವಕಾಶ ಇಲ್ಲ

* ಪಿಒಕೆಯಲ್ಲಿ ಸ್ಥಳೀಯ ಸರ್ಕಾರ ಇದೆ ಎಂದು ಹೇಳಲಾಗುತ್ತದೆ. ಆದರೆ, ಅದು ಸಂಪೂರ್ಣವಾಗಿ ಪಾಕಿಸ್ತಾನ ಸರ್ಕಾರದ ನಿಯಂತ್ರಣದಲ್ಲಿದೆ.

* ಪಿಒಕೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಮೇಲೆ ಪಾಕಿಸ್ತಾನದ ಗುಪ್ತಚರ ಇಲಾಖೆಯ ಹತೋಟಿ ಇದೆ.

* ಮುಖ್ಯವಾಗಿ ಯುವ ಜನರು ಭಯೋತ್ಪಾದನೆ ತಡೆ ಕಾಯ್ದೆಯ ಬಲಿಪಶುಗಳಾಗಿದ್ದಾರೆ.

**

ಎಲ್‌ಒಸಿಯ ಎರಡೂ ಭಾಗದ ಜನರ ಮೇಲೆ ಅಪಾಯಕಾರಿ ಪರಿಣಾಮ ಉಂಟಾಗಿದೆ. ಮಾನವ ಹಕ್ಕುಗಳ ನಿರಾಕರಣೆ ಅಥವಾ ಮಿತಿಯಿಂದ ಅವರು ಬಳಲಿದ್ದಾರೆ.

–ವಿಶ್ವಸಂಸ್ಥೆಯ ವರದಿ

**

ವಿಶ್ವಸಂಸ್ಥೆಯ ವಿಶ್ವಾಸಾರ್ಹತೆಗೆ ಧಕ್ಕೆ ತರಲು ವೈಯಕ್ತಿಕ ಪೂರ್ವಗ್ರಹಗಳಿಗೆ ಅವಕಾಶ ನೀಡಲಾಗಿದೆ. ಇದು ಕಳವಳಕಾರಿ ವಿಚಾರ.

–ಭಾರತದ ಪ್ರತಿಕ್ರಿಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT