ಸಾಲ ಮನ್ನಾ ಮಾಡದಿದ್ದರೆ ಹೋರಾಟ ತೀವ್ರ

7
ಟೌನ್ ಹಾಲ್‌ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ‍್ಯಾಲಿ, ಮುಖ್ಯಮಂತ್ರಿ ಬೇಗ ಸಾಲ ಮನ್ನಾ ಮಾಡಿದರೆ ರೈತರಿಗೆ ಆಸರೆ

ಸಾಲ ಮನ್ನಾ ಮಾಡದಿದ್ದರೆ ಹೋರಾಟ ತೀವ್ರ

Published:
Updated:
ಸಾಲ ಮನ್ನಾ ಮಾಡದಿದ್ದರೆ ಹೋರಾಟ ತೀವ್ರ

ತುಮಕೂರು: ರಾಜ್ಯದ ಎಲ್ಲ ರೈತರ ಸಂಪೂರ್ಣ ಸಾಲ ಮನ್ನಾ ಮಾಡಲು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ನೇತೃತ್ವದಲ್ಲಿ ರೈತರು ನಗರದ ಟೌನ್‌ಹಾಲ್‌ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ರ‍್ಯಾಲಿ ನಡೆಸಿದರು.

ಮುಖ್ಯಮಂತ್ರಿ ಭರವಸೆ ನೀಡಿದಂತೆ ಬೇಗ ಸಾಲ ಮನ್ನಾ ಮಾಡಬೇಕು ಎಂದು ರ‍್ಯಾಲಿಯುದ್ಧಕ್ಕೂ ರೈತರು, ಸಂಘಟನೆ ಪದಾಧಿಕಾರಿಗಳು ಘೋಷಣೆ ಕೂಗಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಗೋವಿಂದರಾಜು ಮಾತನಾಡಿ, ‘ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಎಲ್ಲ ಜಿಲ್ಲೆಗಳ ರೈತ ಮುಖಂಡರ ಜೊತೆ ಚರ್ಚಿಸಿ ಸಾಲಮನ್ನಾ ಮಾಡಲಾಗುವುದು ಎಂದು ಭರವಸೆ ನೀಡಿದ್ದರು. ಕೊಟ್ಟ ಮಾತಿನಂತೆ ಸಾಲ ಮನ್ನಾಕ್ಕೆ ಮುಂದಾಗದೇ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ’ ಎಂದು ಟೀಕಿಸಿದರು.

‘ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಬೆಂಬಲ ಬೆಲೆಯೂ ಇಲ್ಲವಾಗುತ್ತಿದೆ. ರೈತರು ಕೃಷಿಗಾಗಿ ಮಾಡಿರುವ ಸಾಲವನ್ನು ತೀರಿಸಲು ಆಗುತ್ತಿಲ್ಲ. ರಾಜ್ಯದಲ್ಲಿ ಅನ್ನದಾತರು ಆತ್ಮಹತ್ಯೆ ಮಾಡಿಕೊಳ್ಳುತ್ತಲೇ ಇದ್ದಾರೆ. ಈ ಘಟನಾವಳಿಗಳು ಗೊತ್ತಿದ್ದರೂ ಸಹ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಲ ಮನ್ನಾ ಮಾಡಲು ಮುಂದಾಗಿಲ್ಲ’ ಎಂದು ಆರೋಪಿಸಿದರು.

‘2009ರಿಂದ 2017ರವರೆಗಿನ ಸಾಲ ಮಾತ್ರವಲ್ಲದೆ 2009ರ ಹಿಂದಿನ ಕೃಷಿ ಸಾಲವನ್ನು ಸಹ ಮನ್ನಾ ಮಾಡಬೇಕು, ಸರಳ ಸಾಲ ನೀತಿಯನ್ನು ಜಾರಿಗೆ ತಂದು ಕೃಷಿಕರಿಗೆ ಪ್ರೋತ್ಸಾಹ ನೀಡಬೇಕು. ಬೆಂಬಲ ಬೆಲೆ ಒದಗಿಸುವ ನಿಟ್ಟಿನಲ್ಲಿ ಹೊಸ ಮಾರುಕಟ್ಟೆ ನೀತಿ ತರಬೇಕು’ ಎಂದು ಒತ್ತಾಯಿಸಿದರು.

‘ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್‌ ಲಭಿಸುತ್ತಿಲ್ಲ. ಬೇಸಾಯ ಮಾಡಲು ರೈತರು ಹಿಂದೇಟು ಹಾಕುತ್ತಿದ್ದಾರೆ. ಸಕಾಲಕ್ಕೆ ವಿದ್ಯುತ್ ಪೂರೈಸುವ ವ್ಯವಸ್ಥೆ ಮಾಡಬೇಕು’ ಎಂದು ಆಗ್ರಹಿಸಿದರು.

‘ಈಗಾಗಲೇ ಮಲೆನಾಡು ಭಾಗಗಳಲ್ಲಿ ಉತ್ತಮ ಮಳೆ ಆಗುತ್ತಿದೆ. ಹೇಮಾವತಿ ಜಲಾಶಯವೂ ತುಂಬಿದ್ದು, ಅದರ ವ್ಯಾಪ್ತಿಗೆ ಬರುವ ಎಲ್ಲ ಕೆರೆ ಕಟ್ಟೆಗಳನ್ನು ತುಂಬಿಸಲು ಜಿಲ್ಲಾ ಆಡಳಿತ ಮತ್ತು ಸರ್ಕಾರ ಕ್ರಮಕೈಗೊಳ್ಳಬೇಕು’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಬಹುಭಾಗಗಳಿಗೆ ನೀರು ಒದಗಿಸಲು ಸಾಧ್ಯವಿರುವ ಭದ್ರಾ ಮತ್ತು ಎತ್ತಿನಹೊಳೆ ಯೋಜನೆಗಳನ್ನು ಕೂಡಲೇ ಕೈಗೆತ್ತಿಕೊಂಡು ಜಿಲ್ಲೆಯ ಎಲ್ಲ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಬೇಕು’ ಎಂದರು.

‘ಸಾಲ ಮನ್ನಾ ಮತ್ತು ನೀರಾವರಿ ಯೋಜನೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಾಗೂ ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿದರೆ ಮುಂದೆ ರಾಜ್ಯದಾದ್ಯಂತ ಬೃಹತ್‌ ಪ್ರತಿಭಟನೆಯನ್ನು ಮಾಡಲಾಗುವುದು’ ಎಂದು ಎಚ್ಚರಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಜೆ.ಸಿ.ಶಂಕರ್, ಜಿಲ್ಲಾ ಘಟಕದ ಉಪಾಧ್ಯಕ್ಷ ಶ್ರೀನಿವಾಸ, ರವೀಶ್‌ ಇದ್ದರು.

ಕೆರೆಗೆ ಶೀಘ್ರ ನೀರು

ನೀವು ಕೊಟ್ಟ ಮನವಿಯನ್ನು ಸರ್ಕಾರಕ್ಕೆ ಕಳುಹಿಸಲಾಗುವುದು. ಮುಖ್ಯವಾಗಿ ಹೇಮಾವತಿ ಜಲಾಶಯದಿಂದ ಜಿಲ್ಲೆಯ ಕೆರೆಗಳಿಗೆ ಶೀಘ್ರ ನೀರು ಹರಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಆರ್‌. ವಿಶಾಲ್‌ ರೈತರಿಗೆ ಭರವಸೆ ನೀಡಿದರು.

ಸಂಘವು ಕಳೆದ ಮೂರು ದಶಕಗಳಿಂದ ಹೋರಾಟ ಮಾಡಿಕೊಂಡು ಬರುತ್ತಿದೆ. ಈವರೆಗೂ ಯಾವ ಸರ್ಕಾರವೂ ಸಂಪೂರ್ಣ ಸಾಲ ಮನ್ನಾ ಮಾಡಿಲ್ಲ

ಎ.ಗೋವಿಂದರಾಜು, ಜಿಲ್ಲಾ ಘಟಕದ ಅಧ್ಯಕ್ಷ, ಕರ್ನಾಟಕ ರಾಜ್ಯ ರೈತ ಸಂಘ 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry