ಸರಕು ಹಡಗಿನ ಬಂಧಿತ ಸಿಬ್ಬಂದಿ ಆರೋಗ್ಯ ಕ್ಷೀಣ

7
ಒಂದು ವರ್ಷದಿಂದ ಯುಎಇ ಬಂದರಿನಲ್ಲಿರುವ ಹಡಗು

ಸರಕು ಹಡಗಿನ ಬಂಧಿತ ಸಿಬ್ಬಂದಿ ಆರೋಗ್ಯ ಕ್ಷೀಣ

Published:
Updated:
ಸರಕು ಹಡಗಿನ ಬಂಧಿತ ಸಿಬ್ಬಂದಿ ಆರೋಗ್ಯ ಕ್ಷೀಣ

ಚೆನ್ನೈ: ಅರಬ್‌ ಒಕ್ಕೂಟಗಳ ರಾಷ್ಟ್ರದ (ಯುಎಇ) ಫಿಜೈರಾ ಬಂದರಿನಲ್ಲಿ ಬಂದಿಯಾಗಿರುವ ಭಾರತೀಯ ಸರಕು ಹಡಗು ‘ಮಹರ್ಷಿ ವಾಮದೇವ’ದ 18 ಸಿಬ್ಬಂದಿಯ ದೇಹಸ್ಥಿತಿ ದಿನೇ ದಿನೇ ಹದಗೆಡುತ್ತಿದೆ.

ಅನಿಲ ಸಾಗಣೆ ಮಾಡುವ ಈ ಹಡಗಿನ ಮೂಲ ಮಾಲೀಕರಾದ ವರುಣ್ ಗ್ಲೋಬಲ್ ಸಂಸ್ಥೆ ದಿವಾಳಿಯಾಗಿದ್ದು, ಬಾಕಿ ಹಣ ಪಾವತಿ ಮಾಡದೆ ಇರುವುದರಿಂದಾಗಿ ಫಿಜೈರಾ ಬಂದರು ಅಧಿಕಾರಿಗಳು ಕಳೆದ ಜೂನ್‌ನಲ್ಲೇ ಹಡಗನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದರು.

‘ಸಿಬ್ಬಂದಿ ತೂಕ ಇಳಿಕೆ, ಭಾರಿ ಒತ್ತಡ, ಹಲವು ಆರೋಗ್ಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಆಹಾರ ಮತ್ತು ನೀರಿನಂತಹ ಅಗತ್ಯ ವಸ್ತುಗಳನ್ನಷ್ಟೇ ಬಳಸಲು ಅವರಿಗೆ ಅವಕಾಶ ನೀಡಲಾಗಿದೆ’ ಎಂದು ಹಡಗಿನ ಕ್ಯಾಪ್ಟನ್ ಕುಮಾರ್ ಕೃಷ್ಣ ತಿಳಿಸಿದ್ದಾರೆ.

ವೈದ್ಯಕೀಯ ಕೇಂದ್ರಕ್ಕೆ ದಾಖಲು: ತೀವ್ರ ಎದೆನೋವಿನಿಂದ ನರಳುತ್ತಿದ್ದ ವಿದ್ಯುಚ್ಛಕ್ತಿ ಅಧಿಕಾರಿ ಜಿತೇಂದ್ರ ಕುಮಾರ್ ಪಾಂಡೆ ಅವರನ್ನು ಎರಡು ದಿನಗಳ ಹಿಂದೆ ಫಿಜೈರಾ ಬಂದರು ವೈದ್ಯಕೀಯ ಕೇಂದ್ರಕ್ಕೆ ದಾಖಲಿಸಲಾಗಿದೆ.

ಮನವಿ ಪತ್ರ: ಸರಕು ಸಾಗಣೆ ನಿರ್ದೇಶನಾಲಯ, ಯುಎಇಯಲ್ಲಿರುವ ಭಾರತೀಯ ರಾಯಭಾರ ಕಚೇರಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸೇರಿದಂತೆ ವಿವಿಧ ಅಧಿಕಾರಿಗಳಿಗೆ ಸಿಬ್ಬಂದಿಯ ಕುಟುಂಬ ಸದಸ್ಯರು ಪತ್ರ ಬರೆದಿದ್ದಾರೆ.

ನಿರ್ವಹಣೆಗೆ ಹಣವಿಲ್ಲ: ಸರಕು ಸಾಗಣೆ ಹಡಗಿನಲ್ಲಿ ಮೊದಲಿಗೆ ಇದ್ದ ಸಿಬ್ಬಂದಿಯ ತಂಡ ಪ್ರತಿಭಟನೆ ನಡೆಸಿದ್ದರಿಂದ ಈ ಫೆಬ್ರುವರಿಯಲ್ಲಿ ಅವರನ್ನು ತೆರವುಗೊಳಿಸಲಾಗಿತ್ತು. ಬಳಿಕ, ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯು ಗುರುಗ್ರಾಮ ಮೂಲದ ದರಿಯಾ ಸರಕು ಸಾಗಣೆ ಸಂಸ್ಥೆಗೆ ಈ ಹಡಗಿನ ನಿರ್ವಹಣೆ ಹಸ್ತಾಂತರಿಸಿತು.

‘ಸಾಲ ನೀಡಿದ್ದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಜತೆ ನಾವು ಒಪ್ಪಂದ ಮಾಡಿಕೊಂಡಿದ್ದೆವು. ಆರಂಭದಲ್ಲಿ ಎಸ್‌ಬಿಐ ₹1 ಕೋಟಿ ಹಣ ಪಾವತಿಸಿತು. ಆದರೆ ಬಳಿಕ ಹಡಗು ಮಾರಾಟ ಆಗುವವರೆಗೂ ಹಣ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ’ ಎಂದು ದರಿಯಾ ಸಂಸ್ಥೆಯ ಸಿಇಒ ಕ್ಯಾಪ್ಟನ್ ರಾಜೇಶ್ ದೇಶವಾಲ್ ಆರೋಪಿಸಿದ್ದಾರೆ.

**

‘ಜೀವದ ಹೊಣೆ ಸವಾಲಾಗಿದೆ’

‘ಒಬ್ಬ ಸಿಬ್ಬಂದಿ ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತಿದ್ದಾರೆ. ಯಾವುದೇ ಆದೇಶಗಳಿಗೂ ಪ್ರತಿಕ್ರಿಯಿಸುವುದಿಲ್ಲ. ಸ್ವತಃ ಹಾನಿ ಮಾಡಿಕೊಳ್ಳುವ ಮೊದಲು, ಅವರ ಆರೋಗ್ಯವನ್ನು ಗಮನಿಸಿ ವೈದ್ಯಕೀಯ ಆಧಾರದ ಮೇಲೆ ಅವರನ್ನು ಬಿಡುಗಡೆ ಮಾಡುವುದು ಅಧಿಕಾರಿಗಳಿಗೆ ಬಿಟ್ಟ ವಿಷಯ. ಇದು  ಒಂದು ಪ್ರಕರಣವಷ್ಟೆ. ಪ್ರತಿದಿನವೂ 18 ಜನರ ಜೀವದ ಹೊಣೆ ಹೊರುವುದು ನನಗೆ ಸವಾಲಾಗಿದೆ. ನಮಗೆಲ್ಲಾ ಹುಚ್ಚು ಹಿಡಿಯುವ ಮೊದಲು ಏನಾದರೂ ಮಾಡಿ’ ಎಂದು ಕ್ಯಾಪ್ಟನ್ ಕೃಷ್ಣ ಪತ್ರದಲ್ಲಿ ಮನವಿ ಮಾಡಿದ್ದಾರೆ. 

‘ಕಳೆದ ಐದು ತಿಂಗಳಿಂದ ನಮಗೆ ವೇತನ ನೀಡಿಲ್ಲ. ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಈ ತನಕ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಅವರು ಹೇಳಿದ್ದಾರೆ.

**

ಅಪಾಯಕಾರಿ

ಇಕ್ಕಟ್ಟಾಗಿರುವ ಫಿಜೈರಾ ಬಂದರಿನಲ್ಲಿ ಹಡಗಿಗೆ ಲಂಗರು ಹಾಕಿರುವುದರಿಂದ ಸಮುದ್ರ ಸಂಚಾರಕ್ಕೆ ಅಡ್ಡಿ ಉಂಟಾಗುತ್ತದೆ. ಅನಿಲ ಟ್ಯಾಂಕರ್‌ಗಳು ಇರುವುದರಿಂದ, ಒಂದು ವೇಳೆ ಅಗ್ನಿ ಅನಾಹುತ ಸಂಭವಿಸಿದರೆ ಹಡಗು ಬಾಂಬ್‌ ನಂತಾಗುವ ಅಪಾಯ ಇದೆ.

‘ಸೆನ್ಸರ್‌ಗಳು ದೋಷಪೂರಿತವಾಗಿವೆ. ಹಡಗಿನ ವಿಮೆ ಅವಧಿ ಮುಗಿದುಹೋಗಿದೆ. ವಾತಾವರಣ ಹದಗೆಟ್ಟು ಹಡಗು ಮುಳುಗಲಾರಂಭಿಸಿದರೆ ಸಿಬ್ಬಂದಿಗೆ ನಿಯಂತ್ರಣ ಸಾಧ್ಯವಾಗುವುದಿಲ್ಲ’ ಎಂದು ವಿದೇಶಾಂಗ ವ್ಯವಹಾರ ಮತ್ತು ಬಂದರು ಸಚಿವಾಲಯದ ಅಧಿಕಾರಿಗಳಿಗೆ ಇ–ಮೇಲ್‌ನಲ್ಲಿ ಕೃಷ್ಣ ಮನವಿ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry