ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರಂಜಾ ಬಳಿ ಬೃಂದಾವನ ನಿರ್ಮಾಣ

ಬೀದರ್‌ ಜಿಲ್ಲೆಯ ಅಭಿವೃದ್ಧಿಯ ಕನಸು ಬಿಚ್ಚಿಟ್ಟ ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ
Last Updated 15 ಜೂನ್ 2018, 10:55 IST
ಅಕ್ಷರ ಗಾತ್ರ

ಬೀದರ್‌: ಬೀದರ್‌ ವಿಧಾನಸಭಾ ಕ್ಷೇತ್ರದಿಂದ ಒಂದು ಬಾರಿ ಹಾಗೂ ಬೀದರ್‌ ದಕ್ಷಿಣ ಕ್ಷೇತ್ರದಿಂದ ಎರಡು ಬಾರಿ ಆಯ್ಕೆಯಾಗಿರುವ ಬಂಡೆಪ್ಪ ಕಾಶೆಂಪುರ ಅವರು ಈಗ ಮತ್ತೆ ಸಚಿವರಾಗಿದ್ದಾರೆ. ಜೆಡಿಎಸ್‌–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲಿ ಸಹಕಾರ ಇಲಾಖೆಯ ಸಾರಥ್ಯ ವಹಿಸಿಕೊಂಡಿದ್ದಾರೆ.

ಹಿಂದೆ ಕೃಷಿ ಸಚಿವರಾಗಿದ್ದ ಅವಧಿಯಲ್ಲಿ ಬೀದರ್‌ ಜಿಲ್ಲೆಯ ಜನ ಸ್ಮರಿಸುವ ರೀತಿಯಲ್ಲಿ ಕೆಲವು ಕೆಲಸಗಳನ್ನು ಮಾಡಿದ್ದಾರೆ. ರೈತ ಸಂತೆ, ತರಕಾರಿ ಸಗಟು ಮಾರುಕಟ್ಟೆ ಹಾಗೂ ತೋಟಗಾರಿಕೆ ಕಾಲೇಜು ಇವರ ಅವಧಿಯಲ್ಲಿಯೇ ಆಗಿವೆ. ಬೀದರ್‌ ಉತ್ಸವ ಆರಂಭಿಸಿದ ಕೀರ್ತಿಯೂ ಬಂಡೆಪ್ಪ ಅವರಿಗೆ ಸಲ್ಲುತ್ತದೆ. ಜಿಲ್ಲೆಯ ಜನ ಮತ್ತೆ ಹೊಸ ಅಭಿವೃದ್ಧಿ ಪರ್ವದ ನಿರೀಕ್ಷೆಯಲ್ಲಿದ್ದಾರೆ. ಈ ಕುರಿತು ಬಂಡೆಪ್ಪ ಕಾಶೆಂಪುರ ಅವರು ‘ಪ್ರಜಾವಾಣಿ’ಯೊಂದಿಗೆ ಮುಕ್ತ ಮನಸ್ಸಿನಿಂದ ಮಾತನಾಡಿದ್ದಾರೆ.

ನಿರೀಕ್ಷೆಯ ಗೆಲುವು ಸಾಧಿಸಿರುವ ನೀವು ತಕ್ಷಣಕ್ಕೆ ಕೈಗೆತ್ತಿಕೊಳ್ಳುವ ಅಭಿವೃದ್ಧಿ ಕೆಲಸಗಳೇನು?

ಕೃಷಿಗೆ ನೆರವಾಗುವ ದಿಸೆಯಲ್ಲಿ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತೇನೆ. ಗೋದಾವರಿ ಯೋಜನೆಯ 27 ಟಿಎಂಸಿ ಅಡಿ
ಪೈಕಿ 11 ಟಿಎಂಸಿ ಅಡಿ ನೀರು ಮಾತ್ರ ಬಳಕೆಯಾಗುತ್ತಿದೆ. ಅದನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲು ಯೋಜನೆ ರೂಪಿಸುವೆ. ಇದಲ್ಲದೆ ಗೃಹ ಕೈಗಾರಿಕೆಗಳ ಅಭಿವೃದ್ಧಿಗೆ ಒತ್ತುಕೊಟ್ಟು ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲು ಪ್ರಯತ್ನಿಸುವೆ. ಇದಕ್ಕೂ ಮೊದಲು ಅಧಿಕಾರಿಗಳ ಸಭೆ ನಡೆಸಿ ಸಮಾಲೋಚನೆ ನಡೆಸುತ್ತೇನೆ.

ಐದು ವರ್ಷದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಹಾಕಿಕೊಂಡಿರುವ ನೀಲನಕ್ಷೆ ಏನು?

ಬೀದರ್‌ ಜಿಲ್ಲೆ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಫಲಿತಾಂಶದಲ್ಲಿ ರಾಜ್ಯದ ಶೈಕ್ಷಣಿಕ ಜಿಲ್ಲೆಗಳಲ್ಲಿ ಕೊನೆಯ ಸಾಲಿನಲ್ಲಿರುವುದು ನನ್ನ ಗಮನದಲ್ಲಿದೆ. ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಪ್ರತಿಯೊಬ್ಬರ ಸಹಕಾರ ಅಗತ್ಯ. ಈ ದಿಸೆಯಲ್ಲಿ ಪರಿಣಾಮಕಾರಿ ಯೋಜನೆ ಹಮ್ಮಿಕೊಳ್ಳಲು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡುವೆ.

ವೈದ್ಯಕೀಯ ಸೌಲಭ್ಯ ಕಲ್ಪಿಸುವುದು, ಗ್ರಾಮಗಳಿಗೆ ಮೂಲಸೌಕರ್ಯ ಒದಗಿಸುವುದು ನನ್ನ ಉದ್ದೇಶವಾಗಿದೆ. ಇದಕ್ಕಾಗಿ ಯೋಜನಾ ಬದ್ಧವಾದ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇನೆ.

ಜಿಲ್ಲಾ ಆಡಳಿತ ಕಚೇರಿಗಳ ಸಂಕೀರ್ಣ ನಿರ್ಮಾಣ ಯೋಜನೆ ನಿಮ್ಮ ಅವಧಿಯಲ್ಲಿ ಪೂರ್ಣಗೊಳ್ಳಬಹುದೆ?

ಯಾವ ಕಾರಣಕ್ಕೆ ಕಟ್ಟಡ ನಿರ್ಮಾಣ ವಿಳಂಬವಾಗುತ್ತಿದೆ ಎನ್ನುವುದನ್ನು ಪರಿಶೀಲಿಸುತ್ತೇನೆ. ಕಾನೂನು ತೊಡಕು ಇದ್ದರೆ ಏಕಗವಾಕ್ಷಿ ಪದ್ಧತಿ ಅಡಿ ಅವುಗಳ ನಿವಾರಣೆ ಮಾಡಿ ಈಗಿರುವ ಜಿಲ್ಲಾಧಿಕಾರಿ ಕಚೇರಿ ಸ್ಥಳದಲ್ಲೇ ಸಂಕೀರ್ಣ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುತ್ತೇನೆ. ನನ್ನ ಆಡಳಿತ ಅವಧಿಯಲ್ಲಿಯೇ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲು ಪ್ರಯತ್ನಿಸುವೆ.

ಕ್ಷೇತ್ರದ ಜ್ವಲಂತ ಸಮಸ್ಯೆಗಳ ಪರಿಹಾರ ಸಾಧ್ಯವೇ?

ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಬಹುಗ್ರಾಮ ಯೋಜನೆಗಳು ಮೂಲೆ ಗುಂಪಾಗಿವೆ. ಇಸ್ರೋದ ಜಲ |
ಸಂವರ್ಧನೆ ವಿಭಾಗದ ತಜ್ಞರ ಮೂಲಕ ಅಧ್ಯಯನ ನಡೆಸಿ ಪ್ರತಿಯೊಂದು ಗ್ರಾಮದಲ್ಲಿ ಲಭ್ಯವಿರುವ ನೀರಿನ ಪ್ರಮಾಣ ಹಾಗೂ ಬಳಕೆಯ ಮಾಹಿತಿ ಪಡೆದು ಯೋಜನೆ ರೂಪಿಸುತ್ತೇನೆ.

ಕಡತಗಳಲ್ಲಿ ಮಾತ್ರ ವೈಯಕ್ತಿಕ ಶೌಚಾಲಯಗಳಿವೆ. ವಾಸ್ತವದಲ್ಲಿ ಶೌಚಾಲಯಗಳ ಸಂಖ್ಯೆ ಕಡಿಮೆ ಇದೆ. ಗ್ರಾಮ ನೈರ್ಮಲ್ಯ ಕಾಪಾಡಲು ಪ್ರತಿಯೊಂದು ಮನೆಗೆ ಶೌಚಾಲಯ ಇರುವಂತೆ ಮಾಡುತ್ತೇನೆ.

ಪಾತಾಳಕ್ಕೆ ಕುಸಿದಿರುವ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಏನು ಮಾಡುತ್ತೀರಿ?

ಶೀಘ್ರದಲ್ಲೇ ಶಿಕ್ಷಣ ಸಚಿವರು ಹಾಗೂ ಹಿರಿಯ ಅಧಿಕಾರಿಗಳನ್ನು ಬೀದರ್‌ಗೆ ಕರೆಸಿ ಸಭೆ ನಡೆಸಲಾಗುವುದು. ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಕಾರ್ಯಕ್ರಮ ರೂಪಿಸಿ ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆ ಎನ್ನುವ ಹಣೆಪಟ್ಟಿಯನ್ನು ಅಳಿಸಿ ಹಾಕುವ ದಿಸೆಯಲ್ಲಿ ಕಾರ್ಯಕ್ರಮ ರೂಪಿಸುತ್ತೇನೆ.

ಪ್ರವಾಸಿ ಕಾರಿಡಾರ್ ನಿರ್ಮಾಣ

ಬೀದರ್‌: ಪ್ರವಾಸಿ ಕಾರಿಡಾರ್ ನನ್ನ ಉದ್ದೇಶವಾಗಿದೆ. ದಿನ ಪೂರ್ತಿ, ಎರಡು ದಿನ ಹಾಗೂ ಅರ್ಧ ದಿನದ ಪ್ಯಾಕೇಜ್‌ ಸಿದ್ಧಪಡಿಸಿ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಬರುವಂತೆ ವ್ಯವಸ್ಥೆ ಮಾಡಲಾಗುವುದು. ಬೀದರ್‌ ಉತ್ಸವ ಆರಂಭಿಸಲಾಗುವುದು.

ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಹೈದರಾಬಾದ್ ಹಾಗೂ ಮುಂಬೈನಲ್ಲಿ ರೋಡ್‌ ಶೋ ನಡೆಸಲಾಗುವುದು.
ಬೇರೆ ದೇಶಗಳಲ್ಲಿ ಪ್ರವಾಸೋದ್ಯಮ ಮೇಲೆ ಅಲ್ಲಿನ ಅರ್ಥ ವ್ಯವಸ್ಥೆ ಅವಲಂಬಿಸಿದೆ. ಜಿಲ್ಲೆಯಲ್ಲಿ ಅಸಂಖ್ಯ ಪುರಾತನ ಸ್ಮಾರಕಗಳು ಇದ್ದರೂ ಪ್ರವಾಸೋದ್ಯಮ ಬೆಳವಣಿಗೆ ಹೊಂದಿಲ್ಲ.

ಜಿಲ್ಲೆಯ ಪ್ರವಾಸಿ ತಾಣಗಳಿಗೆ ಹೋಗಿ ಬರಲು ಪ್ರತ್ಯೇಕ ಸಾರಿಗೆ ವ್ಯವಸ್ಥೆ ಮಾಡುತ್ತೇನೆ. ಕಾರಂಜಾ ಜಲಾಶಯ ಮುಂಭಾಗದಲ್ಲಿ ಬೃಂದಾವನ ನಿರ್ಮಿಸಲಾಗುವುದು. ಜಲ ಸಾಹಸ ಕ್ರೀಡೆಗಳನ್ನು ನಡೆಸಲು ಬೋಟಿಂಗ್‌ ಆರಂಭಿಸಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT