ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಟಿಂಡಾ ಸೇನಾ ನೆಲೆಯಲ್ಲಿ ದಾಳಿ: ರಾಜ್ಯದ ಇಬ್ಬರು ಯೋಧರು ಸೇರಿ ನಾಲ್ವರು ಸಾವು

Last Updated 13 ಏಪ್ರಿಲ್ 2023, 3:03 IST
ಅಕ್ಷರ ಗಾತ್ರ

ಬಟಿಂಡಾ/ನವದೆಹಲಿ: ಪಂಜಾಬ್‌ನ ಬಟಿಂಡಾ ಸೇನಾ ನೆಲೆಯಲ್ಲಿ ಬುಧವಾರ ನಸುಕಿನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಫಿರಂಗಿ ದಳದ ನಾಲ್ವರು ಯೋಧರು ಹತರಾಗಿದ್ದಾರೆ.

ಕರ್ನಾಟಕದ ಸಾಗರ್‌ ಬಣ್ಣೆ (25), ಸಂತೋಷ್‌ ಎಂ. ನಾಗರಾಳ್‌ (25), ತಮಿಳುನಾಡಿನ ಕಮಲೇಶ್‌ ಆರ್‌. (24) ಯೋಗೇಶ್‌ ಕುಮಾರ್‌ ಜೆ. (24) ಮೃತಪಟ್ಟಿದ್ದಾರೆ.

‘ನಸುಕಿನ 4.30ರ ವೇಳೆಗೆ ಈ ದಾಳಿ ನಡೆದಿದೆ. ಈ ವೇಳೆ ಮೃತ ಸೈನಿಕರು ಫಿರಂಗಿ ಘಟಕದಲ್ಲಿನ ಅಧಿಕಾರಿಗಳ ಭೋಜನಾಲಯದ ಬಳಿ ಇರುವ ತಮ್ಮ ಬ್ಯಾರೆಕ್‌ನಲ್ಲಿ ನಿದ್ರಿಸುತ್ತಿದ್ದರು. ಘಟನೆ ಕುರಿತು ಎಲ್ಲಾ ಆಯಾಮಗಳಿಂದಲೂ ಮಾಹಿತಿ ಕಲೆಹಾಕಲಾಗಿದೆ. ಇದು ಭಯೋತ್ಪಾದಕರ ದಾಳಿಯಲ್ಲ ಎಂಬುದು ಸದ್ಯಕ್ಕೆ ಖಾತರಿಯಾಗಿದೆ’ ಎಂದು ಪೊಲೀಸ್‌ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಘಟನೆ ಬಗ್ಗೆ ಸೇನಾ ಮುಖ್ಯಸ್ಥ ಜನರಲ್‌ ಮನೋಜ್‌ ಪಾಂಡೆ ಅವರು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರಿಗೆ ಸಂ‍ಪೂರ್ಣ ವಿವರ ನೀಡಿದ್ದಾರೆ.

‘ಗುಂಡುಗಳಿಂದ ತುಂಬಿದ್ದ ಇನ್ಸಾಸ್‌ (ಐಎನ್‌ಎಸ್‌ಎಎಸ್‌) ರೈಫಲ್‌ ಎರಡು ದಿನಗಳ ಹಿಂದೆ ಕಾಣೆಯಾಗಿತ್ತು. ಇದನ್ನು ಬಳಸಿ ದಾಳಿ ನಡೆಸಿರುವ ಸಾಧ್ಯತೆ ಇದೆ. ತನಿಖಾ ತಂಡವೊಂದು ಇನ್ಸಾಸ್‌ ರೈಫಲ್‌ ಹಾಗೂ ಗುಂಡುಗಳನ್ನು ಪತ್ತೆ ಹಚ್ಚಿದೆ. ಪಂಜಾಬ್‌ ಪೊಲೀಸರ ಜೊತೆಗೆ ವಿಚಾರಣಾ ನ್ಯಾಯಾಲಯವು (ಸಿಒಐ) ಘಟನೆ ಕುರಿತು ತನಿಖೆ ಕೈಗೊಳ್ಳಲಿದೆ’ ಎಂದು ಸೇನಾ ಮೂಲಗಳು ತಿಳಿಸಿವೆ.

‘ಗುಂಡಿನ ದಾಳಿ ಬಳಿಕ ಶ್ವೇತ ವರ್ಣದ ಕುರ್ತಾ ಹಾಗೂ ಪೈಜಾಮ ಧರಿಸಿದ್ದ ಇಬ್ಬರು ಮುಸುಕುಧಾರಿ ವ್ಯಕ್ತಿಗಳು ಬ್ಯಾರೆಕ್‌ನಿಂದ ಹೊರಬರುತ್ತಿದ್ದುದ್ದನ್ನು ಸೈನಿಕರೊಬ್ಬರು ನೋಡಿದ್ದಾರೆ. ಈ ಪೈಕಿ ಒಬ್ಬಾತ ಇನ್ಸಾಸ್‌ ರೈಫಲ್‌ ಹಿಡಿದಿದ್ದ. ಮತ್ತೊಬ್ಬನ ಕೈಯಲ್ಲಿ ಕೊಡಲಿ ಇತ್ತು ಎಂಬುದಾಗಿ ಅವರು ಹೇಳಿಕೆ ನೀಡಿದ್ದಾರೆ’ ಎಂದು ಪೊಲೀಸರು ಹೇಳಿದ್ದಾರೆ.

‘ತಾವು ಬ್ಯಾರೆಕ್‌ನಿಂದ ಹೊರಬರುತ್ತಿದ್ದುದನ್ನು ಸೈನಿಕರೊಬ್ಬರು ನಿಂತು ನೋಡುತ್ತಿದ್ದರು. ಇದನ್ನು ಗಮನಿಸಿದ ದುಷ್ಕರ್ಮಿಗಳು ಕೂಡಲೇ ಬ್ಯಾರೆಕ್‌ ಸಮೀಪದಲ್ಲಿರುವ ಅರಣ್ಯ ಪ್ರದೇಶದತ್ತ ಓಡಿ ಹೋಗಿದ್ದಾರೆ’ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.

‘ಗುಂಡಿನ ಸದ್ದು ಕೇಳಿದೊಡನೆಯೇ ಇಬ್ಬರು ಸೇನಾ ಅಧಿಕಾರಿಗಳು ಬ್ಯಾರೆಕ್‌ನತ್ತ ಧಾವಿಸಿದ್ದರು. ಒಳಗೆ ಹೋಗಿ ನೋಡಿದಾಗ ಸಾಗರ್‌ ಹಾಗೂ ಯೋಗೇಶ್‌ ಅವರ ಮೃತದೇಹಗಳು ರಕ್ತದ ಮಡುವಿನಲ್ಲಿ ಬಿದ್ದಿದ್ದವು. ಮತ್ತೊಂದು ಕೋಣೆಯಲ್ಲಿ ಸಂತೋಷ್ ಹಾಗೂ ಕಮಲೇಶ್‌ ಅವರ ಮೃತದೇಹ‌ಗಳು ಪತ್ತೆಯಾಗಿದ್ದವು. ಮೃತದೇಹಗಳ ಮೇಲೆ ಗುಂಡಿನ ಗುರುತುಗಳಿದ್ದವು’ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.

‘ಘಟನೆ ಕುರಿತು ಮೃತ ಯೋಧರ ಕುಟುಂಬದವರಿಗೆ ಮಾಹಿತಿ ನೀಡಲಾಗಿದೆ. ಬಟಿಂಡಾ ಸೇನಾ ನೆಲೆಯು ದೇಶದ ಅತಿದೊಡ್ಡ ಸೇನಾ ನೆಲೆಗಳಲ್ಲಿ ಒಂದಾಗಿದೆ. ಸೇನಾಪಡೆಯ ಹಲವು ಕಾರ್ಯಾಚರಣೆಯ ಘಟಕಗಳನ್ನು ಇದು ಒಳಗೊಂಡಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ದುರದೃಷ್ಟಕರ ಘಟನೆಯಲ್ಲಿ ಫಿರಂಗಿ ದಳದ ನಾಲ್ವರು ಸೈನಿಕರು ಗುಂಡೇಟುಗಳಿಗೆ ಬಲಿಯಾಗಿದ್ದಾರೆ. ಘಟನೆಯಲ್ಲಿ ಬೇರೆ ಯಾವುದೇ ಸಿಬ್ಬಂದಿ ಗಾಯಗೊಂಡ ಅಥವಾ ಆಸ್ತಿಗೆ ಹಾನಿಯಾದ ಬಗ್ಗೆ ವರದಿಯಾಗಿಲ್ಲ’ ಎಂದು ಸೇನೆಯ ನೈರುತ್ಯ ಕಮಾಂಡ್‌ ಪ್ರಕಟಣೆಯಲ್ಲಿ ಹೇಳಿದೆ.

‘ಘಟನೆ ಬೆನ್ನಲ್ಲೇ ಸ್ಥಳದಲ್ಲಿ ಕ್ಷಿಪ್ರ ಕಾರ್ಯಾಚರಣೆ ತಂಡಗಳನ್ನು ನಿಯೋಜಿಸಲಾಗಿದೆ. ಈ ತಂಡಗಳು ಘಟನಾ ಸ್ಥಳವನ್ನು ಸುತ್ತುವರಿದಿವೆ. ಇಡೀ ಪ್ರದೇಶದ ಸುತ್ತ ನಿರ್ಬಂಧ ವಿಧಿಸಲಾಗಿದೆ’ ಎಂದೂ ತಿಳಿಸಿದೆ.

‘ಘಟನೆ ಸಂಬಂಧ ಯಾರನ್ನೂ ಬಂಧಿಸಿಲ್ಲ. ವಶಕ್ಕೂ ಪಡೆದಿಲ್ಲ. ಘಟನಾ ಸ್ಥಳದಲ್ಲಿ ಇನ್ಸಾಸ್‌ ರೈಫಲ್‌ನ 19 ಖಾಲಿ ಗುಂಡುಗಳು ದೊರೆತಿವೆ. ಇದು ಸೇನೆಯಲ್ಲಿರುವವರೇ ನಡೆಸಿರುವ ಕೃತ್ಯ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ’ ಎಂದು ಪಂಜಾಬ್‌ನ ಹೆಚ್ಚುವರಿ ಡಿಜಿಪಿ ಎಸ್‌.ಪಿ.ಎಸ್‌. ಪರ್ಮಾರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT