ಹಾಥರಸ್ ,ಉತ್ತರ ಪ್ರದೇಶ: ರಾಷ್ಟ್ರೀಯ ಹೆದ್ದಾರಿ 93ರಲ್ಲಿ ನಡೆದ ಅಪಘಾತದಲ್ಲಿ ನಾಲ್ವರು ಮಹಿಳೆಯರು ಹಾಗೂ ನಾಲ್ವರು ಮಕ್ಕಳು ಸೇರಿದಂತೆ 15 ಮಂದಿ ಮೃತಪಟ್ಟಿದ್ದಾರೆ.
ಹಾಥರಸ್‌ನಿಂದ ಆಗ್ರಾದತ್ತ ಪ್ರಯಾಣಿಸುತ್ತಿದ್ದ ವ್ಯಾನ್‌ಗೆ ಹಿಂದಿನಿಂದ ರಸ್ತೆ ಸಾರಿಗೆ ಬಸ್ ಶುಕ್ರವಾರ ಡಿಕ್ಕಿ ಹೊಡೆಯಿತು.
ಆಗ್ರಾ–ಅಲೀಗಢ ರಾಷ್ಟ್ರೀಯ ಹೆದ್ದಾರಿಯ ಕುವರ್‌ಪುರ್ ಬಳಿ ವ್ಯಾನ್ ಅನ್ನು ಹಿಂದಿಕ್ಕುವ ಭರದಲ್ಲಿ ಈ ಅಪಘಾತ ಸಂಭವಿಸಿದೆ. 15 ಮಂದಿ ಮೃತಪಟ್ಟಿದ್ದು, 33 ಜನ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಸ್ಥಳೀಯ ಎಸ್.ಪಿ ನಿಪುಣ್ ಅಗರ್‌ವಾಲ್ ಮಾಹಿತಿ ನೀಡಿದರು.
ಸ್ಥಳಕ್ಕೆ ತೆರಳಿ ಅಗತ್ಯ ಪರಿಹಾರ ಕ್ರಮಗಳನ್ನು ನೋಡಿಕೊಳ್ಳುವಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮೃತರ ಕುಟುಂಬಗಳಿಗೆ ತಲಾ ₹2 ಲಕ್ಷ ಪರಿಹಾರವನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಗಾಯಾಳುಗಳ ಕುಟುಂದವರಿಗೆ ತಲಾ ₹50 ಸಾವಿರ ಚಿಕಿತ್ಸಾ ನೆರವನ್ನೂ ಪ್ರಕಟಿಸಿದ್ದಾರೆ.