ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಗ್ರ್ಯಾನ್‌ಪ್ರಿ ಅಥ್ಲೆಟಿಕ್‌ ಕೂಟ: ತಜಿಂದರ್‌, ಮನು, ಶೈಲಿ ಮೇಲೆ ಕಣ್ಣು

ಒಲಿಂಪಿಕ್ಸ್‌ ಟಿಕೆಟ್‌ಗೆ ಅವಕಾಶ
Published 29 ಏಪ್ರಿಲ್ 2024, 16:05 IST
Last Updated 29 ಏಪ್ರಿಲ್ 2024, 16:05 IST
ಅಕ್ಷರ ಗಾತ್ರ

ಬೆಂಗಳೂರು: ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ಗೆ ಆಯ್ಕೆಯಾಗಲು ದೇಶದ ಪ್ರಮುಖ ಅಥ್ಲೀಟುಗಳು ಕೊನೆಗಳಿಗೆಯ ಪ್ರಯತ್ನದಲ್ಲಿದ್ದಾರೆ. ಮಂಗಳವಾರ ಇಲ್ಲಿನ ಕಂಠೀವರ ಕ್ರೀಡಾಂಗಣದಲ್ಲಿ  ನಡೆಯುವ ಇಂಡಿಯನ್‌ ಗ್ರ್ಯಾನ್‌ಪ್ರಿ ಮೊದಲ ಲೆಗ್‌ ಅವರಿಗೆ ಇಂಥ ಅವಕಾಶ ಒದಗಿಸಿದೆ.

ಏಷ್ಯನ್ ಗೇಮ್ಸ್ ಸ್ವರ್ಣ ವಿಜೇತ ಮತ್ತು ಏಷ್ಯನ್ ಷಾಟ್‌ಪುಟ್‌ ಚಾಂಪಿಯನ್‌ ತಜಿಂದರ್‌ಪಾಲ್ ಸಿಂಗ್ ತೂರ್ ಅವರು ಒಲಿಂಪಿಕ್‌ ಅರ್ಹತಾ ಮಟ್ಟ ತಲುಪಲು ಪ್ರಯತ್ನ ನಡೆಸುವವರಲ್ಲಿ ಪ್ರಮುಖ ಅಥ್ಲಿಟ್‌.  ಪಂಜಾಬ್‌ನ 29 ವರ್ಷದ ತೂರ್‌ ಅವರು ಇಲ್ಲಿ ಸ್ವರ್ಣ ಗೆಲ್ಲುವುದು ಖಚಿತವಾಗಿದ್ದು, ಕಣದಲ್ಲಿರುವ ಇನ್ನಿಬ್ಬರು ಎದುರಾಳಿಗಳು ಅಂಥ ಪ್ರಬಲರೇನಲ್ಲ. ಆದರೆ ಅವರಿಗೆ ಇಲ್ಲಿ ಚಿನ್ನಕ್ಕಿಂತ ಮುಖ್ಯವಾಗಿರುವುದು ಒಲಿಂಪಿಕ್‌ ಅರ್ಹತಾ ಮಟ್ಟ 21.50 ಮೀ. ಸಾಧಿಸುವುದು. ಈ ಹಿಂದೆ ಅವರು ಇದನ್ನು ದಾಟಿದ್ದಿದೆ.

ಈ ಕೂಟದಲ್ಲಿ ಅರ್ಹತಾ ಮಟ್ಟ ದಾಟಿ ಪ್ಯಾರಿಸ್‌ಗೆ ಟಿಕೆಟ್ ಗಿಟ್ಟಿಸಿದರೆ, ಒಲಿಂಪಿಕ್ಸ್‌ಗೆ ಸಿದ್ಧತೆ ನಡೆಸಲು ಅವರಿಗೆ ಸಾಕಷ್ಟು ಸಮಯಾವಕಾಶವೂ ದೊರೆಯಲಿದೆ. ಟಿಸಿಎಸ್‌ 10ಕೆ ಓಟದ ಪ್ರಚಾರ ರಾಯಭಾರಿಯಾಗಿದ್ದ ಅವರು ಕಳೆದ ವಾರವೇ ನಗರಕ್ಕೆ ಬಂದಿದ್ದಾರೆ.

ಲಾಂಗ್‌ ಜಂಪ್‌ ಪಟು ಮುಹಮ್ಮದ್ ಅನೀಸ್‌ ಯಾಹ್ಯಾ, ಟ್ರಿಪಲ್ ಜಂಪ್‌ ಸ್ಪರ್ಧಿ ಎಲ್ದೋಸ್‌ ಪಾಲ್‌, ಜಾವೆಲಿನ್ ಥ್ರೋವರ್‌, ಕರ್ನಾಟಕದವರೇ ಆದ ಡಿ.ಪಿ.ಮನು, ಮಹಿಳಾ ಲಾಂಗ್‌ ಜಂಪ್‌ ಸ್ಪರ್ಧಿ ಶೈಲಿ ಸಿಂಗ್ ಅವರ ಪ್ರದರ್ಶನದ ಮೇಲೂ ನಿರೀಕ್ಷೆಗಳಿವೆ.

ಏಷ್ಯನ್ ಗೇಮ್ಸ್ ಮತ್ತು ಹಾಲಿ ಒಲಿಂಪಿಕ್ ಚಾಂಪಿಯನ್ ಸಹ ಆಗಿರುವ ನೀರಜ್ ಚೋಪ್ರಾ ಮತ್ತು ಹಾಂಗ್‌ಝೌ ಕೂಟದ ಬೆಳ್ಳಿ ವಿಜೇತ ಕಿಶೋರ್ ಕುಮಾರ್ ಜೇನಾ ಅವರ ನಂತರ ಮನು ಸದ್ಯ ಮೂರನೇ ಸ್ಥಾನದದಲ್ಲಿದ್ದಾರೆ. ನೀರಜ್ ಮತ್ತು ಜೇನಾ ಅವರು ಈಗಾಗಲೇ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ. ತವರಿನಲ್ಲಿ ಮನು ತಮ್ಮ ಸಾಮರ್ಥ್ಯ ಪ್ರದರ್ಶನಕ್ಕೆ ಉತ್ತಮ ಅವಕಾಶ ಹೊಂದಿದ್ದಾರೆ. ಅವರ ವೈಯಕ್ತಿಕ ಶ್ರೇಷ್ಠ ಸಾಧನೆ 84.35 ಮೀ. ಆದರೆ ಅವರು ಒಲಿಂಪಿಕ್ಸ್‌ ಅರ್ಹತಾ ಮಟ್ಟ 85.50 ಮೀ. ದೂರಕ್ಕೆ ಜಾವೆಲಿನ್ ಎಸೆಯಬೇಕಾಗಿದ್ದು, ಇದು ಅವರಿಗೆ ಸವಾಲಾಗಲಿದೆ.

ರಾಬರ್ಟ್‌ ಬಾಬಿ ಜಾರ್ಜ್ ಅವರಿಂದ ತರಬೇತಿಯಲ್ಲಿರುವ 20 ವರ್ಷದ ಶೈಲಿ ಅವರು ಭರವಸೆ ಮೂಡಿಸಿದ್ದಾರೆ. ಕಳೆದ ವರ್ಷ ಬ್ಯಾಂಕಾಕ್ ಏಷ್ಯನ್ ಅಥ್ಲೆಟಿಕ್ ಕೂಟದಲ್ಲಿ ಬೆಳ್ಳಿ ಗೆದ್ದಿದ್ದ ಅವರ ವೈಯಕ್ತಿಕ ಶ್ರೇಷ್ಠ ಸಾಧನೆ 6.76 ಮೀ. ಪ್ಯಾರಿಸ್‌ ಒಲಿಂಪಿಕ್ ಅರ್ಹತಾ ಮಟ್ಟ 6.86 ಮೀ. ಇದೆ.

200 ಮೀ. ಓಟಗಾರ್ತಿ ಹಿಮಾ ದಾಸ್‌ ಅವರೂ ಕಣದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ (ನಾಡಾ) ಅವರ ಮೇಲಿನ ನಿಷೇಧವನ್ನು ಹಿಂದಕ್ಕೆ ಪಡೆದ ನಂತರ ಇದು ಅವರ ಮೊದಲ ಪ್ರಮುಖ ಕೂಟ. 12 ತಿಂಗಳ ಅವಧಿಯಲ್ಲಿ ತಮ್ಮ ಇರವಿನ ಬಗ್ಗೆ ಮಾಹಿತಿ ನೀಡದ ಕಾರಣ ಕಳೆದ ವರ್ಷ 24 ವರ್ಷದ ಓಟಗಾರ್ತಿಯ ಮೇಲೆ ‘ನಾಡಾ’ ತಾತ್ಕಾಲಿಕ ನಿಷೇಧ ಹೇರಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT