ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೆಹಲಿ–ಸ್ಯಾನ್‌ಫ್ರಾನ್ಸಿಸ್ಕೊ ವಿಮಾನ ವಿಳಂಬ: ಪ್ರಯಾಣಿಕರ ಪರದಾಟ

Published 31 ಮೇ 2024, 16:59 IST
Last Updated 31 ಮೇ 2024, 16:59 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿಯಿಂದ ಸ್ಯಾನ್‌ ಫ್ರಾನ್ಸಿಸ್ಕೊಗೆ ಏರ್‌ ಇಂಡಿಯಾ ವಿಮಾನದ ಮೂಲಕ ಪ್ರಯಾಣಿಸಬೇಕಿದ್ದ ಪ್ರಯಾಣಿಕರು ವಿಮಾನದ ಅತಿಯಾದ ವಿಳಂಬದಿಂದ ತೊಂದರೆ ಅನುಭವಿಸಿದರು. ವಿಮಾನ ಬದಲಾವಣೆ, ಸಮಯ ಮರು ಹೊಂದಾಣಿಕೆಯಿಂದ ಬಸವಳಿದರು.

ಬದಲಿಸಿದ ವಿಮಾನದಲ್ಲಿ ಹವಾನಿಯಂತ್ರಣ ವ್ಯವಸ್ಥೆ ಕಾರ್ಯ ನಿರ್ವಹಿಸದ ಕಾರಣ ಕೆಲ ಪ್ರಯಾಣಿಕರು ಮೂರ್ಛೆ ಹೋದ ಘಟನೆಯೂ ನಡೆಯಿತು. ಇದೆಲ್ಲದರ ಪರಿಣಾಮ ‘ಎಐ 183’ ವಿಮಾನದ ಪ್ರಯಾಣಿಕರು ‘ಏರೋಬ್ರಿಡ್ಜ್‌’ನಲ್ಲಿಯೇ ಸುಮಾರು ಒಂದು ಗಂಟೆ ಕಾಯಬೇಕಾದ ದುಃಸ್ಥಿತಿ ಎದುರಾಯಿತು ಎಂದು ಪ್ರಯಾಣಿಕರೊಬ್ಬರು ಅಳಲು ತೋಡಿಕೊಂಡಿದ್ದಾರೆ.

200 ಪ್ರಯಾಣಿಕರಿದ್ದ ವಿಮಾನ ಗುರುವಾರ ಮಧ್ಯಾಹ್ನ 3.30ಕ್ಕೆ ಟೇಕ್‌ಆಫ್‌ ಆಗಬೇಕಿತ್ತು. ತಾಂತ್ರಿಕ ಲೋಪದ ಕಾರಣ ಅದರ ಸಮಯವನ್ನು ಗುರುವಾರ ರಾತ್ರಿ 11 ಗಂಟೆಗೆ, ಪುನಃ ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಮರು ಹೊಂದಿಸಲಾಯಿತು. ಮತ್ತೆ ಸಮಯವನ್ನು ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಮರು ನಿಗದಿ ಮಾಡಲಾಯಿತು ಎಂದು ಪ್ರಯಾಣಿಕರು ಹೇಳಿದ್ದಾರೆ.

‘ಆರಂಭದಲ್ಲಿ ತಾಂತ್ರಿಕ ದೋಷದಿಂದ ವಿಮಾನವನ್ನು ಬದಲಿಸಲಾಯಿತು. ಪ್ರಯಾಣಿಕರು ಆ ವಿಮಾನ ಏರಿದರು. ಆದರೆ ಅದರಲ್ಲಿ ಹವಾನಿಯಂತ್ರಿತ ವ್ಯವಸ್ಥೆ ಕಾರ್ಯ ನಿರ್ವಹಿಸುತ್ತಿರಲಿಲ್ಲ. ಅದರ ಪರಿಣಾಮ ವಿಮಾನದಲ್ಲಿದ್ದ ಕೆಲವರು ಮೂರ್ಛೆ ಹೋದರು’ ಎಂದು ಪ್ರಯಾಣಿಕರಾದ ಶಿಪಾ ಜೈನ್‌ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ.

ಪ್ರತಿಕ್ರಿಯೆ: ‘ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಕುರಿತು ತಪಾಸಣೆ ನಡೆಸಲಾಗಿದೆ’ ಎಂದು ವಿಮಾನಯಾನ ಸಂಸ್ಥೆಯ ಅಧಿಕಾರಿ ಹೇಳಿದ್ದಾರೆ.

‘ವಿಳಂಬದಿಂದಾಗಿ ಸಿಬ್ಬಂದಿಯ ‘ಫ್ಲೈಟ್‌ ಡ್ಯೂಟಿ ಟೈಮ್‌ ಲಿಮಿಟೇಷನ್‌’ (ಎಫ್‌ಡಿಟಿಎಲ್‌) ದಾಟಿತ್ತು. ಅಲ್ಲದೆ ಈ ಅವಧಿಯಲ್ಲಿ ವಿಮಾನವು ಟೇಕ್‌ ಆಫ್‌ ಆಗಿದ್ದರೆ, ರಾತ್ರಿ ಲ್ಯಾಂಡಿಂಗ್‌ನ ನಿರ್ಬಂಧ ಇರುವ ಸಮಯದಲ್ಲಿ ಸ್ಯಾನ್‌ಫ್ರಾನ್ಸಿಸ್ಕೊ ತಲುಪುತ್ತಿತ್ತು’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಪ್ರಯಾಣಿಕರಿಗೆ ಸಂಪೂರ್ಣ ಮರುಪಾವತಿ, ಮರು ಹೊಂದಿಕೆ ಮತ್ತು ಹೋಟೆಲ್‌ ಸೌಕರ್ಯಗಳ ಆಯ್ಕೆಗಳನ್ನು ನೀಡಲಾಗಿತ್ತು ಎಂದು ವಿಮಾನಯಾನ ಅಧಿಕಾರಿಗಳು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT