ಸಚಿವ ರಾಜಶೇಖರಗೆ ಅದ್ಧೂರಿ ಸ್ವಾಗತ

7
ಮೆರವಣಿಗೆಗೆ ಮೆರುಗು ನೀಡಿದ ಕುದರೆ, ಕಲಾ ತಂಡಗಳು

ಸಚಿವ ರಾಜಶೇಖರಗೆ ಅದ್ಧೂರಿ ಸ್ವಾಗತ

Published:
Updated:
ಸಚಿವ ರಾಜಶೇಖರಗೆ ಅದ್ಧೂರಿ ಸ್ವಾಗತ

ಬೀದರ್‌: ರಾಜ್ಯದ ಗಣಿ ಮತ್ತು ಭೂ ವಿಜ್ಞಾನ ಹಾಗೂ ಮುಜರಾಯಿ ಖಾತೆ ಸಚಿವರಾದ ನಂತರ ಮೊದಲ ಬಾರಿಗೆ ಭಾನುವಾರ ನಗರಕ್ಕೆ ಬಂದ ರಾಜಶೇಖರ ಪಾಟೀಲ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು.

ಅಭಿಮಾನಿಗಳು ಬೆಳಿಗ್ಗೆಯಿಂದಲೇ ನಗರದ ಹೊರವಲಯದ ಕರ್ನಾಟಕ- ತೆಲಂಗಾಣ ಗಡಿಯಲ್ಲಿರುವ ಶಹಾಪುರ ಗೇಟ್ ಬಳಿ ಸಚಿವರ ಬರುವಿಕೆಗಾಗಿ ಕಾದು ಕುಳಿತಿದ್ದರು. ಪಾಟೀಲರ ಕಾರು ಬರುತ್ತಲೇ ಪಟಾಕಿ ಸಿಡಿಸಿದರು. ಪೇಟ ತೊಡಿಸಿ, ಹೂಗುಚ್ಛ ನೀಡಿ ಅವರನ್ನು ಸ್ವಾಗತಿಸಿ ಬರಮಾಡಿಕೊಂಡರು.

ಶಹಾಪುರ ಗೇಟ್, ಫತೇ ದರ್ವಾಜಾ ಮಾರ್ಗವಾಗಿ ಬಸವೇಶ್ವರ ವೃತ್ತಕ್ಕೆ ಬಂದ ಪಾಟೀಲರು ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ನಂತರ ಅವರ ಮೆರವಣಿಗೆಗಾಗಿ ಹೂವು, ಡಿಜಿಟಲ್ ಪೋಸ್ಟರ್ ಹಾಗೂ ಪಕ್ಷದ ಧ್ವಜಗಳಿಂದ ಅಲಂಕರಿಸಿದ್ದ ತೆರೆದ ವಾಹನವನ್ನು ಹತ್ತಿದರು. ಪಕ್ಷದ ಕಾರ್ಯಕರ್ತರು, ಬೆಂಬಲಿಗರು, ಅಭಿಮಾನಿಗಳತ್ತ ಕೈ ಬೀಸಿ ಕೃತಜ್ಞತೆ ಅರ್ಪಿಸಿದರು.

ಮೆರವಣಿಗೆ ಮಾರ್ಗದಲ್ಲಿ ಅಲ್ಲಲ್ಲಿ ಅಭಿಮಾನಿಗಳು ಪಾಟೀಲರಿಗೆ ಹೂಮಾಲೆ ಹಾಕಿ ಸನ್ಮಾನಿಸಿದರು. ಕೈಯಲ್ಲಿ ಕಾಂಗ್ರೆಸ್ ಧ್ವಜ ಹಿಡಿದುಕೊಂಡಿದ್ದ ಕಾರ್ಯಕರ್ತರು ರಾಜಶೇಖರ ಪಾಟೀಲ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಜಯವಾಗಲಿ ಎನ್ನುವ ಘೋಷಣೆಗಳನ್ನು ಕೂಗಿದರು.

ಮೆರವಣಿಗೆ ಉದ್ದಕ್ಕೂ ಕಿವಿಗಡಚಿಕ್ಕುವಂತೆ ಪಟಾಕಿ ಸಿಡಿಸಿದರು. ಅಲಂಕೃತ ವಾಹನದಲ್ಲಿ ಇದ್ದ ಸಚಿವರು ಹಾಗೂ ಇತರರ ಮೇಲೆ ಪುಷ್ಪವೃಷ್ಟಿಯನ್ನೂ ಮಾಡಿದರು.

ಸೊಲ್ಲಾಪುರ, ಹೈದರಾಬಾದ್ ಬ್ಯಾಂಡ್, ಕುದುರೆಗಳು, ಡೊಳ್ಳು ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳು ಮೆರವಣಿಗೆಯ ಮೆರುಗು ಹೆಚ್ಚಿಸಿದವು. ಜನ ರಸ್ತೆ ಪಕ್ಕ, ಮನೆಯ ಮಾಳಿಗೆ ಮೇಲೆ ನಿಂತು ಮೆರವಣಿಗೆಯ ಸೊಬಗನ್ನು ವೀಕ್ಷಿಸಿದರು.

ಮೆರವಣಿಗೆಯು ಚೌಬಾರಾ, ಗಾವಾನ್ ಚೌಕ್, ಮುಖ್ಯ ರಸ್ತೆ, ಶಹಾಗಂಜ್ ಕಮಾನ್, ಕ್ರಾಂತಿ ಗಣೇಶ, ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಸಾಗಿ ಗಣೇಶ ಮೈದಾನ ತಲುಪಿ ಸಮಾರೋಪಗೊಂಡಿತು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಶಾಸಕ ರಹೀಂಖಾನ್, ವಿಧಾನ ಪರಿಷತ್ ಸದಸ್ಯರಾದ ವಿಜಯಸಿಂಗ್, ಚಂದ್ರಶೇಖರ ಪಾಟೀಲ, ಅರವಿಂದ ಅರಳಿ, ಮುಖಂಡರಾದ ಬಸವರಾಜ ಬುಳ್ಳಾ, ಚಂದ್ರಾಸಿಂಗ್ ಮೊದಲಾದವರು ತೆರೆದ ವಾಹನದಲ್ಲಿದ್ದರು.

ರಾರಾಜಿಸಿದ ಕಟೌಟ್‌ಗಳು: ನಗರದಲ್ಲಿ ನೂತನ ಸಚಿವರಿಗೆ ಸ್ವಾಗತ ಕೋರುವ ಕಟೌಟ್‌ಗಳು ರಾರಾಜಿಸಿದವು. ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪ್ರಮುಖ ಸ್ಥಳಗಳಲ್ಲಿ ಕಟೌಟ್‌, ಫ್ಲೆಕ್ಸ್ ಹಾಗೂ ಬ್ಯಾನರ್‌ಗಳನ್ನು ಅಳವಡಿಸಿದ್ದರು.

ಮೆಚ್ಚುಗೆಗೆ ಪಾತ್ರವಾದ ಊಟ: ಪಾಟೀಲ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದವರಿಗೆ ನಗರದ ಬ್ಯಾಕ್‌ವರ್ಡ್ ಕ್ಲಾಸ್ ಹಾಸ್ಟೆಲ್‌ ಮೈದಾನದಲ್ಲಿ ಮಾಡಿದ್ದ ಊಟದ ವ್ಯವಸ್ಥೆ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು.

ಬೃಹತ್‌ ಮಂಟಪ ಸಿದ್ಧಪಡಿಸಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಜನರಿಗೆ ಅನಾನುಕೂಲವಾಗದಂತೆ ಪ್ರತ್ಯೇಕ ವಿಭಾಗಗಳನ್ನು ಮಾಡಲಾಗಿತ್ತು.

ಲಡ್ಡು, ಪೂರಿ, ಬಿಳಿ ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಆಲು ಪಲ್ಯೆ, ಮುದ್ದಿ ಪಲ್ಯೆ, ಎರಡು ಬಗೆಯ ಅನ್ನ, ಸಾಂಬಾರು ಊಟದ ವಿಶೇಷ ಆಗಿದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry