ಮಗು ಜೊತೆಗೆ ಅಪ್ಪನೂ ಹುಟ್ಟಿದ

6

ಮಗು ಜೊತೆಗೆ ಅಪ್ಪನೂ ಹುಟ್ಟಿದ

Published:
Updated:
ಮಗು ಜೊತೆಗೆ ಅಪ್ಪನೂ ಹುಟ್ಟಿದ

ಅಂತಃಕರಣ, ಮಮತೆಗಳಂಥ ಭಾವಗಳ ಜೊತೆಗೆ ಜವಾಬ್ದಾರಿಯನ್ನೂ ಹೊರುವ ಹೆಗಲಾಗುವ ಅಪ್ಪ, ಅಮ್ಮನ ಪಾತ್ರವನ್ನೂ ವಹಿಸುತ್ತಿದ್ದಾನೆ. ಅಪ್ಪನ ಪಾತ್ರ ಇದೀಗ ಬದಲಾಗಿದೆ. ಅವ್ವನಂಥ ಅಪ್ಪಂದಿರಿಲ್ಲಿ ಮಾತನಾಡಿದ್ದಾರೆ...


ಈತ ಕಥೆಗಾರ, ಹಾಡುಗಾರ

ಮಗಳು ಹುಟ್ಟಿದಾಗ ನನಗಾದ ಖುಷಿ, ಸಂತೋಷ, ಮನಸ್ಸಿನ ಆನಂದವನ್ನು ಪದಗಳಲ್ಲಿ ಹೇಳಕ್ಕಾಗದು. ಮನೆಮಂದಿ, ಸ್ನೇಹಿತರಿಗೆಲ್ಲಾ ಸಿಹಿ ಹಂಚಿ ಸಂಭ್ರಮಿಸಿದ್ದೆ. ಮಕ್ಕಳಾದ ಅಪ್ಪನ ಜವಾಬ್ದಾರಿ ಆರಂಭವಾಗುತ್ತದೆ ಎಂದು ಹೇಳುತ್ತಾರೆ. ನನಗೆ ಜವಾಬ್ದಾರಿ ಎಂದು ಯಾವತ್ತೂ ಅನಿಸಿಲ್ಲ. ಮಗಳ ಜೊತೆಗೇ ಪ್ರತಿಕ್ಷಣವನ್ನು ನಾನು ಎಂಜಾಯ್‌ ಮಾಡುತ್ತೇನೆ. ಆಕೆ ಜೊತೆಗೆ ಮಗುವಾಗುತ್ತೇನೆ, ಅಪ್ಪನಾಗುತ್ತೇನೆ. ಅವಳ ಒಡನಾಟದಿಂದ ನನ್ನಲ್ಲಿ ಅನೇಕ ಬದಲಾವಣೆಗಳಾಗಿರುವುದನ್ನು ನಾನು ಗಮನಿಸಿದ್ದೇನೆ. ನಾಚಿಕೆ ಸ್ವಭಾವದವನಾದ ನಾನು ಈಗ ಬೇರೆಯವರ ಬಗೆಗಿನ ಭಾವನೆಗಳನ್ನು ಎಲ್ಲರೆದುರೇ ಯಾವುದೇ ಅಂಜಿಕೆಯಿಲ್ಲದೇ ನಾನು ಹಂಚಿಕೊಳ್ಳುತ್ತೇನೆ. ಮಗುಗೆ ಕತೆ ಹೇಳುತ್ತಾ ಕತೆಗಾರನಾಗಿದ್ದೇನೆ. ಜೋಗುಳ ಹಾಡುತ್ತಾ ಹಾಡುಗಾರನಾಗಿದ್ದೇನೆ.
-ಮುರಳಿ ಮೋಹನ ಕಾಟಿ, ಹುಳಿಮಾವು

*

ಮಗಳೆ ಮಹಾಲಕ್ಷ್ಮಿ
ಮಗಳು ಎಲ್‌.ವಿ.ಅದ್ಯಾ ಹುಟ್ಟಿದ್ದು 2017ರ ಡಿಸೆಂಬರ್‌ 3ಕ್ಕೆ. ಆಕೆ ಹುಟ್ಟುವ ಮುಂಚೆ ನಾನು ನಿರುದ್ಯೋಗಿಯಾಗಿದ್ದೆ. ಮೂರನೇ ದಿನಕ್ಕೆ ಡಿಸೆಂಬರ್‌ 7ಕ್ಕೆ ನನಗೆ ಒಳ್ಳೆಯ ಕಂಪೆನಿಯಿಂದ ಕೆಲಸಕ್ಕೆ ಆಫರ್‌ ಬಂತು. ಅದಾದ ಬಳಿಕ ಎರಡು– ಮೂರು ಕಡೆಗಳಿಂದ ಕೆಲಸದ ಆಫರ್‌ಗಳು ಬಂದವು. ಹಣಕಾಸಿನ ಸಮಸ್ಯೆ ಕೂಡ ದೂರ ಆಯಿತು. ಆಕೆ ನಮ್ಮನೆ ಮಹಾಲಕ್ಷ್ಮೀ. ಆಕೆ ಹುಟ್ಟುತ್ತಾನೇ ಸಂತೋಷ, ಖುಷಿ ಜೊತೆಗೇ ತಂದಿದ್ದಾಳೆ. ನಾನು ಮುದ್ದು ಮಗುವಿನ ಹೆಣ್ಣುಮಗುವಿನ ಅಪ್ಪ ಎಂದು ಹೇಳಿಕೊಳ್ಳುವುದೇ ನನಗೆ ದೊಡ್ಡ ಖುಷಿ. ಈಗ ನನ್ನ ಜವಾಬ್ದಾರಿಗಳೂ ಜಾಸ್ತಿಯಾಗಿವೆ. ಆಕೆಯ ಪ್ರತಿ ಚಟುವಟಿಕೆ, ಕೆಲಸಗಳಲ್ಲೂ ನಾನು ಜೊತೆಯಾಗಿರಬೇಕು ಎಂದು ಬಯಸುತ್ತೇನೆ. ಈಗ ಹೋದಲ್ಲೆಲ್ಲಾ ನನಗೆ ಮಗಳ ತುಂಟಾಟಗಳದೇ ಮಾತು.
-ವಸಂತ್‌ ಬಿ ಈಶ್ವರಗೆರೆ, ಹುಳಿಮಾವು

*

ಮಗಳ ಮುಂದೆ ಜಗಳವಿಲ್ಲ
ಮಗಳು ಪೂರ್ವಿಕಾಗೆ ಈಗ ಆರು ವರ್ಷ. ಅಮ್ಮನಷ್ಟೇ ಅಪ್ಪನಿಗೂ ಮಕ್ಕಳ ಬಗ್ಗೆ ವಾತ್ಸಲ್ಯ ಪ್ರೀತಿ ಇರುತ್ತದೆ. ಹಾಗೇ ಜವಾಬ್ದಾರಿಗಳೂ ಹೆಚ್ಚು. ಮಗಳೂ ಹುಟ್ಟಿದಾಗಲೇ ನನ್ನ ಜೀವನಶೈಲಿ ಬದಲಾಯಿತು. ಅದಕ್ಕಿಂತ ಮೊದಲು ಹೊರಗಡೆ ಹೋಗೋದು, ಹೋಟೆಲ್‌ ಊಟ ಇರುತ್ತಿತ್ತು. ಆದರೆ ಮಗು ಬಂದಾಗ ಆಕೆಯ ಆರೋಗ್ಯ ಮುಖ್ಯವಾಗುತ್ತದೆ. ಮನೆಯೂಟಕ್ಕೆ ಆದ್ಯತೆ ಕೊಡುತ್ತೇವೆ. ಎಲ್ಲೇ ಹೋಗಲಿ ಮಗಳ ಬಟ್ಟೆ, ಆಟದ ಸಾಮಾನಿನತ್ತ ಕಾಲು ಹೊರಳುತ್ತದೆ. ಹಾಗೇ ಆಕೆಗೆ ಲಸಿಕೆ ಹಾಕುವ ದಿನ, ಆಕೆಯ ಶಾಲಾ ಕಾರ್ಯಕ್ರಮಗಳ ದಿನಾಂಕಗಳು ಮರೆತುಹೋಗಲ್ಲ. ಇಂತಹ ಸಣ್ಣ ಸಣ್ಣ ಜವಾಬ್ದಾರಿಗಳೇ ಖುಷಿ ಕೊಡುತ್ತವೆ. ಮಗಳಿಗೆ ಬುದ್ಧಿ ಬಂದಾಗಿನಿಂದ ಎಲ್ಲದರಲ್ಲೂ ಕುತೂಹಲ. ಇದು ನನ್ನಲ್ಲಿ ತಾಳ್ಮೆ ಬೆಳೆಸಿತು. ಮಗಳ ಮುಂದೆ ಜಗಳವಾಡಬಾರದು, ತುಂಬಾ ಹುಷಾರಾಗಿ ಮಾತಾಡಬೇಕು ಎಂಬುದೆಲ್ಲಾ ಅನುಭವಗಳಿಂದ ಅರ್ಥವಾಗಿದೆ. ಹೀಗೆ ಮಗಳು ನನ್ನಲ್ಲಿ ಬದಲಾವಣೆ ತಂದಿದ್ದಾಳೆ.
-ಶಿಶಿರ್‌ ಎಚ್‌.ಬಿ, ರಾಜರಾಜೇಶ್ವರಿ ನಗರ

*

ಸ್ವಾಭಿಮಾನಿಯಾಗಲಿ ಮಗಳು
ನನಗೆ ಹೆಣ್ಣಾಗಲೀ, ಗಂಡಾಗಲೀ ಆರೋಗ್ಯವಂತ ಮಗು ಆದ್ರೆ ಸಾಕು ಎಂದು ಅಂದುಕೊಂಡಿದ್ದೆ. ಹೆಣ್ಣುಮಗು ಆಯಿತು. ಆಕೆ ಧೈರ್ಯವಂತೆಯಾಗಬೇಕು, ಧೀಮಂತ, ಸ್ವಾಭಿಮಾನ ಹೆಣ್ಣಾಗಬೇಕು ಎಂದು ಹಾಗೇ ಅರ್ಥ ಬರುವ ಹಾಗೇ ‘ಸಾರ್ಯ ಸೌಹಾರ್ದ’ ಎಂದು ಹೆಸರಿಟ್ಟೆವು. ಆಕೆಯ ಭವಿಷ್ಯ, ಶಿಕ್ಷಣದ ಬಗ್ಗೆ ಈಗಲೇ ಆಲೋಚನೆ ಮಾಡುತ್ತೇನೆ. ಒಬ್ಬಳೇ ಮಗು ಸಾಕು, ಆಕೆಯನ್ನು ಆಕೆ ಇಷ್ಟಪಡುವ ಹಾಗೇ ಓದಿಸಬೇಕು, ಆಕೆಯ ಭವಿಷ್ಯ ಉನ್ನತವಾಗಿರಬೇಕು ಎಂಬ ಕನಸು ನಮ್ಮದು. ಮಗಳ ಬಗ್ಗೆ ನೂರಾರು ಕನಸು ಇದೆ.
-ರವಿನಾರಾಯಣ್‌, ಬಸವೇಶ್ವರ ನಗರ

*

ಯೋಚನಾಧಾಟಿ ಬದಲಾಗಿದೆ
ನನ್ನ ಮಗ ಹಾರ್ದಿಕ್‌ಗೆ ಈಗ ಎಂಟು ತಿಂಗಳು. ಮಗು ಹುಟ್ಟಿದಾಗ ಜೀವನದ ಮತ್ತೊಂದು ಹಂತಕ್ಕೆ ಏರಿದ ಖುಷಿ. ನಮ್ಮಲ್ಲಿ ಮೊದಲ ಮಗು ಗಂಡಾದಾಗ ತುಂಬಾ ಖುಷಿ ಪಡ್ತಾರೆ. ಆದ್ರೆ ನಂಗೆ ಹಂಡಾಗಲೀ, ಹೆಣ್ಣಾಗಲೀ ಮಗು ಆರೋಗ್ಯವಾಗಿ ಹುಟ್ಟಲಿ ಎಂದುಕೊಂಡಿದ್ದೆ. ಮಗು ಹುಟ್ಟಿ, ಮೊದಲು ಕೈಯಲ್ಲಿರಿಸಿದಾಗ ಆದ ಸಂತೋಷ ಹೇಳಕ್ಕಾಗಲ್ಲ. ಈಗ ಅಪ್ಪ ಆಗಿದ್ದೇನೆ. ಜೀವನದಲ್ಲಿ ತುಂಬಾ ಬದಲಾವಣೆಗಳಾಗಿವೆ. ಯೋಚನೆ ಮಾಡುವ ವಿಧಾನ ಬದಲಾಗಿದೆ. ಪ್ರತಿಯೊಂದರಲ್ಲೂ ಮಗುವಿನ ಸಂತೋಷ ಕಾಣುತ್ತೇವೆ. ಮಗುನೇ ಎಲ್ಲಾ ಆಗಿದೆ. ಮಗ ಯಾವಾಗ ಅಪ್ಪ ಅಂತ ಕರೀತಾನೆ ಎಂದು ಕಾಯುತ್ತಿದ್ದೇನೆ.
-ದಿನೇಶ್‌ ಕುಮಾರ್‌ ರಾಜು, ಹಲಸೂರು

*

ಆರೋಗ್ಯ ಶಿಕ್ಷಣ ಉಚಿತವಾಗಲಿ
ದುಡ್ಡಿನಿಂದ ಸಿಗುವ ಆರ್ಥಿಕ ಭದ್ರತೆ ಬಗ್ಗೆ ಅರ್ಥ ಆಗಿದ್ದೇ ನಾನು ಅಪ್ಪ ಆದಾಗ. ನರ್ಸಮ್ಮ ಮಗೂನ ಕೈಯಲ್ಲಿ ಕೊಟ್ಟಾಗ ಎಷ್ಟು ಖುಷಿಯಾಯ್ತು. ಮಗೂನ ಹಾಲುಣಿಸಲು ಕೊಟ್ಟು ಒಬ್ಬನೇ ಕುಂತಾಗ ಮತ್ತೆ ಆತಂಕ. ಗುಣಮಟ್ಟದ ಶಿಕ್ಷಣ, ಆರೋಗ್ಯ ವ್ಯವಸ್ಥೆ ಇವೆರಡೂ ಉಚಿತವಾಗಿ ಅಥವಾ ಕೈಗೆಟುಕುವ ಹಾಗಿದ್ರೆ ಇಂಥಾ ಕ್ಷಣಗಳನ್ನ ಸಂಭ್ರಮಿಸಬಹುದು.
-ಗುರುಪ್ರಸಾದ್‌, ಕೆ.ಆರ್‌.ಪುರ

*

ಜೀವನಪಾಠ ಕಲಿತೆ
ನನ್ನ ಮಗ ಹುಟ್ಟಿದ ದಿನ ಲೋಕವೇ ಗೆದ್ದ ಸಂಭ್ರಮ. ನನ್ನ ಮಕ್ಕಳಿಂದ ನಾನು ಯಾವಾಗಲೂ ಖುಷಿಯಿಂದ ಇರೋದು ಕಲಿತಿದ್ದೇನೆ. ಎಲ್ಲರ ಜೊತೆ ಬೆರೆಯುವುದು, ಹಂಚಿಕೊಂಡು ತಿನ್ನೋದು, ಏನೂ ಇಲ್ಲದೆ ಖುಷಿಯಾಗಿರುವ ಪಾಠ ಹೇಳಿಕೊಟ್ಟಿದ್ದಾರೆ. ಅದಕ್ಕೆ ನನ್ನ ಮಗನಿಗೆ ಥ್ಯಾಂಕ್ಸ್ .
-ಶರಣಗೌಡ ಪೊಲೀಸ್ ಪಾಟೀಲ್, ಜೆ.ಪಿ.ನಗರ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry