ಭುವನೇಶ್ವರ: ಒಡಿಶಾದಲ್ಲಿ ಭಾನುವಾರ ಸಂಭವಿಸಿದ ಮೂರು ಪ್ರತ್ಯೇಕ ಅಪಘಾತಗಳಲ್ಲಿ 7 ಮಂದಿ ಮೃತಪಟ್ಟಿದ್ದು, 40 ಮಂದಿ ಗಾಯಗೊಂಡಿದ್ದಾರೆ.
ಕಲಾಹಂಡಿ ಜಿಲ್ಲೆಯಲ್ಲಿ 50ಕ್ಕೂ ಅಧಿಕ ಮಂದಿಯನ್ನು ಹೊತ್ತು ಸಾಗುತ್ತಿದ್ದ ಪಿಕಪ್ ವಾಹನವು ರಸ್ತೆಯಲ್ಲಿ ಉರುಳಿಬಿದ್ದು ಇಬ್ಬರು ಮೃತಪಟ್ಟಿದ್ದಾರೆ. 25ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಪಿಕಪ್ ವಾಹನವು ಜುನಾಘಡದಿಂದ ದಾಸಪುರಕ್ಕೆ ತೆರಳುತ್ತಿತ್ತು.
ಪಿಕಪ್ ವಾಹನ ಓವರ್‌ಲೋಡ್ ಆಗಿದ್ದೇ ಅವಘಡಕ್ಕೆ ಕಾರಣ ಎಂದು ಪೊಲೀಸ್ ಅಧಿಕಾರಿ ಶ್ವೇತಪದ್ಮಾ ಸೇಠ್ ತಿಳಿಸಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಮೃತರ ಕುಟುಂಬಕ್ಕೆ ಸಿಎಂ ನವೀನ್ ಪಟ್ನಾಯಕ್ ತಲಾ ₹3 ಲಕ್ಷ ಪರಿಹಾರ ಘೋಷಿಸಿದ್ದಾರೆ.
ಇದಕ್ಕೂ ಮುನ್ನ, ಲಖನ್‌ಪುರದಲ್ಲಿ ಮತ್ತೊಂದು ಪಿಕಪ್ ವಾಹನವು ರಾಷ್ಟ್ರೀಯ ಹೆದ್ದಾರಿ 49ರಲ್ಲಿ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ 4 ಮಂದಿ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಹಲವರು ಗಾಯಗೊಂಡಿದ್ದಾರೆ.
ಮತ್ತೊಂದು ಅಪಘಾತದಲ್ಲಿ, ಭದ್ರಕ್ ಜಿಲ್ಲೆಯ ಅರಾಡಿ ಛಕ್‌ನಲ್ಲಿ ಪುರಿಯಿಂದ ಪ್ರಯಾಣಿಕರನ್ನು ಬಾಲೇಶ್ವರಕ್ಕೆ ಕೊಂಡೊಯ್ಯುತ್ತಿದ್ದ ವಾಹನವು ಟ್ರಕ್‌ಗೆ ಡಿಕ್ಕಿ ಹೊಡದ ಪರಿಣಾಮ ಒಬ್ಬರು ಮೃತಪಟ್ಟಿದ್ದಾರೆ.