ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಕಲ್‌ ಏರಿ ಹೋದ ಮಗ ಮರಳಿ ಬರಲಿಲ್ಲ!

ಪುಲ್ವಾಮಾ ದಾಳಿ: ಅದಿಲ್ ಅಹ್ಮದ್ ಬಾಲ್ಯದ ಘಟನೆ ಬದುಕು ಬದಲಿಸಿರಬಹುದು ಎಂದ ಕುಟುಂಬ
Last Updated 17 ಫೆಬ್ರುವರಿ 2019, 3:49 IST
ಅಕ್ಷರ ಗಾತ್ರ

ನವದೆಹಲಿ: ಬಾಲ್ಯದಲ್ಲಿ ನಡೆದ ಕಹಿ ಘಟನೆಯೊಂದುಪುಲ್ವಾಮಾದಲ್ಲಿ ಆತ್ಮಾಹುತಿ ದಾಳಿ ನಡೆಸಿದ ಅದಿಲ್ ಅಹ್ಮದ್ ದಾರ್‌ನ ಸಂಪೂರ್ಣ ಬದುಕನ್ನು ಬದಲಿಸಿತು ಎಂದು ಆತನ ಕುಟುಂಬ ಹೇಳಿದೆ.

‘ಅದಿಲ್‌ ತುಂಬಾ ಸರಳ ಹುಡುಗ. ಆತ ಧಾರ್ಮಿಕ ವ್ಯಕ್ತಿಯಾಗಿದ್ದ. ಶಾಲಾ ದಿನಗಳಲ್ಲಿ ನಡೆದ ಒಂದು ಘಟನೆಯು ಬಹುಶಃ ಅವನ ಮನಸ್ಸನ್ನು ಬದಲಿಸಿರಬಹುದು’ ಎಂದು ಸಂದೇಹ ವ್ಯಕ್ತಪಡಿಸುತ್ತಾರೆ ಉಗ್ರನ ತಂದೆ ಗುಲಾಮ್ ಹಸನ್ ದಾರ್.

‘ಒಮ್ಮೆ ಶಾಲೆಯಿಂದ ವಾಪಸಾಗುತ್ತಿದ್ದಾಗ ಅವನನ್ನು ತಡೆದ ಪೊಲೀಸರು, ರಸ್ತೆಯಲ್ಲಿ ತೆವಳುವಂತಹ ಶಿಕ್ಷೆ ನೀಡಿದ್ದರು. ಈ ಅವಮಾನಕರ ಘಟನೆಯು ಅವನ ಮನಸ್ಸಿನ ಮೇಲೆ ಬಹಳ ಪರಿಣಾಮ ಬೀರಿತ್ತು. ಆ ಘಟನೆಯನ್ನು ಅದಿಲ್ ಆಗಾಗ್ಗೆ ನೆನಪಿಸಿಕೊಳ್ಳುತ್ತಿದ್ದ. 22 ವರ್ಷದ ದಾರ್ 12ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ್ದಾನೆ. 2017ರಲ್ಲಿ ಧಾರ್ಮಿಕ ಶಿಕ್ಷಣ ಕೋರ್ಸ್‌ಗೆ ಸೇರಿಕೊಂಡಿದ್ದ. ಆದರೆ, 2018ರ ಮಾರ್ಚ್‌ನಲ್ಲಿ ಇದ್ದಕ್ಕಿದ್ದಂತೆ ಕಾಣೆಯಾದ. ಅವನನ್ನು ನೋಡಿದ್ದು ಅದೇ ಕೊನೆಯ ಬಾರಿ. ಸೈಕಲ್ ಹತ್ತಿ ಹೊರಟುಹೋಗಿದ್ದ ಅದಿಲ್‌ಗಾಗಿ ಕಾದಿದ್ದೆವು. ಅವನು ಭಯೋತ್ಪಾದನೆ ಸಂಘಟನೆ ಸೇರಿದ್ದಾನೆ ಎಂಬ ವಿಷಯ ಸಾಮಾಜಿಕ ಜಾಲತಾಣಗಳಿಂದ ತಿಳಿಯಿತು’ ಎಂದು ಅವರು ಹೇಳಿದ್ದಾರೆ.

ಶವ ಇಲ್ಲದೆಯೇ ನಡೆಯಿತು ಅಂತ್ಯಸಂಸ್ಕಾರ!

ಸಿಆರ್‌ಪಿಎಫ್ ಯೋಧರ ಮೇಲೆ ದಾಳಿ ನಡೆಸಿ ಆತ್ಮಾಹುತಿ ಮಾಡಿಕೊಂಡ ಉಗ್ರ ಅದಿಲ್ ಅಹ್ಮದ್ ದಾರ್‌ನ ಅಂತ್ಯಕ್ರಿಯೆಯನ್ನು ಆತನ ಕುಟುಂಬ ಸದಸ್ಯರು ನಡೆಸಿದ್ದಾರೆ.

ದಾರ್‌ನ ಮೃತದೇಹ ಅಥವಾ ದೇಹದ ಯಾವುದೇ ಭಾಗ ಸಿಗದಿದ್ದರೂ ಸಾಂಕೇತಿಕವಾಗಿ ಅಂತ್ಯಸಂಸ್ಕಾರ ಮಾಡಲಾಗಿದೆ. ಉಗ್ರ ಅದಿಲ್‌ನ ಊರು ಕಾಕಪೋರಾದಲ್ಲಿ ಅಂಗಡಿಗಳನ್ನು ಮುಚ್ಚಲಾಗಿತ್ತು. ಊರಿಗೆ ತೆರಳುವ ಎಲ್ಲ ರಸ್ತೆಗಳನ್ನು ಪೊಲೀಸರು ಬಂದ್ ಮಾಡಿದ್ದರು. ಬಂದೋಬಸ್ತ್ ಏರ್ಪಡಿಸಿದ್ದರೂ ಸಹ ಕಾಕಪೋರಾ ಗ್ರಾಮವನ್ನು ತಲುಪಲು ಯಶಸ್ವಿಯಾದ ನೂರಾರು ಜನರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು.

ದಾಳಿಯಲ್ಲಿ ಹುತಾತ್ಮರಾದ ಸಿಆರ್‌ಪಿಎಫ್‌ ಯೋಧರ ಬಗ್ಗೆ ದಾರ್‌ ಕುಟುಂಬ ಕಂಬನಿ ಮಿಡಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT