ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ | ನೈತಿಕತೆ ಸೂಚ್ಯಂಕ

Published 5 ಮೇ 2024, 23:50 IST
Last Updated 5 ಮೇ 2024, 23:50 IST
ಅಕ್ಷರ ಗಾತ್ರ

ಬೆಕ್ಕಣ್ಣ ಬೆಳಗ್ಗೆ ಐದಕ್ಕೇ ನನ್ನ ಎಬ್ಬಿಸಿ, ‘ಏಳು, ಲಗೂನೆ ಎದ್ದು ವಾಕಿಂಗ್‌ ಹೋಗು’ ಎಂದು ಮುಖಕ್ಕೆ ತಿವಿಯಿತು.

‘ಭಾನುವಾರ ಒಂದಿನಾದ್ರೂ ಛಲೋತ್ನಾಗೆ ಮಲಗಾಕೆ ಬಿಡಲೇ’ ಎಂದರೂ ಕೇಳಲಿಲ್ಲ. ಕಣ್ಣುಜ್ಜಿಕೊಂಡು ಎದ್ದವಳ ಮುಂದೆ ಪೇಪರು ಹಿಡಿದು, ‘ನೋಡು… ಬೊಜ್ಜು ಕರಗಿಸಿಕೊಳ್ಳದ ಪೊಲೀಸರಿಗೆ ಎತ್ತಂಗಡಿ ಮಾಡ್ಯಾರಂತೆ. ನಿಮ್ಮ ಆಫೀಸಿನೊಳಗೂ ಹಂಗೆ ಮಾಡಿದರ ಏನು ಗತಿ? ಅದಕ್ಕೇ ಫಿಟ್‌ ಅಂಡ್‌ ಫೈನ್‌ ಆಗಿರಬಕು’ ಎಂದಿತು.

‘ಪೊಲೀಸಿನವರು ಕಳ್ಳರನ್ನು ಓಡಾಡಿ ಹಿಡಿಬೇಕಾಗತೈತಿ. ಹಿಂಗಾಗಿ ಅವರು ಫಿಟ್‌ ಆಗಿರಬೇಕಂತ ಬೊಜ್ಜು ಕರಗಿಸಿಕೊಳ್ಳಬೇಕು. ನಾವು ಆಫೀಸಿನಾಗೆ ಕುಂತು ಕೆಲಸ ಮಾಡೋರು, ಕಳ್ಳರನ್ನು ಹಿಡಿಯಾಕೆ ಓಡಂಗಿಲ್ಲ’ ಎಂದರೂ ಬೆಕ್ಕಣ್ಣ ಬಿಡಲಿಲ್ಲ.

‘ಎಲ್ಲ ಪ್ರಜೆಗಳೂ ಫಿಟ್‌ ಆಗಿರಬಕು. ಅದಕ್ಕೇ ನಮ್ಮ ಮೋದಿಮಾಮಾರು ವಿಶ್ವ ಯೋಗ ದಿನ ಜಾರಿಗೆ ತಂದಾರೆ’ ಎಂದು ವಿತಂಡವಾದ ಹೂಡಿತು.

‘ಹಂಗಾರೆ ಮೊದ್ಲು ಎಲ್ಲಾ ರಾಜಕಾರಣಿಗಳು ಫಿಟ್‌ ಆಗಿರಬಕು. ಮುಕ್ಕಾಲು ಭಾಗ ರಾಜಕಾರಣಿಗಳಿಗೆ ಬೊಜ್ಜು ಐತಿ’ ನಾ ಮರು ವಾದಿಸಿದೆ.

‘ರಾಜಕಾರಣಿಗಳು ಸಮಸ್ತ ಜನತೆಯ ಸಂಕಟಗಳನ್ನು ತಮ್ಮ ಹೊಟ್ಯಾಗೆ ಹಾಕ್ಕೋತಾರೆ, ಅದಕ್ಕೇ ಅವರಿಗೆ ಸ್ವಲ್ಪ ಬೊಜ್ಜು ಬಂದಿರತೈತಿ’ ಎಂದು ಬೆಕ್ಕಣ್ಣ ಮುಸಿಮುಸಿ ನಕ್ಕಿತು.

‘ಚುನಾವಣೆಯೊಳಗೆ ಅಭ್ಯರ್ಥಿಗಳು ಆಸ್ತಿ ಘೋಷಣೆ ಮಾಡಿದಂಗೆ, ಅವರ ಬಾಡಿ ಮಾಸ್‌ ಇಂಡೆಕ್ಸ್‌ ಎಷ್ಟೈತಿ ಅಂತನೂ ಘೋಷಣೆ ಮಾಡಬಕು’ ಎಂದೆ.

‘ಅಷ್ಟೇ ಅಲ್ಲ… ಹಾಸನ ಪ್ರಕರಣದ ಅವತಾರ ಗಳನ್ನು ನೋಡಿದರೆ ನೈತಿಕತೆ ಇಂಡೆಕ್ಸ್‌ ಅಂತ ಹೊಸ ಸೂಚ್ಯಂಕ ಸಿದ್ಧಪಡಿಸಿ, ಅದನ್ನೂ ಘೋಷಣೆ ಮಾಡಬಕು’ ಬೆಕ್ಕಣ್ಣನ ವಾದ.

‘ದೈಹಿಕ ನೈತಿಕತೆ ಸೂಚ್ಯಂಕ ಮತ್ತು ಮಾತಿನ ನೈತಿಕತೆ ಸೂಚ್ಯಂಕ ಅಂತ ಎರಡು ವಿಭಾಗ ಮಾಡಬಕು’.

‘ಎಲ್ಲ ಪಕ್ಷದವರೂ ಬಾಯಿಗೆ ಬಂದದ್ದನ್ನು ನಿರ್ಲಜ್ಜವಾಗಿ ಒದರೋದನ್ನು ನೋಡಿದರೆ ಮಾತಿನ ನೈತಿಕತೆ ಸೂಚ್ಯಂಕ ವಿಭಾಗದಾಗೆ ಯಾವ ರಾಜಕಾರಣಿಯೂ ಸೊನ್ನೆಗಿಂತ ಹೆಚ್ಚು ಸ್ಕೋರ್‌ ಮಾಡಂಗಿಲ್ಲ!’ ಎಂದು ಬೆಕ್ಕಣ್ಣ ಗಹಗಹಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT