ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್ ಮಹಿಳೆ ಸೀಮಾ ಹೈದರ್ ವಾಪಸ್ ಕಳುಹಿಸದಿದ್ದರೆ 26/11 ಮಾದರಿ ಉಗ್ರರ ದಾಳಿ ಬೆದರಿಕೆ!

ಮುಂಬೈ ಪೊಲೀಸರಿಗೆ ಕರೆ
Published 18 ಜುಲೈ 2023, 14:07 IST
Last Updated 18 ಜುಲೈ 2023, 14:07 IST
ಅಕ್ಷರ ಗಾತ್ರ

ಮುಂಬೈ: ಪಾಕಿಸ್ತಾನದ ಮಹಿಳೆ ಸೀಮಾ ಹೈದರ್ ಅವರನ್ನು ವಾಪಸ್ ಕಳುಹಿಸದಿದ್ದರೆ 26/11 ಮಾದರಿಯಲ್ಲಿ ಭಯೋತ್ಪಾದಕ ದಾಳಿ ನಡೆಸಲಾಗುವುದು ಎಂದು ಮುಂಬೈ ಪೊಲೀಸರಿಗೆ ಕರೆ ಮಾಡಿ ಬೆದರಿಕೆ ಒಡ್ಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಿಚಿತರ ವಿರುದ್ಧ ಸೋಮವಾರ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. 

ಕಳೆದ ವಾರ ಮುಂಬೈನ ಸಂಚಾರ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದ ಅಪರಿಚಿತ ವ್ಯಕ್ತಿಯೊಬ್ಬ, ಉರ್ದುವಿನಲ್ಲಿ ಮಾತನಾಡಿ, ‘ಸೀಮಾ ಹೈದರ್‌ ಅವರನ್ನು ವಾಪಸ್ ಆಕೆಯ ದೇಶಕ್ಕೆ ಕಳುಹಿಸದಿದ್ದರೆ  26/11ರ ಮಾದರಿಯಲ್ಲಿ ಮುಂಬೈ ಮೇಲೆ ದಾಳಿ ಮಾಡುತ್ತೇನೆ. ಇದಕ್ಕೆ ಉತ್ತರಪ್ರದೇಶ ಸರ್ಕಾರವೇ ಹೊಣೆ’ ಎಂದು ಹೇಳಿದ್ದ. 

ಬಳಿಕ ಮುಂಬೈನ ಪೊಲೀಸರು ಈ ಬೆದರಿಕೆ ಕರೆಯ ಕುರಿತು ತನಿಖೆ ಕೈಗೊಂಡಿದ್ದಾರೆ.

ಮುಂಬೈ ಸಂಚಾರ ಪೊಲೀಸರು ಈ ಸಂಬಂಧ ಸೋಮವಾರ ಅಪರಿಚಿತ ವ್ಯಕ್ತಿಗಳ ವಿರುದ್ಧ ವರ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಪ್ರಕರಣವನ್ನು ಅಪರಾಧ ದಳಕ್ಕೆ ವರ್ಗಾವಣೆ ಮಾಡಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಅಪರಿಚಿತ ವ್ಯಕ್ತಿಯು ಆ್ಯಪ್ ಮೂಲಕ ದೂರವಾಣಿ ಕರೆ ಮಾಡಿದ್ದು. ಪೊಲೀಸರು ಕರೆ ಮಾಡಿದ್ದ ವ್ಯಕ್ತಿಯ ಐಪಿ ವಿಳಾಸವನ್ನು ಪತ್ತೆ ಹಚ್ಚುವಲ್ಲಿ ನಿರತರಾಗಿದ್ದಾರೆ.

ಪ್ರಕರಣದ ಹಿನ್ನೆಲೆ: ಪಾಕಿಸ್ತಾನದ ಪ್ರಜೆ ಸೀಮಾ ಹೈದರ್ ಅವರು ಪಬ್‌ಜಿ ಆನ್‌ಲೈನ್ ಗೇಮ್ ಮೂಲಕ ಭಾರತದ ಸಚಿನ್ ಮೀನಾ ಅವರಿಗೆ ಪರಿಚಿತರಾಗಿದ್ದರು. ಇಬ್ಬರ ನಡುವೆ ಪ್ರೀತಿ ಬೆಳೆದಿತ್ತು. ಬಳಿಕ ಮೇ ತಿಂಗಳಲ್ಲಿ ತಮ್ಮ  ನಾಲ್ವರು ಮಕ್ಕಳೊಂದಿಗೆ ಉತ್ತರಪ್ರದೇಶದ ನೊಯ್ಡಾಕ್ಕೆ ಬಂದಿದ್ದ ಸೀಮಾ ಅವರು ಸಚಿನ್ ಅವರನ್ನು ವಿವಾಹವಾಗಿದ್ದರು. ವೀಸಾ ಇಲ್ಲದೆ ನೇಪಾಳದ ಮೂಲಕ  ಭಾರತವನ್ನು ಪ್ರವೇಶಿಸಿದ್ದ ಸೀಮಾ ಅವರನ್ನು ಉತ್ತರಪ್ರದೇಶದ ಪೊಲೀಸರು ಬಂಧಿಸಿದ್ದರು. 

ಗ್ರೇಟರ್ ನೋಯ್ಡಾದಲ್ಲಿ ಬಲಪಂಥೀಯ ಒಲವುಳ್ಳ ಸಣ್ಣಗುಂಪೊಂದು ಸೀಮಾ ವಿರುದ್ಧ ಪ್ರತಿಭಟನೆ ನಡೆಸಿ, 72 ಗಂಟೆಯೊಳಗೆ ಅವರನ್ನು ದೇಶದಿಂದ ಹೊರಗೆ ಹಾಕಬೇಕೆಂದು ಒತ್ತಾಯಿಸಿತ್ತು. ಒತ್ತಡಕ್ಕೆ ಮಣಿದಿದ್ದ ಉತ್ತರಪ್ರದೇಶದ ಭಯೋತ್ಪಾದನಾ ನಿಗ್ರಹ ದಳದ ಪೊಲೀಸರು ಸೀಮಾ ಹಾಗೂ ಸಚಿನ್ ದಂಪತಿಯನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT